ಆಷಾಢದ ಆಲಾಪ
ಆಷಾಢದ ಆಲಾಪ ಹೊರಗೆ ಮಳೆ
ಒಳಗೆ ವಿರಹ ವೇದನೆ
ಇನಿಯಳಿರದ ಭಣಗುಡುವ ಮನೆ
ಅತ್ತೆ ಸೊಸೆ ಮುಖ ನೋಡುವಂತಿಲ್ಲದ ಕಟ್ಟಪ್ಪಣೆ
ಆಷಾಢದ ಚಿತ್ರ ಹಿಂಸೆ ನವದಂಪತಿಗೆ
ದೂರವಾಗಿಹ ದೇಹ ಮತ್ತೆ ಮಿಲನದ ಧಗೆ
ತವರು ಮನೆಯಲಿಹ ಇನಿಯಳ ನೆನಪು
ಇನಿಯನಿಗೆ ಶೂನ್ಯ ಮಾಸವೀ ಆಷಾಢ
ಅಗಲಿಕೆಯ ಕಹಿ ನೆನಪದು ಮತ್ತೆ ಮತ್ತೆ
ಸಾವಿನ ನಾದ ನುಡಿಸುತಿಹ ಶಹನಾಯಿ
ಕಿವಿಗಪ್ಪಳಿಸುತಿಹ ವಿರಹದ ನಾದ
ಕಿಚ್ಚು ಹಚ್ಚುತಿಹ ನಲ್ಲೆಯ ನೆನಪು
ನೋವು ನಲಿವುಗಳ ಹಂಚಿಕೊಳ್ಳುವ ಮನಗಳು
ಆಷಾಢದ ಹೆಸರಲಿ ದೂರವಾಗಿಹ ದಿನಗಳು
ಕಳೆದ ದಿನಗಳ ನೆನಪಿಸುತ ವಿರಹ
ಸಂಸ್ಕೃತಿಯ ಹೆಸರಲಿ ದಿನಗಳೆಸುತಿಹ ಮನಗಳು
ಮನೆಯಾಚೆ ಹೊರಟ
ಇನಿಯ ಮರಳಿದಾಗ
ಬರಿಯ ಬಾಗಿಲ ಹಿಂತಿರುಗಿದ ನೋಟ
ಇನಿಯಳ ಸುಳಿವಿರದ ಬಾಗಿಲಲಿ ಶೂನ್ಯತೆ
ಕಳೆದ ದಿನಗಳ ನೆನಪಿಸುತ ಹೊರ ನಡೆವ ವಿರಹ
ಹನಿಮೂನಿಗೂ ಕೊಡದು ಅವಕಾಶ
ಮಿಲನವಾದರೆ ಮಗುವಿನ ಜನನ ಬೇಸಿಗೆಯಲಿ
ಎನುತ ದೂರವಿಡುವ ಸಂಪ್ರದಾಯ
ಪತಿ ಪತ್ನಿಯರ ಅಗಲಿಸಿದ ಕಹಿ ಕಷಾಯ ನೀಡಿದ ಆಷಾಢ
ಬೇಗ ಬಾ ಶ್ರಾವಣವೇ
ಹಬ್ಬಗಳ ಸಾಲು ನೆನಪನು ಮರುಕಳಿಸುತ ಬಾ ಭುವಿಗೆ ಮತ್ತೆ ನೀಡು ಜೀವಕಳೆ
ನಲ್ಲ ನಲ್ಲೆಗೆ
ವಿರಹದುರಿಯ ದೂರವಿರಿಸುತ
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭
೮೯೭೧೧೧೭೪೪೨ ೭೯೭೫೫೪೭೨೯೮