ಮೂಡಲಗಿ: ಕೊರೋನಾ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಎ.12 ರಿಂದ 22ರವರೆಗೆ ಜರುಗುತ್ತಿರುವ ನಿಮಿತ್ತ ಶನಿವಾರದಂದು ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಜರುಗಿತು.
ಶನಿವಾರದಂದು ಯಾದವಾಡ ಕ್ಷೇತ್ರಾಧಿಪತಿ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಹೂ ಪುಷ್ಪಗಳಿಂದ ಅಲಂಕೃತ ಬಸವೇಶ್ವರ ಮೂರ್ತಿಗಳಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ನಡೆಯಿತು.
ಸಂಜೆ ಯಾದವಾಡ ಗ್ರಾಮದ ಚೌಕೇಶ್ವರ ಮಂದಿರದಿಂದ ಬಸ್ ನಿಲ್ದಾಣ ಹತ್ತಿರದ ಹೊನ್ನಮ್ಮ ಪಾದಗಟ್ಟೆಯವರೆಗೆ ಮತ್ತು ಬಸವೇಶ್ವರ ದೇವಸ್ಥಾನದವರೆಗೆ ಶ್ರೀ ಚೌಕೇಶ್ವರ ರಥೋತ್ಸವ ಜರುಗಿತು ನಂತರ ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ತಳಿರು ತೋರಣ, ಬೃಹದಾಕಾರದ ರುದ್ರಾಕ್ಷಿ ಹಾಗೂ ಹೂ ಮಾಲೆಗಳಿಂದ ಶೃಂಗರಿಸಿದ ಶ್ರೀ ಘಟಗಿ ಬಸವೇಶ್ವರ ರಥೋತ್ಸವಕ್ಕೆ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಅಪಾರ ಜನಸ್ತೋಮ ಮತ್ತು ಜಯಘೋಷಣೆ ಮಧ್ಯದಲ್ಲಿ ಶ್ರೀ ಘಟಗಿ ಬಸವೇಶ್ವರ ರಥೋತ್ಸವ ಬಸವನ ಕಟ್ಟೆಯವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.
ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು, ಬೆಂಡು-ಬೆತ್ತಾಸು, ಖಾರೀಕ, ತೆಂಗಿನಕಾಯಿ ಹಾರಿಸಿ ತಮ್ಮ ಹರಕೆಯನ್ನು ತಿರಿಸಿ ಪುನೀತರಾದರು. ರಥೋತ್ಸವದಲ್ಲಿ ಝಾಂಜ ಪಥಕ, ಕರಡಿ ಮೇಳಗಳು ಮೆರುಗು ನೀಡಿದವು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ಸದಸ್ಯರು, ಸಮಾಜ ಸೇವಕ ಕಲ್ಮೇಶ ಗಾಣಗಿ ಹಾಗೂ ಯಾದವಾಡ, ಕೊಪ್ಪದಟ್ಟಿ, ಕಮನಕಟ್ಟಿ, ಗಿರಿಸಾಗರ, ಗುಲಗೋಜಿಕೊಪ್ಪ, ಕುರಬಟ್ಟಿ, ಮಾನೋಮ್ಮಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.