ಮೂಡಲಗಿ: ಜನಪದ ಕಲೆಗಳು ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಗಳಾಗಿವೆ. ಆದ್ದರಿಂದ ನಮ್ಮ ಸಂಸ್ಕೃತಿ ಉಳಿಯಬೇಕಾದರೆ, ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಮೂಡಲಗಿ ತಾಲೂಕಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಮಹಾದೇವ ಪೋತರಾಜ್ ಹೇಳಿದರು.
ಅವರು ಪಟ್ಟಣದ ವಿದ್ಯಾನಗರದ ಜರುಗಿದ ಮೂಡಲಗಿ ತಾಲೂಕಾ ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ “ವಿಶ್ವ ಜನಪದ ದಿನಾಚರಣೆ”ಯಲ್ಲಿ ಮಾತನಾಡಿ, ಜನಪದ ಕಲೆಗಳು ಆಯಾ ಪ್ರದೇಶ, ನಾಡು, ದೇಶ-ಭಾಷೆಗಳ ಸಾಂಸ್ಕೃತಿಕ ಕೊಡುಗೆಗಳಾಗಿವೆ. ಜನರ ಬಾಯಿಂದ ಬಾಯಿಗೆ, ಪ್ರದೇಶದಿಂದ ಪ್ರದೇಶಕ್ಕೆ, ಯುಗದಿಂದ ಯುಗಕ್ಕೆ, ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೂ ಈ ನೆಲದ ಹಸಿರು-ಉಸಿರಿನಂತೆ ಬೆಳೆದು ಬಂದಿವೆ. ಜನಪದ ಕಲೆಗಳು ಪಕ್ಕಾ ಆಯಾ ದೇಶದ ಜೀವನಾಡಿಗಳಾಗಿವೆ, ಜಗತ್ತಿನ ಅನೇಕ ರಾಷ್ಟ್ರಗಳು ಜನಪದ ಕಲೆಗಳು, ಸಾಹಿತ್ಯ, ಸಂಸ್ಕೃತಿಗೆ ಮೊದಲ ಆದ್ಯತೆ ನೀಡಿರುವುದು ಅಧ್ಯಯನದಿಂದ ತಿಳಿದು ಬರುತ್ತದೆ ಎಂದರು.
ಜನಪದ ಮಾನವನ ಬದುಕಿನ ಸರ್ವೋತ್ತಮ ಶಿಕ್ಷಕನಂತೆ ಸತ್ಯ ಮತ್ತು ಸತ್ವದಿಂದ ಕೂಡಿರುವ ನಾಡಿ ಮಿಡಿತಗಳಂತೆ ಮಣ್ಣಿನ ವಾಸನೆಯಂತೆ ಎಲ್ಲರಲ್ಲೂ, ಎಲ್ಲದರಲ್ಲೂ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಅಂಥ ಕಲೆಗಳು, ಕಲಾವಿದರು ಇಂದಿನ ಜಾಗತೀಕರಣ ಮತ್ತು ಆಧುನೀಕರಣದ ಪ್ರಭಾವಕ್ಕೆ ಸಿಲುಕಿ ಅಳಿವಿನ ಅಂಚಿಗೆ ತಲುಪಿದ್ದಾರೆ. ಆದ್ದರಿಂದ ಜಗತ್ತು ಹೊಸದನ್ನು ಹುಡಕಲು ಎಷ್ಟು ಪ್ರಯತ್ನ ಮಾಡುತ್ತಿದೆಯೋ ಅದಕ್ಕಿಂತ ಹೆಚ್ಚು ಪ್ರಯತ್ನ ಜನಪದ ಉಳಿಸಿಕೊಳ್ಳಲು ಮಾಡಬೇಕಾಗಿದೆ. ಕಾರಣ ಜನಪದ ನಮ್ಮ ಬದುಕಿನ ಹೊನ್ನ ಕಿರಣಗಳಾಗಿವೆ. ಪ್ರತಿಯೊಂದು ದೇಶದ ಸಾಂಸ್ಕೃತಿಕ ಕೊಡುಗೆಗಳಾಗಿವೆ. ಪ್ರತಿಯೊಂದು ಭಾಷೆಯ ಹಿರಿಮೆಗೆ ಹಿಡಿದ ಕನ್ನಡಿಗಳಾಗಿವೆ ಎಂದರು.
ಜನಪದ ಕಲೆಗಳಲ್ಲಿ ಭಕ್ತಿ, ಶಕ್ತಿ, ವೃತ್ತಿ, ಪ್ರವೃತ್ತಿ, ರಂಗಭೂಮಿ, ಹಾಡು, ಕುಣಿತ, ಮನರಂಜನೆ ಎಲ್ಲಾ ಇದೆ. ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ರೈತಾಪಿ ಕುಟುಂಬಗಳಿಂದಲೇ ಎಲ್ಲ ಹಬ್ಬ, ಜಾತ್ರೆ, ಆಚರಣೆಗಳು, ಕೃಷಿಕಾರ್ಯ ಚಟುವಟಿಕೆಗಳು ಹುಟ್ಟಿ ಬೆಳೆದು ಬಂದಿವೆ ಎಂದರು.
ಈ ಸಂಧರ್ಭದಲ್ಲಿ ಪಟ್ಟಣದ ಸಿದ್ದಿಸೋಗು ಕಲಾವಿದರಾದ ಚುಟುಕುಸಾಬ ಜಾತಗಾರ, ಗೊಂದಳಿ ಕಲಾವಿದರಾದ ನಾಗೇಂದ್ರ ಮಾನೆ, ಪ್ರವೀಣ ಮಾನೆ, ಗಣಪತಿ ಮಾನೆ, ರೋಹಿತ್ ಮಾನೆ ಮತ್ತಿತರು ಇದ್ದರು.
ಫೊಟೋ ಕ್ಯಾಪ್ಸನ್> ಮೂಡಲಗಿ: ಪಟ್ಟಣದ ವಿದ್ಯಾನಗರದ ಜರುಗಿದ “ವಿಶ್ವ ಜನಪದ ದಿನಾಚರಣೆ”ಯಲ್ಲಿ ಮೂಡಲಗಿ ತಾಲೂಕಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಮಹಾದೇವ ಪೋತರಾಜ ಮಾತನಾಡಿದರು.