ಅರಭಾವಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ “ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ”

Must Read

ಮೂಡಲಗಿ: ಟೊಮ್ಯಾಟೊ ಬೆಳೆಯಲು ರೈತರು ವಿಜ್ಞಾನಿಗಳ ಸಲಹೆ ಮತ್ತು ನೂತನ ತಂತ್ರಜ್ಞಾನಗಳಿಂದ ಹೆಚ್ಚಿನ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಿಕೊಂಡು, ಪ್ಲಾಸ್ಟಿಕ್ ಹೊದಿಕೆ, ಹನಿ ನೀರಾವರಿ, ರಸಾವರಿ, ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಪೀಡೆ ಮತ್ತು ರೋಗ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಮ್.ಇಂದಿರೇಶ್ ಹೇಳಿದರು.

ಅವರು ಗುರುವಾರದಂದು ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ಜರುಗಿದ “ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಾವಯವ, ನೈಸರ್ಗಿಕ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ ಅವರು ಟೊಮ್ಯಾಟೊ ಬೆಳೆಗಳಿಗೆ ಇರುವ ಮೌಲ್ಯವರ್ಧನೆ ಅವಕಾಶಗಳನ್ನು ವಿವರಿಸುತ್ತಾ ರೈತ ಉತ್ಪಾದಕ ಕಂಪನಿಗಳ ಮೂಲಕ ರೈತರು ಸಂಘಟಿತರಾಗಬೇಕೆಂದು ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎಸ್. ಐ. ಅಥಣಿರವರು ಕ್ಷೇತ್ರೋತ್ಸವಗಳ ಮೂಲಕ ಒಂದೇ ಸಮಯದಲ್ಲಿ ನೂರಾರು ರೈತರಿಗೆ ವಿವಿಧ ತಾಂತ್ರಿಕತೆಗಳನ್ನು ವರ್ಗಾಯಿಸ ಬಹುದೆಂದು ಹೇಳಿದರು.

ಗೋಕಾಕ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜಾನಮಟ್ಟಿ ಅವರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಡೀನ್ ಡಾ. ಎಮ್.ಜಿ. ಕೆರುಟಗಿ ಮಾತನಾಡಿ, ಬೆಳಗಾವಿ ಜಿಲ್ಲೆಯು ಟೊಮ್ಯಾಟೊ ಬೆಳೆಯಲು ಸೂಕ್ತವಾದ ಮಣ್ಣು, ನೀರು ಮತ್ತು ವಾತಾವರಣವನ್ನು ಹೊಂದಿದ್ದು ರೈತರು ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿಗಳನ್ನು ಸಂಪರ್ಕಿಸಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಹೆಚ್ಚು ಇಳುವರಿ ಪಡೆದು ಎಕರೆಗೆ ಸರಾಸರಿ ೧ ರಿಂದ ೧.೫ ಲಕ್ಷ ನಿವ್ವಳ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಬೆಳಗಾವಿಯ ರಾಮಕೃಷ್ಣ ಮಿಷನ ಆಶ್ರಮದ ಶ್ರೀ ಸ್ವಾಮಿ ಮೋಕ್ಷಾತ್ಮನಂದಾಜೀ ಮಹಾರಾಜರವರು ರೈತರಿಗೆ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ವಿಜಯಕುಮಾರ ರಾಠೋಡ, ಟೊಮ್ಯಾಟೊ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು ವಿಷಯದ ಬಗ್ಗೆ, ಶ್ರೀಮತಿ ರೇಣುಕಾ ಹಿರೇಕುರಬರ ಅವರು ಟೊಮ್ಯಾಟೊ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ, ಡಾ. ಸುಮಂಗಲಾ ಕೌಲಗಿ ಅವರು ಸಸ್ಯರೋಗ ಶಾಸ್ತ್ರ ಇವರು ಟೊಮ್ಯಾಟೊ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ ಬಗ್ಗೆ, ಡಾ. ಕಿರಣಕುಮಾರ ಗೋರಬಾಳ ಅವರು ಟೊಮ್ಯಾಟೊ ಬೆಳೆಯಲ್ಲಿ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಬಗ್ಗೆ, ಡಾ. ಸಚಿನಕುಮಾರ ನಂದಿಮಠ ಅವರು ಟೊಮ್ಯಾಟೊ ಬೆಳೆಯ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರೊತ್ಸವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಗೋಕಾಕ, ಮೂಡಲಗಿ ಮತ್ತು ರಾಯಬಾಗ ತಾಲೂಕಿನ ಪ್ರಗತಿಪರ ರೈತರಾದ ಮಹಾದೇವ ಜೊಡಟ್ಟಿ, ರಾಮಪ್ಪಾ ಉಪ್ಪಾರ, ಸಿದ್ದಪ್ಪ ಹೊಳಿಯಾಚಿ, ಲಕ್ಷ್ಮಿಕಾಂತ ಸೊಲ್ಲಾಪೂರ, ಗುಂಡಪ್ಪಗೋಳ, ಗುರುಸಿದ್ದಪ್ಪ ಜಾಗನೂರ, ಮಲ್ಲಪ್ಪ ಇಂಗಳಿ, ಭೀಮಪ್ಪ ಹಳ್ಳೂರ, ಗಣಾಚಾರಿ ಮತ್ತು ವಿಧದ ಗ್ರಾಮಗಳಿಂದ ಅನೇಕ ರೈತರು ಭಾಗವಹಿಸಿದ್ದರು.

ಡಾ. ಪ್ರಶಾಂತ. ಎ., ಮತ್ತು ಡಾ. ಕಾಂತರಾಜು ವಿ ನಿರೂಪಿಸಿದರು, ಸಚಿನಕುಮಾರ ನಂದಿಮಠ ವಂದಿಸಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group