೧
ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು
ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು
ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ
ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು
ಮನದಾಳದ ಭಾವದೋಕುಳಿಗೆ ಕಾವ್ಯ ಕನ್ನಿಕೆಯು ಮೂಡಿಹಳೇ
ಕಣಕಣದಲೂ ಒಲುಮೆಯಂದದಿ ಮೈಮರೆಯುತ ಸೆಳೆವೆಯಾ ನೀನು
ಆಗಸದೆತ್ತರಕೂ ಅಂಬುಧಿಯ ತೆರೆಗಳು ಚುಮ್ಮಿ ಮುಗಿಲನು ಚುಂಬಿಸುತಿವೆಯೇ
ಅರಸನಾದರೂ ಅರಿಷಡ್ವರ್ಗಗಳು ಹೃದಯದಿ ಒಲವ ಬಳ್ಳಿ ಬೆಳೆವೆಯಾ ನೀನು
ಅಂಧಕಾರದ ತಮವದು ಬಾಳ ಬದುಕಲಿ ಕಂಗೆಡಿಸಿ ಕಾಡುತಿದೆ
ಮಂದವಾದರೂ ಮಣ್ಣಿನ ಹಣತೆಯ ದೀಪ ಬೆಳಗಿ ಸಂತಸವ ತರುವೆಯಾ ನೀನು
ಗಝಲ್ – ೨
ಹೃದಯಗಳ ಬೆಸುಗೆಗೆ ಮಿಡಿದು ಮನಸೋತು ಬಳಿ ಕರೆಯುತಿದೆ ಒಲವೇ
ಕದಗಳ ತೆರೆದು ಚೆಲುವ ಸುರಿಸಿ ಕಣ್ಗಳಂಗಳದಿ ಸಂತಸ ಹರಿಸುತಿದೆ ಒಲವೇ
ಹರುಷ ತರುತ ಬಾಳ ಪಯಣದಿ ಜೊತೆಯಾಗಿ ಸುಖಿಸುತ ನಡೆಯುವಾ
ಪುರುಷ ಪ್ರಕೃತಿಯು ಮಿಲನಕ್ಕಾಗಿ ಕಾದು ಪ್ರೀತಿಯ ಮಳೆ ಹನಿಸುತಿದೆ ಒಲವೇ
ಒಲವ ಬಳ್ಳಿಯು ಸೊಗಸಿನಂದದಿ ಸುಳಿದು ಪ್ರೇಮ ಪಲ್ಲವಿಗೆ ಮುನ್ನುಡಿಯಿತ್ತಿದೆ
ಕಲೆವ ಕಲೆಗಾರ್ತಿಯ ಸಂಚಲಿ ಮಿಂಚನೊಂದು ಮಿಂಚಿ ಸವಿಸುತಿದೆ ಒಲವೇ
ಅವಿಶ್ವಾಸ ತೋರದೇ ಎದೆಯಲ್ಲಿ ಇರಲಿ ಸಂವೇದನೆಯ ಋತುಗಾನ
ವಿಶ್ವಾಸದ ಸೇತುವೆಯು ಅಪನಂಬಿಕೆ ಸರಿಸಿ ಸರಿಗಮದಿ ಧನಿಸುತಿದೆ ಒಲವೇ
ಬಡತನ ಸರಿತನ ಏನೇ ಬಂದರೂ ಭಾವಲೋಕವು ನಮ್ಮೀ ನಡುವೆ ಇರಲಿ ಅನವರತ
ಬದುಕೆಂಬ ಕಡಲಿಗೆ ಸೂರ್ಯನ ದೀಪ ಬೆಳಗುತ ಶೃಂಗಾರ ಕಾವ್ಯ ಬರೆಯುತಿರಲಿ ಒಲವೇ
ಗಜಲ್ – ೩
ಜ್ಞಾನ ಪಥದಿ ನಡೆಸುತ ಬಾಳಲಿ ಸನ್ಮಾರ್ಗವ ತೋರುವೆಯಾ ದೇವಿ
ಅಜ್ಞಾನದ ಅಂಧಕಾರವ ಸರಿಸಿ ಬದುಕಲ್ಲಿಬೆಳಕು ಮೂಡಲೆಂದು ಕೋರುವೆಯಾ ದೇವಿ
ಎದೆಯ ಪುಟದಲಿ ಸರಸ್ವತಿ ನಲಿಯಲಿ ನವಪರ್ವದ ಸಮಯದಲಿ
ಕದವ ತೆರೆದು ಅಕ್ಷರದ ಮಾಲೆಗಳನು ಮೂಡಿಸಿ ಸೆಳೆವೆಯಾ ದೇವಿ
ನಾಲಿಗೆಯಿಂದ ಶುದ್ಧ ಭಾವ ಹೊರಹೊಮ್ಮಿ ಸಂಬಂಧಗಳು ನಳನಳಿಸಲಿ
ಹೋಳಿಗೆಯಂತೆ ಸಿಹಿ ಬಂಧುರವ ಹೆಣೆದು ಬೆಳೆವೆಯಾ ದೇವಿ
ವೀಣಾ ಪಾಣಿಯ ಕರಪಿಡಿದು ನಡೆಯುತ ಬರುತಿರುವೆನು
ಶುಭ್ರ ವಸ್ತ್ರಧಾರಿಯಾಗಿ ಅಗಣಿತ ಗಣಗಳಲೂ ನಕ್ಷತ್ರದಂತೆ ಹೊಳೆವೆಯಾ ದೇವಿ
ಹಚ್ಚಿಟ್ಟ ಕುಡಿದೀಪವು ಮುಖಕಮಲಗಳಲಿ ಪ್ರಜ್ವಲಿಸಿ ಮಿನುಗುತಿದೆ
ಪಚ್ಚೆ ಮುತ್ತುಗಳಿಂದ ಅಲಂಕೃತ ಳಿಗೆ ಕೈ ಮುಗಿದು ಮೊರೆವೆ ಬರುವೆಯಾ ದೇವಿ
ದೀಪಿಕಾ ಚಾಟೆ, ಬೆಳಗಾವಿ