ಮನಸೂರೆಗೊಂಡ ಡಾ.ಲೀಲಾ ಬಸವರಾಜು ಅಭಿನಯದ  ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ಯ ಪ್ರದರ್ಶನ

0
288

ಪೋರ್ಚಗೀಸರ ವಿರುದ್ದ ಹೋರಾಡಿದ ವೀರ ವನಿತೆ ʻರಾಣಿ ಚೆನ್ನಭೈರಾದೇವಿ ಯ ಜೀವನ ಕಥಾನಕವೇ ಬಲುರೋಚಕ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ; ಕರಿಮೆಣಸಿನ ರಾಣಿಯ ಅಕಳಂಕ ಚರಿತೆಯನ್ನು ಡಾ. ಗಜಾನನ ಶರ್ಮ ಅವರು ಕಾದಂಬರಿ ರೂಪದಲ್ಲಿ ಬರೆದ ಈ ಕೃತಿ. ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಮೂಲಕ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. 450 ಪುಟಗಳ  ಬೃಹತ್  ಐತಿಹಾಸಿಕ ಕಾದಂಬರಿಯ ಆಯ್ದ ಭಾಗಗಳನ್ನು ರಂಗರೂಪಾಂತರಗೊಳಿಸುವುದು ಸಾಮಾನ್ಯ ವಿಷಯವಲ್ಲ.

ಹಿರಿಯ ರಂಗಭೂಮಿ ಕಲಾವಿದೆ ಡಾ.ಲೀಲಾ ಬಸವರಾಜು ಅಭಿನಯಿಸಿದ  ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’  ಯಶಸ್ವಿ ಪ್ರದರ್ಶನ ಕಂಡಿತು.  ಕಲಾ ಸೇವೆಯಲ್ಲಿ ತಮ್ಮನ್ನು ಅರ್ಧ ಶತಮಾನದಿಂದಲೂ ತೊಡಗಿಸಿಕೊಂಡಿರುವ ಕಲಾವಿದೆ ಡಾ.ಲೀಲಾ ಬಸವರಾಜು 75ರ  ವಯೋಮಾನದಲ್ಲೂ ಲವಲವಿಕೆಯಿಂದ ಒಂದು ಗಂಟೆ ಇಪ್ಪತ್ತು ನಿಮಿಷ  ಅಸ್ಖಲಿತ ನಿರೂಪಣೆಯಿಂದ ಅಭಿನಯಿಸಿದ್ದು ಈ ಪ್ರಯೋಗದ ವಿಶೇಷತೆ. ಅವರ ಸಂಭಾಷಣೆಯಲ್ಲಿನ ದೃಡತೆ, ಸನ್ನಿವೇಶಕ್ಕೆ ತಕ್ಕಂತೆ ರಸಭಾವ, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಪ್ರೇಕ್ಷಕರನನ್ನು ಮಂತ್ರಮುಗ್ದರನ್ನಾಗಿ ಮಾಡಿತು.  ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮತಾಗಿರುವ ನಟ- ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ‘ಅವ್ವರಸಿ’ ಪ್ರಯೋಗದ ರಂಗ ರೂಪ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ  ಹೊಣೆಹೊತ್ತಿದ್ದರು. ಹಿತಮಿತವಾದ ರಂಗಸಜ್ಜಿಕೆ , ಹಿನ್ನೆಲೆ ಸಂಗೀತ ಇದಕ್ಕೆ ಪೂರಕವಾಗಿತ್ತು.

ಎನ್ ಆರ್ ಕಾಲೋನಿಯ  ಪ್ರಭಾತ್ ಕಲಾಪೂರ್ಣಿಮಾದಲ್ಲಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ  ಈ ಪ್ರದರ್ಶನಕ್ಕೆ ಅದಮ್ಯ ಚೇತನ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ಚಾಲನೆ ನೀಡಿದರು, ನಿವೃತ್ತ ಐಎಎಸ್ ಅಧಿಕಾರಿ , ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಗಜಾನನ ಶರ್ಮ, ಹಿರಿಯ ರಂಗಕರ್ಮಿ ಕಲಾಗಂಗೋತ್ರಿ ಸಂಸ್ಥೆಯ ಡಾ.ಬಿ.ವಿ.ರಾಜಾರಾಂ ಉಪಸ್ಥಿತರಿದ್ದರು.ನಾಟ್ಯ ದರ್ಪಣ ಸಂಸ್ಥೆಯ ಅಧ್ಯಕ್ಷ ಅಬ್ಬೂರು ಜಯತೀರ್ಥ , ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ ಸಂಸ್ಥಾಪಕ ಗೋಪಿನಾಥ್ ಬಿ.ಆರ್,  ನಟ- ನಿರ್ದೇಶಕ ಶ್ರೀಪತಿ ಮಂಜನ ಬೈಲು ಅವರನ್ನು ಅಭಿನಂದಿಸಲಾಯಿತು.