ಮಂಗಳವಾರ (೧೪-೧೨-೨೦೨೧) ರಂದು ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ (೮೪) ಅವರು ಅಲ್ಪಕಾಲದ ಅನಾರೋಗ್ಯದಿಂದ ರಾಜಲಕ್ಷ್ಮೀ ಮಲ್ಟಿಸ್ಪೇಷಾಲಟಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪುತ್ರಿ ಸುಸ್ಮಿತಾ ಅವರ ನಿವಾಸದಲ್ಲಿ ದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡುವ ಮೂಲಕ ಬೌರಿಂಗ್ ಆಸ್ಪತ್ರೆಗೆ ದೇಹದಾನ ಮಾಡುವ ವಿಚಾರವನ್ನು ಪತ್ರಿಕೆಗಳಲ್ಲಿ ಓದಿದೆ.
ನಾನು ಅವರನ್ನು ಭೇಟಿಯಾಗಿದ್ದು ಮೂರು ವರ್ಷಗಳ ಹಿಂದೆ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಏರ್ಪಾಟಾಗಿದ್ದ ಮೂರು ದಿನದ ಕಮ್ಮಟದಲ್ಲಿ. ಇಲ್ಲಿ ರಾಜೇಶ್ವರಿ ಬಂದಿದ್ದರು. ಈ ಕಮ್ಮಟದಲ್ಲಿ ಹಲವಾರು ಶಿಕ್ಷಕರು.ಕಲಾವಿದರು. ಕೃಷಿಕರು ಹೀಗೆ ವಿದ್ಯಾರ್ಥಿಗಳೂ ಎಲ್ಲರೂ ಪರಿಚಿತರಾದರು. ಈ ಹಿಂದೆ ಕುವೆಂಪು ಕವಿಮನೆ ಕವಿಶೈಲದಲ್ಲಿ ಪರಿಚಿತರಾಗಿದ್ದ ಉಪನ್ಯಾಸಕರಾದ ಶಿವಾರಡ್ಡಿ ಸರ್ ಇಲ್ಲಿದ್ದರು. ಅವರಿಗೆ ಹಿಂದಿನ ದಿನಗಳನ್ನು ನೆನಪಿಸಿದೆ. ಅವರಿಗೆ ಗೊತ್ತಾಯಿತು. ಇವನು ಕಮ್ಮಟಕ್ಕಿಂತ ಹೆಚ್ಚು ಓಡಾಟದ ಮನುಷ್ಯ ಎಂದು.ಹೀಗಾಗಿ ನಾನು ಹೊರಗಡೆ ಹೊರಟರೆ ಸಾಕು ನನ್ನನ್ನು ನೋಡಿದವರೇ ನಡೆಯಿರಿ ಒಳಗೆ ಅಲ್ಲಿ ಉಪನ್ಯಾಸ ಕೇಳುವುದು ಬಿಟ್ಟು ಯಾಕೆ ಪದೇ ಪದೇ ಹೊರಗಡೆ ಬರ್ತಿರಿ.? ಎಂದು ಕೇಳುತ್ತಿದ್ದರು. ಅವರಿಗೆ ಏನನ್ನೂ ಉತ್ತರಿಸದೇ ಮತ್ತೆ ಒಳ ನಡೆಯುತ್ತಿದ್ದೆ. ಪೂರ್ಣಚಂದ್ರ ತೇಜಸ್ವಿಯವರ ಹೆಸರಿನ ಪ್ರತಿಷ್ಠಾನ ಕೂಡ ನೋಡಲು ಅದ್ಬುತ ಕಟ್ಟಡ. ಅವರು ತಗೆದ ಛಾಯಾಚಿತ್ರಗಳನ್ನು ಅಲ್ಲಿ ಅಳವಡಿಸಿದ್ದರು. ಪ್ರತಿಯೊಂದು ಕೊಠಡಿಯೂ ಒಂದೊಂದು ವಿಶಿಷ್ಟತೆಯಿಂದ ನಿರ್ಮಾಣಗೊಂಡಿವೆ. ಎರಡು ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಲ್.ಶಂಕರ ಇಲ್ಲಿಗೆ ಬಂದರು ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು. ಉಲ್ಟಾ ಪಲ್ಟಾ ಚಲನಚಿತ್ರ ನಿರ್ದೇಶಕ ಎಸ್.ಎನ್.ಶಂಕರ ಹೀಗೆ ಅಪರೂಪದ ಅತಿಥಿಗಳ ಆಗಮನ. ಚಹಾ ವಿರಾಮದ ಸಮಯ ಅವರೊಂದಿಗೆ ನಮ್ಮ ಪೋಟೋ ಹೀಗೆ ಎರಡು ದಿನಗಳ ಕಮ್ಮಟ ಸಾಗಿತು.
ಇನ್ನು ಕಮ್ಮಟದಲ್ಲಿ ಇದ್ದವರಲ್ಲಿ ನನ್ನ ಕೊಠಡಿಯಲ್ಲಿ ಇದ್ದವರ ಕಿರು ಪರಿಚಯವನ್ನು ಇಲ್ಲಿ ಹೇಳಿ ಬಿಡುವೆ. ನಮ್ಮ ಪಕ್ಕದ ವಿಜಯಪುರ ಜಿಲ್ಲೆಯಿಂದ ಬಂದಿದ್ದ ಪಂಡಿತ ಅವುಜಿ ಶಿಕ್ಷಕರು. ಇವರು ಶಿಕ್ಷಕರ ವೃತ್ತಿಯ ಜೊತೆಗೆ ನಾಟಕಗಳನ್ನು ಬರೆದಿರುವರು ಮಕ್ಕಳ ಸಾಹಿತಿಯಾಗಿ ಕೂಡ ಮಕ್ಕಳ ಕೃತಿಗಳನ್ನು ರಚಿಸುವ ಜೊತೆಗೆ ತಾವೇ ಸ್ವತಃ ಬರೆದ ನಾಟಕಗಳನ್ನು ಮಕ್ಕಳಿಂದ ರಂಗಪ್ರಯೋಗಕ್ಕೆ ಒಳಪಡಿಸುವವರು. ಮತ್ತೊಬ್ಬರು ಹರಿಪ್ರಸಾದ್ ಅಂತಾ ಇವರು ಕೃಷಿಕರು. ಇವರ ಕೃಷಿ ಚಟುವಟಿಕೆಗಳ ಜೊತೆಗೆ ಮಳೆ ನೀರು ಕೊಯ್ಲಿನಲ್ಲಿ ಸಾಧಕರು. ಇವರ ಕುರಿತು ಪ್ರಜಾವಾಣಿಯಲ್ಲಿ ಒಂದು ಉತ್ತಮ ಬರಹ ಕೂಡ ಬಂದಿತ್ತು.
ಮತ್ತೋರ್ವರು ಗುಂಡುರಾವ್ ದೇಸಾಯಿ ಅಂತಾ ಹಾಸ್ಯ ಬರಹಗಾರರು. ಜೊತೆಗೆ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವವರು. ಸ್ನೇಹಿತ ರವಿಶಂಕರ ನನಗೆ ಮೊದಲೇ ಪರಿಚಿತರು. ಅವರು ಬೆಂಗಳೂರಿನ ಯಲಹಂಕ ಹತ್ತಿರದ ಕ್ರಿಸ್ತ ಜಯಂತಿ ಕಾಲೇಜು ಸ್ವಾಯುತ್ತ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕ ರವಿಶಂಕರ್ ಎ.ಕೆ.ಇವರು ಸಾಹಿತ್ಯದ ವಿವಿಧ ಸಂಘಟನೆಗಳ ಮೂಲಕ ಸಾಹಿತ್ಯದ ಚಟುವಟಿಕೆಗಳನ್ನು ಸಂಘಟಿಸುವ ಜೊತೆಗೆ ಬರವಣಿಗೆಯಲ್ಲಿ ತೊಡಗಿದವರು. ಹೀಗೆ ನಮ್ಮ ಬಳಗ ರಾತ್ರಿ ರೂಮಿನಲ್ಲಿ ಹರಟುತ್ತ ನಮ್ಮ ನಮ್ಮ ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸುತ್ತ ನಿದ್ರೆಗೆ ಜಾರುತ್ತಿದ್ದೆವು. ಇದು ಎಂದಿಗೂ ಮಾಸದ ಅನುಭವ.
ಈ ಜೀವನದಲ್ಲಿ ಕಷ್ಟ ಸುಖ ನೋವುನಲಿವುಗಳ ಮಧ್ಯೆ ಸದಾ ನಮ್ಮ ಏಳಿಗೆಯನ್ನು ಬಯಸುವುದು ಈ ಸ್ನೇಹ ಅಂತಹ ಸ್ನೇಹಿತರು ನಾವಾದೆವು. ಸದ್ಯದ ಸಮಯದಲ್ಲಿ ನಾವೆಲ್ಲ ದೂರವಿರಬಹುದು. ಆದರೆ ಅದು ಮನಸ್ಸಿನಿಂದಲ್ಲ. ನಿತ್ಯ ಜೀವನದಡಿ ಬದುಕಿನ ಬಂಡಿ ಸಾಗುತ್ತಿದೆ. ಆದರೆ ನನ್ನ ಈ ಬರಹದ ಸಂದರ್ಭದಲ್ಲಿ ನೆನಪಿನಂಗಳದಿಂದ ಸವಿನೆನಪುಗಳನ್ನು ಬರವಣಿಗೆಯತ್ತ ರೂಢಿಸುವಾಗ ನಮ್ಮ ಒಡನಾಟದ ಕ್ಷಣಗಳು ಅಕ್ಷರರೂಪಕ್ಕಿಳಿಯುತ್ತಿರುವಾಗ ಕೊಟ್ಟಿಗೆಹಾರದ ಕ್ಷಣಗಳಲ್ಲಿ ನನ್ನ ಎಲ್ಲ ಮಿತ್ರರೂ ಕಣ್ಮುಂದೆ ಬಂದಿರುವರು.
ಇನ್ನು ನಾವು ಮೂವರು ಸ್ನೇಹಿತರು ಅಂದರೆ ಪಂಡಿತ ಆವುಜಿ ಮತ್ತು ಗುಂಡೂರಾವ್ ದೇಸಾಯಿ ಮೊದಲೇ ಅಟೋದವನಿಗೆ ಹೇಳಿದಂತೆ ಪಯಣದ ಹಾದಿಯನ್ನು ಹಿಡಿದ ಅನುಭವವನ್ನು ಇಲ್ಲಿ ದಾಖಲಿಸತೊಡಗುವೆ. ಮೊದಲೇ ನಾವು ಎಲ್ಲೆಲ್ಲಿ ಹೋಗುವುದು ಎಂಬುದನ್ನು ನಿಶ್ಚಯಿಸಿಯಾಗಿತ್ತು ಹಾಗೆಯೇ ಪ್ರಯಾಣ ಬೇಗನೇ ಸಾಗಿತು.
ನಾವು ಹೊರಟಿದ್ದು ಮೂಡಿಗೆರೆಯಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮನೆ “ನಿರುತ್ತರ”. ಹೆಸರಿಗೆ ತಕ್ಕಂತೆ ಈಗ ನಮಗೆ ತೇಜಸ್ವಿಯಿಲ್ಲದ ನಿರುತ್ತರದಲ್ಲಿ ಅವರ ಪತ್ನಿ ರಾಜೇಶ್ವರಿಯವರು ಅಲ್ಲಿ ಹೋಗಿ ಅವರೊಂದಿಗೆ ಮಾತನಾಡುವುದು. ಆಗ ಅವರು ನಮಗೆ ಪೂರ್ಣಚಂದ್ರ ತೇಜಸ್ವಿಯವರ ನೆನಪನ್ನು ಹೊತ್ತು ತಂದರು. ಪೂರ್ಣನಿಲ್ಲದ ಅವರ ಮನೆಯ ಸುತ್ತಲೆಲ್ಲ ಓಡಾಡಿದೆವು. ಆ ಕೆರೆ, ಕೆರೆಯಲ್ಲಿ ಓಡಾಡುವ ಹಂಸಗಳು.ಅವರ ಕತೆಗಳಲ್ಲಿ ಅನಾವರಣಗೊಂಡ ಕಾಡು, ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿ, ಓಡಾಡುತ್ತಿದ್ದ ಸ್ಕೂಟರ್, ತೇಜಸ್ವಿ ಬದುಕಿದ್ದ ಸಂದರ್ಭ ಒಂದು ಸಲ ಅವರನ್ನು ಭೇಟಿ ಮಾಡಿದ್ದೆ.ಮಾತನಾಡಿದ್ದೆ. ಅವರ ನಿಷ್ಠುರ ಮಾತು ಗಟ್ಟಿತನ ಸದಾ ಈ ಹಸುರಿನಲ್ಲಿ ಜೀವನ ಕಳೆದ ಅವರ ಕರ್ವಾಲೋ ಕಾದಂಬರಿ, ಜುಗಾರಿಕ್ರಾಸ್ ಎಲ್ಲವೂ ನೆನಪಾಗಿದ್ದು. ರಾಜೇಶ್ವರಿ ಕೂಡ ಅವರ ನೆನಪನ್ನು ಮರುಕಳಿಸಿದರು. ಇನ್ನು ಒಂದು ಸಂಗತಿಯನ್ನು ನಾನು ಅವರ ‘ನನ್ನ ತೇಜಸ್ವಿ’ ಕೃತಿಯಲ್ಲಿನ ಘಟನೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ತೇಜಸ್ವಿಯವರು ಸದಾ ತಮ್ಮ ಸ್ಕೂಟರ್‌ನಲ್ಲಿ ಪಯಣಿಸುತ್ತಿದ್ದರು ಒಮ್ಮೆ ಇಬ್ಬರೂ ಸ್ಕೂಟರ್‌ನಲ್ಲಿ ಹೋಗುವಾಗ ದಾರಿಯಲ್ಲಿ ಯಾವುದೋ ಒಂದು ಹೂವಿನ ಗಿಡವನ್ನು ರಾಜೇಶ್ವರಿ ನೋಡುತ್ತಾರೆ. ತಕ್ಷಣ ತೇಜಸ್ವಿಯವರಿಗೆ ಸ್ಕೂಟರ್ ನಿಲ್ಲಿಸಲು ಹೇಳುತ್ತಾರೆ.
ಹೂವಿನ ಗಿಡವನ್ನು ಎಂದಿನ ತಮ್ಮ ಕುತೂಹಲದ ಕಣ್ಣಲ್ಲಿ ನೋಡಿ ಸೀದಾ ವಾಪಸು ಸ್ಕೂಟರ್ ಹತ್ತಲೆಂದು ಬರುತ್ತಾರೆ ಅಲ್ಲಿ ತೇಜಸ್ವಿ ಇರಲಿಲ್ಲ. ಅಂದರೆ ಇವರು ಸ್ಕೂಟರ್‌ನಲ್ಲಿ ಕುಳಿತು ಹೂ ನೋಡುತ್ತಿರಬಹುದು ಎಂಬ ಕಲ್ಪನೆಯಲ್ಲಿ ತೇಜಸ್ವಿ ಸ್ವಲ್ಪ ಹೊತ್ತು ಮಾತ್ರ ನಿಲ್ಲಿಸಿ ಹೊರಟಿದ್ದರು. ಆದರೆ ಇವರು ಸ್ಕೂಟರ್‌ನಿಂದ ಇಳಿದು ಬಂದಿದ್ದರು. ಮುಂದೆ ಹೋಗಿದ್ದ ತೇಜಸ್ವಿಯವರಿಗೆ ಇದು ಗಮನಕ್ಕೆ ಬಂದಿತ್ತು. ತಕ್ಷಣ ಮರಳಿ ಅದೇ ಸ್ಥಳಕ್ಕೆ ಬಂದು ರಾಜೇಶ್ವರಿಯವರನ್ನು ಕರೆದುಕೊಂಡು ಹೋಗಿದ್ದರು. ಅಂದರೆ ಅವರ ಲೇಖಕನ ಯೋಚನಾ ಲಹರಿ ಕೆಲವೊಂದು ಸಲ ಹೀಗಿರುತ್ತಿತ್ತು ಎಂದು ನಗುತ್ತ ರಾಜೇಶ್ವರಿ ಹೇಳುವುದನ್ನು ಅವರ ಪುಸ್ತಕದಲ್ಲಿ ಓದಿದ ನೆನಪು. ಇನ್ನು ನಿರುತ್ತರದಲ್ಲಿ ಇವರಿಬ್ಬರೂ ಮಳೆಗಾಲದಲ್ಲಿ ಸುರಿಯುತ್ತಿದ್ದ ಮಳೆಯನ್ನು ನೋಡುತ್ತ ಗಂಟೆಗಳ ಕಾಲ ಮಾತಿಲ್ಲದೆ ಕುಳಿತಿರುವುದನ್ನು ನೆನಪಿಸಿದರು. ಅವರಿಬ್ಬರಿಗೂ ಆ ಮಳೆ ಒಂದು ಗಾಢ ಮೌನಕ್ಕೆ ಸಾಕ್ಷಿಯಾಗುತ್ತಿತ್ತು.
ತೇಜಸ್ವಿಯವರು ಪ್ರೀತಿಸಿದ ಗೆಳೆತಿ ರಾಜೇಶ್ವರಿ. ಅವರ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ್ದ ನೆನಪುಗಳ ಕುರಿತು ರಾಜೇಶ್ವರಿಯವರ ಒಡನಾಟದ ಸಂಗತಿಗಳು ಇಲ್ಲಿ ನೆನಪಾದವು. ಒಂದು ಸಲ ಪತ್ನಿ ರಾಜೇಶ್ವರಿಯವರ ತವರು ಮನೆ ಬೂತನಕಾಡಿಗೆ ತೇಜಸ್ವಿ ಬಂದಿದ್ದರಂತೆ, ಅಲ್ಲಿನ ಸೌಂದರ್ಯ ಸೊಬಗು ಕಂಡು ಇನ್ಮುಂದೆ ನಾನು ಕಾಡಿನಲ್ಲೇ ಬದುಕುತ್ತೇನೆ ಎಂದು ನಿರ್ಧರಿಸಿದರಂತೆ, ಅವರ ತಂದೆಯ (ಕುವೆಂಪು) ಕುಪ್ಪಳ್ಳಿ ಕೂಡ ಮಲೆನಾಡಿನಲ್ಲಿ ಇರುವ ಕಾರಣ ಆ ಪರಿಸರ ಅವರಲ್ಲಿ ಗಾಢವಾಗಿ ಪ್ರಭಾವ ಬೀರಿತ್ತು. ಹೀಗಾಗಿ ಅವರು ನಿರುತ್ತರಕ್ಕೆ ಬರುವಂತಾಯಿತು. ಅಲ್ಲಿ ತಮಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿಕೊಂಡರು. ಸ್ವತಃ ಕೃಷಿಕರಾಗಿ ಕಾಲಕಳೆಯುತ್ತ, ಬರವಣಿಗೆಯಲ್ಲಿ ತೊಡಗಿದರು ತೇಜಸ್ವಿ. ಕಂಪ್ಯೂಟರ್ ತಂತ್ರಾಂಶದಲ್ಲಿ ಅವರ ಪ್ರಯೋಗಶೀಲತೆ ನನ್ನನ್ನು ಕಾಡಿತು.ಅದರಲ್ಲೂ ಅವರ ಪೋಟೋಗ್ರಫಿ ಅವರ ಪೋಟೋಗಳನ್ನು ನೋಡಿದಾಗಲಂತೂ ಅಚ್ಚರಿಯಾಗದಿರದು. ಇವುಗಳನ್ನೆಲ್ಲ ಹೊತ್ತು ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡಿದ ಅಲ್ಲಿನ ಹಣ್ಣಿನ ವಿಶಿಷ್ಟ ಜ್ಯೂಸ್ ಮತ್ತು ಹಣ್ಣುಗಳನ್ನು ಸೇವಿಸಿ ಹೊರಬರುವಾಗ “ನಿರುತ್ತರ” ಕಣ್ಮುಂದೆ ಕಟ್ಟಿತು. ಕಾಡುಗಳು ತೆರೆದಿಟ್ಟ ಟ್ರೆಜರಿ, ಪ್ರಕೃತಿಯನ್ನು ಉಳಿಸಿ ಎನ್ನುವ ಅವರ ಕಾಳಜಿ ನೋಡಿದೆವು. ಆ ಎಲ್ಲ ನೆನಪುಗಳು ಈಗ ಮರುಕಳಿಸುತ್ತಿವೆ.
ಇನ್ನು ರಾಜೇಶ್ವರಿ ತೇಜಸ್ವಿಯವರ ಬಗ್ಗೆ ನಾಲ್ಕು ಮಾತು ಹೇಳಬೇಕು. ರಾಜೇಶ್ವರಿ ತೇಜಸ್ವಿ ೧೯೩೭ ರಲ್ಲಿ ಬೆಂಗಳೂರಿ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣು ಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದೊಂದಿಗೆ ತತ್ವಶಾಸ್ತ್ರದಲ್ಲಿ ಆನರ್ಸ ಮತ್ತು ಎಂ.ಎ.ಮಾಡಲು ಮಾನಸಗಂಗೋತ್ರಿ ಮೈಸೂರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿದರು. ಅನಂತರ ಅವರ ಬದುಕಿನ ದಿಕ್ಕೇ ಬದಲಾಯಿಸಿತು. ೧೯೬೬ ರಲ್ಲಿ ವಿವಾಹವಾದರು. ಅವರು ಬರೆದ ಮೊಟ್ಟ ಮೊದಲ ಪುಸ್ತಕ “ನನ್ನ ತೇಜಸ್ವಿ” ಇದು ಐದು ಮುದ್ರಣಗಳನ್ನು ಕಂಡಿದೆ. ನಮ್ಮ ಮನೆಗೂ ಬಂದರು ಗಾಂಧೀಜಿ ಅವರ ಇನ್ನೊಂದು ಪುಸ್ತಕ. ಅವರ ಇಬ್ಬರು ಹೆಣ್ಣು ಮಕ್ಕಳೂ ಸಾಫ್ಟವೇರ್ ಇಂಜನೀಯರ್. ಪುಸ್ತಕ ಬರೆಯುವ ಹವ್ಯಾಸದ ಜೊತೆಗೆ ವಿಭಿನ್ನ ಹವ್ಯಾಸಗಳನ್ನು ಹೊಂದಿದ್ದ ರಾಜೇಶ್ವರಿ ಅವರನ್ನು ಕಳೆದುಕೊಂಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ.
ಮೂರು ವರ್ಷಗಳ ಹಿಂದೆ ನಿರುತ್ತರಕ್ಕೆ ನನ್ನ ಸ್ನೇಹಿತರೊಂದಿಗೆ ಭೇಟಿ ನೀಡಿದ್ದ ನನಗೆ ತೇಜಸ್ವಿಯವರಿಲ್ಲದ ನಿರುತ್ತರದಲ್ಲಿ ಈಗ ರಾಜೇಶ್ವರಿಯವರೂ ಇಲ್ಲದಿರುವುದು ತುಂಬ ದುಃಖವನ್ನುಂಟು ಮಾಡಿದೆ. ಆ ತೋಟ ಆ ಬಂಗ್ಲೆ. ತೇಜಸ್ವಿ ನೆನಪನ್ನು ಹೊತ್ತ ಕಾಡು.ಸರೋವರ. ಅಲ್ಲಿನ ಹಂಸಗಳು. ತೇಜಸ್ವಿಯವರ ಸ್ಕೂಟರ್.ಅವರು ಕುಳಿತುಕೊಳ್ಳುತ್ತಿದ್ದ ಕೊಠಡಿ. ಅಲ್ಲಿ ಪಕ್ಷಿಗಳ ಗೂಡುಗಳು. ಅವುಗಳನ್ನು ಇಂದಿಗೂ ಹಾಗೇ ಉಳಿಸಿಕೊಂಡು ತೇಜಸ್ವಿಯವರ ನೆನಪನ್ನು ಹೊತ್ತು ನಮ್ಮೊಂದಿಗೆ ಮಾತಿಗಿಳಿದಿದ್ದ ರಾಜೇಶ್ವರಿ ಇನ್ನು ಬರೀ ನೆನಪು ಮಾತ್ರ. ಸತ್ತಾಗಲೂ ಕೂಡ ದೇಹದಾನ ಮಾಡಿದ ಅವರ ಬದುಕು ನಮಗೆ ಆದರ್ಶ.
ವೈ.ಬಿ.ಕಡಕೋಳ