ಬೀದರ : ಗಡಿ ಜಿಲ್ಲೆ ಬೀದರ್ ನಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ತಡೆಯಲು ಹಳ್ಳಿಯ ಹೆಣ್ಣು ಮಕ್ಕಳಿಂದ ತಹಸೀಲ್ದಾರ್ ರವೀಂದ್ರ ದಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಳಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೆಳಕೇರಾ, ಮಾಡಗುಳ, ಬನ್ನಳ್ಳಿ ಮತ್ತು ಶಾಮತಾಬಾದ ಗ್ರಾಮಗಳಲ್ಲಿ ಅಕ್ರಮವಾಗಿ ದಿನದ 24 ಗಂಟೆಗಳ ಕಾಲವೂ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಹೆಣ್ಣು ಮಕ್ಕಳು ಆರೋಪ ಮಾಡಿದರು. ಇದರಿಂದ ಅನೇಕ ಯುವಕರು ನಶೆಯಲ್ಲಿ ಅಸಭ್ಯವಾಗಿ ವರ್ತನೆ ಮಾಡುತ್ತಾ ತಂದೆ ತಾಯಿಗೆ ವಿರುದ್ಧ ಮಾತನಾಡುವುದು, ಮನೆಯಲ್ಲಿ ಜಗಳ ಮಾಡುವುದು ಮಾಡುತ್ತಿದ್ದಾರೆ ಆದ್ದರಿಂದ ಸಾರಾಯಿ ಮಾರಾಟವನ್ನು ಬಂದ್ ಮಾಡಲೇಬೇಕು ಎಂದು ಹೆಣ್ಣು ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.
ಇಂಥ ಘಟನೆಗಳನ್ನು ಕಣ್ಣಾರೆ ನೋಡಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಣಿಕರಾವ ಹೆಣ್ಣು ಮಕ್ಕಳೊಂದಿಗೆ ತಹಸೀಲ್ದಾರರಿಗೆ ಮತ್ತು ಚಿಟಗುಪ್ಪಾ ಪಟ್ಟಣದ ಪೊಲೀಸ್ ಠಾಣೆಗೆ ಅಕ್ರಮವಾಗಿ ಸಾರಾಯಿ ಮಾರಾಟ ತಡೆಯಲು ಮನವಿ ಸಲ್ಲಿಸಿದರು. ನಂತರ ಅಬಕಾರಿ ಜಿಲ್ಲಾ ಅಧಿಕಾರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ,ದೂರವಾಣಿಯಲ್ಲಿ ಮಾತಾಡಿದ ಅಧಿಕಾರಿಗಳು, ಕೂಡಲೇ ಜಿಲ್ಲಾ ಅಬಕಾರಿ ತಂಡ ರಚಿಸಿ 2 ದಿನಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.
ಇನ್ನು ಸಣ್ಣ ಸಣ್ಣ ಹಳ್ಳಿಗಳಿಗೆ ಚಿಟಗುಪ್ಪಾ ಪಟ್ಟಣದಿಂದಲೇ ಬಿಂದಾಸ್ ಸಾರಾಯಿ ಸಾಗಾಟ ಮಾಡುತ್ತಿದರು ಗಮನ ಹರಿಸದ ಅಧಿಕಾರಿಗಳು ಈಗಲಾದರೂ ಈ ಸ್ಥಿತಿ ಮೊಟಕುಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ