ಮೈಸೂರು – ಕನ್ನಡ ಕಾಯಕ ವರ್ಷದ ಅಂಗವಾಗಿ ನಡೆದಿರುವ ಸಾರಿಗೆಯಲ್ಲಿ ಕನ್ನಡ ಭಾಷೆಯ ಬಳಕೆ ಅಭಿಯಾನದ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬಸ್ ವಿಭಾಗೀಯ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಪತ್ರ ನೀಡಿ ಕೆ.ಆರ್.ನಗರ ಬಸ್ ಡಿಪೋ ಬರುವ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಗ್ರಾಮೀಣ ಬಸ್ ನಿಲ್ದಾಣ ಗಳಲ್ಲಿ ತಾಲ್ಲೂಕಿನಲ್ಲಿ ಜನಿಸಿದ ಹಿರಿಯ ಕವಿಗಳ,ಕಲಾವಿದರ, ಸಾಧಕರ ಭಾವಚಿತ್ರ ಅಳವಡಿಸಬೇಕು.ವಿಭಾಗದಿಂದ ಹೊರಡುವ ಎಲ್ಲಾ ಅಂತಾರಾಜ್ಯ ಬಸ್ಸುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮಫಲಕಗಳನ್ನು ಬಳಸಬೇಕು.ವಿಭಾಗದ ವ್ಯಾಪ್ತಿಯ ಎಲ್ಲಾ ಬಸ್ ನಿಲ್ದಾಣಗಳ ಸೂಚನಾ ಫಲಕಗಳು,ಜಾಹೀರಾತುಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂದು ಒತ್ತಾಯಿಸಲಾಯಿತು.
ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಹಕ್ಕೊತ್ತಾಯ ಪತ್ರ ನೀಡಿ ಮಾತನಾಡಿ, ಕೆ.ಆರ್.ನಗರ ವಿಭಾಗದ ಎಲ್ಲ ಆಡಳಿತ ವ್ಯವಹಾರಗಳಲ್ಲಿ ,ಜಾಹಿರಾತು ಫಲಕಗಳಲ್ಲಿ, ಸೂಚನಾ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಒತ್ತಾಯಿಸಿದರು.ಅಂತಾರಾಜ್ಯ ಸಂಚರಿಸುವ ಬಸ್ಸುಗಳಲ್ಲಿ ಕನ್ನಡ ಕವಿಗಳ ಕವಿವಾಣಿಯನ್ನು,ಭಾವಚಿತ್ರಗಳನ್ನು ಹಾಕುವಂತೆ ಒತ್ತಾಯಿಸಿದರು.
ವಿಭಾಗೀಯ ನಿರ್ವಾಹಕರ ಪರವಾಗಿ ವಿಭಾಗದ ಹಿರಿಯ ಆಡಳಿತಾಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮಿಶೆಟ್ಟಿ,ಆಡಳಿತ ಸಿಬ್ಬಂದಿ ಶ್ರೀಮತಿ ಅರುಣ ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು.