ಯುಗಾದಿಗೆ ಅಭ್ಯಂಜನ ಸ್ನಾನ

0
775

ಮಾವು ಬೇವಿನ ಚಿಗುರೊಡನೆ ಸಂಭ್ರಮದ ಈ ದಿನ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಕಾರಣಗಳೆರಡರ ನಡುವೆ ಮನೆಮಂದಿಯೆಲ್ಲಾ ಆಹ್ಲಾದಕರ ಅಭ್ಯಂಜನ ಸ್ನಾನವನ್ನು ಮಾಡುವುದು ಈ ಹಬ್ಬದ ವಿಶೇಷ’ ಎನ್ನುತ್ತಾರೆ ತಜ್ಞರು.

ಸಂಪ್ರದಾಯ ಹಾಗೂ ಆರೋಗ್ಯದ ಹೆಸರಲ್ಲಿ ಯುಗಾದಿಗೆ ಅಭ್ಯಂಜನ ಸ್ನಾನ ಮಾಡುವ ರಿವಾಜು ಇದೀಗ ಮರುಕಳಿಸಿದೆ. ‘ಯುಗಾದಿ ಎಲ್ಲೆಡೆ ನವ ಚೈತನ್ಯ ತುಂಬುವ ಹಬ್ಬ. ಹೊಸವರ್ಷದ ಆರಂಭವನ್ನು ಪ್ರತಿಬಿಂಬಿಸುವ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ನಮ್ಮಲ್ಲಿರುವ ತಮೋ ಗುಣಗಳನ್ನು ಕಡಿಮೆ ಮಾಡಿ ಸತ್ವವನ್ನು ಹೆಚ್ಚಿಸುವ ಸಲುವಾಗಿ ಅಭ್ಯಂಜನ ಸ್ನಾನವನ್ನು ಸಂಪ್ರದಾಯದ ಹೆಸರಲ್ಲಿ ಮಾಡಲಾಗುತ್ತದೆ. ವೈಜ್ಞಾನಿಕವಾದ ಈ ಸ್ನಾನ ದೇಹದ ನಾನಾ ಭಾಗಗಳಿಗೆ ಚೈತನ್ಯ ತುಂಬುತ್ತದೆ. ತಲೆಯಿಂದ ಪಾದದವರೆಗೆ ಹಚ್ಚುವ ವಿವಿಧ ಬಗೆಯ ಎಣ್ಣೆ ಹಾಗೂ ಅವುಗಳ ಸುಗಂಧ ಮಾಂಸಖಂಡಗಳ, ಕೂದಲಿನ ಹಾಗೂ ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

ಅಭ್ಯಂಜನ ಸ್ನಾನದ ಮಹತ್ವ:

ದೇಹದ ಎಲ್ಲಾ ಭಾಗಗಳಿಗೂ ಮನೆಯಲ್ಲೇ ತಯಾರಿಸಿದ ಉತ್ತಮ ಸುವಾಸಿತ ಹರ್ಬಲ್‌ ಎಣ್ಣೆಯನ್ನು ಹಚ್ಚಿ. ಬೆರಳುಗಳಿಂದ ಮೃದುವಾಗಿ ಮಸಾಜ್‌ ಮಾಡಿ 30 ರಿಂದ 35 ನಿಮಿಷ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು ಮನಸ್ಸಿಗೆ ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

ನೀರಿನ ಸಿದ್ಧತೆ:

ಎಣ್ಣೆ ಮಸಾಜ್‌ ಮಾಡಿದ ದೇಹದ ಭಾಗಗಳಿಗೆ ಬಿಸಿ ನೀರನ್ನು ಬಳಸಿ ಸ್ನಾನ ಮಾಡುವುದು ಅಭ್ಯಾಸ. ಆದರೆ ಹೆಚ್ಚು ಬಿಸಿಯಾದ ನೀರಿನ ಬಳಕೆ ತ್ವಚೆಗೆ ಒಳ್ಳೆಯದಲ್ಲ. ತ್ವಚೆ ಒರಟಾಗುತ್ತದೆ. ತಲೆ ಕೂದಲು ಉದುರುತ್ತದೆ. ಸ್ನಾನಕ್ಕೆ ಮೊದಲು ಔಷಧಿಯುಕ್ತ ಅರಿಶಿಣ, ಮಾವಿನ ಎಲೆ, ಬೇವಿನ ಎಲೆ, ಶ್ರೀಗಂಧದೆಣ್ಣೆಯನ್ನು ಬಿಸಿ ನೀರಿಗೆ ಸೇರಿಸುವುದರಿಂದ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ.

ಎಚ್ಚರಿಕೆ ವಹಿಸಿ:

ಅಭ್ಯಂಜನ ಸ್ನಾನ ಮಾಡುವ ಮೊದಲು ದೇಹಕ್ಕೆ ಸರಿಹೊಂದುವ ಎಣ್ಣೆಯನ್ನು ಆಯ್ಕೆ ಮಾಡುವುದು ಉತ್ತಮ. ನಾನಾ ಬಗೆಯ ಸುಗಂಧಿತ ಎಣ್ಣೆಗಳನ್ನು ಬಳಸುವಾಗ ಹೆಚ್ಚು
ಸ್ಟ್ರಾಂಗ್‌ ಇರುವುದನ್ನು ಗಮನಿಸಿ ಕಡಿಮೆ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು. ಚಿಕ್ಕದಾದ ಸ್ನಾನದ ಕೊಠಡಿಗಳಲ್ಲಿ ಎಣ್ಣೆ ಮಸಾಜ್‌ ಉತ್ತಮವಲ್ಲ. ಹೆಚ್ಚು ಮಂದವಾದ
ಎಣ್ಣೆಯನ್ನು ಕಾಯಿಸಿ ಬಳಸಿ. ಅಭ್ಯಂಜನ ಸ್ನಾನದಲ್ಲಿ ಎಣ್ಣೆ ಜಿಡ್ಡನ್ನು ಸುಲಭವಾಗಿ ತೆಗೆಯಲು ಸೀಗೆಕಾಯಿ ಪುಡಿ ಬಳಸುವುದು ಬಹು ಹಿಂದಿನಿಂದ ಬಂದ ಪದ್ಧತಿ. ಇದು ಜಿಡ್ಡನ್ನು ತೆಗೆಯುವುದರ ಜೊತೆಗೆ ತ್ವಚೆಯಲ್ಲಿನ ಬೇಡದ ಡೆಡ್‌ ಸ್ಕಿನ್‌ ತೆಗೆಯುವಲ್ಲೂ ಸಹಕಾರಿ.

ಹಬ್ಬದ ಎಣ್ಣೆ ಸ್ನಾನಕ್ಕೆ ನಾನಾ ತೈಲ:

  1. ಸಾಮಾನ್ಯವಾಗಿ ಬಹು ಹಿಂದಿನಿಂದಲೂ ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಹಾಗೂ ಕೂದಲ ಆರೈಕೆಗೆ ಬಳಸಲಾಗುತ್ತದೆ. ಇದನ್ನು ಬೇಸಿಕ್‌ ತೈಲ ಇಲ್ಲವೇ ಮೂಲ ಎಣ್ಣೆ ಎಂದು ಕರೆಯಲಾಗುತ್ತದೆ. ಇದರ ಜತೆಗೆ ಇತರೇ ತೈಲಗಳನ್ನು ಮಿಕ್ಸ್‌ ಮಾಡಿ ಬಳಸಲಾಗುತ್ತದೆ.
  2. ಆಹ್ಲಾದಕ್ಕಾಗಿ ಎಳ್ಳೆಣ್ಣೆಯ ಜೊತೆ 10 ಹನಿ ಶ್ರೀಗಂಧದ ಎಣ್ಣೆ , 5 ಹನಿ ರೋಸ್‌ ವಾಟರ್‌ ಮಿಶ್ರ ಮಾಡಿ ಬಳಸುವುದು ಮನಸ್ಸಿಗೆ ಹಾಗೂ ದೇಹಕ್ಕೆ ಆಹ್ಲಾದ ನೀಡುತ್ತದೆ.
  3. ಎಳ್ಳೆಣ್ಣೆಯ ಜೊತೆ 20 ಹನಿ ಸುವಾಸಿತ ಮಲ್ಲಿಗೆ, 8 ಹನಿ ಆರೆಂಜ್‌ ಮಿಶ್ರಮಾಡಿ ಹಚ್ಚುವುದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ.
  4. ಮಾನಸಿಕ ಒತ್ತಡ ಕಡಿಮೆಯಾಗಲು ಹೀಗೆ ಮಾಡಬಹುದು. ಮೂಲ ಎಣ್ಣೆಯ ಜೊತೆ 1 ಹನಿ ಶ್ರೀಗಂಧ, 6 ಹನಿ ನಿಂಬೆ ಸೇರಿಸಿ ಬಳಸುವುದು ಮಾನಸಿಕ ಒತ್ತಡ ಕಡಿಮೆ ಮಾಡಿ ಪ್ರಶಾಂತಗೊಳಿಸುತ್ತದೆ.
  5. ಹರಳೆಣ್ಣೆಯ ಜೊತೆ ಎಳ್ಳೆಣ್ಣೆ, ಶ್ರೀಗಂಧದೆಣ್ಣೆ ಮಿಶ್ರ ಮಾಡಿ ಕಾಲು ಕೈಗಳ ಭಾಗಗಳಿಗೆ ಅಂಗಾಲಿಗೆ ಹಚ್ಚಿ ಮಸಾಜ್‌ ಮಾಡುವುದರಿಂದ ತ್ವಚೆ ಮೃದುವಾಗುತ್ತದೆ.
  6. ಮಾಂಸಖಂಡಗಳ ನೋವು ನಿವಾರಣೆಗೆ ಹೀಗೆ ಮಾಡಿ. ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಎಳ್ಳೆಣ್ಣೆ , ನೀಲಗಿರಿ ತೈಲ ಸೇರಿಸಿ ಬಳಸಿ ಮೃದುವಾಗಿ ಮಸಾಜ್‌ ನೀಡುವುದು ಉತ್ತಮ.

ಸಂಗ್ರಹ – ಎಮ್ ವೈ ಮೆಣಸಿನಕಾಯಿ