ಗಣಪತಿ ಹೋಮ ಜೊತೆಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ದೇಶದ ಅಖಂಡತ್ವ, ಸಾರ್ವಭೌಮತ್ವಕ್ಕಾಗಿ ಪವಿತ್ರ ಹೋಮ ಹವನ, ಗಣಪತಿ ಪೂಜೆ ನೆರವೇರಿಸುವ ಮೂಲಕ ದೇಶದ ನೂತನ ಸಂಸತ್ ಭವನ ( ಸೆಂಟ್ರಲ್ ವಿಸ್ತಾ )ವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಪ್ರಧಾನಿಯವರ ಜೊತೆಗೆ ಲೋಕಸಭಾದ ಸ್ಪೀಕರ್ ಓಂ ಬಿರ್ಲಾ ಕೂಡ ಪೂಜೆ ನೆರವೇರಿಸಿದರು.
ಈ ಮುಂಚೆ ಭವನದ ಮುಂದಿನ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ಹೂವನ್ನು ಅರ್ಪಿಸಿದ ಪ್ರಧಾನಿ ಮೋದಿ ಹಾಗೂ ಓಂ ಬಿರ್ಲಾ ಅವರು ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಲಾಗಿದ್ದ ಹೋಮ ಕುಂಡಕ್ಕೆ ಪುರೋಹಿತರ ಸಕಲ ಮಂತ್ರ ಘೋಷಗಳ ನಡುವೆ ವಿಘ್ನ ನಿವಾರಕ ಗಣಪತಿ ಪೂಜೆ ನೆರವೇರಿಸಿ ಹವಿಸ್ಸು ಅರ್ಪಿಸಿದರು.
ಸುಮಾರು ೮೬೨ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನವನ್ನು ಮುಂಬರುವ ದಿನಗಳಲ್ಲಿ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಳದ ಕಾರಣದಿಂದ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗಿದೆ.
೨೦೧೨ ರಲ್ಲಿ ಅಂದಿನ ಲೋಕಸಭಾ ಸ್ಪೀಕರ್ ಮೀರಾ ನಾಯರ್ ಅವರಿಂದ ತಾತ್ವಿಕ ಒಪ್ಪಿಗೆ ಪಡೆಯಲಾಗಿದ್ದ ಈ ಕಟ್ಟಡದ ಕಾಮಗಾರಿ ಆರಂಭವಾಗಿದ್ದು ಮೋದಿಯವರು ಪ್ರಧಾನಿಯಾದ ನಂತರ.
ಪೂಜೆ ನೆರವೇರಿಸಿದ ನಂತರ ರಾಜದಂಡ ಎನಿಸಿಕೊಂಡಿರುವ ಸೆಂಗೋಲ್ ಗೆ ದೀರ್ಘ ದಂಡ ನಮಸ್ಕಾರ ಮಾಡಿದ ಪ್ರಧಾನಿಯವರಿಗೆ ಪಂಚ ಮಹಾಪೀಠಗಳ ಶ್ರೀಗಳು ರಾಜದಂಡವನ್ನು ಸಕಲ ವಾದ್ಯಮೇಳಗಳ ಸದ್ದಿನ ನಡುವೆ ನೀಡಿ ಹರಸಿದರು. ಸೆಂಗೋಲ್ ಪಡೆದ ನಂತರ ಮೋದಿಯವರು ಅಲ್ಲಿ ಉಪಸ್ಥಿತರಿದ್ದ ಅನೇಕ ಪುರೋಹಿತರಿಗೆ ಸಾಲಾಗಿ ನಮಸ್ಕರಿಸಿ ಆಶೀರ್ವಾದ ಪಡೆದರು. ರಾಜದಂಡವನ್ನು ಕೈಯಲ್ಲಿ ಹಿಡಿದು ಸಂಸತ್ ಭವನಕ್ಕೆ ನಮಸ್ಕರಿಸಿದ ಮೋದಿಯವರು ದೇಶದ ರಾಜತಂತ್ರಕ್ಕೆ, ಸಕಲ ದೇವರುಗಳಿಗೆ ಕಣ್ಣುಮುಚ್ಚಿ ನಮಸ್ಕರಿಸಿದರು. ಹಿಂದಿನ ಕಾಲದ ರಾಜರಂತೆ ರಾಜ್ಯಾಧಿಕಾರವನ್ನು ಹಸ್ತಾಂತರಿಸುವ ಕಾರ್ಯಕ್ರಮದಂತೆ ಈ ಕಾರ್ಯಕ್ರಮವು ರಾಜಪ್ರಭುತ್ವವನ್ನು ನೆನಪಿಸುವಂತೆ ಇತ್ತು.
ಎಲ್ಲಾ ಶ್ರೀಗಳ ಮಾರ್ಗದರ್ಶನದಲ್ಲಿ ರಾಜದಂಡ ಹಿಡಿದು ಸಂಸತ್ತಿನ ಸೆಂಟ್ರಲ್ ಹಾಲ್ ಪ್ರವೇಶಿಸಿ ರಾಜದಂಡವನ್ನು ಸ್ಪೀಕರ್ ಬಿರ್ಲಾ ಅವರೊಂದಿಗೆ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ದೀಪ ಬೆಳಗಿಸಿದರು.
ನಂತರ ಭವನದ ನಿರ್ಮಾಣಕ್ಕೆ, ಅಲ್ಲಿ ನಡೆಯುವ ಯಾವುದೇ ದುರಸ್ತಿ ಕಾರ್ಯಗಳಿಗೆ ನಿಯಮಿಸಲಾದ ಸಿಬ್ಬಂದಿ ವರ್ಗಕ್ಕೆ ನರೇಂದ್ರ ಮೋದಿ ಸತ್ಕಾರ ಮಾಡಿದರು.
ನಮೋ ಪರ್ವತಿ ಪತೇ ಹರ ಹರ ಮಹಾದೇವ ಎಂಬ ಘೋಷಣೆಯೊಂದಿಗೆ, ವಂದೇ ಮಾತರಂ ಎಂಬ ವಾದ್ಯ ಘೋಷದೊಂದಿಗೆ ಬೃಹತ್ ಸಂಸತ್ ಭವನ ರಾಷ್ಟ್ರಕ್ಕೆ ಸಮರ್ಪಿತಗೊಂಡಿತು. ಈ ಎಲ್ಲ ಸಂಪ್ರದಾಯಗಳೊಂದಿಗೆ ಸಮಾರಂಭದಲ್ಲಿ ಸರ್ವ ಧರ್ಮಗಳ ಮುಖಂಡರಿಂದ ದೇಶದ ಅಖಂಡತೆಗೆ, ಸಾರ್ವಭೌಮತ್ವಕ್ಕಾಗಿ ಪ್ರಾರ್ಥನೆ ನೆರವೇರಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಸರ್ಕಾರದ ಎಲ್ಲ ಸಚಿವರು, ಕಚೇರಿಯ ಎಲ್ಲ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಪ್ಪುಚುಕ್ಕೆ: ದೇಶದ ಪ್ರತಿಷ್ಠೆ ಹೆಚ್ಚಿಸುವ ಈ ಸಮಾರಂಭಕ್ಕೆ ಪ್ರಮುಖ ಪಕ್ಷಗಳ ನಾಯಕರು ಗೈರು ಹಾಜರಾಗಿದ್ದು ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು.
ಮೊದಲಿನಿಂದಲೂ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಹೆಜ್ಜೆ ಹೆಜ್ಜೆಗೂ ಅಡೆತಡೆ ತರುತ್ತಿದ್ದ ವಿರೋಧ ಪಕ್ಷಗಳಿಗೆ ಸುಪ್ರೀಮ್ ಕೋರ್ಟು ತಪರಾಕಿ ಹಾಕಿದ್ದು ಅವುಗಳ ಎಲ್ಲ ಪ್ರಯತ್ನಗಳಿಗೆ ಹಿನ್ನಡೆಯುಂಟಾಗಿ ಭವನವು ಭವ್ಯವಾಗಿ ತಲೆಯೆತ್ತಿ ನಿಂತಿತು.