ಮಕ್ಕಳಿಗೆ ಕೇವಲ ಹಣ ಸಂಪಾದನೆಯ ಮಾರ್ಗ ತೋರದೇ ಸಮಾಜಮುಖಿಯಾಗಿ ಬಾಳುವಂತಹ ಮಾರ್ಗದರ್ಶನ ನೀಡಬೇಕಾದ್ದು ಸಮಾಜ ಹಾಗೂ ಪೋಷಕ ರ ಕರ್ತವ್ಯ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಕಿವಿಮಾತು ನುಡಿದರು.
ಮೈಸೂರು ಜಿಲ್ಲೆಯ ಸಾಲಿಗ್ರಾಮ ದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ತಮ್ಮ ಮಕ್ಕಳು ವೈದ್ಯರಾಗಬೇಕು, ಎಂಜನಿಯರ್ ಆಗಬೇಕು.ಅಪಾರ ಹಣ ದುಡಿದು ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸುವ ಪೋಷಕರು ಅವರ ಸ್ವಚ್ಛ ತೆಗೆ ಆದ್ಯತೆ ನೀಡಬೇಕು,ಪರಿಸರ ಸಂರಕ್ಷಿಸಬೇಕು. ಹಿರಿಯರಿಗೆ ಗೌರವ ನೀಡಬೇಕು.ರಾಷ್ಟ್ರದ ಗೌರವಕ್ಕೆ ಧಕ್ಕೆ ತರಬಾರದೆಂಬುದನ್ನೂ ಚಿಕ್ಕಂದಿನಿಂದಲೇ ಬೆಳೆಸಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ಪ್ರತಿಯೊಬ್ಬ ಮಗುವೂ ತನ್ನ ಜನ್ಮದಿನದಂದು ,ತನ್ನ ತಂದೆ-ತಾಯಿಯ ಜನ್ಮ ದಿನ ಹಾಗೂ ವಿವಾಹ ವಾರ್ಷಿಕೋತ್ಸವದ ಅಂಗವಾಗಿ, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಸಸಿಗಳನ್ನು ನೆಡಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಸುಂದರ ಪರಿಸರ ನೀಡಬೇಕು. ಈ ಬಗ್ಗೆ ಮಕ್ಕಳಲ್ಲಿ ಚಿಂತನೆ ಮೂಡಿಸಬೇಕಾಗಿದೆ ಎಂದು ಭೇರ್ಯ ರಾಮಕುಮಾರ್ ನುಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್ ಅವರು ಸಭೆಯಲ್ಲಿ ಮಾತನಾಡಿ ಸಾಲಿಗ್ರಾಮ ಗ್ರಂಥಾಲಯದ ಅಭಿವೃದ್ಧಿಗಾಗಿ ಯೋಜನೆ ತಯಾರಿಸಲಾಗಿದೆ. ಸುಂದರ ಹಾಗೂ ವಿಶಾಲ ಮಕ್ಕಳ ಗ್ರಂಥಾಲಯ ಹಾಗೂ ಡಿಜಿಟಲ್ ಗ್ರಂಥಾಲಯ ರೂಪಿಸಲು ಯೋಜಿಸಲಾಗಿದೆ ಎಂದು ನುಡಿದರು.
ಸಾಲಿಗ್ರಾಮ ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಮತಿ ದಿವ್ಯಾ ಕುಮಾರಿ ಮಾತನಾಡಿ ಸಾಲಿಗ್ರಾಮ ಗ್ರಂಥಾಲಯ ವು ಸುಮಾರು ನಾಲ್ಕು ಸಾವಿರದ ಒಂಬೈನೂರು ಸದಸ್ಯರನ್ನು ಹೊಂದಿದೆ. ಸದ್ಯದಲ್ಲೇ ನಮ್ಮ ಪ್ರೀತಿಯ ಗ್ರಂಥಾಲಯ ಎಂಬ ಕಾರ್ಯಕ್ರಮ ಆರಂಭವಾಗಲಿದ್ದು, ಮಕ್ಕಳು ಪುಸ್ತಕಗಳು ಹಾಗೂ ಡಿಜಿಟಲ್ ಗ್ರಂಥಾಲಯ ದ ಉಪಯೋಗ ಪಡೆದುಕೊಳ್ಳಬೇಕೆಂದು ಕರೆನೀಡಿದರು.
ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ನರಸಿಂಹೇಗೌಡ ಅವರು ಮಾತನಾಡಿ, ಮಕ್ಕಳು ಭವಿಷ್ಯದ ರಾಷ್ಟ್ರ ನಿರ್ಮಾಪಕರು. ಅವರು ಚೆನ್ನಾಗಿ ವ್ಯಾಸಂಗ ಮಾಡಿ, ಸಮಾಜದ ಅಭ್ಯುದಯಕ್ಕೆ ಕಾರಣರಾಗಬೇಕೆಂದು ನುಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ, ಗ್ರಾಮಪಂಚಾಯ್ತಿ ಸದಸ್ಯರಾದ ಶ್ರೀಮತಿ ಸುಧಾ ರೇವಣ್ಣ,ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಕುಸುಮ ವೇದಿಕೆಯಲ್ಲಿದ್ದರು. ಮಕ್ಕಳಾದ ಸೋನಿಯಾ, ರಿಷಿಕಾ, ಚಿರಂತ್, ಸಂಯುಕ್ತ ಗೌಡ ತರಬೇತಿ ಶಿಬಿರದ ಅನುಭವವನ್ನು ಹಂಚಿಕೊಂಡರು. ಮಕ್ಕಳಾದ ಸೋನಿಯಾ,ಚಿರಂತ್.ಎಸ್. ಹಾಗೂ ರಿಷಿಕಾ.ಎಸ್.ಎನ್. ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ಹಾಗೂ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ಇಲಾಖೆ, ಮೈಸೂರು ಜಿಲ್ಲಾ ಪಂಚಾಯತಿ ಹಾಗೂ ಸಾಲಿಗ್ರಾಮ ಗ್ರಾಮಪಂಚಾಯ್ತಿಗಳ ಸಂಯುಕ್ತ ಆಶ್ರಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ನಡೆದ ಒಂಭತ್ತು ದಿನಗಳ ಅವಧಿಯ ಗ್ರಾಮೀಣ ಮಕ್ಕಳ ಬೇಸಿಗೆ ತರಭೇತಿ ಶಿಬಿರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.