ಕನ್ನಡ ನಾಡು-ನುಡಿ ಬಗ್ಗೆ ಮಮತೆ ತೋರಿಸದಿದ್ದರೆ ಭವಿಷ್ಯದಲ್ಲಿ ಕನ್ನಡದ, ಕನ್ನಡಿಗರ ಭವಿಷ್ಯ ಬಹಳ ಮಸುಕಾಗಲಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತ, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.
ಸಾಲಿಗ್ರಾಮದ ಬ್ರಹ್ಮಕುಮಾರಿ ಆಶ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕನ್ನಡ ಭಾಷಾ ಶಾಲೆಗಳಲ್ಲಿ ಕಲಿಯುವವರ ಸಂಖ್ಯೆ ಪ್ರತಿದಿನ ಕುಸಿಯುತ್ತಿದೆ. ಕನ್ನಡ ಭಾಷಿಕರ ಮೇಲೆ ಮರಾಠಿ ಭಾಷಿಕರ ದಬ್ಬಾಳಿಕೆ ತೀವ್ರವಾಗಿದೆ. ಕನ್ನಡ ಬಾವುಟ ಹಾರಿಸಲೂ ಸಹ ವಿರೋಧ ಎದುರಿಸುವ ಪರಿಸ್ಥಿತಿ ಇದೆ.ಇನ್ನು ಕೇರಳದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆ, ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಪ್ರದೇಶ,ತಮಿಳ್ನಾಡಿನ ಗಡಿ ಪ್ರದೇಶವಾದ ಚಾಮರಾಜನಗರ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ತಮಿಳು, ತೆಲುಗು, ಮಲೆಯಾಳಿ ಭಾಷೆಗಳ ಪ್ರಭಾವ ತೀವ್ರವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಗಡಿ ಜಿಲ್ಲೆಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ವಿನಾಶವಾಗುವುದು ಖಂಡಿತ ಎಂದವರು ಎಚ್ಚರಿಕೆ ನೀಡಿದರು.

ಬ್ಯಾಂಕ್ ಗಳು, ರೈಲ್ವೆ ಠಾಣೆಗಳು, ಅಂಚೆಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಕನ್ನಡ ಬಾರದ ಹೊರರಾಜ್ಯದ ಅಧಿಕಾರಿಗಳಿಂದ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಾರ್ವಜನಿಕರು ಬ್ಯಾಂಕ್ ಗಳಲ್ಲಿ, ಅಂಚೆಕಚೇರಿಗಳಲ್ಲಿ,ತಂಬಾಕು ಮಂಡಳಿಗಳಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಯನ್ನೇ ಬಳಸಬೇಕು. ತಿರಸ್ಕರಿಸಿದರೆ ಮುಖ್ಯಸ್ಥರಿಗೆ ದೂರು ನೀಡಬೇಕೆಂದವರು ಕರೆ ನೀಡಿದರು.
ತಹಸೀಲ್ದಾರ್ ಮೋಹನ್ ಕುಮಾರ್ ಅವರು ಧ್ವಜಾರೋಹಣ ಮಾಡಿ ಮಾತನಾಡಿ ಸಮಾಜದ ಅಭ್ಯುದಯಕ್ಕೆ ಬ್ರಹ್ಮಕುಮಾರಿ ಸಮಾಜ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಹಿರಿಯ ಪತ್ರಕರ್ತರಾದ ಎಸ್.ಬಿ ಗುಣಚಂದ್ರ ಕುಮಾರ್ ಅವರು ಮಾತನಾಡಿ ಬ್ಯಾಂಕ್ ಗಳಲ್ಲಿ ನೌಕರರು ಕನ್ನಡ ಭಾಷೆ ಬಳಸದೇ ಇರುವುದರಿಂದ ಗ್ರಾಮೀಣ ರೈತರಿಗೆ, ಮಹಿಳಾ ಸಂಘಗಳಿಗೆ ಅಪಾರ ತೊಂದರೆ ಉಂಟಾಗುತ್ತದೆ. ಕನ್ನಡ ಕಲಿಯದಿರುವ ಬ್ಯಾಂಕ್ ಸಿಬ್ಬಂದಿಗಳನ್ನು ರಾಜ್ಯದಿಂದ ಹೊರಕ್ಕೆ ವರ್ಗಾವಣೆ ಮಾಡಬೇಕು. ಈ ಬಗ್ಗೆ ಕನ್ಬಡ ಅಭಿವೃದ್ದಿ ಪ್ರಾಧಿಕಾರ ಕೂಡಲೇ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
ಕನ್ನಡಪರ ಚಿಂತಕ ಡಾ.ಎಂ.ಆರ್. ವಿನಯ್ ಮಿರ್ಲೆ ಅವರು ಮಾತನಾಡಿ ಕನ್ನಡ ಭಾಷೆ ನಮ್ಮ ಹೃದಯದ ಭಾಷೆ.ಕನ್ನಡ ಕಲಿಕೆಯಿಂದ ಮಗುವಿನ ಚಟುವಟಿಕೆ, ಜ್ಞಾನ ಹೆಚ್ಚುತ್ತದೆ. ಮಕ್ಕಳು ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಯಲಿ. ಆದರೆ ಅದರಿಂದ ಕನ್ನಡ ಪ್ರೇಮಕ್ಕೆ ಧಕ್ಕೆಯಾಗದಿರಲಿ ಎಂದು ನುಡಿದರು.
ಬ್ರಹ್ಮಕುಮಾರಿ ಶಿಲ್ಪ ಕುಮಾರಿ, ಸತ್ಯಣ್ಣ ಸಭೆಯಲ್ಲಿ ಮಾತನಾಡಿದರು. ಡಾ. ವಿನಯ್ ಮಿರ್ಲೆ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಿವೃತ್ತ ಶಿಕ್ಷಕರಾದ ಬೊಮ್ಮರಾಯಿಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

