ಭಾನುವಾರದ ಕವನಗಳು

Must Read

ಛತ್ರಿಗಳು

ಛತ್ರಿಗಳು ಸಾರ್
ನಾವು ಛತ್ರಿಗಳು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು

ಬಡತನದ ಬಿಸಿಲಿನಲ್ಲಿ
ಸುಟ್ಟುಕೊಂಡರು
ದುಃಖದ ಮಳೆಯಲ್ಲಿ
ಒದ್ದೆಯಾದರು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು

ಕತ್ರಿಗಳನ್ನು
ಪಲ್ಲಕ್ಕಿಯಲ್ಲಿ ಹೊತ್ತು
ಛತ್ರಿ ಚಾಮರ ಹಿಡಿದು
ಬಹು ಪರಾಕ್ ಹೇಳುವ
ಛತ್ರಿಗಳು ಸಾರ್
ನಾವು ಛತ್ರಿಗಳು

ಛತ್ರಪತಿಗಳಿಗಾದರು
ಇದ್ದವು ಶ್ವೇತಛತ್ರಿಗಳು
ಈ ಕತ್ರಿಪತಿಗಳಿಗೆ
ನಾವೆ ಕಪ್ಪುಛತ್ರಿಗಳು
ಛತ್ರಿಗಳು ಸಾರ್
ನಾವು ಛತ್ರಿಗಳು

ಎಲ್ಲೆಂದರಲ್ಲಿ
ಕೊಳೆತು ನಾರುವ
ತಿಪ್ಪೆಯಲ್ಲಿ ಬೆಳೆಯುವ
ಶ್ವಾನಛತ್ರಿಗಳಂಥ
ಛತ್ರಿಗಳು ಸಾರ್
ನಾವು ಛತ್ರಿಗಳು

ನಮ್ಮೆಲ್ಲರ ಮೇಲೊಂದು
ನೀಲಿಛತ್ರಿ
ಇದೆಯೆಂಬುದು
ಮರೆತವರು
ಛತ್ರಿಗಳು ಸಾರ್
ನಾವು ಛತ್ರಿಗಳು

ಎನ್.ಶರಣಪ್ಪ ಮೆಟ್ರಿ ಗಂಗಾವತಿ


ಹಲ್ಲಿಗಳು

ಹಲ್ಲಿಗಳಿಗೆ ಗೋಡೆಗಳೆ
ಆಶ್ರಯಸ್ಥಾನ
ಗೋಡೆಗಳ ಮೇಲೆ
ಅವುಗಳ ಜೀವನ

ಹುಳಹುಪ್ಪಟೆಗಳನ್ನು
ಕಳ್ಳಹೆಜ್ಜೆಹಾಕಿ
ಗುಳುಮ್ಮನೆ
ನುಂಗಿಬಿಡುವವು

ಯಾರಾದರು
ಹಿಡಿಯಲು ಹೋದರೆ
ಬಾಲಕಳಚಿಕೊಟ್ಟು
ತಪ್ಪಿಸಿಕೊಳ್ಳುವವು

ಅವುಗಳು ಮೈಮೇಲೆ
ಉಚ್ಚೆಹೊಯ್ದರೆ
ಆಮ್ಲೀಯ ಮೂತ್ರದಿಂದ
ಚರ್ಮದ ಮೇಲೆ
ಬೊಬ್ಬೆಗಳೇಳುವವು

ಅಡಿಗೆಯಲ್ಲಿ ಬಿದ್ದು ಸತ್ತರೆ
ವಿಷವಾಗಿ ವಿಷಮಯವಾಗಿ
ತಿಂದವರು
ಅಸ್ವಸ್ಥರಾಗುವರು
ಇಲ್ಲ ಸ್ವರ್ಗಸ್ಥರಾಗುವರು

ಈ ಹಲ್ಲಿಗಳ
ನಿರ್ಮೂಲನೆಗೆ
ಜಾತಿಧರ್ಮ ದೇಶಭಾಷೆ
ವರ್ಗವರ್ಣ ಲಿಂಗಕುಲ
ಪಂಥಪಂಗಡಗಳ
ಗೋಡೆಗಳನ್ನೇ
ಒಡೆದು ಹಾಕಬೇಕಷ್ಟೆ

ಎನ್.ಶರಣಪ್ಪ ಮೆಟ್ರಿ


ಸ್ನೇಹ ಸೇತುವೆ-ಅಳಿಯದ ಬಂದ

ಅಪರಿಚಿತರು ಪರಿಚಿತರಾಗುವ ಬಾಂಧವ್ಯ
ಗಂಡ ಹೆಂಡತಿ ಮಕ್ಕಳು ಸಂಬಂಧಕ್ಕಿಂತ ಮಿಗಿಲು
ಹರಿಯುವ ಪ್ರೀತಿಯ ಸ್ನೇಹ ಸುಮಧುರ ಹೊನಲು
ಜಗವನು ಮರೆಸೊ ಮೀರಿದ ಸಂಬಂಧದ ಕೀಲು//೧//

ಸ್ನೇಹಕ್ಕೊಂದು ಸುಂದರ ಸ್ನೇಹ ಸೇತುವೆಯದು ಮೇಲು
ಜಾತಿ ಗೀತಿಯ ಸೋಂಕು ಇರದಾ ಪರಿಶುದ್ಧ ಜಲ
ಬಡವ-ಬಲ್ಲಿದನೆಂಬ ಭೇದವಿರದಾ ಹೊನಲು
ನಂಬಿಕೆ ಎಂಬ ತಳಪಾಯದಿ ಬೆಸೆದ ಮಹಲು//

ಕೃಷ್ಣ ಸುದಾಮರ ಪವಿತ್ರ ಪ್ರೇಮವೇ ಸ್ನೇಹಬಂಧ
ಲಾಭ-ನಷ್ಟ ಆಶೆ ಆಮಿವಿಲ್ಲದಿರದ ಸಂಬಂಧ
ನಿಸ್ವಾರ್ಥ ತ್ಯಾಗದ ಮುರಿಯದ ಬಾಂಧವ್ಯದ ಬಂಧ
ಪ್ರೀತಿ ಸಹಾನುಭೂತಿ ಪ್ರಾಮಾಣಿಕತೆ ತುಂಬಿದ ಬಂದ//

ರಕ್ತಸಂಬಂಧಕ್ಕೆ ಮಿಗಿಲಾದ ಸುಮಧುರ ಬಂಧ
ಸಂಕಟ ಕಷ್ಟ-ನಷ್ಟದ ನೋವು-ನಲಿವಿನ ಬಂದ
ಪ್ರತಿಫಲ ಬಯಸದೆ ಪ್ರೋತ್ಸಾಹಿಸೊ ಸ್ನೇಹ ಬಂಧ
ಜಗದಲಿ ಮಿಗಿಲಾದ ಚಿರವಾದ ಸ್ನೇಹ ಸಂಬಂಧ

ಅನ್ನಪೂರ್ಣ ಹಿರೇಮಠ,ಶಿಕ್ಷಕಿ ಬೆಳಗಾವಿ


ಮೌನ

ಮೌನವೇ ಹಾಗೆ
ಹೇಳುವ ನೂರು ಪದದ
ಪರಿಭಾಷೆ
ಮಾತಿಗಿಂತಲೂ
ಮಿಗಿಲು
ಮಾಗಿದ ಭಾವದ
ಪರಿ ಪರಿ

ರೇಷ್ಮಾ ಕಂದಕೂರ


ಪ್ರಕೃತಿ ಸಂದೇಶ

ಏ ಏಲೆ ಮಾನವ ನೋಡು
ಇಲ್ಲಾ ಸರಿಯಾಗಿ ಕೇಳು ನನ್ನ
ಅಂತರಾಳದ ತುಡಿತವ
ನಾ ದೈವದತ್ತ ಪ್ರಕೃತಿ
ನಾ ನಿನಗೆ ಬೆಲೆಕಟ್ಟಲಾಗದ ಅತ್ಯಮೂಲ್ಯ ಶಕ್ತಿ

ನನ್ನಲ್ಲಿ
ಗಾಳಿಯಿದೆ…ಜಲವಿದೆ
ರವಿ ಚಂದ್ರ ನಕ್ಷತ್ರಗಳ ಬೆಳಕಿದೆ…

ಗಾಳಿಯಿಂದ ಉಸಿರು
ನಿನ್ನುಸಿರು ಗಿಡ ಮರಗಳ ಹಸಿರು
ಗಿಡ ಮರಗಳ ಹಸಿರು ನಿನಗೆ ಉಸಿರು
ಇದನು ತಿಳಿದು ನೀ ಬದುಕಿರು

ಜಗತ್ತೆಂಬ ಸಾಗರಕ್ಕೆ ದೋಣಿಯನು
ಆ ದೇವರು ನಿನಗೆ ನೀಡಿಹನು
ಹುಟ್ಟ ನೀಡಿ ನಿ ಚಲಿಸಿರಲು
ಪರಿಸರ ಅಲೆಗಳಲಿ ಏರಿಳಿತ ಕಾಣು

ಭೂಮಿಯ ಮರ್ಮ ಅರಿಯದ
ಮರುಳ ಮಾನವ ನೀನಾದೆ
ಬಲಿಪಶುವಾದೆ ನಾ ನಿನಗೆ
ವಿಕೃತ ನಿನ್ನ ಮನಸಿಗೆ

ಜಲ,ಜಾಗ, ಮಿತವಾಗಿ ಬಳಸಲಿಲ್ಲ
ಪರಿಸರ ಪ್ರೇಮ ಬೆಳಸಲಿಲ್ಲ
ಬಿಟ್ಟೀ ಸಿಕ್ಕಿತೆಂದು ಭ್ರಮೆಯಲಿ‌
ಬಳಸಿ ಬದುಕ‌ ಕಳೆಯುತಿರುವೆ

ನಾ ಸುಮ್ಮನಾದೆ ಆದರೆ
ಕಾಲ ಸುಮ್ಮನಿರದು
ತೆರಿಗೆ ಬಡ್ಡಿ ಸಮೇತ ಕೇಳೀತು
ಎಚ್ಚೆತ್ತುಕೊ…ದುಷ್ಟ ಮಾನವ
ಈಗಾಗಲೇ ಬಹಳ ತಡವಾಗಿದೆ…
ನೆರೆಹಾವಳಿ,ಅತಿವೃಷ್ಟಿ ಇದಕ್ಕಿಂತ …
ದೊಡ್ಡ ದುರಂತಕ್ಕಾಗಿ ಕಾಯಬೇಡ…

ಮರಳು ಮಾರ ಹೋಗಿ ಮರುಳನಾಗಬೇಡ
ಮನೆಗೆ ಬರುವೆ ಮರಳು ಪಡೆಯಲು
ನಾಡ ಮಾಡ ಹೊರಟ ನೀನು
ಕಾಡ ಸುಟ್ಟು ‌ನಂತರ ನೀ ಬೂದಿಯಾಬೇಡ

ನಿನಗೆ ಈ ಪ್ರಕೃತಿ
ಎಚ್ಚರಿಕೆಯ ಸಂದೇಶ
ಎಲ್ಲಾ ತಿಂದು ಬೆಚ್ಚಗೆ ಮಲಗಿದೆನೆಂಬ
ಭ್ರಾಂತಿ ಬಿಡು
ಎಚ್ಚರ ಎಚ್ಚರ ಎಚ್ಚರ ……..

ಶಂಕರ ರಾಯಚೂರು


ಗೆಳೆತನ

ಗೆಳತಿ
ಬಿಟ್ಟರೂ ಬಿಡಲಾಗದ
ಅನುಬಂಧ
ನಮ್ಮಿಬ್ಬರ ಗೆಳೆತನದ.
ಸಂಬಂಧ

ನಮ್ಮಿಬ್ಬರ ಸವಿಸನಿಹ
ಅದೆಷ್ಟು ಮಧುರ
ನೋವು ನಲಿವುಗಳ
ಹಂಚಿಕೊಳ್ಳುತ
ಕಳೆದ ಗಳಿಗೆಗಳ
ಮರೆಯಲಾದೀತೆ.

ನನಗಾಗಿ ನೀನು
ನಿನಗಾಗಿ ನಾನು
ಊರಿಗೆ ಬರುವ
ದಾರಿ ನೋಡುತ
ಕಾತುರದಿ ಕಾಯುತ
ಕಳೆದ ಗಳಿಗೆಗಳ
ಮರೆಯಲಾದೀತೆ…

ಅಮರವಾದ ನಮ್ಮ
ಗೆಳೆತನವನ್ನು
ಮರೆಯಲಾಗದ ನಮ್ಮ
ಸವಿನೆನಪುಗಳನು
ಬರೆದಿಟ್ಟಿರುವೆ ಗೆಳತಿ
ನನ್ನ ಮನದ ಪುಟಗಳಲಿ
ಏಕಾಂತದಲಿ ಪುಟತಿರುವಿ
ಆನಂದಿಸುವೆ

ಪುಷ್ಪಾ ಮುರಗೋಡ ಗೋಕಾಕ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group