ಮೂಡಲಗಿ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಾದರ ಸಮಾಜ ಹಿತರಕ್ಷಣಾ ವೇದಿಕೆಯ ತಾಲೂಕಾ ಘಟಕದ ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಹೈಕೋರ್ಟ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಪೂರ್ಣಗೊಂಡು ಹಲವಾರು ವರ್ಷ ಕಳೆದರೂ ವರದಿಯನ್ನು ಜಾರಿಗೆ ತರಲು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು ಸದಾಶಿವ ಆಯೋಗದ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದರ ಸಮಾಜಕ್ಕೆ ಒಳಮೀಸಲಾತಿ ನೀಡುವ ಸದಾಶಿವ ಆಯೋಗದ ವರದಿಯನ್ನು ಮುಂಬರುವ ಬಜೆಟ್ ಅಧೀವೇಶನದಲ್ಲಿಯಾದರೂ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಾದರ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಕಾಶ ಮಾದರ, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಡಿಎಸ್‍ಎಸ್ ಅಂಬೇಡ್ಕರ ವಾದ ತಾಲೂಕಾ ಸಂಚಾಲಕ ಮಹಾದೇವ ಮಾಸನ್ನವರ, ಪ್ರಕಾಶ ಹರಿಜನ, ಮಹಾದೇವ ಸಮಗಾರ, ಲಕ್ಷ್ಮಣ ಹರಿಜನ, ರಮೇಶ ಸೊಂಟನವರ, ಸುಂದರ ಹಾದಿಮನಿ, ಮುತ್ತೆಪ್ಪ ಕೊಪ್ಪದ, ಸುರೇಶ ಸಣ್ಣಕ್ಕಿ, ಯೋಹಾನ ಹಾದಿಮನಿ, ಸುಂದರ ದಡ್ಡಿಮನಿ, ಅಶೋಕ ಬಾಗನ್ನವರ ಮತ್ತಿತರರು ಉಪಸ್ಥಿತರಿದ್ದರು.