spot_img
spot_img

ನಗುಮೊಗದ ಸರದಾರ ಕಾಶಪ್ಪನವರ

Must Read

spot_img
- Advertisement -

ನಮ್ಮ ಜೀವನದಲ್ಲಿ ಯಾವುದೇ ಸೇವೆಯಲ್ಲಿರಲಿ ೬೦ ವರ್ಷಕ್ಕೆ ನಿವೃತ್ತಿ ಎಂಬುದು ನಮ್ಮೊಡನೆ ಬರುವ ಯೋಗ. ಸೇವೆ ಯಾವಾಗ ಸೇರುತ್ತೇವೆ ಎಂಬುದು ಮಹತ್ವ ಪಡೆಯುವುದಿಲ್ಲ. ಸೇವೆಯನ್ನು ಯಾವ ರೀತಿಯಲ್ಲಿ ನಿವೃತ್ತಿ ಹೊಂದುತ್ತೇವೆ ಎಂಬುದು ಮಹತ್ವದ್ದು. ನಮ್ಮ ಸೇವೆ ಅಜರಾಮರವಾಗಿರುವಂತೆ ನಾವು ಸೇವಾವೃತ್ತಿಯನ್ನು ಕೈಗೊಂಡಿದ್ದಾದರೆ ಸಮಾಜ ನಮ್ಮನ್ನು ಗೌರವಪೂರ್ವಕವಾಗಿ ಬೀಳ್ಕೊಡುತ್ತದೆ.ಅಂತಹ ಸ್ಮರಣೀಯ ಸೇವೆಯನ್ನು ಮಾಡಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವವರು ನಮ್ಮ ಈ ಕಾಶಪ್ಪನವರ ಅವರು.

ತಲ್ಲೂರಿನ ಪ್ರತಿಭೆ:

ಕಾಶಪ್ಪನವರ ಅವರು ಮೂಲತಃ ಸವದತ್ತಿ ತಾಲೂಕಿನ ತಲ್ಲೂರಿನವರು ಸದ್ಯ ಇದು ಯರಗಟ್ಟಿ ತಾಲೂಕಿಗೆ ಸೇರಿದ ಹಳ್ಳಿ. ಈ ಊರು ಸ್ವಾತಂತ್ರ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಧೀಮಂತ ನಾಯಕ ತಲ್ಲೂರು ರಾಯನಗೌಡರು ಜನಿಸಿದ ಭೂಮಿ. ರಾಯನಗೌಡರ ಗರಡಿಯಲ್ಲಿ ಬೆಳೆದ ಶಿವಲಿಂಗಪ್ಪ ಮತ್ತು ಗೌರಮ್ಮನವರ ಸುಪುತ್ರ ಕಾಶಪ್ಪನವರ ನಿಂಗಪ್ಪನವರು. ತಲ್ಲೂರಿನಲ್ಲಿ ಸರದಾರ ಮನೆತನ ಬಹಳ ಪ್ರಸಿದ್ದವಾದುದು.

ಆ ಮನೆತನದ ಕುಡಿಗಳು ಇಂದು ನಾಡಿನುದ್ದಕ್ಕೂ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವರು. ಇಂತಹ ಸರದಾರ ಮನೆತನದಲ್ಲಿ ಶಿವಲಿಂಗಪ್ಪ ಮತ್ತು ಗೌರಮ್ಮ ಶರಣ ದಂಪತಿಗಳ ೪ ಮಕ್ಕಳಲ್ಲಿ ಎರಡನೆಯವರಾಗಿ ೧-೬-೧೯೬೩ ರಲ್ಲಿ ಜನ್ಮ ತಳೆದವರು. ನಿಂಗಪ್ಪ ಕಾಶಪ್ಪನವರ ಅವರು. ಯಾರಾದರೂ ತಲ್ಲೂರ ಊರಿನಲ್ಲಿ ಶಿವಲಿಂಗಪ್ಪನವರ ಮಗ ನಿಂಗಪ್ಪ ಅಂದರೆ ಬೇಗನೇ ಗುರುತಿಸಲಾರರು. ಬಾಬು ಅವರ ಮಗ ಎಂದರೆ ಇವರ ಮನೆತನವನ್ನು ಗುರುತಿಸುವರು. ಇವರ ತಂದೆ ಬಾಬಣ್ಣ ಎಂದೇ ಚಿರಪರಿಚಿತರು.

- Advertisement -

ನಿಂಗಪ್ಪನವರ ಪ್ರಾಥಮಿಕ ಶಿಕ್ಷಣ ತಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ನಂತರ ಇಂಚಲ ಮಠದ ಶಾಲೆಯಲ್ಲಿ ಪ್ರೌಢಶಾಲಾ ವ್ಯಾಸಂಗ ಪೂರೈಸಿದರು.ಪಿ.ಯು.ಸಿ ಮತ್ತು ಪದವಿ ಶಿಕ್ಷಣಕ್ಕಾಗಿ ಇವರು ತೆರಳಿದ್ದು ಜಮಖಂಡಿಯಲ್ಲಿ ಬಿ.ಕಾಂ ಎರಡನೇ ವರ್ಷದವರೆಗೆ ವ್ಯಾಸಂಗಗೈದರು ನಂತರ ಧಾರವಾಡದ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ತಮ್ಮ ಬಿ.ಕಾಂ ಅಂತಿಮ ವರ್ಷ ಪದವಿ ಮುಗಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವೃತ್ತಿ ಬದುಕು:

ಬಿ.ಕಾಂ ಪದವಿ ಮುಗಿಸಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆರಳಚ್ಚುಗಾರನಾಗಿ ೧೯೮೬ ಜನೇವರಿ ೧ ರಂದು ಸೇವೆಗೆ ಸೇರಿದರು. ಅಲ್ಲಿಂದ ೩೧-೫-೨೦೨೩ ಅಂದರೆ ಇಂದಿನವರೆಗೆ ವಿವಿಧ ಹುದ್ದೆಗಳಲ್ಲಿ ಬಡ್ತಿ ಹೊಂದುತ್ತ ಸದ್ಯ ಅಧೀಕ್ಷಕ ಹುದ್ದೆಯಲ್ಲಿ ನಿವೃತ್ತಿ ಹೊಂದುತ್ತಿರುವರು.

- Advertisement -

ಸಹೃದಯ ವ್ಯಕ್ತಿ:

ನಮ್ಮ ಭಾಗದ ಯಾರೇ ವಿದ್ಯಾವರ್ಧಕ ಸಂಘಕ್ಕೆ ಬರಲಿ ಅವರನ್ನು ತಮ್ಮ ಮನೆಯ ಸದಸ್ಯನಂತೆ ಮಾತನಾಡಿಸುವ ಹಸನ್ಮುಖಿಗಳು ಕಾಶಪ್ಪನವರ ಅವರು. ಸದಾ ತಾಳ್ಮೆಯಿಂದ ಎಲ್ಲರಿಗೂ ಒಳಿತನ್ನೇ ಬಯಸುವ ಇವರ ಸಹೃದಯತೆ ನಿಜಕ್ಕೂ ಅಭಿನಂದನಾರ್ಹ.ಅಷ್ಟೇ ಅಲ್ಲ ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯತ್ವ ಹೊಂದಿರುವಿರಾ.? ಎಂದು ಪ್ರಶ್ನಿಸಿ ಇಲ್ಲವೆಂದರೆ ಸದಸ್ಯತ್ವ ನಮೂನೆಯನ್ನು ಕೊಟ್ಟು ಅದನ್ನು ಭರ್ತಿ ಮಾಡಿಸಿ ಸದಸ್ಯತ್ವವನ್ನು ಕೂಡ ಮಾಡಿಸಿ ಕರ್ನಾಟಕ ವಿದ್ಯಾವರ್ಧಕದ ನಂಟನ್ನು ಕೂಡ ಬೆಳೆಸುವ ಇವರ ಮನೋಭಾವ ನಮ್ಮಂತವರಿಗೆ ಮಾದರಿ.

ಸರದಾರ ಅವರು ಕಾಶಪ್ಪನವರ ಆದ ಬಗೆ:

ನನಗೂ ಕಾಶಪ್ಪನವರ ಅವರ ನಂಟು ಬೆಳೆದದ್ದು ೧೯೯೩ ರ ಅವಧಿಯಲ್ಲಿ ನಾನು ನನ್ನ ಪದವಿ ವ್ಯಾಸಂಗ ಮಾಡಿದ್ದು ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಪ್ರತಿದಿನ ನಾನು ವಿದ್ಯಾವರ್ಧಕ ಸಂಘದ ಸಾಹಿತ್ಯಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆನು. ಶಂಕರ ಹಲಗತ್ತಿಯವರ ನಂಟು ನನಗೆ ಇಲ್ಲಿನ ಚಟುವಟಿಕೆಗಳಿಗೆ ಪಾಲ್ಗೊಳ್ಳಲು ಅವಕಾಶ ದೊರಕಿಸಿತ್ತು.ಆಗ ಪರಿಚಿತರಾದ ಕಾಶಪ್ಪನವರ ಅವರು ನಾನು ಮುನವಳ್ಳಿಯವನು ಅಂದಾಗ ತಲ್ಲೂರಿನವರು ತಾವು ಎಂದು ನನಗೆ ತಮ್ಮ ಪರಿಚಯ ಹೇಳಿದರು. ನಮ್ಮ ಮಾವನವರಾದ ದಿವಂಗತ ಬಸಲಿಂಗಪ್ಪ ಗಾಣಿಗೇರ(ಗೀಗೀ ಪದ ಹಾಡುಗಾರ) ಹಾಗೂ ಕಲ್ಲಪ್ಪ ಗಾಣಿಗೇರ (ರಾಜಕಾರಣಿ) ಇವರ ಬಗ್ಗೆ ಹೇಳಿದಾಗ ನಮ್ಮ ಕುಟುಂಬದ ನಂಟು ಇವರಿಗೆ ಇದ್ದದ್ದು ಗೊತ್ತಾಯಿತು. ನನಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯತ್ವವನ್ನು ಕೂಡ ಮಾಡಿಸಿದರು.

ನಾನು ಸರದಾರ ಅನ್ನುವ ಹೆಸರು ಕಾಶಪ್ಪನವರ ಬಂದ ಬಗೆಯನ್ನು ಇವರಲ್ಲಿ ಕೇಳಿದಾಗ ಒಂದು ಸ್ವಾರಸ್ಯಕರ ಸಂಗತಿಯನ್ನು ನನಗೆ ತಿಳಿಸಿದರು. ಇವರ ಅಜ್ಜನ ಹೆಸರು ಕಾಶಪ್ಪ. ಆತ ತಲ್ಲೂರ ದೇಸಾಯಿ ವಾಡೆಯಲ್ಲಿ ದೇವರ ಪೂಜೆಗೈಯುವ ಅರ್ಚಕ. ಅವರು ಊರಲ್ಲಿ ಹೊರಟರೆ ಸಾಕು ಕಾಶಪ್ಪನವರ ಬಂದರು ಎಂದು ಗ್ರಾಮೀಣ ಜನ ಗೌರವ ಸೂಚಕವಾಗಿ ಕರೆಯುತ್ತಿದ್ದರಂತೆ. ಹೀಗಾಗಿ ಇವರ ಕುಟುಂಬದ ಹೆಸರುಗಳು ಸರದಾರ ಉರ್ಫ ಕಾಶಪ್ಪನವರ ಎಂದುಕೊಂಡು ಕಾಗದ ಪತ್ರಗಳಲ್ಲಿ ನಮೂದಾಗಿದೆ ಎಂದು ಹೇಳುವರು.

ದೇವರ ಅರ್ಚನೆಯ ವ್ಯಕ್ತಿಯನ್ನು ನೇರವಾಗಿ ಹೆಸರಿನಿಂದ ಕರೆಯದೇ ಗೌರವಪೂರ್ವಕವಾಗಿ ಕರೆಯುವ ವಾಡಿಕೆ ಗ್ರಾಮೀಣ ಪ್ರದೇಶದಲ್ಲಿ ಅಂದು ಇದ್ದಿರುವುದು ಕಾಶಪ್ಪನವರ ಎಂದಾಗಿರುವ ಕಾರಣವನ್ನು ತಿಳಿಸಿದಾಗ ಇಂದಿಗೂ ಸರದಾರ ಮತ್ತು ಕಾಶಪ್ಪನವರ ಎಂಬ ಹೆಸರಿನಿಂದ ಈ ಕುಟುಂಬ ಗುರುತಿಸಲ್ಪಟ್ಟಿದ್ದು ಹೆಮ್ಮೆಯ ಸಂಗತಿ

ನನ್ನ ಸಂಶೋಧನೆಯ ವಿಷಯ ಸೂಚಕರು:

ನಾನು ಪದವಿ ಪೂರೈಸಿ ಶಿಕ್ಷಕ ವೃತ್ತಿ ಸೇರಿದ ನಂತರ ಧಾರವಾಡಕ್ಕೆ ಹೋಗುವುದು ಕೇವಲ ರಜೆಯ ಸಂದರ್ಭದಲ್ಲಿ. ನನ್ನ ಬರಹಗಳನ್ನು ಗಮನಿಸುತ್ತಿದ್ದ ಕಾಶಪ್ಪನವರ ಅವರು ನೀವೇಕೆ ಪಿ.ಎಚ್.ಡಿ ಮಾಡಬಾರದು.? ಎಂದು ಪ್ರಶ್ನಿಸಿದರು. ಆ ಯೋಗ ನಮ್ಮಂತವರಿಗೆ ಇರಲಿಕ್ಕಿಲ್ಲ ಬಿಡ್ರೀ ಎಂದಷ್ಟೇ ಅವರಿಗೆ ಹೇಳುತ್ತಿದ್ದೆ. ಆಗವರು ನೀವು ಪಿ.ಎಚ್.ಡಿ. ಮಾಡುವುದಾದರೆ ನಮ್ಮ ತಲ್ಲೂರ ರಾಯನಗೌಡರ ಬಗ್ಗೆ ಮಾಡಿರಿ ಎನ್ನುತ್ತಿದ್ದರು.

ಈ ವಿಷಯದ ಬಗ್ಗೆ ನಾನು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ನನಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಸೀಟು ಸಿಕ್ಕಾಗ ನನ್ನ ವೃತ್ತಿ ಬಾಂಧವ ಡಾ.ಬಿ.ಐ.ಚಿನಗುಡಿ ನನಗೆ ಸೂಚಿಸಿದ ಹೆಸರು ತಲ್ಲೂರ ರಾಯನಗೌಡರ ಅವರದು. ಸಹೋದರಿ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಅವರ ಮನಸ್ಸಿನಲ್ಲಿ ಇದೇ ವಿಷಯ “ನೀವು ಈ ವಿಷಯದಲ್ಲಿ ಪಿ.ಎಚ್.ಡಿ ಮಾಡೇ ಮಾಡ್ತೀರಿ ಎಂದಾಗ ನನಗೆ ನೆನಪಾಗಿದ್ದು ಕಾಶಪ್ಪನವರ ಅವರ ಹೆಸರು.

ನೇರವಾಗಿ ಧಾರವಾಡಕ್ಕೆ ಬಂದೆನು.ಅಲ್ಲಿ ವಿದ್ಯಾವರ್ಧಕ ಸಂಘದಲ್ಲಿ ತಲ್ಲೂರ ರಾಯನಗೌಡರ ಕುರಿತಾದ ಪುಟ್ಟ ಪುಸ್ತಕವನ್ನು ನನಗೆ ಝರಾಕ್ಸ ಮಾಡಿಸಿ ಕೊಟ್ಟು ತಲ್ಲೂರಿನಲ್ಲಿರುವ ಶಂಕರಗೌಡ ಪಾಟೀಲ(ರಾಯನಗೌಡರ ಅಳಿಯ) ಅವರ ಪೋನ್ ನಂಬರ ಕೊಟ್ಟು ತಲ್ಲೂರಿಗೆ ಹೋಗಲು ಹೇಳಿದರು. ನಂತರ ಬೆಂಗಳೂರಿನಲ್ಲಿರುವ ರಾಯನಗೌಡರ ಮಗಳಾದ ದೇವಿಕಾರಾಣಿಯವರ ನಂಬರ್ ಕೊಟ್ಟು ಬೆಂಗಳೂರಿಗೆ ಹೋಗಿ ಬರುವಂತೆ ತಿಳಿಸಿ ನನ್ನ ಪಿ.ಎಚ್.ಡಿ ಸಂಶೋಧನಾ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ್ದು ಹಿರಿಯ ಅಣ್ಣನಂತಿರುವ ಕಾಶಪ್ಪನವರ ಅವರು. ಧಾರವಾಡದಲ್ಲಿ ತಲ್ಲೂರ ರಾಯನಗೌಡರನ್ನು ಹತ್ತಿರದಿಂದ ನೋಡಿದ ಅನೇಕ ಮಹನೀಯರನ್ನು ವಿದ್ಯಾವರ್ಧಕ ಸಂಘಕ್ಕೆ ಬರುವಂತೆ ತಿಳಿಸಿ ಅವರಿಗೆ ನನ್ನನ್ನು ಪರಿಚಯಿಸಿ ರಾಯನಗೌಡರ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ನನಗೆ ತಿಳಿಯಲು ಪ್ರೋತ್ಸಾಹಿಸಿದವರು.ಕಾಶಪ್ಪನವರ ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಇವರು ರಾತ್ರಿ ೯ ರವರೆಗೂ ಪ್ರತಿದಿನ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುವುದನ್ನು ಕಂಡಾಗ ಅಚ್ಚರಿ ಎನಿಸುತ್ತದೆ.ನಾವು ನಮ್ಮ ಇಲಾಖೆಯ ಸಮಯ ೫ ಗಂಟೆ ಆದರೆ ಸಾಕು ಮನೆಗೆ ಹೊರಡಲು ಅನುವಾಗುತ್ತೇವೆ ಆದರೆ ಕಾಶಪ್ಪನವರ ಹಾಗಲ್ಲ ವಿದ್ಯಾವರ್ಧಕ ಸಂಘದಲ್ಲಿ ಜರಗುವ ಪ್ರತಿನಿತ್ಯದ ಕಾರ್ಯಕ್ರಮಗಳು ಕೊನೆಗೊಂಡ ನಂತರ ಅಲ್ಲಿ ಎಲ್ಲರೂ ಹೊರಹೋಗುವ ಸಮಯದ ನಂತರ ಇವರು ಮನೆಯ ಕಡೆಗೆ ಹೊರಡುವ ಇವರ ಕಾರ್ಯಚಟುವಟಿಕೆ ನಿಜಕ್ಕೂ ಮಾದರಿಯಾದುದು;

ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ದಾಖಲೀಕರಣದ ಪಾತ್ರಧಾರಿ:

ಸಂಘದ ಯಾವುದೇ ಕಾರ್ಯಕ್ರಮ ರೂಪಿಸುವಾಗ ಅತಿಥಿಗಳನ್ನೋ ವಿಷಯ ಪರಿಣತರನ್ನೋ ಗುರುತಿಸಿ ಅವರ ಸಂಪರ್ಕಕ್ಕೆ ಯೋಜಿಸಿ ಅವರನ್ನು ಸಂಪರ್ಕಿಸಿ ವಿದ್ಯಾವರ್ಧಕ ಕಾರ್ಯದರ್ಶಿಯೊಂದಿಗೆ ಅವರನ್ನು ಸಂಪರ್ಕಿಸುವ ಸಂಪರ್ಕ ಕೊಂಡಿಯಂತೆ ಇವರು ಕೆಲಸ ಮಾಡುತ್ತಿದ್ದರು.

ಆಮಂತ್ರಣ ಪತ್ರಗಳನ್ನು ಸಿದ್ದಗೊಳಿಸುವ ಅವುಗಳನ್ನು ಸದಸ್ಯರಿಗೆ ತಲುಪಿಸುವ ಕಾರ್ಯದಲ್ಲಿ ಇವರು ತೋರುವ ಮುತುವರ್ಜಿ ಅಭಿನಂದನಾರ್ಹ. ನಾಡೋಜ ಪಾಟೀಲ ಪುಟ್ಟಪ್ಪನವರ ಮಾನಸ ಪುತ್ರರಂತೆ ನಡೆದುಕೊಂಡ ಇವರು ಅವರ ಮಾತುಗಳನ್ನು ಭಾಷಣಗಳನ್ನು ಅಕ್ಷರಕ್ಕೆ ಇಳಿಸಿ ಹಲವಾರು ಪುಸ್ತಕಗಳು ಮುದ್ರಣವಾಗಲು ಸಹಾಯ ಮಾಡಿದ್ದು ಇವರ ಸೇವಾನಿಷ್ಠೆಗೆ ಹಿಡಿದ ಕೈಗನ್ನಡಿ. ಸದಾ ನಗುಮುಖ. ಯಾರಿಗೂ ಒಂದೂ ದಿನ ಸಿಟ್ಟು ಮಾಡಿದವರಲ್ಲ. ನನ್ನ ಸುಮಾರು ಹತ್ತು ಕೃತಿಗಳು ಬಿಡುಗಡೆಗೊಂಡಿದ್ದು ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ.ಕಾರ್ಯಕ್ರಮ ಆರಂಭಗೊಂಡು ಕೊನೆಯಾಗುವವರೆಗೂ ನನಗೆ ಪ್ರೋತ್ಸಾಹ ನೀಡಿರುವ ಇವರ ಮನೋಭಾವ ಮರೆಯಲಾಗದು.

ಶಿವಲಿಂಗಪ್ಪ ಕಾಶಪ್ಪನವರ ಅವರ ಕುರಿತು:

ನಿಂಗಪ್ಪ ಕಾಶಪ್ಪನವರ ಅವರ ತಂದೆ ಶಿವಲಿಂಗಪ್ಪ ಕಾಶಪ್ಪನವರ ಅವರ ಬಗ್ಗೆ ಎರಡು ಮಾತು ಇಲ್ಲಿ ಉಲ್ಲೇಖಿಸದೇ ಹೋದರೆ ತಪ್ಪಾದೀತು. ಇವರ ತಂದೆ ರಾಯನಗೌಡರ ಮನೆಯಲ್ಲಿ ಬೆಳೆದವರು. ತಲ್ಲೂರು ರಾಯನಗೌಡರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಭೂಗತರಾಗಿ ಮುರಗೋಡ ಗುಡ್ಡದ ಗವಿಯಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡ ಸಮಯದಲ್ಲಿ ರಾಯನಗೌಡರಿಗೆ ಊಟದ ವ್ಯವಸ್ಥೆಯನ್ನು (ಬುತ್ತಿಗಂಟು) ತಗೆದುಕೊಂಡು ಹೋಗಿ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದವರು. ಅಷ್ಟೇ ಅಲ್ಲ ಸ್ವಾತಂತ್ರ್ಯ ನಂತರ ರಾಯನಗೌಡರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಅವರ ಕೃಷಿ ಜಮೀನಿನ ಉಸ್ತುವಾರಿಯನ್ನು ಅವರ ಮಾರ್ಗದರ್ಶನದಲ್ಲಿ ರೈತನಾಗಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದವರು ಈ ಶಿವಲಿಂಗಪ್ಪನವರು. ಅವರನ್ನು ಜನ ರಾಯನಗೌಡರ ಮಾನಸಪುತ್ರ ಎಂದೇ ಸಂಭೋದಿಸುತ್ತಿದ್ದರು.ಕಳೆದ ಎರಡು ವರ್ಷಗಳ ಹಿಂದೆ ಅವರು ನಿಧನರಾದರು. 

ನನ್ನ ಗುರುಗಳು ಸರದಾರ ಸರ್:

ಸವದತ್ತಿಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಜರುಗಿದ್ದು ನಮಗೆ ಇಂಗ್ಲೀಷ ವಿಷಯ ಪಾಠ ಮಾಡಿದ್ದು ಸರದಾರ ಸರ್.ಅವರು ಕಾಶಪ್ಪನವರ ತಂದೆಯ ಸಹೋದರ ಅಂದರೆ ಕಾಶಪ್ಪನವರ ಅವರ ಚಿಕ್ಕಪ್ಪ. ನನಗೆ ಈ ಕುಟುಂಬ ಒಂದಲ್ಲ ಒಂದು ರೀತಿಯ ನಂಟನ್ನು ಹೊಂದಿದ್ದು ಕಾಶಪ್ಪನವರ ನಿವೃತ್ತಿ ಹೊಂದುವ ಸುದ್ದಿ ತಿಳಿದಾಗ ಇಷ್ಟು ಬೇಗ ನಿವೃತ್ತಿಯೇ ಎಂದು ಕೇಳಿದೆ. ಅಂದರೆ ಅವರ ಪಾದರಸದ ವ್ಯಕ್ತಿತ್ವ ಅವರಿಗೆ ಅರವತ್ತು ವರ್ಷ ಆಗಿದೆ ಎನಿಸದಷ್ಟು ತರುಣರಂತೆ ಕಾಣುತ್ತಾರೆ. ವಿದ್ಯಾವರ್ಧಕ ಸಂಘದ ಎಲ್ಲ ಪದಾಧಿಕಾರಿಗಳು ಅವರ ನಿವೃತ್ತಿ ದಿನದ ಕಾರ್ಯಕ್ರಮವನ್ನು ಸಂಘಟಿಸಿ ಅವರನ್ನು ಬೀಳ್ಕೊಡುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ.

ಕೌಟುಂಬಿಕ ಬದುಕು:

ಕಾಶಪ್ಪನವರ ಅವರ ಕೌಟುಂಬಿಕ ಬದುಕು ಇಬ್ಬರು ಹೆಣ್ಣು ಮಕ್ಕಳು ಅವರಿಬ್ಬರದೂ ವಿವಾಹವಾಗಿದೆ. ಧಾರವಾಡದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದು ಪತ್ನಿ ಕೂಡ ಇವರ ಕಾರ್ಯಕ್ಕೆ ಬೆನ್ನುಲುಬಾಗಿ ನಿಂತ ಕಾರಣ ಇವರು ತಡರಾತ್ರಿ ಮನೆಗೆ ಹೋದರೂ ಅವರ ಕನ್ನಡ ಸೇವೆಗೆ ಬೆಂಬಲವಾಗಿದ್ದುದು ಕೂಡ ಅಭಿಮಾನದ ಸಂಗತಿ ಎಂದರೆ ಅತಿಶಯೋಕ್ತಿಯಾಗದು.

ಇಂತಹ ಓರ್ವ ಸೇವೆಯಿಂದ ನಿವೃತ್ತನಾಗುತ್ತಿರಬಹುದು ಆದರೆ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಒಬ್ಬ ಸೇನಾನಿಯಂತೆ ಮುಂದೆಯೂ ಕೂಡ ಸೇವೆ ಮಾಡುವ ಮನೋಭಾವ ಉಳ್ಳವರು.ಇವರ ನಿವೃತ್ತ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸುವೆನು

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಮೇ ೩೧ ಬುಧವಾರ ಸಾಯಂಕಾಲ ೬ ಗಂಟೆಗೆ ಕಾಶಪ್ಪನವರ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕಾರಣ ಬೀಳ್ಕೊಡುಗೆಯ ಅಭಿನಂದನಾ ಸಮಾರಂಭ ಏರ್ಪಡಿಸಿರುವರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ವಹಿಸುವರು.ಧಾರವಾಡದ ಸಾಹಿತಿಗಳಾದ ಶ್ರೀನಿವಾಸ ವಾಡಪ್ಪಿಯವರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ವ್ಯವಸ್ಥಾಪಕರಾದ ಶಿ.ಮ.ರಾಚಯ್ಯನವರ ಅವರುಗಳು ಅಭಿನಂದನಾ ನುಡಿಗಳನ್ನಾಡಲಿರುವರು.


ವೈ.ಬಿ.ಕಡಕೋಳ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group