ಶರಣಪ್ಪ ಮೇಟ್ರಿ ಕವನಗಳು

0
1304

ಏನು ಕಣ್ಣು

ಏನು ಕಣ್ಣು ಏನು ಕಣ್ಣು
ಏನು ಕಣ್ಣು ನಿನ್ನವು
ಚಿನ್ನದೊಡವೆಯಲ್ಲಿ ಸೇರಿ
ಮಿನುಗುತಿರುವ ರನ್ನವು !

ಮನವ ಸೆಳೆಯುವಂಥ ಹಣ್ಣು
ಕಪ್ಪುನೇರಳೆನ್ನಲೆ
ಮಾಗಿದಂಥ ಕರ್ರಗಿರುವ
ಕವಳಿಹಣ್ಣು ಕೇಳೆಲೆ !

ವದನಕೊಳದೊಳೀಜುವಂಥ
ಮೀನು ಕಣ್ಣು ನಿನ್ನವು
ಗಗನಮೊಗದಿ ಮಿನುಗುವಂಥ
ಚುಕ್ಕಿ ಕಣ್ಣು ಚೆಂದವು !

ಕಮಲಮುಖದಿ ಕೂತುಕೊಂಡು
ಜೇನನುಂಬ ತುಂಬಿಯು
ಶಿರದ ಗರ್ಭಗುಡಿಯಲಿದ್ದು
ಬೆಳಗುತಿರುವ ಹಣತೆಯು !

ಮಾರ ಹುಬ್ಬವಿಲ್ಲ ಹಿಡಿದು
ಬಿಟ್ಟ ಪುಷ್ಪಬಾಣವು
ಕಾಮ ಬಂದು ಕಾಯದಲ್ಲಿ
ನೆಲೆಸಿದಂಥ ತಾಣವು !

ಏನು ಕಣ್ಣು ಏನು ಕಣ್ಣು
ಏನು ಕಣ್ಣು ತೋರೆಲೆ
ಕಣ್ಣಿನಲ್ಲಿ ಕಣ್ಣ ನೆಟ್ಟು
ನೀನು‌ ನನ್ನ ಸೇರೆಲೆ


ಅಣಕವಾಡು

ಅಂಶಗಣ : ವಿವಿವಿವಿ
ವಿವಿವಿ

ಸತಿವಾಕ್ಯ ಪರಿಪಾಲನೆ
ಸತಿವಾಕ್ಯವನು ಪರಿಪಾಲಿಸಿದಾಗಲೆ
ಪತಿರಾಯರಿಗಹುದು ಸುಖಶಾಂತಿ

ಪರಸತಿಯರನೊಲ್ಲದಿರು,
ಧನವನೆ ಮಾಡು
ಶಿರಬಾಗಿ ನಡೆ , ಮೃದುನುಡಿಯಾಡು
ಕರುಣವಿರಲಿ ಮಾವನೊಳು ! ಮತಿಯುತನಾಗು
ಸರಿಸು ಸೋದರರೆಂದು ತಿಳಿಸುವ

ನಿಂದಿಸಿ ನುಡಿಯದಿರೆನಗೆ , ಮನಸಿಗೆ
ಬಂದಂತೆ ಹೋಗದಿರೆಲ್ಲಿಗೆ
ತಂದೆತಾಯನು ಬಿಡು, ನನ್ನ ಮನಸನು ಜೈ
ಸೆಂದು ಕರವಿಡಿದಾಗ್ರಹಿಸುವ

ಸುರಪಾನ ತ್ಯಜಿಸು , ಹುಸಿನುಡಿಯದಿರು , ಸೋದ
ರರಿಗಂಜದೆಯಿರು ಜೀವನದೊಳು
ದುರುಳರಿಂ ದೂರಿರು , ನಿನ್ನ ಸೋದರಿಯರ
ಕರೆಯದಿರೆಂದಾಜ್ಞೆ ಮಾಡುವ

ಕಳೆಯದಿರೈಶ್ವರ್ಯವನು ಜೂಜಿನಲ್ಲಿ , ನ
ನ್ನೊಳಗೇಕೋಭಾವನೆಯಿಂದಿರು
ತಿಳಿದು ನುಡಿಯುವುದ ಕಲಿ , ಮುದ್ದು ಕಂದಮ್ಮ
ಗಳನಗಲದಿರೆಂದು ಪೇಳುವ

ನೀರೆ ನಾನೆಂದು ನೀನೀಕ್ಷಿಸು , ಸುಗಮ ಸಂ
ಸಾರವಿದನು ಹಿತವೆಂದರಿ
ನೀರಜಾಕ್ಷಿಯ ತನುಮನಗಳನೊಲಿಸಿ ಸಂ
ಸಾರ ಸುಖ ಪಡೆಯೆಂದರುಹುವ
+++++++೦++++++++
(ನಿಜಗುಣ ಶಿಯೋಗಿಗಳ ತತ್ತ್ವಪದ
“ಶ್ರೀಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ” ಧಾಟಿಯಲ್ಲಿ)


ಶಿವಸ್ತುತಿ

ಶರಣಜನನುತ ಶಾಮಕಂಧರ
ಶಿರದಿ ಶಶಿಧರ ಶೀರ್ಷಕಾಕರ
ವರದ ಶುಭಕರ ಶೂಲಿ ಶೃಂಗನಿವಾಸ ಯೋಗೀಶ
ಗರಳಧರ ಶೇಷಧರ ಶೈಲಕು-
ವರಿಮನೋಹರ ಶೋಕಪರಿಹರ
ಶರಭ ಶೌರಿನತಪದ ಶಂಕರ ರಕ್ಷಿಸನವರತ
**********+*********
(ಭಾಮಿನಿಯಲ್ಲಿ ಶಕಾರ ಗುಣಿತಾಕ್ಷರಿ
ಶಾಮಕಂಧರ – ಕಪ್ಪುಗೊರಳ,ಶೀರ್ಷಕಾ – ಕಪಾಲಿ , ತಲೆಬುರುಡೆ
ಶೃಂಗ – ಬೆಟ್ಟ ! ಗರಳಧರ- ವಿಷಧರ ! ಶೇಷ – ಸರ್ಪ ! ಶೌರಿ- ವಿಷ್ಣು)

——ಶಿವಸ್ತುತಿ ೧೪
ಮರಣವಿಹಿತನೆ ಜನನರಹಿತನೆ
ಗಿರಿಜೆಯರಸನೆ ಪರಮಪುರುಷನೆ
ಸುರಪಹರಿವಿಧಿನತನೆ ಮುನಿಜನನುತನೆ ಜಗಭರಿತ
ಪುರಹರನೆ ಭವಹರನೆ ಶರಭನೆ
ಹರಿಯಕುವರನ ಯಮನ ತರಿದನೆ
ಚರಣ ಭಜಿಸುವೆ ತನುಜನಿವನನು ಪೊರೆವುದನವರತ
____________+*+____________
(ಸಂಯುಕ್ತ ಅನುಸ್ವಾರ ವಿಸರ್ಗ ದೀರ್ಘಾಕ್ಷರಗಳಿಲ್ಲದೆ
ಬರಿ ಹ್ರಸ್ವಾಕ್ಷರಗಳಿಂದ ಭಾಮಿನಿಯಲ್ಲಿ ರಚಿಸಲಾಗಿದೆ)


ಲಲನಾಂಗಿ

ಪತಂಗ ಷಟ್ಪದಿ ಹೊಸ ಪ್ರಯೋಗ(೬೬-೧೨ ಮಾತ್ರೆ)

ಚೆಂದುಡುಗೆಯ ಲಲನಾಂಗಿಯು
ತಂದುಡುತಲಿ ಚೆಲ್ವಂಗದಿ
ಚೆಂದೊಡವೆಯ ಮೇಣಿಡುತಲಿ ಸಿಂಗರಿಸಿದಳು
ಮಂದಸ್ಮಿತ ಮುಖದೋರುತ
ಸುಂದರಿಯಾಗಮಿಸುತ್ತಲಿ
ಬಂದಾಗಲೆ ಮೇನಕಿಯೊಲು ಕಂಗೊಳಿಸಿದಳು

ಬಡಿದಾಡಿತು ನೋಟಕರೆದೆ
ನಿಡಿದಾಯಿತುವುಸಿರಾಟವು
ಗಡಬಡಿಸುತ ಬಿದ್ದೋಡುತ ಜನಸೇರಿದರು
ಕಡುಚೆಲುವೆಯ ಲಾವಣ್ಯವ
ಬಿಡುಗಣ್ಣಲಿ ಹೀರುತ್ತಲಿ
ಬಡಬಡಿಸುತ ಶರಣಾದರು ಕಾಮಣ್ಣನಿಗೆ


ಸುಂದರಿ
ಸಮಕಂದ( ಹೊಸ ಪ್ರಯೋಗ)

ಸುಂದರಿ ಸೊಂಟವ ತಳುಕಿಸಿ ಬಳುಕಿಸಿ
ಬಂದಳು ನೋಟಕರ ಮನಸಿನಲ್ಲಿ
ನಿಂದಳು ಕಾಮನು ಹೂಡಿದ ಹೂಗಣೆ
ಯಂದದಿ ಘಾಸಿಸುತ ಹೃದಯದಲ್ಲಿ
——–+++——
(ಕಂದದ ಗಣನಿಯಮಗಳನ್ನು ಪಾಲಿಸಿ ಸಮಕಂದ ಚೌಪದಿ ಮಾಡಿ
ಆದಿಪ್ರಾಸ ಮತ್ತು ೨ ೪ ಸಾಲಿನಲ್ಲಿ ಅಂತ್ಯಪ್ರಾಸ ತರಲಾಗಿದೆ. ೭ನೆ ಗಣದಲ್ಲಿ ಮಧ್ಯ ಯತಿ ಪಾಲಿಸಿ ೮ ನೆಯ ಗಣದ ಕೊನೆಗೆ ಲಘುವಿದ್ದರು ಷಟ್ಪದಿಯಲ್ಲಿರುವ ಹಾಗೆ ಗುರುವೆಂದು ಗಣಿಸಲಾಗಿದೆ)

ಜಯ ಕರ್ನಾಟಕ
ಮಾಧುರ್ಯ ಷಟ್ಪದಿ ಹೊಸಪ್ರಯೋಗ (೮ ೮- ೧೬ ಮಾತ್ರೆ)

ಜಯ ಕರ್ನಾಟಕ ಸಿರಿಗನ್ನಡತಿಗೆ
ಜಯ ಕರುನಾಡಿನ ವರಚಾಮುಂಡಿಗೆ
ಜಯ ಕನ್ನಡಿಗರ ಶರಣವರೇಣ್ಯರು ದಾಸಶ್ರೇಷ್ಠರಿಗೆ
ಜಯ ಸಿರಿಗನ್ನಡ ಕವಿಕೋವಿದರಿಗೆ
ಜಯ ಸಂಗೀತದ ವರಪಂಡಿತರಿಗೆ
ಜಯ ಕನ್ನಾಡಲಿ ತಾ ಜೀವಿಸುತಿಹ ಜನಸಾಮಾನ್ಯರಿಗೆ

ಎನ್‌.ಶರಣಪ್ಪ
ಮೆಟ್ರಿ,ಗಂಗಾವತಿ