ಭಾರತೀಯ ದರ್ಶನ ಶಾಸ್ತ್ರಕ್ಕೆ ಸಿದ್ಧೇಶ್ವರ ಶ್ರೀ ಕೊಡುಗೆ ಅಮೂಲ್ಯ: ಪ್ರಕಾಶ ಗಿರಿಮಲ್ಲನವರ

0
744

ಭಾರತೀಯ ತತ್ವಶಾಸ್ತ್ರದ ಗ್ರಂಥಗಳನ್ನು ಷಡ್ ದರ್ಶನಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಾರೆ. ಈ ದರ್ಶನ ಶಾಸ್ತ್ರದ ಗ್ರಂಥಗಳಿಗೆ ಅತ್ಯಂತ ಸರಳ ಮತ್ತು ಸುಲಲಿತ ವ್ಯಾಖ್ಯಾನ ಮಾಡುವ ಮೂಲಕ ಜನಸಾಮಾನ್ಯರಿಗೂ ತತ್ವದರ್ಶನ ಮಾಡಿಸಿದ ಕೀರ್ತಿ ಸಿದ್ದೇಶ್ವರ ಸ್ವಾಮಿಗಳವರಿಗೆ ಸಲ್ಲುತ್ತದೆ.

ಸಾವಿರಾರು ವರ್ಷಗಳ ಸುದೀರ್ಘ ಪರಂಪರೆಯುಳ್ಳ ಭಾರತೀಯ ದರ್ಶನಗಳು ಈ ವರೆಗೆ ಪಂಡಿತರ ವ್ಯಾಖ್ಯಾನ ಕಾರಣವಾಗಿ ಕಬ್ಬಿಣದ ಕಡಲೆಯಾಗಿದ್ದವು. ಅಂತಹ ಗಡುಚಾದ, ರಹಸ್ಯದಿಂದ ಕೂಡಿದ ಶಾಸ್ತ್ರಗ್ರಂಥಗಳಿಗೆ ಸಿದ್ಧೇಶ್ವರರು ನೀಡಿದ ಮರು ವ್ಯಾಖ್ಯಾನ ಅತ್ಯಂತ ಮನೋಜ್ಞವಾಗಿದೆ-ಎಂದು ಪ್ರಕಾಶ ಗಿರಿಮಲ್ಲನವರ ಹೇಳಿದರು.

ಬೆಳಗಾವಿ ಡಾ. ಫ.ಗು.ಹಳಕಟ್ಟಿ ಸಭಾ ಭವನದಲ್ಲಿ ಜರುಗಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಅನುಭಾವ ಗೋಷ್ಠಿ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಿದ್ದ ಅವರು ಸಿದ್ಧೇಶ್ವರ ಸ್ವಾಮಿಗಳ ಸಮಗ್ರ ಸಾಹಿತ್ಯದ ಆಳ-ವಿಸ್ತಾರಗಳನ್ನು ಕುರಿತು ವಿವರಿಸಿದರು. ಇತ್ತೀಚೆಗೆ ಸಿದ್ಧೇಶ್ವರ ಶ್ರೀಗಳ ಸಮಗ್ರ ಸಾಹಿತ್ಯ ಆರು ಸಂಪುಟಗಳಲ್ಲಿ ಪ್ರಕಟಗೊಂಡ ನಿಮಿತ್ತ, ಅವುಗಳನ್ನು ಪರಿಚಯಿಸಿದರು. 

ಕು. ದೀಪಾ ಗುಡಸ ಅವರು ಅಲ್ಲಮಪ್ರಭುದೇವ ವಚನ ನಿರ್ವಚನವನ್ನು ಮಾಡಿದರು. ಎ.ಪಿ.ಜೇವಣಿ ಅವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು.

ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯಣ್ಣವರ, ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ, ಸದಸ್ಯರಾದ ಸಂಗಮೇಶ ಅರಳಿ, ಮಹಾಂತೇಶ ಮೆಣಸಿನಕಾಯಿ, ಅರವಿಂದ ಪರುಶೆಟ್ಟಿ, ಸಾರಾಪುರೆ, ಆನಂದ ಕರ್ಕಿ, ತಿಗಡಿ ಮೊದಲಾದವರು ಉಪಸ್ಥಿತರಿದ್ದರು.