spot_img
spot_img

ಕವನ: ಗಾಂಧಿ ಬೀಜ

Must Read

spot_img
- Advertisement -

ಗಾಂಧಿ ಬೀಜ

ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ
ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ

ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟೆಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ

ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು
ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ

- Advertisement -

ಅರಮನೆ ಗುರುಮನೆ ಸೆರೆಮನೆಗಳಲೂ
ಕಿಡಿನುಡಿ ಕೆನ್ನಾಲಿಗೆ ಚಾಚಿ ಝೇಂಕಾರವಾಡುತ್ತಿರುವುದನು ಕಂಡು ದಿಗ್ಭ್ರಾಂತರಾಗಿದ್ದಾನೆ

ಅಗಸಿ ಬಾಗಿಲಲ್ಲಿ ಜಾತೀಯತೆಯ ಹೆಬ್ಬಾವು ಬಾಯಿ ತೆರೆದಿರುವುದನ್ನು ಕಂಡು ಪೆಚ್ಚುಮೋರೆ ಮಾಡಿ ಸೌಹಾರ್ದತೆಯ ಓಣಿಗೆ ಹೆಜ್ಜೆ ಇಡಲು ನಡುಗುತ್ತಿದ್ದಾನೆ

ಮೂರಕ್ಕೆ ಮೂರು ಬಿಟ್ಟು ಆರನೇರಿ ಗುಬ್ಬಿಯ ಉದರದಲ್ಲಿ ಬಂದೂಕಿನ ಬೀಜ ಬಿತ್ತಿದ
ಹೊಲದೊಡೆಯನ ಕಂಡು ಕಸಿವಿಸಿ ಗೊಂಡಿದ್ದಾನೆ

- Advertisement -

ಖಾದಿ ಕೇಂದ್ರ ಘೋಷಿಸಿದ ರಿಬೇಟಿನಲ್ಲಿ ಮಾರ್ಕೆಟ್ ಮಾಲ್ ಗಳಲ್ಲಿ ಗಾಂಧಿಗಿರಿ ಕೊಳ್ಳಲು ಮುಗಿಬಿದ್ದ ಗ್ರಾಹಕರ ಕಂಡು ತಬ್ಬಿಬ್ಬು ಗೊಂಡಿದ್ದಾನೆ

ನಗ್ನ ಫಕೀರನ ಬೆತ್ತಕೆ ಪಶ್ಚಿಮದ ಬೆಟ್ಟವೂ
ಅದುರಿರಲು ನೂಲಿಲ್ಲದ ಚರಕ ತಿರುಗಿಸಲು
ಪೈಪೋಟಿಗಿಳಿದ ಸೆಲ್ಫಿಗಳ ಕಂಡು ಕನಿಕರ ಪಡುತ್ತಿದ್ದಾನೆ

ರಕ್ತಸಿಕ್ತ ಕರಗಳಲಿ ಹಿಡಿದ ಪೊರಕೆಯಿಂದ ಸ್ವಚ್ಛ ಭಾರತ ಘೋಷಣೆ ಕೂಗಿದರೆ
ಮನೆ ಮನದ ಅಂಗಳದಲ್ಲೂ ನೆತ್ತರದ ರಂಗೋಲಿ ಕಂಡು ಚಿಂತಾಕ್ರಾಂತನಾಗಿದ್ದಾನೆ

ಮೂರು ಕೋತಿಗಳ ಜಾಗೆಯಲ್ಲಿ ಮತ್ತೊಂದು ಕೋತಿ ಸೇರಿದೆ ಉರಿಯುವ ಮನೆಗಳ ಗಳ ಹಿರಿಯುವವರನು ಕಂಡು ಕಣ್ ಕಣ್ ಪಿಳುಕಿಸುತ್ತಿದ್ದಾನೆ

ಗುಂಡಿಗೆ ಗುಂಡಿಗೆಯೊಡ್ಡುತ್ತಲೇ ತಿಂಗಳ ತಿಳಿವು ಮನೆ ಅಂಗಳಕೆ ಬರಲೆಂದು
ಗಾಂಧಿ ಸರ್ಕಲ್ ನಲ್ಲಿ ನಿಂತ ಭೈರಾಗಿಯ ಕಂಡು ಮುದುಕ ಮೌನವಾಗಿದ್ದಾನೆ

ಕವಿ ಸತ್ತು ಕವಿತೆ ಉಳಿಯಬೇಕು ಇದು ಲೋಕದ ನಿಯಮ
ಗಾಂಧಿ ಸತ್ತು ಗಾಂಧಿ ತತ್ವ ಗಳು ಉಳಿಯದಿರುವುದಕೆ
ಶಾಂತಿಯ ಪಾರಿವಾಳಗಳು ಗೊಣಗುತ್ತಿವೆ

ಬಡಕಲು ಶರೀರದಲ್ಲೂ ಸಾವಿರ ವಿದ್ಯುತ್ ಬಲ್ಬುಗಳ ಬೆಳಕಿನ ಶಕ್ತಿ
ಅಂಬರದೆತ್ತರದ ನಿಲುವಿನ ಉಕ್ಕಿನೆದೆಯ ವೀರನಿಗೆ ಭಾರತ ಮಾತೆ ಅಶ್ರುತರ್ಪಣಗೈದು ಮತ್ತೊಂದು ಕರ್ಬಲಾ ಕ್ಕಾಗಿ ಕಾಯುತಿಹಳು

ಆತ್ಮ ಸಾಕ್ಷಿಯ ಸಾಕ್ಷಾತ್ಕಾರ
ಪ್ರೇಮದ ಹಾದಿಯ ಪಥಿಕನ
ಬರುವಿಕೆಗಾಗಿ ಸತ್ಯ ಮಾರ್ಗದ ದಂಡಕ ಹಿಡಿದು
ಗಾಂಧಿ ಬೀಜ ಬಿತ್ತುತ್ತಿದ್ದೇನೆ

ರಾಮ ರಹೀಮ್ ಹೇ ರಾಮ್
ಬಂದು ಒಕ್ಕಲು ಮಾಡಿ ನನ್ನ ಜೊತೆಗೂಡಿ
ಅವರು ಇವರು ಎಲ್ಲರೂ ಬರಲಿ ರಾಶಿ ಕಣದಲ್ಲಿ ಫಸಲು ತುಂಬಲು

ಎ ಎಸ್. ಮಕಾನದಾರ
ನಿರಂತರ ಪ್ರಕಾಶನ
ಎಂ ಆರ್ ಅತ್ತಾರ ಬಿಲ್ಡಿಂಗ್
ಅಮರೇಶ್ವರ್ ನಗರ 5ನೆ ಕ್ರಾಸ್
ಗದಗ 582103

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group