ಗಜಲ್ ಗಳು

Must Read

ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ……

ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ

ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ

ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸುತ ದಿನ ದೂಡುವದನು ನೋಡದಾಗಿದೆ

ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ
ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ

ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ
ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ.

ರೇಷ್ಮಾ ಕಂದಕೂರ
ಶಿಕ್ಷಕಿ ಸಿಂಧನೂರ


ಗಜಲ್

ಆ ಮಳೆಗೆ ಕನಸುಗಳು ಕುಡಿ ಒಡೆಯಬಹುದೆಂದು ಕಾಯುತಿರುವೆ
ಮೊಳಕೆ ಗಿಡವಾಗಿ ಹೂ-ಹಣ್ಣು ಬಿಡಬಹುದೆಂದು ಕಾಯುತಿರುವೆ

ನಿತ್ಯಬದುಕಿನ ಜಂಜಾಟಗಳಿಗೆ ತಂಪೆರೆವ ಸುಖದ ಕಾತರತೆ
ಕಷ್ಟಗಳ ಕೊಳೆ ಕೊಚ್ಚಿ ಹೋಗಬಹುದೆಂದು ಕಾಯುತಿರುವೆ

ದುಃಖ-ದುಮ್ಮಾನಗಳ ತೆಕ್ಕೆಗೆ ಹಾಕಿಕೊಂಡು ಸಾಗುವ ನಿರೀಕ್ಷೆ
ನದಿ-ಕಡಲು ಸೇರಿ ಸಮಾಧಾನ ತರಬಹುದೆಂದು ಕಾಯುತಿರುವೆ

ಸೋನೆಮಳೆಗೆ ಎದೆಯೊಳಗೆ ಹಕ್ಕಿಗಳು ಗೂಡುಕಟ್ಟುವ ತವಕ
ಹೃದಯ ಕೋಗಿಲೆ ಇಂಪಾಗಿ ಉಲಿಯಬಹುದೆಂದು ಕಾಯುತಿರುವೆ

ಮಧುಮಾಸದುತ್ಸಾಹ ಉಸಿರುಸಿರಲಿ ತುಂಬಿ ಉಲ್ಲಾಸಗೊಂಡತೆ `ಗಿರಿ’
ಬಂಜರೆದೆ ಹದಗೊಂಡು ನಾಳೆಗೆ ಅರಳಬಹುದೆಂದು ಕಾಯುತಿರುವೆ

ಮಂಡಲಗಿರಿ ಪ್ರಸನ್ನ ರಾಯಚೂರು

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group