ಮೂಡಲಗಿ: ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಜಾರಿಗೆ ತರುತ್ತಿರುವದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿದರೆ ಸರ್ಕಾರಿ ಶಾಲೆಗಳಿಗೆ ಅವೇ ವರದಾನವಾಗಲಿವೆ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕರಾದ ಅರಿಹಂತ ಬಿರಾದಾರ ಪಾಟೀಲ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಸರ್ಕಾರಿ ಶಾಲೆಗಳೆಂದರೆ, ನಕಾರಾತ್ಮಕ ಭಾವನೆ ತಾಳುತ್ತಿದ್ದ ಸಂದರ್ಭದಲ್ಲಿ ಇಲಾಖೆಯು ಸರ್ಕಾರಿ ಶಾಲೆಗಳಿಗೆ ಹೆಚ್ಚು ಗಮನ ನೀಡಿ ಹಲವಾರು ಯೋಜನೆಗಳ ಅನುಷ್ಠಾನ ಹಾಗೂ ವಿದ್ಯಾಥಿಗಳಿಗೆ ಉಚಿತ ಸೌಲಭ್ಯಗಳನ್ನು ನೀಡುತ್ತಿರುವದರಿಂದ ಶಿಕ್ಷಕರು ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು ಅದರಲ್ಲೂ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಶಾಲೆ ಶಿಕ್ಷಣ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ ಸರ್ಕಾರ ಇದನ್ನು ಮಾದರಿ ಶಾಲೆಯೆಂದು ಪರಿಗಣಿಸಿದೆ. ಈಗಾಗಲೇ ಬೇಸಿಗೆ ರಜೆ ಕಳೆದು ಶಾಲೆಗಳು ಪ್ರಾರಂಭವಾಗಿದ್ದರಿಂದ ಎಲ್ಲರೂ ತಪ್ಪದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಪಠ್ಯಪುಸ್ತಕ ಸಮವಸ್ತ್ರ ಮೊದಲಾದವುಗಳನ್ನು ಉಚಿತವಾಗಿ ನೀಡುತ್ತಿರುವದರಿಂದ ಅವುಗಳನ್ನು ಸದುಪಯೋಗಪಡೆಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ನೀರ್ಮಿಸಿಕೊಳ್ಳಬೇಕೆಂದರು. ಈ ಶಾಲೆಯ ಗುರುಬಳಗದ ಕ್ರಿಯಾಶೀಲತೆಯಿಂದ ರಾಜ್ಯಮಟ್ಟದವರೆಗೂ ಗುರುತಿಸಿಕೊಂಡಿದ್ದು ಹಾಗೂ ಆರಂಭದ ದಿನದಂದೇ 68 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದ್ದು ಅಭಿಮಾನದ ವಿಷಯ ಎಂದರು.
ಶಾಲೆಯ ಪ್ರಧಾನಗುರು ಎ.ವ್ಹಿ. ಗಿರೆಣ್ಣವರ ಮಾತನಾಡಿ ಶಾಲೆಯ ಅಬಿವೃದ್ಧಿ, ಗ್ರಾಮಸ್ಥರ ಸಹಕಾರ, ಗುಣಮಟ್ಟದ ಶಿಕ್ಷಣವೇ ನಮ್ಮ ಗುರಿಯಾದಾಗ ಶಾಲೆಗಳಲ್ಲಿ ಪರಿವರ್ತನೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಷ್ಪ ಮತ್ತು ಸಿಹಿಯನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಮತ್ತು ಪಠ್ಯಪುಸ್ತಕ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಕುಮಾರ ಮರ್ದಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲವ್ವ ಬಿಳಿಗೌಡ್ರ, ಗ್ರಾ.ಪಂ. ಸದಸ್ಯರಾದ ಸುನಂದ ಭಜಂತ್ರಿ, ಭರಮಪ್ಪ ಹರಿಜನ, ರೈತ ಮುಖಂಡರಾದ ಗುರುನಾಥ ಹುಕ್ಕೇರಿ, ಮಂಜು ಗದಾಡಿ, ಸೋಮು ಹುಲಕುಂದ, ರಾಮಪ್ಪ ಬಿಳಿಗೌಡ್ರ, ಶಾನೂರ ಹಿರೇಹೊಳಿ, ಬಸವರಾಜ ಕಟ್ಟಿಕಾರ, ಪೂರ್ಣಿಮಾ ಬಾಗೇವಾಡಿ, ರೇಣುಕಾ ನಾವಿ,ಶಿಕ್ಷಕರಾದ ವಿಮಲಾಕ್ಷಿ ತೋರಗಲ,ಕುಸುಮಾ ಚಿಗರಿ, ಶೀಲಾ ಕುಲಕರ್ಣಿ,ಸಂಗೀತಾ ತಳವಾರ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಮಹಾದೇವ ಗೋಮಾಡಿ, ಕಿರಣ ಭಜಂತ್ರಿ, ಶಂಕರ ಲಮಾಣಿ, ಉಪಸ್ಥಿತರಿದ್ದರು.