ಬೈಲಹೊಂಗಲ: ಓದುಗರ ಅಭಿಮಾನ, ಪ್ರೀತಿ ಎಲ್ಲ ಪ್ರಶಸ್ತಿಗಳಿಗಿಂತ ಮಿಗಿಲಾದದ್ದು. ಬರವಣಿಗೆ ಮನಸ್ಸಿಗೆ ಬಹಳ ತೃಪ್ತಿ ನೀಡುತ್ತದೆ ಎಂದು ಖ್ಯಾತ ಕವಿ, ಅಂಕಣಕಾರರಾದ ನಾಗೇಶ ಜೆ.ನಾಯಕ ಹೇಳಿದರು.
ಖಾನಾಪೂರ ತಾಲೂಕಿನ ಇಟಗಿಯ ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಅವರ ಆತ್ಮಧ್ಯಾನದ ಬುತ್ತಿ ಗಜಲ್ ಸಂಕಲನಕ್ಕೆ ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆ ಕೊಡಮಾಡುವ 2020-21 ನೆಯ ಸಾಲಿನ ದ್ವಿತೀಯ ಪುಸ್ತಕ ಬಹುಮಾನ, ಗರೀಬನ ಜೋಳಿಗೆ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ 2020 ರ ಶಿವಕವಿ ಉಳವೇಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ ಲಭಿಸಿದ ನಿಮಿತ್ತ ಸನ್ಮಾನಿಸಿ ಅಭಿನಂದಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಕಿರಣ ಗಣಾಚಾರಿ ಮಾತನಾಡಿ ನಾಗೇಶ ನಾಯಕ ಅವರು ಕಳೆದ ಎರಡು ದಶಕಗಳಿಂದ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ವೃತ್ತಿಯ ಜೊತೆಗೆ ಸಾಹಿತ್ಯದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 25 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ ನಾಯಕ ಅವರಿಗೆ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ನಾಗೇಶ ಅವರು ಅತ್ಯಂತ ಕಡುಬಡತನದ ಜೀವನದಲ್ಲಿ ಬೆಳೆದು ಅನೇಕ ಸವಾಲುಗಳನ್ನು ಎದುರಿಸಿ ಛಲದಿಂದ ಸಾಧನೆ ಮಾಡಿದವರು ಎಂದರು. ಕಥೆ, ಕವನ, ಗಜಲ್, ವಿಮರ್ಶೆ, ಲೇಖನ, ಅಂಕಣ ಬರಹ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶಿಷ್ಟವಾದ ಶೈಲಿಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ನಾಯಕ ಅವರು ತಮ್ಮದೇ ಅದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬೂದಿಹಾಳದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ನಾಗೇಶ ನಾಯಕ ಅವರ ಸಾಹಿತ್ಯ ಬದುಕಿನ ವಾಸ್ತವ ಸಂಗತಿಗಳು, ಜೀವನದ ದಟ್ಟ ಅನುಭವಗಳು, ಮಾನವೀಯ ಮೌಲ್ಯಗಳು ಇತ್ಯಾದಿಗಳ ಪ್ರತಿಬಿಂಬವಾಗಿದೆ ಎಂದು ಹೇಳಿದರು. ನಾಯಕ ಅವರು ಅನೇಕ ಸಾಹಿತ್ಯ ಸಮ್ಮೇಳನ, ಗೋಷ್ಠಿ, ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿದ್ದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿರುವುದು ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಗೀತಾ ನಾಯಕ, ತೇಜಸ್ವಿ ನಾಯಕ, ಲಲಿತಾ ತೋಟಗಿ ಉಪಸ್ಥಿತರಿದ್ದರು.