ಬೆಂಗಳೂರು: ಬನಶಂಕರಿ 3 ನೇ ಹಂತದ ಕತ್ತರಿ ಗುಪ್ಪೆ ವಾಟರ್ ಟ್ಯಾಂಕ್ ಬಳಿ ಇರುವ ಮೈಸೂರು ನರಸಿಂಹ ಸ್ವಾಮಿ ಉದ್ಯಾನವನದ ಬಳಿ ಇರುವ ಪಾದಾಚಾರಿ ಮಾರ್ಗದಲ್ಲಿ ಬಣ್ಣ ಬಣ್ಣದ ಗೌರಿ ಮೂರ್ತಿ ಗಳು ಹಾಗೂ ಬಣ್ಣ ಬಣ್ಣದ ಹಾಗೂ ಪರಿಸರ ಸ್ನೇಹಿ ಗೌರಿ – ಗಣೇಶ ನ ಮೂರ್ತಿಗಳು.
ಗೌರಿ ಹಬ್ಬದ ಮುನ್ನಾ ದಿನವಾದ ನಿನ್ನೆಯೇ ಸಂಜೆ ವೇಳೆಗೆ ಹಬ್ಬದ ವ್ಯಾಪಾರ ನಡೆಯುತ್ತಿತ್ತು.
ಒಂದೆಡೆ ಕೋವಿಡ್ 19, ಮತ್ತೊಂದೆಡೆ ಹಣದುಬ್ಬರ … ಎಲ್ಲಾ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ, ಹೂವು ಹಣ್ಣು , ಗೆಜ್ಜೆ, ವಸ್ತ್ರ ಹಾಗೂ ಗೌರಿ – ಗಣೇಶನ ಮೂರ್ತಿ ಯ ಬೆಲೆಯು ಗಗನ ಕುಸುಮ ಆದರೆ ನಾಗರಿಕರು ಮಾತ್ರ ಹಣದುಬ್ಬರದಲ್ಲೂ ಸಣ್ಣ ಪ್ರಮಾಣದಲ್ಲಿ ಸಂಭ್ರಮದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.
ಆಚರಣೆ:
ಭಾದ್ರಪದ ಮಾಸದ ತದಿಗೆಯಂದು ಹಸ್ತಾ ನಕ್ಷತ್ರವಿರುವ ದಿನ, ಶ್ರೀಪಾರ್ವತಿದೇವಿಯನ್ನು ಸ್ವರ್ಣಗೌರಿ ಎಂದು ಪೂಜಿಸಲಾಗುತ್ತದೆ.
(ಸೆಪ್ಟಂಬರ್ – 09- ಗುರುವಾರ)
ಗೌರಿ ಎಂದರೆ ತಿಳಿಯಾದ ಬಿಳಿ ಬಣ್ಣ ಮಿಶ್ರಿತ ಸುವರ್ಣ (ಬಂಗಾರ) ವರ್ಣ ಎಂದರ್ಥ.
ವ್ರತದ ಬಗ್ಗೆ:
ಪಾರ್ವತಿ ದೇವಿ ಶಿವನನ್ನು ವರಿಸಲೆಂದು ಮಾಡಿದ ವ್ರತವಿದು. ಹಾಗಾಗಿ ಅತ್ಯಂತ ಫಲಪ್ರದವಾದ ವ್ರತವಾಗಿದೆ. ಈ ವ್ರತವನ್ನು ಕೇವಲ ಮಹಿಳೆಯರು ಮಾತ್ರ ಆಚರಿಸದೆ, ದಂಪತಿ ಒಟ್ಟಿಗೆ ಆಚರಣೆ ಮಾಡಿದರೆ ಫಲ ಹೆಚ್ಚು.
ಹಿಂದೆ ಪರ್ವತರಾಜನು ತನ್ನ ಮಗಳನ್ನು ನಾರಾಯಣನಿಗೆ ಕೊಟ್ಟು ಮದುವೆ ಮಾಡಲು ಯೋಚಿಸಿದ. ಇದರಿಂದ ಮನನೊಂದ ಪಾರ್ವತಿ ಖಿನ್ನಳಾಗಿ ಮನೆ ಬಿಟ್ಟು ಕಾಡು ಸೇರಿದಳು.
ಶಿವನನ್ನೇ ಪತಿಯನ್ನಾಗಿ ಪಡೆಯಬೇಕೆಂದು ಉದ್ದೇಶಿಸಿ ಮರಳಿನಿಂದ ಲಿಂಗವನ್ನು ತಯಾರಿಸಿ ಭಕ್ತಿಯಿಂದ ಪೂಜಿಸಿದಳು.
ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಶಿವನನ್ನು ಮೆಚ್ಚಿಸಿದಳು. ಆ ದಿನವೇ ಭಾದ್ರಪದ ಶುಕ್ಲ ತೃತೀಯಾ ತಿಥಿ.
ಈ ವ್ರತವನ್ನು ಮಾಡಿದ್ದರಿಂದ ಪಾರ್ವತಿ ದೇವಿ ಶಿವನನ್ನು ವರಿಸಿ ಅಖಂಡ ಸೌಭಾಗ್ಯ ವನ್ನು ಪಡೆದಳು. ಅಂದಿನಿಂದ ಸೌಭಾಗ್ಯಕ್ಕಾಗಿ ಈ ವ್ರತದ ಮೂಲಕ ಶ್ರೀಉಮಾ ಮಹೇಶ್ವರ ರನ್ನು ಪೂಜಿಸುವುದು ರೂಢಿಯಾಗಿದೆ.
ಸರ್ವರಿಗೂ ದೇವಿಯ ಅನುಗ್ರಹ ದೊರೆಯಲೆಂದು ಈ ಮೂಲಕ ಪ್ರಾರ್ಥಿಸುತ್ತೇವೆ.
ಗಣೇಶ ಚತುರ್ಥಿ ಬಗ್ಗೆ:
ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ.
ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಚಿತ್ರ – ಪೂರಕ ಮಾಹಿತಿ: ತೀರ್ಥಹಳ್ಳಿ ಅನಂತ ಕಲ್ಲಾಪುರ