ಅಕ್ರಮದ ವಿರುದ್ಧ ತನಿಖೆಯಾಗಲಿ…
ಇದು ಮೂಡಲಗಿ ಪುರಸಭೆಯ ಕರ್ಮಕಾಂಡ. ಪುರಸಭೆಯ ಬೇಜವಾಬ್ದಾರಿ ಹಾಗೂ ಭ್ರಷ್ಟತನದಿಂದಾಗಿ ಯಾರದೋ ನಿವೇಶನದಲ್ಲಿ ಯಾರೋ ಕಟ್ಟಡ ಕಟ್ಟಿ ಈಗ ಮೂಲ ನಿವೇಶನಗಳ ಮಾಲೀಕರು ಪರಿತಪಿಸುವಂತಾಗಿದೆ.
ಮೂಡಲಗಿ ಹದ್ದಿಯಲ್ಲಿಯ ರಿ.ಸ. ನಂ. ೪೯೮ ರ ಸುಮಾರು ೨೨ ಗುಂಟೆ ಜಮೀನು ೧೯೭೨ ರಲ್ಲಿಯೇ ಬಿನ್ ಶೇತ್ಕಿಯಾಗಿದ್ದರೂ ವಿಚಿತ್ರವೆಂದರೆ ಮೂಡಲಗಿ ಪುರಸಭೆಗೆ ಇದರ ಅರಿವಿಲ್ಲ. ನಾವು ನಿವೇಶನಗಳ ಮಾಲೀಕರು ಪುರಸಭೆಗೆ ತಿಳಿಸಿಕೊಡಬೇಕು. ಅದನ್ನು ತಿಳಿಸಿಕೊಟ್ಟರೂ ನಂಬದ ಪುರಸಭೆಯವರು ಸದರಿ ಸರ್ವೇ ನಂಬರಿನ ಮಧ್ಯ ಭಾಗದ ನಿವೇಶನಗಳನ್ನು ಲೇ ಔಟ್ ಇಲ್ಲದೆ ಬೇರೆಯವರ ಹೆಸರಿಗೆ ದಾಖಲು ಮಾಡಿದ್ದು ಯಾವ ರೀತಿಯ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರಬಹುದೆಂಬುದನ್ನು ಊಹಿಸಬಹುದು.
ಪುರಸಭೆಯ ಬೇಜವಾಬ್ದಾರಿಗೆ ಇನ್ನೊಂದು ಉದಾಹರಣೆಯೆಂದರೆ ಈ ನಿವೇಶನಗಳ ಕುರಿತು ಏನಾದರೂ ಕೇಳಿದರೆ ಉಡಾಫೆಯ ಉತ್ತರ ನೀಡುವುದು. ಬರಹದ ಮೂಲಕ ಅರ್ಜಿ ಸಲ್ಲಿಸಿದರೆ ಅದಕ್ಕೆ ಉತ್ತರವನ್ನೇ ನೀಡದಿರುವುದು. ೪೯೮ ಸರ್ವೇ ನಂಬರಿನ ೨೮ ಗುಂಟೆಯಷ್ಟು ದೊಡ್ಡ ಜಾಗದಲ್ಲಿ ೧೪ ಜನ ನಿವೇಶನದಾರರು ವಿವಿಧ ಸೈಜಗಳಲ್ಲಿ ನಿವೇಶನ ಖರೀದಿ ಮಾಡಿದ್ದು ಅವು ದಕ್ಷಿಣೋತ್ತರವಾಗಿ ೧೦೦ ಫೂಟ ಇರುತ್ತವೆ. ಅಂದರೆ ಒಬ್ಬರು ೨೦’×೧೦೦’, ಇನ್ನೊಬ್ಬರು ೧೫’×೧೦೦’, ಮಗದೊಬ್ಬರು ೩೦’×೧೦೦’……ಹೀಗೆ ಜಾಗ ಖರೀದಿ ಮಾಡಿರುತ್ತಾರೆ ಆದರೆ ಅಲ್ಲಿ ದಕ್ಷಿಣೋತ್ತರ ೧೦೦’ ಜಾಗ ಇಲ್ಲವೆಂದು ಪುರಸಭೆಯವರು ಹೇಳುತ್ತಾರಲ್ಲದೆ ಗೋಕಾಕ ರಸ್ತೆ ಅಗಲೀಕರಣದಲ್ಲಿ ೪೭’ ಜಾಗ ರಸ್ತೆಗೆ ಹೋಗಿದೆ ಎಂದು ಹೇಳಿ ಕೇವಲ ೫೩’ ರ ಉತಾರ ಕೊಡುತ್ತಾರೆ. ಆದರೆ ನೀರಾವರಿ ಇಲಾಖೆಯವರು ತಾವು ರಸ್ತೆ ಅಗಲೀಕರಣ ಮಾಡಿದಾಗ ನಿಮ್ಮ ಯಾವುದೇ ಜಾಗವನ್ನು ಇಲಾಖೆಯವರು ಕಬಳಿಸಿಲ್ಲ ಎನ್ನುತ್ತಾರೆ !
ಹಾಗಾದರೆ ಉಳಿದ ೪೭’ ಜಾಗ, ಅದೂ ೧೪ ಜನರದ್ದು, ಎಲ್ಲಿ ಹೋಯಿತು ? ರಿ.ಸ.ನಂ.೪೯೮ ರಲ್ಲಿ ಜಾಗ ತೆಗೆದುಕೊಂಡವರೆಲ್ಲರ ಚಕಬಂದಿಯಲ್ಲಿ ದಕ್ಷಿಣಕ್ಕೆ ಕಂಕಣವಾಡಿಯವರ ಪ್ಲಾಟ್ ತನಕ ಜಾಗ ಇದೆ ಆದರೆ ರಸ್ತೆಯಿಂದ ೫೩’ ಜಾಗ ಬಿಟ್ಟರೆ ಉಳಿದ ಜಾಗ ಬೇರೆಯವರ ಹೆಸರಿನಲ್ಲಿ ಇದೆ ! ಇದು ಹೇಗಾಯಿತು ಎಂದು ಪುರಸಭೆಯವರನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಹೆಚ್ಚು ಕೇಳಿದರೆ ಕೋರ್ಟಿಗೆ ಹೋಗಿ ಎಂಬ ನಿರ್ಲಕ್ಷ್ಯದ ಮಾತು ಆಡುತ್ತಿದ್ದಾರೆ. ೨೦೦೧ ರಲ್ಲಿ ಈ ಜಾಗದ ಮೂಲ ಮಾಲೀಕ ಬಾಗವಾನ ಎಂಬುವವನು ಎಲ್ಲಾ ೧೪ ಜನರ ಜಾಗವನ್ನು ಮರಳಿ ಕಬ್ಜಾ ಕೊಡಿಸಲು ಸುಳ್ಳು ಕೇಸು ಮಾಡಿದಾಗ ಹತ್ತು ವರ್ಷ ಕೋರ್ಟಿಗೆ ತಿರುಗಾಡಿ ೨೦೧೧ ರಲ್ಲಿ ನಮ್ಮಂತೆ ತೀರ್ಪು ಬಂದಿತ್ತು ಆ ಖುಷಿಯಲ್ಲಿ ಜಾಗದ ಕಬ್ಜಾಕ್ಕೆ ಹೋದರೆ ಅರ್ಧದಷ್ಟು ಜಾಗವನ್ನೇ ಪುರಸಭೆಯವರು ಮಾಯ ಮಾಡಿದ್ದಾರೆ !
ಹೌದು, ಅವರೇ ಮಾಯ ಮಾಡಿದ್ದಾರೆ ಎನ್ನಬೇಕು. ಯಾಕೆಂದರೆ ಯಾವನೇ ಆಗಲಿ ಒಂದು ಜಾಗ ಖರೀದಿ ಮಾಡಿ ಕಬ್ಜಾ ಹೋಗಬೇಕಾದರೆ ಪುರಸಭೆಯ ಗಮನಕ್ಕೆ ಬರದೇ ಹೋಗಲು ಸಾಧ್ಯವೇ ಇಲ್ಲ. ಒಂದು ಜಾಗದ ಖರೀದಿ / ವಿಕ್ರಿಗೆ ಹೋಗಬೇಕಾದರೆ ‘ ಟ್ಯಾಕ್ಸ್ ಪೇಡ್ ‘ ಪ್ರಮಾಣಪತ್ರ ಕೊಡುವ ಪುರಸಭೆಯವರಿಗೆ ಅದು ಯಾರ ಜಾಗ , ಅದರ ಸೈಜ್ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಅಂದರೆ ಉತ್ತರದ ಕಂಕಣವಾಡಿಯವರ ಪ್ಲಾಟಿನ ದಕ್ಷಿಣಕ್ಕೆ ಇರುವ ಎಲ್ಲರ ನಿವೇಶನಗಳು ೧೪ ಜನರಿಗೆ ಸಂಬಂಧಿಸಿವೆ. ಅವನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ. ಇದರಲ್ಲಿ ಪುರಸಭೆಯವರು ಶಾಮೀಲಾಗಿದ್ದಾರೆ !
ಈಗ ನಮ್ಮದೇ ಒಂದು ಜಾಗದ ಕೇಸು ಕೋರ್ಟಿನಲ್ಲಿ ಇದೆ. ನಮ್ಮ ಪಕ್ಕದ ಆನಂದ ಪತ್ತಾರ ಎಂಬುವವನ ಜಾಗ ಎರಡು ಗುಂಟೆ. ಇದೇ ನಂಬರಿನ ಆತನ ಜಾಗ ದಕ್ಷಿಣೋತ್ತರ ೧೦೦’ ಆದರೆ ಅಗಲ ೨೨’ ಇರಬೇಕು ಆದರೆ ಆತ ಪೂರ್ವ ಪಶ್ಚಿಮಕ್ಕೆ ೪೦’ ಶೆಡ್ ಹಾಕಿಕೊಂಡು ಕೋರ್ಟಿಗೆ ಹಾಕಿ ಕುಳಿತುಬಿಟ್ಟಿದ್ದಾನೆ. ಕೇಳಿದರೆ ರಸ್ತೆಗೆ ಹೋಗಿರುವ ಜಾಗ ನನಗೆ ಸಂಬಂಧವಿಲ್ಲ ಎನ್ನುತ್ತಾನೆ, ಪುರಸಭೆಯವರು ರಸ್ತೆಗೆ ಹೋಗಿದೆ ಎನ್ನುತ್ತಾರೆ ಆದರೆ ಆ ಬಗ್ಗೆ ಬರಹದಲ್ಲಿ ನೀಡುವುದಿಲ್ಲ ಎನ್ನುತ್ತಾರೆ. ಕೋರ್ಟು ಬರಹದಲ್ಲಿ ಬೇಕು ಎನ್ನುತ್ತದೆ. ಇತ್ತ ನೀರಾವರಿ ಇಲಾಖೆಯವರು ತಾವು ರಸ್ತೆಗೆ ಜಾಗ ತೆಗೆದುಕೊಂಡಿಲ್ಲ ಎನ್ನುತ್ತಾರೆ ಹಾಗಾದರೆ ಉಳಿದ ಜಾಗ ಎಲ್ಲಿ ಹೋಯಿತೆಂಬುದಕ್ಕೆ ಪುರಸಭೆಯವರ ಹತ್ತಿರ ಉತ್ತರವಿಲ್ಲ. ಉತ್ತರವಿಲ್ಲವೋ ಅಥವಾ ಗೊತ್ತಿದ್ದೂ ಆಡುತ್ತಿರುವ ನಾಟಕವೋ ನಮಗಂತೂ ಒಂದೂ ಗೊತ್ತಾಗದೆ ಜಾಗ ಕಳೆದುಕೊಂಡು ಒದ್ದಾಡುತ್ತಿದ್ದೇವೆ.
ಅಂದಹಾಗೆ ಈ ಜಾಗಕ್ಕೆ ಸಂಬಂಧಿಸಿದ ಇಲಾಖೆ ಯಾವುದೆಂಬುದನ್ನೇ ಹೇಳದ ಪುರಸಭೆಯವರು ನಮ್ಮನ್ನೆಲ್ಲ ಕತ್ತಲೆಯಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಕ್ರಮವಾಗಿ ವಿಲೇವಾರಿಯಾಗಿರುವ ಜಾಗಗಳ ನಿಜ ಮಾಲೀಕರಿಗೆ ಜಾಗ ಸಿಗಬೇಕು. ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಪುರಸಭೆಯ ಹಿಂದಿನ ಎಲ್ಲ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಕೆಲಸವಾಗಬೇಕೆಂಬುದು ಜಾಗ ಕಳೆದುಕೊಂಡಿರುವ ಎಲ್ಲರ ಆಗ್ರಹವಾಗಿದೆ.
ಮೂಡಲಗಿ ಪುರಸಭೆ ಇದರಲ್ಲಿ ಅಕ್ರಮ ಎಸಗಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಇಂಥ ಅಕ್ರಮಗಳು ಇನ್ನೂ ಎಷ್ಟು ಇದರ ಸೆರಗಿನಲ್ಲಿ ಇವೆ ಎಂಬುದು ಕೂಡ ಹೊರಬರಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ