ತಮ್ಮ ಸರಳ ಸಜ್ಜನಿಕೆ ಕ್ರಿಯಾಶೀಲ ಕರ್ತವ್ಯಶಕ್ತಿ, ಸಂಘಟನಾ ಸಾಮರ್ಥ್ಯ, ಪುಸ್ತಕ ಪ್ರೀತಿ, ಧರ್ಮ ಸಂಸ್ಕೃತಿ ಕುರಿತಾದ ಕಾಳಜಿಯುಳ್ಳ ಬರಹಗಳಿಂದ ಕನ್ನಡ ಸಾರಸ್ವತ ಪ್ರಪಂಚಕ್ಕೆ ಪರಿಚಿತರಾದ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಈ ಕೃತಿಯ ಲೇಖಕರು.
84 ಪುಟಗಳ ಪ್ರಸ್ತುತ ಪುಸ್ತಿಕೆಯಲ್ಲಿ ಶ್ರೀ ಕೃಷ್ಣನ ವಿಶ್ವರೂಪ ದರ್ಶನ ಮಾಡಿಸುವ 33 ಮೌಲಿಕ ಲೇಖನಗಳನ್ನು ಒಳಗೊಂಡಿದ್ದು ಲೇಖಕರಿಗೆ ಶ್ರೀ ಕೃಷ್ಣನ ಮೇಲಿರುವ ಅಪಾರ ಗೌರವ ಪ್ರತಿ ಪುಟದಲ್ಲೂ ಕಾಣಬಹುದು.
ಓದುಗರನ್ನು ಕೂಡಲೆ ತನ್ನೆಡೆಗೆ ಸೆಳೆದುಕೊಳ್ಳುವ ಮೋಹಕಶೈಲಿಯ ಬರಹಗಳು, ವಿಮರ್ಶೆ ಅರ್ಥೈಸಲಾಗದಷ್ಟು ಕ್ಲಿಷ್ಟವಾಗುತ್ತಿರುವ ದಿನಮಾನದಲ್ಲಿ ಇಲ್ಲಿಯ ಬಹುಪಾಲು ಲೇಖನಗಳು ಸರಳವಾಗಿ ಮನನವಾಗುತ್ತದೆ.
ಶ್ರೀ ಕೃಷ್ಣನ ಕುರಿತು ಇಲ್ಲಿನ ಲೇಖನಗಳನ್ನು ಓದುತ್ತಾ ಹೋದಂತೆ ಲೇಖಕರ ಬರವಣಿಗೆ ತೀಕ್ಷ್ಣತೆ ಅರಿವಾಗುತ್ತದೆ. ಅತ್ಯಂತ ಗಹನವಾದ ಪರತತ್ವದ ಚಿಂತನೆಗಳನ್ನು ತಿಳಿಯಾಗಿ ಪ್ರಸ್ತುತಪಡಿಸುವುದರಿಂದ ಇದು ನಿಜಕ್ಕೂ ಸಂಗ್ರಹ ಯೋಗ್ಯವೆನಿಸಿದ್ದು ಸಾಹಿತ್ಯಾಸ್ತಕರೆಲ್ಲರೂ ಓದಲೇಬೇಕಾದ ಕೃತಿ ಇದಾಗಿದೆ.
ಒಳ್ಳೆಯ ಚಿಂತನೆಗಳು ಎಲ್ಲೇ ಇರಲಿ, ಅವು ನಮ್ಮೆಡೆಗೆ ಬರಲಿ’ ಎಂಬ ಋಗ್ವೇದದ ಸೂಕ್ತಿಯ ಆಶಯವನ್ನು ಈ ಪುಸ್ತಕದ ಮೂಲಕ ಕಾಣಬಹುದು. ಕೆಲವು ವಾಕ್ಯ ರಚನೆಗಳು – ಮುದ್ರಣದೋಷಗಳು ಕಂಡುಬಂದಿದ್ದು, ಮುಂದಿನ ಆವೃತ್ತಿಯಲ್ಲಿ ಜರಡಿ ಹಿಡಿಯಲು ಅವಕಾಶ ಇದ್ದೇ ಇದೇ. ನಮ್ಮ ಕವಿಗಳು ಹೇಳುವ ಹಾಗೆ ಚಿಕ್ಕ ಪುಟ್ಟ ಕಪ್ಪು ಕಲೆ ಚಂದ್ರನ ಅಮೃತ ಮಂಡಲಕ್ಕೆ ಕಳಂಕವೇನಲ್ಲ. ಒಟ್ಟಿನಲ್ಲಿ ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರ ಕೃಷ್ಣನ ಹೆಸರೇ ಲೋಕಪ್ರಿಯ ಕೃತಿ ಕನ್ನಡ ಅಧ್ಯಾತ್ಮ ಲೋಕದ ಕಣ್ತುಂಬುವ ಕೃತಿ.
ಕೃತಿ ವಿವರ:
- ಕೃತಿಯ ಹೆಸರು: ಕೃಷ್ಣನ ಹೆಸರೇ ಲೋಕಪ್ರಿಯ
- ಲೇಖಕರ: ಡಾ.ಗುರುರಾಜ ಪೋಶೆಟ್ಟ್ಟಿಹಳ್ಳಿ
- ಪುಟ: 84
- ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು
ಸಂಪರ್ಕ : 90356 18076
ಪರಿಚಯ : ಗಿರಿಜಾ ಹೆಗಡೆ