ಬೀದರ – ಬಾಲಕಿಯರ ವಸತಿ ನಿಲಯದ ಧಾನ್ಯಗಳನ್ನು ಕದ್ದು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟುರು ಗ್ರಾಮದಲ್ಲಿ ನಡೆದಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯರ ವಸತಿ ನಿಲಯದ ಜೋಳವನ್ನು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಗಾಡಿಯ ಡ್ರೈವರ್ ಹಾಗೂ ಸಿಬ್ಬಂದಿಗಳು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹಲವು ತಿಂಗಳಿನಿಂದ ವಸತಿ ನಿಲಯದ ಜೋಳ, ಅಕ್ಕಿ ಸೇರಿದಂತೆ ಲಕ್ಷಾಂತರ ಮೌಲ್ಯದ ಧವಸ – ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆನ್ನಲಾಗಿದ್ದು ನಿನ್ನೆ ತಡರಾತ್ರಿ ಕೂಡಾ ಅಕ್ರಮವಾಗಿ ಗಾಡಿಯಲ್ಲಿ ಭಾರೀ ಪ್ರಮಾಣದ ಜೋಳ ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಗಾಡಿಯ ಡ್ರೈವರ್ ಹಾಗೂ ಸಿಬ್ಬಂದಿಗಳು ಸಿಕ್ಕಿ ಬಿದಿದ್ದು ಗ್ರಾಮಸ್ಥರು ಪುಲ್ ತರಾಟೆ ತೆಗೆದುಕೊಂಡಿದ್ದಾರೆ.
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕ್ಷೇತ್ರದಲ್ಲಿ ಯಾರು ಹೇಳುವವರು, ಕೇಳುವವರು ಇಲ್ಲವೇನೋ ಎಂಬ ವಾತಾವರಣ ಇದೆ. ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ಒಳ್ಳೆಯ ಪೌಷ್ಟಿಕಾಹಾರ ನೀಡುತ್ತಾ ಇದ್ದು .ಭಾಲ್ಕಿ ಕ್ಷೇತ್ರದ ಅಧಿಕಾರಿಗಳು ಮಕ್ಕಳ ಆಹಾರ ಮೇಲೆ ಕಣ್ಣು ಹಾಕಿದ್ದು ವಿಪರ್ಯಾಸವೆಂದು ಹೇಳಬಹುದು.
ಭಾಲ್ಕಿ ಕ್ಷೇತ್ರದ ಶಾಸಕರು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಕ್ಷೇತ್ರದ ಕಡೆ ಗಮನ ಹರಿಸುತ್ತಾರೋ ಅಥವಾ ಅಂಧಾ ದರ್ಬಾರ್ ಅಧಿಕಾರಿಗಳು ಆಡಿದ್ದೇ ಆಟ ಆಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ