ಮೂರ್ನಾಲ್ಕು ತಿಂಗಳಿಂದ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ

Must Read

ವಿ.ಎಲ್.ಪಾಟೀಲ ಕುಟುಂಬಕ್ಕೆ ಅವಮಾನ ಮಾಡಿದವರಿಗೆ ತಕ್ಕ ಉತ್ತರ ನೀಡಿ: ರಮೇಶ ಜಾರಕಿಹೊಳಿ

ರಾಯಬಾಗ: ಸಿದ್ದರಾಮಯ್ಯ ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ನಮ್ಮಂತೆಯೇ ಅವರು ಬಹಳ ನಿಷ್ಠುರವಾದಿ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಅವರು ಯಾರ ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ರಾಯಬಾಗದಲ್ಲಿ ಮಹಾವೀರ ಭವನದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಟಿಕೆಟ್ ನೀಡುವಂತೆ ಕಾಂಗ್ರೆಸ್‍ಗೆ ಬೇಡಿಕೆ ಇಡುವಂತೆ ನಾನು ವಿವೇಕರಾವ್ ಪಾಟೀಲ ಅವರಿಗೆ ಹೇಳಿದ್ದೆ. ಒಂದು ವೇಳೆ ಅವರು (ಕಾಂಗ್ರೆಸ್) ಟಿಕೆಟ್ ನೀಡಿದರೆ ನನ್ನ ತಮ್ಮನನ್ನು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಮಾತು ಕೊಟ್ಟಿದ್ದೆ. ಆದರೆ, ನನಗೆ ಶೇ.ನೂರರಷ್ಟು ಮೊದಲೇ ಗೊತ್ತಿತ್ತು ಕಾಂಗ್ರೆಸ್ ಎಂದಿಗೂ ವಿವೇಕರಾವ್‍ಗೆ ಟಿಕೆಟ್ ಕೊಡುವುದಿಲ್ಲ ಎಂದು ಎಂದರು.

ಹೀಗಾಗಿ ನಾನು ಬಿಜೆಪಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತನಾಡಿದೆ. ವಿವೇಕರಾವ್‍ಗೆ ಕಾಂಗ್ರೆಸ್ ಟಿಕೆಟ್ ಕೊಡುವುದಿಲ್ಲ. ಹೀಗಾಗಿ ನನ್ನ ತಮ್ಮನನ್ನು ವಿಧಾನ ಪರಿಷತ್‍ಗೆ ನಿಲ್ಲಿಸುತ್ತೇನೆ ಎಂದು ಮೂರು ತಿಂಗಳ ಮುಂಚಿತವಾಗಿಯೇ ಹೇಳಿದ್ದೆ ಎಂದ ಅವರು, ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ಈ ಸ್ಪರ್ಧೆ ಅನಿವಾರ್ಯವಾಗಿತ್ತು ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮತ್ತು ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ನಾವು ಈಗಾಗಲೇ ಜಿಲ್ಲೆಯ ಮೂಲೆ ಮೂಲೆಗೆ ಹೋಗಿ ಪ್ರಚಾರ ಮಾಡಿ ಹೇಳಿದ್ದೇವೆ. ಹೀಗಾಗಿ ಇಲ್ಲಿ ನೆರೆದಿರುವ ಎಲ್ಲ ಮತದಾರರು ಬಿಜೆಪಿ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ಹಾಕಬೇಕು. ಜತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಮೊದಲಿನ ಸಿದ್ದರಾಮಯ್ಯ ಆಗಲಿ:

ಸಿದ್ದರಾಮಯ್ಯ ಅವರು ಮೊದಲಿನ ಸಿದ್ದರಾಮಯ್ಯ ಅವರಾಗಬೇಕು. ಈ ಹಿಂದೆ ಇದ್ದಂತೆ ಒಂದು ಮಾತನಾಡಿದರೆ ಇಡೀ ರಾಜ್ಯ ಹೆದರುತ್ತದಲ್ಲ ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ಎಂದ ಅವರು, ನಮ್ಮ ಬಗ್ಗೆ ಮತ್ತು ವಿವೇಕರಾವ್ ಪಾಟೀಲ ಅವರ ಕುರಿತಾಗಿ ಸಿದ್ದರಾಮಯ್ಯ ಅವರು ಹೇಳಿದ ಪ್ರತಿಯೊಂದು ಶಬ್ದ ಕೂಡ ಸುಳ್ಳು ಎಂದು ಸ್ಪಷ್ಟಪಡಿಸಿದರು.

ವಿವೇಕರಾವ್ ಪಾಟೀಲ ನಮ್ಮ ಹಿಂಬಾಲಕರು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಅವರ (ವಿವೇಕರಾವ್) ಕುಟುಂಬ ಮೊದಲಿನಿಂದಲೂ ರಾಜಕಾರಣ ಮಾಡಿದ ಕುಟುಂಬ. ಅವರ ಜೊತೆಗೆ ನಾವು ಇರುತ್ತಿದ್ದೆವು. ನಾವು ಅವರ ಹಿಂಬಾಲಕರಾಗಿದ್ದೆವು. ಹೀಗಿರುವಾಗ ವಿವೇಕರಾವ್ ಯಾಕೆ ನಮ್ಮ ಹಿಂಬಾಲಕರಾಗುತ್ತಾರೆ? ಅವರು ನನ್ನ ಸ್ನೇಹಿತರು ಎಂದು ಹೇಳಿದರು.

ನನ್ನ ಹಿಂಬಾಲಕರು ಎನ್ನುವ ಮೂಲಕ ವಿವೇಕರಾವ್ ಕುಟುಂಬಕ್ಕೆ ಅವರು ಅಪಮಾನ ಮಾಡಿದ್ದಾರೆ. ನೀವೆಲ್ಲ ಮತದಾರರು ಡಿ.10ರಂದು ಅದಕ್ಕೆ ತಕ್ಕ ಉತ್ತರ ಕೊಡಬೇಕು.

ವಿ.ಎಲ್.ಪಾಟೀಲ ಕುಟುಂಬಕ್ಕೆ ಅಪಮಾನ ಮಾಡಿದ್ದಕ್ಕೆ ನೀವೆಲ್ಲ ಒಂದು ಪ್ರತಿಜ್ಞೆ ಮಾಡಬೇಕು. ಏನೆಂದರೆ, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮತ್ತು ಪಕ್ಷೇತರ ಅಭ್ಯರ್ಥಿಗೆ ತಮ್ಮ ಮತ ಹಾಕಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿವೇಕರಾವ್ ಪಾಟೀಲ, ಲಕ್ಷ್ಮಿಕಾಂತ್ ದೇಸಾಯಿ, ಭೂಪಾಲ ಪುಣೇಕರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ಅಲ್ಲದೆ, ರಾಯಬಾಗ ತಾಲೂಕಿನ 34 ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರಾಯಬಾಗ, ಕುಡಚಿ ಪಪಂ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group