ಮಹಾರಾಷ್ಟ್ರ ಗಡಿ ಭಾಗದ ಜನರಿಂದ ಮಹಾ ಸರ್ಕಾರದ ವಿರುದ್ಧ ಆಕ್ರೋಶ
ಬೀದರ: ಮಹಾರಾಷ್ಟ್ರದ ಮಂತ್ರಿಗಳೇ ಬೆಳಗಾವಿ ಭೇಟಿ ಬದಲು ನಿಮಗೆ ಮತ ನೀಡಿರುವ ಜನತೆಯನ್ನು ನೋಡಿ ಇಲ್ಲಿನ ಜನರ ಸಮಸ್ಯೆ ಬಗೆಹರಿಸಿ ಎಂದು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಕರ್ನಾಟಕಕ್ಕೆ ಹೋಗಲು ಅನುಮತಿ ನೀಡಿ ನಮಗೆ ಕರ್ನಾಟಕ ಬೇಕು ಎನ್ನುತ್ತಿದ್ದಾರೆ ಮಹಾರಾಷ್ಟ್ರ ಗ್ರಾಮೀಣ ಭಾಗದ ಗ್ರಾಮಸ್ಥರು.
ಅಭಿವೃದ್ಧಿ ಮಾಡುವಲ್ಲಿ ನಮ್ಮ ಮುಖ್ಯಮಂತ್ರಿ ಏಕನಾಥ ಶಿಂಧೆ ವಿಫಲರಾಗಿದ್ದಾರೆ ಎಂಬುದಾಗಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ತಾಲೂಕಿನ ಬೋಂಬಳಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿ ಸದ್ಯ ಅಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.
ಅಭಿವೃದ್ಧಿ ಮಾಡುವಲ್ಲಿ ವಿಫಲವಾದ ಸರ್ಕಾರಕ್ಕೆ ಶಾಕ್ ಮುಟ್ಟಿಸಲು ನಿರ್ಧಾರ ಮಾಡಿದ ಬೆನ್ನಲ್ಲೇ ಕರ್ನಾಟಕ ಸರ್ಕಾರದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಮಹಾ ಗ್ರಾಮಸ್ಥರು ಲಾತೂರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೇಡಿಕೆ ಇಟ್ಟು ಬೇಡಿಕೆಗಳನ್ನು ಈಡೇರಿಸಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ಕೊಡಿ ಎನ್ನುತ್ತಿದ್ದಾರೆ.
ಕರ್ನಾಟಕ ಸರ್ಕಾರದಿಂದ ಕೃಷಿಕರಿಗೆ ಸಿಗುವ 50 ಸಾವಿರ ರೂ. ಅನುದಾನ ನಮಗೂ ಸಿಗುವಂತೆ ಮಾಡಬೇಕು, ಕೃಷಿಗೆ 10 ಎಚ್ ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು.
ಹೀಗೆ ಹಲವು ಬೇಡಿಕೆಗಳೊಂದಿಗೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಗಡಿ ಭಾಗದ ಜನ ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸುತ್ತಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ