ಸವದತ್ತಿ: ಹಸಿವು, ನೋವು, ನಲಿವು, ಸುಖ-ದುಃಖ, ಬದುಕಿನ ಅದಮ್ಯ ಪ್ರೀತಿ, ಅನ್ಯಾಯದ ವಿರುದ್ಧ ಪ್ರತಿಭಟನೆಯಂತಹ ಅಂಶಗಳು ಕವಿತೆಯ ವಸ್ತುವಾಗಿವೆ ಎಂದು ಸವದತ್ತಿಯ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕರಾದ ಶ್ರೀ ಕೆ. ರಾಮರೆಡ್ಡಿ ನುಡಿದರು.
ಅವರು ಕೆ.ಎಲ್.ಇ. ಸಂಸ್ಥೆಯ ಎಸ್ ವಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕನಕಗಿರಿಯ ಸಮೀರ್ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿ ರಾಮಚಂದ್ರ ಕುಲಕರ್ಣಿ ಅವರ ‘ಬೂದಿ ಹರಡಿದ ಬೀದಿಯಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಯು ಸಮಾಜದ ಕುರಿತಾಗಿ ಧ್ಯಾನಿಸುತ್ತಿರುತ್ತಾನೆ. ಅವನು ಸದಾ ಚಿಂತನಶೀಲ ವ್ಯಕ್ತಿ. ಕವಿ ಬರೆಯುವ ಪ್ರತಿಯೊಂದು ಸಾಲುಗಳು ಜನರ ಬದುಕನ್ನು ಕಟ್ಟುವಂತಿರಬೇಕು ಆಗ ಮಾತ್ರ ಕವಿಯ ಬರವಣಿಗೆ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಓದಿದ ಕವಿತೆಗಳಲ್ಲಿ ‘ರೈತನ ಸಂಕಷ್ಟ, ಮಾನವ ಜನ್ಮದ ಸಾರ್ಥಕತೆ, ಸುಃಖ ದುಃಖದ ಸಮಭಾವ, ತಂದೆ ತಾಯಿ ಸೇವೆ, ಮೌಢ್ಯ, ಸ್ವರ್ಗ ನರಕ, ಅಧಿಕಾರದ ಮದ, ಹಿಂಸೆ, ಆಪ್ತ ಸಂಬಂಧ, ಸಾಂತ್ವನದ ಮಾತು, ಅವ್ವನ ಪ್ರೀತಿ ಮತ್ತು ಮಮತೆ, ಹಸಿವು, ಕಾಮ, ಪ್ರೀತಿ-ಪ್ರೇಮ, ಅನ್ಯಾಯದ ವಿರುದ್ಧ ಪ್ರತಿಭಟನೆ, ಪುರಾಣ ಭಂಜನ, ಸೌಹಾರ್ದತೆ, ಮನುಷ್ಯತ್ವದಂತಹ ವಿಚಾರಗಳು ಅನಾವರಣಗೊಂಡವು.
ಕವಿ ಗೋಷ್ಠಿಯಲ್ಲಿ ಕವಿಗಳು ತಮ್ಮ ತಮ್ಮ ಅನುಭವಕ್ಕೆ ದಕ್ಕಿದ ಅನೇಕ ವಾಸ್ತವಾಂಶಗಳನ್ನು ತೆರೆದಿಡುವ ಮೂಲಕ ಸಮಕಾಲೀನ ಸಮಾಜದ ಓರೆ ಕೋರೆಗಳನ್ನು ತಿದ್ದುವ ಆಶಯಗಳು ಕಂಡುಬಂದವು. ಸುಂದರ ಸಮಾಜದ ಕನಸುಗಳು ಕವಿತೆಗಳಲ್ಲಿ ಮೂಡಿ ಬಂದವು. ಹದಿನೆಂಟು ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಪ್ರೊ| ಶಿವಲೀಲಾ ಅರಹುಣಸಿ ನಿರೂಪಿಸಿದರು. ಡಾ. ಅರುಂಧತಿ ಬದಾಮಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬೋಧಕ. ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ನಾಗೇಶ್ ಜೆ.ನಾಯಕ, ನಾಗರಾಜ ಸೋಗಿ, ರಾಮಚಂದ್ರ ಕುಲಕರ್ಣಿ ಉಪಸ್ಥಿತರಿದ್ದರು.