spot_img
spot_img

ಆಯುಧ ಪೂಜೆ- Ayudh Pooja

Must Read

- Advertisement -

ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ. ಇದನ್ನು ಹಲವು ರಾಜ್ಯಗಳಲ್ಲಿ ಅಸ್ತ್ರ ಪೂಜೆ ಎಂದೂ ಕರೆಯುವರು. ದಸರ ಹಬ್ಬದ ಒಂಬತ್ತನೇ ದಿನ ಅಥವ ನವಮಿಯಂದು ಶಸ್ತಾಸ್ತೃಗಳನ್ನು ಅಥವಾ ಆಯುಧಗಳನ್ನು ಪೂಜಿಸುವ ಈ ಹಬ್ಬದಂದು ತಮ್ಮ ತಮ್ಮ ಮನೆಗಳಲ್ಲಿರುವ ವಾಹನಗಳಾದಿಯಾಗಿ ಆಯುಧ ವಸ್ತುಗಳನ್ನು ಪೂಜಿಸುವುದು ವಾಡಿಕೆ.

ಆಯುಧ ಪೂಜೆಯಂದು ವಿಶೇಷವಾಗಿ ಸರಸ್ವತಿ(ಪುಸ್ತಕಗಳನ್ನು) ಲಕ್ಷ್ಮೀ ( ಈ ದಿನ ಬಂಗಾರ ತರುವ ಮೂಲಕ ಜೊತೆಗೆ ಮನೆಯಲ್ಲಿ ವರ್ಷವಿಡೀ ಕೂಡಿಟ್ಟ ನಾಣ್ಯಗಳನ್ನು ಅಂದು ಹೊರತಗೆದು ತಟ್ಟೆಯಲ್ಲಿಟ್ಟು ಪೂಜಿಸುವ ಮೂಲಕ) ಪಾರ್ವತಿ(ದೈವ ಪೂಜೆಯಾಗಿ) ಪೂಜೆಯನ್ನು ಬಹಳ ಅರ್ಥಪೂರ್ಣವಾಗಿ ಪೂಜಿಸುವರು.

ಪಾಂಡವರು ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಇಟ್ಟಿರುವುದನ್ನು ಮಹಾಭಾರತದ ದೃಷ್ಟಾಂತದಲ್ಲಿ  ಅಜ್ಞಾತವಾಸದ ಸಂದರ್ಭದಲ್ಲಿ ಕೌರವರು ವಿರಾಟರಾಜನ ಗೋವುಗಳನ್ನು ಅಪಹರಿಸದ ಸಂದರ್ಭದಲ್ಲಿ ಈ ಗೋವುಗಳನ್ನು ಬಿಡಿಸಿ ಕೌರವರ ಜೊತೆಗೆ ಯುದ್ದ ಮಾಡಲು ಶಮೀ ವೃಕ್ಷದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ತಗೆದು ಯುದ್ದದ ಮೂಲಕ ಗೋವುಗಳನ್ನು ಬಿಡಿಸಿರುವುದನ್ನು ವಿಜಯದ ಸಂಕೇತವೆಂದು ಆಯುಧ ಪೂಜೆ ಎಂದು ಹೇಳುವರು.

- Advertisement -

ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ಎಲ್ಲಾ ದೇವರುಗಳು ತಮ್ಮಲ್ಲಿದ್ದ ಆಯುಧಗಳನ್ನು ದುರ್ಗಾದೇವಿಯ ಪ್ರತಿಯೊಂದು ಕೈಗಳಿಗೆ ನೀಡುವರು.೯ ದಿನಗಳ ಕಾಲ ಈ ಆಯುಧಗಳನ್ನು ಬಳಸಿಕೊಂಡು ಸುದೀರ್ಘ ಯುದ್ಧ ಜರುಗಿತು. ಆಗ ದೇವಿ ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಎಲ್ಲಾ ದೇವರುಗಳು ತಮ್ಮ ತಮ್ಮ ಆಯುಧಗಳನ್ನು ದೇವಿ ದುರ್ಗೆಯಿಂದ ಪಡೆದು ಶುಚಿಗೊಳಿಸಿಕೊಂಡು ಅವುಗಳನ್ನು ಪೂಜಿಸಿದರು ಎಂಬುದು ಕೂಡ ಒಂದು ದೃಷ್ಟಾಂತ.ಹೀಗೆ ತಮ್ಮ ಆಯುಧಗಳನ್ನು ದೇವಿ ದುಷ್ಟ ಸಂಹಾರಕ್ಕೆ ಬಳಸಿಕೊಂಡಳು ನಂತರ ಅವುಗಳನ್ನು ಶುಚಿಗೊಳಿಸಿ ತಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸಿಕೊಳ್ಳುವ ಮುಂಚೆ ಶುಚಿಗೊಳಿಸಿ ಪೂಜಿಸುವ ಮೂಲಕ ಬಳಕೆ ಮಾಡಿಕೊಂಡರು ಎಂಬುದು ಇಂದಿಗೂ ಈ ಪೂಜೆ ಜರುಗುತ್ತ ಬಂದಿರುವುದು.

ಪಾಂಡವರು ಶಮೀ ವೃಕ್ಷದಿಂದ ತಗೆದುಕೊಂಡು ಹೋಗಿದ್ದರ ಪ್ರತೀಕ ಇಂದು ಶಮೀ ವೃಕ್ಷದ ಎಲೆಗಳನ್ನು ಬಂಗಾರದ ರೂಪದಲ್ಲಿ ಕಾಣುವುದು ಸಂಸ್ಕೃತಿ. ಇಂದು ಸಾಕಷ್ಟು ಜನರು ತಮ್ಮ ತಮ್ಮ ಮನೆಗಳಲ್ಲಿ ತಮಗೆ ಅನುಕೂಲಕ್ಕೆ ತಕ್ಕಂತೆ ತಮ್ಮ ವಾಹನಗಳನ್ನು ಮತ್ತು ದೇವರ ಮನೆಯಲ್ಲಿ ಜೋಳದ ದಂಟು ಅಥವ ಕಬ್ಬು ಬಳಸಿ ಆಯುಧಗಳನ್ನು ಪೂಜಿಸುವುದು ವಾಡಿಕೆ.

- Advertisement -

ಹಲವರು ಹಿಂದಿನ ದಿನವೇ ತಮ್ಮ ತಮ್ಮ ಮನೆಯಲ್ಲಿನ ಆಯುಧಗಳನ್ನು ಸ್ವಚ್ಚಗೊಳಿಸಿಟ್ಟುಕೊಂಡು ಮರುದಿನ ಪೂಜಿಸಿದರೆ. ಇನ್ನೂ ಹಲವರು ಪೂಜಿಸುವ ದಿನದ ಬೆಳಗಿನ ಜಾವ ಆಯುಧಗಳನ್ನು ಹೊರತಗೆದು ನೀರಿನಿಂದ ಸ್ವಚ್ಚಗೊಳಿಸಿಕೊಂಡು ಪೂಜೆಯ ಸಮಯದಲ್ಲಿ ಪೂಜಿಸುವುದು ವಾಡಿಕೆ. ನಾವು ಆಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞರಾಗಿರುವ ದಿನವೇ ಆಯುಧಪೂಜೆ.

ಈ ಪೂಜೆಗೆ ವಿಶೇಷತೆಯಿದೆ.ಇದು ಒಬ್ಬರ ವೃತ್ತಿಗೆ ಮತ್ತು ಅದಕ್ಕೆ ಸಂಬಂಧಿಸಿದ ಪರಿಕರಗಳಿಗೆ ಸಲ್ಲಿಸುವ ಪೂಜೆಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಆಯುಧ ಪೂಜೆಯನ್ನು ಮಾಡುವರು. ದೈವಿ ಸ್ವರೂಪದಲ್ಲಿ ಅವುಗಳನ್ನು ಪೂಜಿಸುವುದರಿಂದ ಸರಿಯಾದ ಪ್ರತಿಫಲವನ್ನು ಪಡೆಯಬಹುದು ಎಂಬುದು ನಂಬಿಕೆ.

ನಮ್ಮ ಜೀವನದಲ್ಲಿ ಆಯುಧಗಳಿಗೆ ವಿಶೇಷ ಗೌರವ. ಕುಶಲ ಕರ್ಮಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ಅವುಗಳನ್ನು ಬಳಸಿದರೆ ಸೈನಿಕರು ತಮ್ಮ ಶಸ್ತಾಸ್ತೃಗಳಾಗಿ, ಗೃಹಿಣಿಯರು ತಮ್ಮ ಅಡುಗೆ ಮನೆಯಲ್ಲಿ ಹಾಗೂ ಪುರುಷರು ಗೃಹಿಣಿಯರು ಕೃಷಿ ಚಟುವಟಿಕೆಗಳಿಗಾಗಿ ಆಯುಧಗಳನ್ನು ಬಳಸುವರು. ಇವು ಇಂಥವುಗಳು ಅಂತೆ ಇಲ್ಲ. ದಕ್ಷಿಣ ಭಾರತದಲ್ಲಿ ಈ ದಿನ ತಮ್ಮ ವಾದ್ಯಗಳನ್ನು ಪೂಜಿಸುವರು.ಅರ್ಥಾಥ್ ಸರಸ್ವತಿ ಪ್ರತೀಕವಾಗಿ ಸಂಗೀತದ ಪರಿಕರಗಳನ್ನು ಕೂಡ ಪೂಜಿಸುವರು.

ಈ ರೀತಿ ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ. ಪ್ರಾಚೀನ ಕಾಲದಲ್ಲಿ ಯುದ್ದಕ್ಕೆ ಹೋಗುವ ಮುಂಚೆ ಶಸ್ತಾಸ್ತೃಗಳನ್ನು ಪೂಜಿಸಿ ನಂತರ ಬಳಕೆ ಮಾಡುತ್ತಿದ್ದರಂತೆ. ಇದರಿಂದ ಯುದ್ಧದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತಿತ್ತು ಎಂಬುದು ನಂಬಿಕೆ.

ತ್ರೇತ್ರಾಯುಗದಲ್ಲಿ ಶ್ರೀ ರಾಮಚಂದ್ರನು ಹನಮಂತ ಮತ್ತು ಸುಗ್ರೀವರ ಸಹಕಾರದಿಂದ ತನ್ನ ಸೈನ್ಯದೊಂದಿಗೆ ಲಂಕೆಗೆ ತೆರಳಿ ರಾವಣನ ಸಂಹರಿಸಿ ಸೀತೆಯನ್ನು ಕರೆದುಕೊಂಡ ಬಂದ ದಿನ ವಿಜಯದಶಮಿ ಎಂದೂ ಕೂಡ ಹೇಳುವರು.

ದುರ್ಗಾದೇವಿ /ಚಾಮುಂಡೇಶ್ವರಿ ಮಹಿಷಾಸುರ ಸಂಹರಿಸಿದ ದಿನವೆಂದೂ. ವಿರಾಟರಾಜನ ಗೋವುಗಳನ್ನು ಪಾಂಡವರು ಯುದ್ದದ ಮೂಲಕ ಕೌರವರಿಂದ ಬಿಡಿಸಿಕೊಂಡು ಬಂದ ದಿನವಾಗಿ ಹೀಗೆ ಎಲ್ಲವೂ ಮಹತ್ವದ ಸಂಕೇತವಾಗಿ ವಿಜಯದಶಮಿ ಎಂಬ ಹೆಸರಿನಿಂದ ಕರೆಯುವ ಮೂಲಕ ಪುರಾಣ ಇತಿಹಾಸದ ಮೂಲಕ ಈ ದಿನವನ್ನು ಆಚರಿಸಿಕೊಂಡು ಬಂದಿರುವುದು. 

ಸಅಜ್ಞಾತವಾಸದ ನಂತರ ಪಾಂಡವರು ಶಮೀ ವೃಕ್ಷದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ತಗೆದುಕೊಂಡ ಕಾರಣ ಶಮೀ ವೃಕ್ಷ/ಬನ್ನಿ ಮರದ ಎಲೆಗಳನ್ನು ಕೂಡ ಈ ದಿನ ಪೂಜಿಸುವುದು ವಾಡಿಕೆ.

ರಾಮಾಯಣದ ಒಂದು ಘಟನೆ ಕೂಡ ಬನ್ನಿ ಮರದ ಕುರಿತು ಹೇಳುವರು. ಹಿಂದೆ ಅಯೋಧ್ಯ ನಗರದಲ್ಲಿ “ಕೌಸ್ತ” ಎಂಬ ಬ್ರಾಹ್ಮಣ ವಿದ್ಯಾರ್ಥಿಯು ‘ವರಂತನು’ ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನಂತೆ.ತನ್ನ ವಿದ್ಯಾಭ್ಯಾಸ ಪೂರೈಸಲು ಕೌಸ್ತನು ತನ್ನ ಗುರುಗಳ ಬಳಿಗೆ ಗುರುದಕ್ಷಿಣೆ ಕೊಡಲು ಏನು ಬೇಕು ಎಂದು ಕೇಳಿದನಂತೆ ಆಗ ಗುರುಗಳು ಅವನಿಗೆ ಏನೂ ಬೇಡ ಅನ್ನಲು,ಇಲ್ಲ ನೀವು ಗುರುದಕ್ಷಿಣೆ ರೂಪದಲ್ಲಿ ಏನನ್ನಾದರೂ ಸ್ವೀಕರಿಸಲೇಬೇಕು ಎನ್ನಲು. ಗುರುಗಳು ಇವನನ್ನು ಪರೀಕ್ಷಿಸಲು ೧೪೦ ಬಂಗಾರದ ನಾಣ್ಯಗಳನ್ನು ನೀಡಬೇಕು ಎಂದರಂತೆ.

ಅವನ ಬಳಿ ಬಂಗಾರದ ನಾಣ್ಯಗಳು ಇರಲಿಲ್ಲ.ಆಗ ಅವನು ಶ್ರೀರಾಮಚಂದ್ರನ ಬಳಿಗೆ ಬಂದು ನಡೆದ ಸಂಗತಿ ತಿಳಿಸಿದನು.ಆಗ ಶ್ರೀ ರಾಮಚಂದ್ರನು ತನಗೆ ಪ್ರೀಯವಾದ ಬನ್ನೀ ಮರದ ಬಳಿ ನಿಂತಿರಲು ಕೌಸ್ತನಿಗೆ ಹೇಳಿದನಂತೆ.ಆ ರೀತಿ ಸತತ ಮೂರು ದಿನಗಳ ಕಾಲ ಕೌಸ್ತನು ಬನ್ನೀಮರದ ಕೆಳಗೆ ನಿಂತಿರಲು ಶ್ರೀ ರಾಮಚಂದ್ರನು ಕುಬೇರನಿಗೆ ತಿಳಿಸಿ ಬನ್ನಿ ಮರ  ಕಾಯಿಗಳನ್ನು ಬಂಗಾರವಾಗಿ ಪರಿವರ್ತಿಸಲು ಸೂಚಿಸಲು. ಅವುಗಳನ್ನು ಪಡೆದ ಕೌಸ್ತ ತನ್ನ ಗುರುಗಳಿಗೆ ಗುರು ಕಾಣಿಕೆ ನೀಡಿದನಂತೆ. ಹೀಗೆ ಬನ್ನೀ ಮರದ ಕಾಯಿಗಳನ್ನು ಇಂದಿಗೂ ಗಟ್ಟಿ ಬಂಗಾರ ಎಂತಲೇ ಕರೆಯುವರು.

ನಾವೂ ನೀವೂ ಬಂಗಾರ ಕೊಟ್ಟು ಬಂಗಾರದಂಗ ಇರೋಣ ಎಂದು ಈ ದಿನ ಸಾಯಂಕಾಲ ಕಾಳಿಕಾ ಮಾತೆಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ಎಲ್ಲರೂ ಸೇರಿ ಬನ್ನಿ ಮುಡಿಯುವ ಮೂಲಕ ತಮ್ಮ ಮನೆಗಳಿಗೆ ತೆರಳಿ ಹಿರಿಯರಿಗೆ ಕಿರಿಯರಿಗೆ ಬಂಧು ಬಳಗದವರಿಗೆ ಬನ್ನಿ ನೀಡುವ ಮೂಲಕ ನಾವೂ ನೀವು ಬಂಗಾರದಂಗ ಇರೋಣ ಎಂದು ಹೇಳುವ ಮೂಲಕ ಸೌಹಾರ್ದವಾಗಿ ಬಾಳೋಣ ಎಂಬ ಸಂದೇಶವನ್ನು ಕೂಡ ಈ ದಿನ ಒಳಗೊಂಡಿದೆ. ಹೀಗಾಗಿ ಶಮೀ ಮತ್ತು ಬನ್ನೀ ಮರದ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಈ ದಿನ ಪೂಜೆಯಲ್ಲಿ ಬಳಸುವುದನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವುದನ್ನು ಈ ದೃಷ್ಟಾಂತದ ಮೂಲಕ ನಮ್ಮ ಸಂಸ್ಕೃತಿ ಮತ್ತು ಆಚರಣೆಗಳು ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕವಾಗಿ ಬಳಸುವರು.

ಖಂಡೇ ಪೂಜೆಯ ಈ ದಿನದ ಹಿಂದಿನ ದಿನವೇ ಭೂ ತಾಯಿಯ ಪ್ರತೀಕವಾಗಿ ಜೋಳದ ದಂಟುಗಳನ್ನು ಕೂಡ ತರುವರು.ಇವುಗಳ ಜೊತೆಗೆ ಶಮೀ ವೃಕ್ಷ ಮತ್ತು ಬನ್ನೀ ಮರದ ಎಲೆಗಳನ್ನು ಕಾಯಿಗಳನ್ನು ತರುವ ಮೂಲಕ ಪೂಜೆಯ ಸಮಯದಲ್ಲಿ ಇವುಗಳನ್ನು ಬಳಸುವ ಮೂಲಕ ಎಲ್ಲವೂ ಪೂಜ್ಯನೀಯ ಎಂಬ ಸಂಕೇತವನ್ನು ಇಂದಿಗೂ ಬಳಕೆ ಮಾಡುವ ಮೂಲಕ ನಮ್ಮ ಸಂಸ್ಕೃತಿ ಹಿರಿಮೆಯನ್ನು ಇಂದಿನ ಪೀಳಿಗೆಗೂ ಕೂಡ ತಿಳಿಸುವ ಮೂಲಕ ಹಬ್ಬದ ಮಹತ್ವವನ್ನು ತಿಳಿಸುವುದು ವಾಡಿಕೆ.

ವಾಹನಗಳ ಪೂಜೆ ಮಾಡಿದ ನಂತರ ತಮ್ಮ ಅಕ್ಕಪಕ್ಕದ ಮನೆಯವರಿಗೆ ಹಾಗೂ ಬಂಧು ಬಳಗದವರೊಡನೆ ಸೇರಿ ಸಿಹಿಭೋಜನ ಮಾಡುವುದು ಕೂಡ ಇಂದಿಗೂ ಉಳಿದುಕೊಂಡು ಬಂದ ಸಂಪ್ರದಾಯವಾಗಿದೆ.ಅಂದರೆ ಪ್ರೀತಿ ವಿಶ್ವಾಸದ ಮೂಲಕ ನಾವೂ ನೀವು ಒಂದಾಗಿ ಬಾಳೋಣ ಎಂಬುದು ಈ ಹಿಂದಿನ ಅರ್ಥ.ಗ್ರಾಮೀಣ ಪರಂಪರೆಯ ಈ ಸೊಗಡು ಇಂದು ಕ್ರಮೇಣ ಮಾಯವಾಗುತ್ತಿದೆ. ಜೊತೆಗೆ ಈ ಹಿಂದೆ ಮಕ್ಕಳಿಗೆ ರಜಾ ಅವಧಿ ಕೂಡ ಒಂದು ತಿಂಗಳ ಕಾಲ ಇರುತ್ತಿತ್ತು. ಎಲ್ಲರೂ ಸೇರಿ ಒಂದೆಡೆ ಬೆರೆತು ಹಬ್ಬ ಆಚರಿಸಿ ಅದರ ಮಹತ್ವ ತಿಳಿಸಲು ಅವಕಾಶ ಸಿಗುತ್ತಿತ್ತು. ಇಂದು ವೈಜ್ಞಾನಿಕ ರೀತಿಯಲ್ಲಿ ರಜೆಯ ವಿಶ್ಷೇಷಣೆ ಜರುಗಿರುವ ಕಾರಣ ಪಾಲಕರು ತಮ್ಮ ಮಕ್ಕಳೊಂದಿಗೆ ಹಳ್ಳಿಗಳಿಗೆ ತೆರಳುವುದು ಕೂಡ ಅಪರೂಪವಾಗುತ್ತಿರುವುದು. ಹೀಗಾಗಿ ಹಬ್ಬದ ಹಿನ್ನಲೆ ಆಚರಣೆಗಳು ಗೌಣವಾಗುತ್ತಿವೆಯೇನೋ ಅನಿಸುತ್ತಿದೆ. 

ಒಟ್ಟಾರೆ ಪ್ರತಿ ಹಬ್ಬಕ್ಕೂ ತನ್ನದೇ ಹಿನ್ನಲೆ ಇದೆ.ಅವುಗಳ ಮಹತ್ವವನ್ನು ಇಂದಿನ ಪೀಳಿಗೆಗೂ ತಿಳಿಸುವ ಮೂಲಕ ಆಚರಣೆಗಳು ಜರುಗುವಂತಾದರೆ ನಮ್ಮ ಸಂಸ್ಕೃತಿ ನಮ್ಮ ಆಚರಣೆಗಳು ಉಳಿದು ಬರಬಹುದು.


ವೈ.ಬಿ.ಕಡಕೋಳ

- Advertisement -
- Advertisement -

Latest News

ದಸರಾ ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ...
- Advertisement -

More Articles Like This

- Advertisement -
close
error: Content is protected !!
Join WhatsApp Group