spot_img
spot_img

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ

Must Read

- Advertisement -

‘ಶಿಕ್ಷಕರೇ ರಾಷ್ಟ್ರದ ನಿರ್ಮಾಪಕರು. ಶಿಕ್ಷಕರೇ ರಾಷ್ಟ್ರದ ಬೆನ್ನೆಲುಬು.’ ಎನ್ನುವ ಉಕ್ತಿಗಳು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗುರುತರವಾದುದು ಎಂಬುದನ್ನು ಒತ್ತಿ ಹೇಳುತ್ತದೆ. ರಾಷ್ಟ್ರ ನಿರ್ಮಾಣವೆಂದರೆ ಪ್ರಜೆಗಳ ನಿರ್ಮಾಣವೇ ಅಲ್ಲವೇ? ಮೌಲ್ಯಮಾಪನ ವ್ಯಕ್ತಿಗಳನ್ನೊಳಗೊಂಡ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕಾದ ಮೊದಲ ವರ್ಗ ಮಾತಾ ಪಿತೃಗಳ ವರ್ಗ. ಎರಡನೆಯದೇ ಶಿಕ್ಷಕ ವರ್ಗ.

ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ ತಾಯಿಗಳಿಂದಲೂ ಸಾಧ್ಯವಾಗದ ಕೆಲ ಅಂಶಗಳು ಶಿಕ್ಷಕರಿಂದ ಸಾಧ್ಯವಾಗುತ್ತವೆ. ಆದ್ದರಿಂದ ಶಿಕ್ಷಕರು ಒಗ್ಗೂಡಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸಂಸ್ಕೃತಿ ಸಂಪನ್ನ ಮತ್ತು ಪ್ರಬಲ ರಾಷ್ಟ್ರ ಕಟ್ಟುವಲ್ಲಿ ಸಂಶಯವಿಲ್ಲ. ‘ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರು ವಿದ್ಯಾರ್ಥಿಗಳಿಗೆ ವಾತ್ಸಲ್ಯಪೂರ್ವಕ ಹಾಗೂ ದಕ್ಷತೆಯಿಂದ ವಿದ್ಯಾದಾನ ಮಾಡಬೇಕು.

ವಿದ್ಯಾರ್ಥಿಗಳು ಸಾಮರ್ಥ್ಯದಿಂದ ಗ್ರಹಿಸಬೇಕು.’ ಎಂದು ಕಠೋಪನಿಷತ್ತು ಹೇಳುತ್ತದೆ. ಶಿಕ್ಷಕರ ಜವಾಬ್ದಾರಿ ಎಷ್ಟು ದೊಡ್ಡದೋ ಅವರ ಸಮಸ್ಯೆಗಳೂ ಅಷ್ಟೇ ದೊಡ್ಡವು. ಶಿಲ್ಪಿಯೊಬ್ಬ ಕಲ್ಲನ್ನು ಕೆತ್ತಿ ಸುಂದರವಾದ ಮೂರ್ತಿ ತಯಾರು ಮಾಡುವುದಕ್ಕಿಂತ ಕಷ್ಟ ಸಾಧ್ಯವಾದ ಕೆಲಸ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವುದು. 

- Advertisement -

ಹೊಸ ರಕ್ತ ಹರಿಯುತ್ತಿರುವ ವಿದ್ಯಾರ್ಥಿ ಸಮೂಹವನ್ನು ಆಟ ಪಾಠಗಳ ಮೂಲಕ ಹತೋಟಿಯಲ್ಲಿಟ್ಟುಕೊಂಡು ಚಂಚಲ ಚಿತ್ತದ ವಿದ್ಯಾರ್ಥಿಯ ಬುದ್ಧಿಯನ್ನು ತಿದ್ದಿ ಅವನನ್ನು ಸತ್ಪ್ರಜೆಯಾಗಿಸುವುದು ಪ್ರಯಾಸದ ಕೆಲಸ. ಇಂಥ ಮಹಾ ಕಾರ್ಯವನ್ನು ಶಿಕ್ಷಕರು ಮಾತ್ರ ಮಾಡಬಲ್ಲರು.

‘ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಸಂಪೂರ್ಣ ಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣದ ಸಾರ ಸರ್ವಸ್ವ.’ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಬೇಕಾದದ್ದು ಶಿಕ್ಷಕರ ಪರಮ ಕರ್ತವ್ಯ. ಪ್ರತಿಭಾ ಶೋಧದಿಂದ ಮಾತ್ರ ಆರೋಗ್ಯ ಪೂರ್ಣ ಸಮಾಜಕ್ಕೆ ಅಗತ್ಯವಿರುವ ಎಲ್ಲ ತರಹದ  ವ್ಯಕ್ತಿಗಳನ್ನು ಶಿಕ್ಷಕ ಸಮಾಜಕ್ಕೆ ನೀಡಬಲ್ಲ.

‘ಶಾಲೆಯೊಂದು ದೇವಾಲಯ.’ ಅದರ ಪರಿಸರವು ಶಿಸ್ತಿನಿಂದ ಸ್ವಚ್ಛತೆಯಿಂದ ಕಂಗೊಳಿಸುತ್ತಿರಬೇಕು. ಎಂಬ ಅರಿವನ್ನು ಶಿಕ್ಷಕರು ಮಾತ್ರ ಚೆನ್ನಾಗಿ ಮೂಡಿಸಬಲ್ಲರು. ಕವಿ ರವೀಂದ್ರರು ಹೇಳಿರುವಂತೆ,’ ಒಂದು ಪ್ರಜ್ವಲಿಸುವ ದೀಪ ಮಾತ್ರ ಇನ್ನೊಂದು ದೀಪವನ್ನು ಬೆಳಗಿಸಬಲ್ಲುದು.’ ಎಂಬ ನುಡಿಮುತ್ತಿನಂತೆ ಶಿಕ್ಷಕ ಸದಾ ಪುಸ್ತಕ ಪ್ರೇಮಿಯಾಗಿ ಹೊರಗಿನ ಜಗತ್ತಿನ ಆಗು ಹೋಗುಗಳಿಗೆ ಮತ್ತು ಬದಲಾವಣೆಗಳ ಬಗ್ಗೆ ಗಮನ ಹರಿಸಿದಾಗ ಮಾತ್ರ ಸಾಧ್ಯ. 

- Advertisement -

ಹರ್ಯಾಣದ ಶಾಲಾ ಬಾಲಕಿಯರ ಮೇಲೆ ಶಿಕ್ಷಕರು ಅತ್ಯಾಚಾರ ನಡೆಸಿದ ಏಳು ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಶಾಲಾ ಬಾಲಕಿಯರಿಗೆ ಶಿಕ್ಷಕರು ಕಿರುಕುಳ ನೀಡುತ್ತಿರುವುದು ವರದಿಯಾಗುತ್ತಲೇ ಇವೆ. ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಶಿಕ್ಷಕ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡನು.

ಹೀಗೆ ಶಿಕ್ಷಕರು ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಕರು ಪಾಠ ಪ್ರವಚನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಸೋಮಾರಿಗಳಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಇದು ಶಿಕ್ಷಕ ಸಮುದಾಯ ತಲೆ ತಗ್ಗಿಸುವ ವಿಷಯ. ನಮ್ಮ ಶಿಕ್ಷಕ ಬಾಂಧವರು ಸೋಮಾರಿಗಳಾಗದೆ, ಕ್ರಿಯಾಶೀಲರಾಗಬೇಕಿದೆ. ವಿಷಯ ಲಂಪಟತೆಯನ್ನು ಬಿಟ್ಟು ವಿದ್ಯಾದಾನಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಬೇಕಿದೆ. 

ಶಿಕ್ಷಕನು ತಾನು ಮೊದಲು ಸರ್ವ ಗುಣ ಸಂಪನ್ನನಾದರೆ ಮಾತ್ರ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ದುಷ್ಟರ ಸಹವಾಸಕ್ಕೆ ಬೀಳದಂತೆ ಮನೋವಿಕಾರಗಳಲ್ಲಿ ಬಳಲದಂತೆ ಕಾಪಾಡಬಹುದು. ಅಲ್ಲದೇ ಸಾಮಾಜಿಕ ಮೌಲ್ಯಗಳಾದ ಪ್ರಾಮಾಣಿಕತೆ ದಯಾ ಪರತೆ ಸಹಕಾರ ಕರ್ತವ್ಯ ಸೌಜನ್ಯ, ಔದಾರ್ಯ, ಸಚ್ಚಾರಿತ್ರ್ಯ ನೈತಿಕತೆಗಳನ್ನು ನೆಲೆಗೊಳಿಸಬಹುದು. ಇಂಥ ಅಮೋಘ ಪ್ರಯತ್ನ ಮಾಡಿದ ಶಿಕ್ಷಕರು ರಾಷ್ಟ್ರ ನಿರ್ಮಾಪಕರೇ ಸರಿ.

ಸೀಮಿತ ಗ್ರಹಿಕೆಗಳ ಮೂಲಕ ಅರ್ಥವಾಗದಂಥ ವಿಷಯಗಳನ್ನು ಅರ್ಥ ಮಾಡಿಸುವ ಕಲೆ ಶಿಕ್ಷಕರಿಗೆ ಚೆನ್ನಾಗಿ ಗೊತ್ತು. ಜೀವ ಪರ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಜೀವ ತತ್ವಗಳನ್ನು ಜೀವನ ಸಂದೇಶಗಳನ್ನು ಮೈಗೂಡಿಸಿಕೊಳ್ಳಲು ಕಲಿಸುವ ಕಲಾವಿದ. ಬದುಕಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ಬಿಡಿಸಿ, ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಶಕ್ತಿ ಶಿಕ್ಷಕನಿಗಿದೆ. ಬರೀ ಶ್ವಾಸವಿರುವ ಮಕ್ಕಳಿಗೆ ಆತ್ಮ ವಿಶ್ವಾಸವನ್ನು ಮೂಡಿಸಿ ಗೆಲುವಿನ ಶಿಖರದ ತುತ್ತ ತುದಿ ಮುಟ್ಟುವಂತೆ  ಪ್ರೇರೇಪಿಸುವ ವಿಶಿಷ್ಟ ಚಾಣಾಕ್ಷತನ ಆತನಲ್ಲಿದೆ. ಜಗತ್ತಿನ ಜನರೆಲ್ಲ ಇಷ್ಟ ಪಡುವ ಮಾತಿನ ಸಿಹಿಯನ್ನು ಕರಗತ ಮಾಡಿಸುವ, ಕೃತಿಯ ಮಹತ್ವವನ್ನು ತಿಳಿಸುವ ಸಾಟಿಯಿಲ್ಲದ ಗುಣವಂತ. ಬದುಕಿನ ನಿಗೂಢತೆಯ ಪ್ರಶ್ನೆಗಳಿಗೆ ಉತ್ತರಗಳಿವೆ ಹುಡುಕಲು ಯತ್ನಿಸಿದರೆ ಖಂಡಿತ ಸಿಗುತ್ತವೆ ಎನ್ನುವ ಮನೋಬಲವನ್ನು ತುಂಬುವ ಮಹಾನ ತತ್ವಜ್ಞಾನಿ. 

ಮರೆತಿರುವ ಮೌಲ್ಯಗಳನ್ನು ಮರು ಸ್ಥಾಪಿಸಲು ಸದಾ ಹೋರಾಡುವ ಹೋರಾಟಗಾರ. ಅಸ್ತಿತ್ವದ ಮೂಲೋದ್ದೇಶಗಳ ಜೊತೆಗೆ ವಿಭಿನ್ನ ಪಾಠಗಳನ್ನು ಕಲಿತು ಮಹಾನತೆಯ ಬದುಕನ್ನು ನಡೆಸುವುದು ಜೀವನದ ಪರಮೋಚ್ಛ ಗುರಿ. ಈ ಗುರಿ ಸಾಧನೆಯ ದಾರಿ ಹಳ್ಳ ದಿಣ್ಣೆಗಳಿಂದ ಕೂಡಿದೆ. ಜಗವನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿದರೆ ಗುರಿಯ ಮಾರ್ಗ ನುಣುಪಾಗುತ್ತದೆ. ಕ್ಷಿಪ್ರವಾಗಿ ಗಮ್ಯ ಸ್ಥಾನಕ್ಕೆ ತಲುಪಿಸಬಲ್ಲದು ಎಂದು ಚೈತನ್ಯ ತುಂಬುವ ಧೀರ.

 ‘ಎಷ್ಟೇ ಅಮುಖ್ಯವಾದ ವಿಷಯವಿರಲಿ,ಅದನ್ನು ನೀವು ಮಖ್ಯವಾದುದು ಎಂದು ಭಾವಿಸುವ ವಿಷಯಕ್ಕೆ ಕೊಡುವಷ್ಟೇ ಕಾಳಜಿ ಮತ್ತು ಪ್ರಾಮುಖ್ಯತೆ ನೀಡಿ ಏಕೆಂದರೆ ನೀವು ಇಂಥ ಸಣ್ಣ ವಿಷಯಗಳಿಂದಲೇ ನಿರ್ಣಯಿಸಲ್ಪಡುತ್ತೀರಿ.’ ಎನ್ನುವ ಮಹಾತ್ಮಾ ಗಾಂಧೀಜಿಯವರ ನುಡಿಮುತ್ತನ್ನು ಬಾಳಲ್ಲಿ ತಾನು ರೂಢಿಸಿಕೊಂಡು ವಿದ್ಯಾರ್ಥಿಗಳ ಬದುಕಿಗೆ ರವಾನಿಸುವಾತ ಸುಂದರ ಜೀವನದ ನಿರ್ಮಾಣದಲ್ಲಿ ಸಕಾರಾತ್ಮಕ ಚಿಂತನೆಯ ಅಗತ್ಯತೆಯು ಒಂದು ಮಹತ್ವ ಪೂರ್ಣ ಅಂಶ ಎನ್ನುವುದರ ಮೇಲೆ ಬೆಳಕು ಚೆಲ್ಲಿ ನಮ್ಮ ಬಾಳನ್ನು ಬೆಳಗಿಸಬಲ್ಲಾತ.

ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಮಾಡುವುದರ ಜೊತೆ ಜೊತೆಗೆ ಅವರ ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯ ನೀಡುವುದು. ಸಂದರ್ಭೋಚಿತ ಸಲಹೆ ನೀಡುವುದು ಶಿಕ್ಷಕನ ಮುಖ್ಯ ಕರ್ತವ್ಯವಾಗಿದೆ. ನಮ್ಮಲ್ಲಿ ಬಹುತೇಕ ಮಾತಾಪಿತೃಗಳು ತಮ್ಮ ಮಕ್ಕಳನ್ನು ಶ್ರೇಷ್ಠ ವಿದ್ಯಾವಂತರನ್ನಾಗಿಸುವ ಹೊಣೆಯನ್ನು ಶಿಕ್ಷಕರಿಗೇ ಹೊರೆಸಿದ್ದಾರೆ.

ಇದನ್ನು ಮನಗಂಡು ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ‘ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಕುಂಭಕರ್ಣ ನಿದ್ರೆಯಿದೆ. ಆ ನಿದ್ರೆಯಿಂದ ಎದ್ದಾಗ ಪವಾಡಗಳು ಸಂಭವಿಸುತ್ತವೆ.” ಎನ್ನುವುದು ಫ್ರೆಡ್ರಿಕ್ ಫಾಸ್ಟ್ ನ ಮಾತು.ಎಷ್ಟೊಂದು ಸತ್ಯವಾದ ಮಾತಲ್ಲವೇ? ಕುಂಭಕರ್ಣ ನಿದ್ರೆಯಿಂದ ಎಬ್ಬಿಸುವ ಕಾರ್ಯ ಶಿಕ್ಷಕನದು. ಒಟ್ಟಿನಲ್ಲಿ ಜೀವನದ ಅತ್ಯುತ್ತಮ ತರಬೇತುದಾರ ಶಿಕ್ಷಕ. 

ರಾಷ್ಟ್ರವಿರುವುದು ಸರ್ಕಾರ ಆಳುವವರ ಕೈಯಲ್ಲೂ ಅಲ್ಲ. ಗಡಿ ಕಾಯುವ, ನಮ್ಮನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಸೈನಿಕರ ಕೈಯಲ್ಲೂ ಅಲ್ಲ. ಅದು ಶಿಕ್ಷಕರ ಕೈಯಲ್ಲಿದೆ. ಸಿ ಪಿ ಅಯ್ಯರ್ ಅವರು ಹೇಳಿರುವಂತೆ ’ ಶಿಕ್ಷಣಕ್ಕಿಂತ ಶಿಕ್ಷಕನಿಗೆ ಹೆಚ್ಚಿಗೆ ಮಹತ್ವವಿದೆ. ಹೊಣೆಗಾರಿಕೆಯಿದೆ.’ ಸಂದಿಗ್ಧ ಸ್ಥಿತಿಯಲ್ಲಿ ಬದುಕನ್ನು ನಿಭಾಯಿಸುವುದು ಹೇಗೆ? ಎಂದು ಹೇಳುವ ಮಹತ್ವದ ಹೊಣೆಯೂ ಶಿಕ್ಷಕನ ಕರ್ತವ್ಯದ ಭಾಗವಾಗಿದೆ. ‘ನೀವು ಇಲ್ಲಿ ಕೇವಲ ಬದುಕು ಸಾಗಿಸಲು ಬಂದಿಲ್ಲ. ಇಡೀ ಜಗತ್ತು ಇನ್ನಷ್ಟು ಧಾರಾಳವಾಗಿ, ಮಹಾನ್ ದೂರದರ್ಶಿತ್ವದಿಂದ ಭರವಸೆ ಮತ್ತು ಸಾಧನೆಗಳ ಉತ್ಸುಕತೆಯಿಂದ ಬದುಕಲು ಸಾಧ್ಯವಾಗಿಸಲು ಬಂದಿದ್ದೀರಿ. ನೀವು ಜಗತ್ತನ್ನು ಸಮೃದ್ಧಗೊಳಿಸಲು ಇಲ್ಲಿ ಬಂದಿದ್ದೀರಿ. ಈ ಕೆಲಸವನ್ನು ಮರೆತಲ್ಲಿ ನೀವು ನಷ್ಟಕ್ಕೀಡಾಗುತ್ತೀರಿ.’ ಎಂಬ ವುಡ್ರೋ ವಿಲ್ಸನ್ ಮಾತುಗಳು ಶಿಕ್ಷಕರ ಬದುಕಿಗೆ ಹೆಚ್ಚು ಸಮಂಜಸವೆನಿಸುತ್ತವೆ ಅಲ್ಲವೇ?  

ವಿದ್ಯಾಥಿಗಳಲ್ಲಿ ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿ ಪ್ರಬಲ ರಾಷ್ಟ್ರ ಪ್ರಜ್ಞೆ ಜಾಗೃತಗೊಳಿಸಿ ಉತ್ತಮ ದೇಶ ಭಕ್ತರನ್ನು ಬೆಳೆಸುವವರು ಶಿಕ್ಷಕರು. ಆದ್ದರಿಂದ ಶಿಕ್ಷಕರು ಮಾತ್ರ ಸಮಸ್ತ ರಾಷ್ಟ್ರವನ್ನು ಸರ್ವ ವಿಧದಿಂದಲೂ ಸದೃಢಗೊಳಿಸಿ ಸರ್ವಾಂಗೀಣ ಸುಂದರ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗಬಲ್ಲರು.


ಜಯಶ್ರೀ. ಜೆ. ಅಬ್ಬಿಗೇರಿ

- Advertisement -

1 COMMENT

Comments are closed.

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group