ಬೀದರ: ಕೆಮಿಕಲ್ ಮಿಶ್ರಿತ ನೀರು ಸೇವಿಸಿ ಹಂದಿಗಳು ಸಾವನ್ನಪ್ಪಿದ ಘಟನೆಯ ಬಗ್ಗೆ ಟೈಮ್ಸ್ ಆಫ್ ಕರ್ನಾಟಕ ವು ಬರೆದ ವರದಿಯು ರಾಷ್ಟ್ರಪತಿಗಳನ್ನು ತಲುಪಿದ್ದು ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ರಾಷ್ಟ್ರಪತಿಗಳ ಕಚೇರಿ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮುಖ್ಯ ಕಾರ್ಯದರ್ಶಿಗಳು ಬೀದರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
ಟೈಮ್ಸ್ ವರದಿ:
ಬಸವಣ್ಣನವರ ಕರ್ಮಭೂಮಿ ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಬರುವ ಕೆಮಿಕಲ್ ಕೈಗಾರಿಕೆಯ ಆಡಳಿತ ಮಂಡಳಿಯವರು ಕೆಮಿಕಲ್ ಯುಕ್ತ ತ್ಯಾಜ್ಯ ನೀರನ್ನು ನೇರವಾಗಿ ರೈತರ ಹೊಲಕ್ಕೆ ಮತ್ತು ಹುಮನಾಬಾದ ಪಟ್ಟಣದಲ್ಲಿ ಇರುವ ಪ್ರಸಿದ್ಧ ದೇವಸ್ಥಾನ ಮಾಣಿಕ ಪ್ರಭು ದೇವಾಲಯದ ಕಾಲುವೆಗೆ ಬಿಟ್ಟಿದ್ದು ಅಲ್ಲದೆ ಕೆಮಿಕಲ್ ಘನ ತ್ಯಾಜ್ಯ ವನ್ನು ಕಾರ್ಖಾನೆಯ ರಸ್ತೆಯಲ್ಲಿ ಸುರಿದಿದ್ದರಿಂದ ಕೆಮಿಕಲ್ ಯುಕ್ತ ನೀರಿನಿಂದ ಕಳೆದ ನಾಲ್ಕು ವರ್ಷಗಳ ಮೊದಲು ಜಲ ಜೀವಿಗಳ ಮಾರಣ ಹೋಮ ನಡೆದಿತ್ತು. ಅಲ್ಲದೆ ಕಳೆದ ತಿಂಗಳು ನಾಲ್ಕು ಹಂದಿಗಳು ಕೂಡ ಸತ್ತಿದ್ದವು. ಈ ಬಗ್ಗೆ ಯಾವುದೆ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ಮೌನವಾಗಿದ್ದರು. ಕ್ಷೇತ್ರದಲ್ಲಿ ಒಂದೇ ಕುಟುಂಬದಲ್ಲಿ ಒಬ್ಬರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದರೂ ಕೂಡ ಹುಮನಾಬಾದ ಪಟ್ಟಣದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಟೈಮ್ಸ್ ಆಫ್ ಕರ್ನಾಟಕ ವರದಿ ಮಾಡಿತ್ತು.
ಸುದ್ದಿ ನೋಡಿ ಹುಮನಾಬಾದ ಸಮಾಜ ಸೇವಕರೊಬ್ಬರು ರಾಷ್ಟ್ರಪತಿಯವರಿಗೆ ಈ ಬಗ್ಗೆ ಪತ್ರ ಬರೆದು ಕಳಿಸಿದರು. ರಾಷ್ಟ್ರಪತಿಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ರಾಷ್ಟಪತಿಗಳ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಕಾರ್ಯದರ್ಶಿ ಗಳು ಬೀದರ ಜಿಲ್ಲಾಧಿಕಾರಿಗೆ ಪತ್ರ ಬರೆದು ಕೆಮಿಕಲ್ ಕಾರ್ಖಾನೆಯ ಬಗ್ಗೆ ಸಂಪೂರ್ಣ ವಿವರ ಪಡೆದು ಆದಷ್ಟು ಬೇಗ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.
ರಾಷ್ಟ್ರಪತಿಗಳ ಕಚೇರಿಯಿಂದ ಬಂದ ಪತ್ರಕ್ಕೆ ಉತ್ತರವಾಗಿ ಜಿಲ್ಲಾ ಆಡಳಿತ ಯಾವ ರೀತಿ ಕ್ರಮವನ್ನು ತೆಗೆದುಕೊಳ್ಳುವದು ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ