ಸಿಂದಗಿ: ಸಾವಯವ ಕೃಷಿ ಮಾಡುವುದರಿಂದ ರೈತರು ಅಧಿಕ ಇಳುವರಿಯನ್ನು ಪಡೆಯಬಹುದು, ರಾಸಾಯನಿಕಗಳಿಂದ ಹೊಲ ಗದ್ದೆಗಳು ಹಾಳಾಗುತ್ತಿವೆ ರೈತರ ದಿನಾಚರಣೆ ಯಶಸ್ವಿಯಾಗಬೇಕೆಂದರೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಹಾಗೂ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಪಟ್ಟಣದ ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯಲ್ಲಿ ಹಮ್ಮಿಕೊಂಡ ರೈತರ ದಿನಾಚಾರಣೆಯಲ್ಲಿ ಮಾತನಾಡಿ, ರೈತ ಉತ್ಪಾದಕರ ಕಂಪನಿಗಳು ಪ್ರಧಾನಮಂತ್ರಿ ಮೋದೀಜಿಯವರ ಕೇಂದ್ರದ ಯೋಜನೆಯಾಗಿದೆ. ಕಂಪನಿಯ ಸದಸ್ಯರಾಗುವುದರಿಂದ ರೈತರಿಗೆ ಕಡಿಮೆ ದರದಲ್ಲಿ ವ್ಯವಸಾಯ ಪರಿಕರಗಳು ದೊರಕುತ್ತವೆ ಬೆಳೆಯಲ್ಲಿ ಅಧಿಕ ಲಾಭವನ್ನು ಗಳಿಸಬಹುದು ಹೀಗೆ ಅನೇಕ ಅನುಕೂಲಗಳಿವೆ. ಎಲ್ಲದಕ್ಕಿಂತ ಹೆಚ್ಚಾಗಿ ರೈತರಲ್ಲಿ ಒಗ್ಗೂಡುವಿಕೆ ಮನೋಭಾವ ಬೆಳೆಯುತ್ತದೆ. ಮುಂದಿನ ವರ್ಷ ಕೃಷಿಯಲ್ಲಿ ಹಾಗೂ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಮಾಡಿ ರೈತರ ದಿನಾಚರಣೆಯನ್ನು ವಿಜೃಂಭಣೆಯಿಂದ ಹಬ್ಬದ ಹಾಗೇ ಆಚರಿಸೋಣ ಎಂದರು.
ಕನ್ನೋಳ್ಳಿ ಪ್ರಗತಿ ಪರ ಸಾವಯವ ರೈತರು ದಶರಥಸಿಂಗ ರಜಪೂತ 22ವರ್ಷಗಳಿಂದ ಸಾವಯವ ಕೃಷಿಯನ್ನೇ ಅಳವಡಿಸಿಕೊಂಡು ಬಂದಿದ್ದಾರೆ ನಾನು ರೈತ ಉತ್ಪಾದಕ ಪಂಪನಿಯ ತಾವೆಲ್ಲರೂ ಸದಸ್ಯರಾಗುವದರಿಂದ ಅನೇಕ ಸೌಲಭ್ಯಗಳಿವೆ ಅದರ ಸದುಪಯೋಗ ಪಡೆಯಬೇಕು ಹಾಗೂ ಸಾವಯವ ಕೃಷಿ ಮಾಡಬೇಕು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡಬಹುದು ಎಂದು ಸಾವಯವ ಕೃಷಿಯ ಬಗ್ಗೆ ಸಲಹೆ ನೀಡಿದರು.
ಚಾಂದಕವಟೆ ಗ್ರಾಮದ ಚಿದಾನಂದ ಹಿರೇಮಠ ಮಾತನಾಡಿ, ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ವಲ್ಪ ಗದ್ದೆಯಲ್ಲೂ ಮನೆಗೊಂದು ಹಸು-ದನಗಳನ್ನು ಸಾಕಿ ಸಾವಯವ ಕೃಷಿ ಮಾಡುತ್ತಾರೆ ನಮ್ಮ ಕಡೆ ಸಾಕಷ್ಟು ಎಕರೆ ಜಮೀನುಗಳು ಇದ್ದರು ಕೂಡಾ ಕೃಷಿ ಮಾಡಲು ಆಗುತ್ತಿಲ್ಲ ರಾಸಾಯನಿಕಗಳನ್ನು ಹಾಕಿ ಗದ್ದೆಗಳನ್ನು ಹಾಳು ಮಾಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ರೈತರಾದ ಶಿವಶಂಕರ ಅಂಬಲಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಶಾಂತಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಭೀಮಾಜಿ ಕುಲಕರ್ಣಿ, ಸಿ.ಇ.ಒ ನಿವೇದಿತಾ ಹಿರೇಮಠ, ಪ್ರಶಾಂತ ಮಣೂರ, ಮಲ್ಲೇಶಪ್ಪ ರಾಣೆ ಸೇರಿದಂತೆ ಇತರರು ಉಪಸ್ಥಿತರಿದ್ದರು.