ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಹಳ್ಳೂರ ಗ್ರಾಮದ ದ್ಯಾಮವ್ವದೇವಿ ಹಾಗೂ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜಾನಪದ ಕಲಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಜಾನಪದ ಸಂಪ್ರದಾಯ, ಆಚರಣೆಗಳಿಗೆ ತೊಟ್ಟಿಲು ಗ್ರಾಮೀಣ ಜಾತ್ರೆಗಳಾಗಿವೆ ಎಂದರು.
ಕರ್ನಾಟಕದಲ್ಲಿ 300ಕ್ಕೂ ಅಧಿಕ ಜಾನಪದ ಕಲಾ ಪ್ರಕಾರಗಳಿದ್ದು, ಬೆಳಗಾವಿಯಲ್ಲಿ 50ಕ್ಕೂ ಅಧಿಕ ಜಾನಪದ ಕಲಾ ಪ್ರಕಾರಗಳಿಗೆ ತವರೂರಾಗಿದೆ.
ಶ್ರೀಕೃಷ್ಣ ಪಾರಿಜಾತ, ದೊಡ್ಡಾಟ, ಲಾವಣಿ, ಗೀಗೀ ಹಾಡು, ಭಜನೆ, ಮೊಹರಂ, ಹಂತಿ, ಡೊಳ್ಳು, ಚೌಡಕಿ, ಸಂಗ್ಯಾ ಬಾಳ್ಯಾ ಆಟ ಹೀಗೆ
ಬೆಳಗಾವಿ ಜಿಲ್ಲೆಯು ಜಾನಪದ ಕಲೆಗಳು ಬೆಳೆದು ಬಂದಿವೆ ಎಂದರು.
ಆಧುನಿಕತೆ ಒತ್ತಡದಲ್ಲಿ ಜಾನಪದ ಕಲೆಗಳು ನಶಿಸಿ ಹೊರಟಿರುವುದು ವಿಷಾದನೀಯವಾದ ಸಂಗತಿಯಾಗಿದೆ ಎಂದರು.
ನಾಡಿನ ವಿವಿಧ ಆಚರಣೆ, ಪರಂಪರೆ ಹಾಗೂ ಸಂಸ್ಕೃತಿ ಉಳಿಯಬೇಕಾದರೆ ಜಾನಪದ ಕಲೆಗಳು, ಆಚರಣೆಗಳು ಉಳಿಯಬೇಕು ಮತ್ತು ಸಮಾಜವು ಅವುಗಳನ್ನು ಬೆಳೆಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗ್ರಾಮೀಣ ಭಾಗದಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ದೊರಕಿಸಿಕೊಡುವ ಮೂಲಕ ಜಾನಪದ ಕಲೆಯ ಬಗ್ಗೆ ಅವರಲ್ಲಿ ಉತ್ಸಾಹವನ್ನು ಇಮ್ಮಡಿಸಬೇಕು ಎಂದರು.
ಸಂಘಟಕ ಸಿದ್ದು ದುರದುಂಡಿ ಪ್ರಾಸ್ತಾವಿಕ ಮಾತನಾಡಿ, ನಾಡಿನ ವಿವಿಧೆಡೆಯಿಂದ ಒಟ್ಟು 20 ಜಾನಪದ ಕಲಾ ತಂಡಗಳು ಭಾಗವಹಿಸಿವೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಬಸವಣ್ಣೆಪ್ಪ ಡಬ್ಬಣ್ಣವರ, ಭೀಮಶಿ ಹೊಸಟ್ಟಿ, ಎಂ.ಡಿ. ಸಂತಿ, ಬಾಳಗೌಡ ಪಾಟೀಲ, ಭೀಮಪ್ಪ ಸಪ್ತಸಾಗರ, ಬಸವರಾಜ ಕೌಜಲಗಿ, ಶಿವಪ್ಪ ಅಟಮಟ್ಟಿ, ಮುರಿಗೆಪ್ಪ ಮಾಲಗಾರ, ಸಿದ್ದು ಮಹಾರಾಜ, ಯಮನಪ್ಪ ನಿಡೋಣಿ, ಲಕ್ಕಪ್ಪ ದುರದುಂಡಿ, ಬಸಪ್ಪ ದಾಸಣ್ಣವರ, ಸೈದುಸಾಬ ಮುಜಾವರ ಇದ್ದರು.