ಗುರುವಾರ ದಿ.8 ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ‘ದಿ. ಗಂಗಾ ಕಂಬಾರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ’ ಹಾಗೂ ದತ್ತಿದಾನಿ ಯಮುನಾ ಕಂಬಾರ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ಮಾತನಾಡಿ, ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ಯಾವುದೇ ಸಂಘ ಸಂಸ್ಥೆಗಳು ಗಟ್ಟಿಯಾಗಿ ನೆಲೆಯೂರಿ ಕೆಲಸ ಮಾಡಲು ಆರ್ಥಿಕವಾಗಿ ಸಬಲವಾಗಿರಬೇಕು.ಆ ನಿಟ್ಟಿನಲ್ಲಿ ನಮ್ಮ ಸಂಘಕ್ಕೆ ದತ್ತಿ ದಾನಿಗಳು ಬೆನ್ನೆಲುಬಾಗಿದ್ದಾರೆ. ಇಂದು ಜಿಲ್ಲೆಯ ಮನೆಮನೆಗಳಲ್ಲಿ ಹೊಸ ಲೇಖಕಿಯರು ಹುಟ್ಟಿಕೊಳ್ಳುತ್ತಿದ್ದಾರೆ ವಿಶಾಲವಾಗಿ ನಮ್ಮ ಸಂಘ ಬೆಳೆಯುತ್ತಿದೆ ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ಜಿ. ರಾಮಯ್ಯ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಹಿರಿಯರಿಂದ ಕಿರಿಯರಿಗೆ ಪ್ರೇರಣೆಯಾಗಿ ಬರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಸಾಹಿತ್ಯ ಅಗಾಧವಾಗಿ ಬೆಳೆಯುತ್ತಿದೆ ಎಂದರು. ಸಾಹಿತಿ,ಪ್ರಾಧ್ಯಾಪಕ ಡಾ.ಹೆಚ್. ಬಿ. ಕೋಲಕಾರ್ ‘ಪ್ರೀತಿ ಎಂದರೆ ‘ ಎಂಬ ಕವನ ಸಂಕಲನವನ್ನು ಪರಿಚಯಿಸಿ ಯಾವಾಗ ಬರೆಯುವ ಶೈಲಿ ತನ್ನದಾಗುತ್ತೆ ಆಗ ಬರಹ ಮುಂದೆ ಸಾಗುತ್ತದೆ. ಬುದ್ಧನ ಕರುಣೆ,ಕೂಲಿಕಾರರ ಸಹನೆ, ಜೀವನದ ಹಾದಿ, ಸೈನಿಕರ ರಕ್ಷಣೆ ಗುರಿ, ಅನ್ನದಾತನ ಅಳಲು,ಪ್ರೀತಿ-ನೀತಿ ಕುರಿತಾದ ಅನೇಕ ಕವನಗಳು ಓದುಗನನ್ನು ಸೆಳೆಯುತ್ತವೆ ಎಂದರು. ‘ಎರಡು ಫೈಲುಗಳ ನಡುವೆ ‘ ಎಂಬ ಕಥಾಸಂಕಲನವನ್ನು ಸಾಹಿತಿ ನಿರ್ಮಲಾ ಬಟ್ಟಲ್ ಪರಿಚಯಿಸಿ ನಿತ್ಯ ನಡೆಯುವ ಘಟನಾವಳಿಗಳನ್ನು ಬಳಸಿ ಕನ್ನಡ ಹುಡುಕುವವರು, ಹದಿಹರೆಯದವರು ಚಟಗಳಿಂದ ದಾರಿ ತಪ್ಪುವುದು, ಅಡ್ಡ ದಾರಿಯಲ್ಲಿ ಹೆಸರು ಮಾಡುವುದು, ವಸ್ತ್ರದಿಂದ ಆಗುತ್ತಿರುವ ಮಹಿಳಾ ದೌರ್ಜನ್ಯ ಹೀಗೆ ಮನಮುಟ್ಟುವ ಕಥೆಗಳು ಕಥಾಸಂಕಲನದಲ್ಲಿ ಅಡಗಿವೆ ಎಂದು ಪರಿಚಯಿಸಿದರು.
ಇಂಗ್ಲಿಷ್ ಭಾಷೆಯ ಇನ್ನೊಂದು ಕವನಸಂಕಲನ ‘ಮೈ ಶಾಡೋ ‘ ಕೃತಿಯನ್ನು ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಪರಿಚಯಿಸಿ ಕವನ ಸಂಕಲನದ ಕೆಲವು ಕವನಗಳು ಅಂತಾರಾಷ್ಟ್ರೀಯ ಕವನಗಳ ಜರ್ನಲ್ನಲ್ಲಿ ಪ್ರಕಟವಾಗಿದೆ ಅಂತಹ ಅದ್ಭುತ ಮತ್ತು ಗುಣಮಟ್ಟದ ಕವನಗಳು ಇದರಲ್ಲಿವೆ. ಇದರಿಂದ ನಾಡಿನ ಪ್ರತಿಭೆಗಳು ಅಂತಾರಾಷ್ಟ್ರೀಯವಾಗಿ ಹೆಸರು ಮಾಡಲು ಸಹಕಾರಿಯಾಗುತ್ತದೆ. ನನ್ನ ನೆರಳು ಮೌನವಾಗಿ ನಮ್ಮನ್ನು ಕೊನೆಯವರೆಗೆ ಹಿಂಬಾಲಿಸುತ್ತದೆ ಎಂಬ ಕಾಲ್ಪನಿಕವಾದ ವಿಚಾರಗಳನ್ನು ಕವನ ಸಂಕಲನ ಒಳಗೊಂಡಿದೆ ಎಂದರು. ಲೇಖಕಿ ಮತ್ತು ದತ್ತಿ ದಾನಿಗಳಾದ ಯಮುನಾ ಕಂಬಾರ ಕೃತಿಗಳನ್ನು ರಚಿಸಲು ಮೊದಲು ನಮಗೆ ಉತ್ಸಾಹ ಮತ್ತು ಆಸಕ್ತಿ ಬೇಕು. ಹಿರಿಯರು ಮತ್ತು ಲೇಖಕಿಯರ ಸಂಘ ನನ್ನನ್ನು ಬೆನ್ನು ತಟ್ಟಿ ಬರೆಯುವಂತೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಲೇಖಕಿಯರಾದ ಆಶಾ ಕಡಪಟ್ಟಿ,ಆಶಾ ಯಮಕನಮರಡಿ, ಮಹಾದೇವಿ ಹುಲಗಬಾಳಿ, ಲಲಿತಾ ಕ್ಯಾಸನ್ನವರ, ಸುಮಂಗಲಾ ಅರಳಿಕಟ್ಟಿ, ರಾಜಶ್ರೀ ಪಾಟೀಲ್.ಸ.ರಾ. ಸುಳಕುಡೆ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ,ಶ್ರೀರಂಗ ಜೋಶಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ರಾಜನಂದ ಗಾರಗಿ ಕಾರ್ಯಕ್ರಮವನ್ನು ನಿರೂಪಿಸಿದರು.