ಸಿಂದಗಿ: ಸಾರಂಗಮಠದಲ್ಲಿ ಪ್ರತಿವರ್ಷ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳುತ್ತಿರುವ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಅವರ 130ನೇ ಜಯಂತ್ಯುತ್ಸವ ಹಾಗೂ ಶಿವಶರಣೆಯರ ಜೀವನ ಚರಿತಾಮೃತ ಪ್ರವಚನವು ನ. 14ರಿಂದ 18ರವರೆಗೆ ಪ್ರತಿನಿತ್ಯ ಸಂಜೆ 6.30ಯಿಂದ 8.30 ಗಂಟೆಯ ವರೆಗೆ ಜರುಗಲಿದೆ ಕಾರಣ ಶ್ರೀಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಶೋಭೆ ತರಬೇಕು ಎಂದು ಶಾಸಕ ಅಶೋಕ ಮನಗೂಳಿ ವಿನಂತಿಸಿದರು.
ಪಟ್ಟಣದ ಸಾರಂಗಮಠದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಂದಗಿಯ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ರಾಷ್ಟ್ರಮಟ್ಟದ ಶ್ರೇಷ್ಠ ವಿಜ್ಞಾನಿಗಳಿಗೆ ವಾರ್ಷಿಕವಾಗಿ ಕೊಡುವ ರಾಷ್ಟ್ರಮಟ್ಟದ ಭಾಸ್ಕರ ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ, ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಎ.ಎಸ್.ಕಿರಣ್ ಕುಮಾರ್ ಅವರಿಗೆ ನ.20ಕ್ಕೆ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಹೇಳಿದರು.
ಮೂಲತಃ ಹಾಸನದವರಾದ ಪ್ರೊ.ಕಿರಣ್ ಕುಮಾರ್ ಅವರು ಭೌತಿಕ ಸಂಶೋಧನಾ ಪ್ರಯೋಗಾಲಯ(ಪಿಆರ್‍ಎಲ್) ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಅಂತರಿಕ್ಷ ಆಯೋಗದ ಸದಸ್ಯರಾಗಿದ್ದಾರೆ. ಭಾರತ- ಅಮೆರಿಕ ಜಂಟಿ ಕಾರ್ಯಕಾರಿ ಸಮಿತಿಗಳಿಗೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಅಭಿಯಂತರರ ಅಕಾಡೆಮಿ, ಭಾರತೀಯ ರಾಷ್ಟ್ರೀಯ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ, ಏರೋಸ್ಪೇಸ್ ಹಿಸ್ಟಾರಿಕಲ್ ಸೊಸೈಟಿ ಮತ್ತು ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರ್ಯಾಜುಯೆಟ್ ಏರೋಸ್ಪೇಸ್ ಲ್ಯಾಬರೋಟರೀಸ್ ಅವರು ಜಂಟಿಯಾಗಿ ಸ್ಥಾಪಿಸಿದ ಪ್ರತಿಷ್ಠಿತ ಅಂತಾರಾಷ್ಟ್ರೀಯ ವಾನ್ ಕಾರ್ಮಾ ನ್ ವಿಂಗ್ಸ್ ಪ್ರಶಸ್ತಿ ಮತ್ತು ಫ್ರಾನ್ಸ್ ಸರ್ಕಾರ ಕೊಡಮಾಡುವ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿ ಲೀಜನ್ ಡಿ ಆನರ್ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ ಎಂದರು.
ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಚೇರಮನ್ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, 20ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಾತವೀರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಮತಿ ಸುಹಾಸಿನಿ ಸಿಲಿನ ಅವರು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮಾತನಾಡುವ ಹಾಗೂ ಹಾಡುವ ಕಲೆಯ ಬಗ್ಗೆ ಮಾಹಿತಿ ನೀಡುತ್ತ ಸಂವಾದ ನಡೆಸಲಿದ್ದಾರೆ ಕಾರಣ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಪ್ರತಿಷ್ಠಾನದ ಸಂಚಾಲಕ ವ್ಹಿ.ಡಿ.ವಸ್ತ್ರದ ಮಾತನಾಡಿ, 23 ರಂದು ಸಂಜೆ 6. 30 ಗಂಟೆಗೆ ಗೊರಗುಂಡಗಿಯ ಪ್ರಗತಿಪರ ರೈತ ಗುರುಬಸಪ್ಪ ಚೆನ್ನವೀರಪ್ಪ ಯಲಗೋಡ ಅವರಿಗೆ ಸಾರಂಗಶ್ರೀ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 27 ರಂದು ಗೌರಿ ಹುಣ್ಣಿಮೆ ಪ್ರಯಕ್ತ 324ರ ಸದ್ವಿಚಾರಗೋಷ್ಠಿ ಜರುಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪವಿವ ಸಂಸ್ಥೆಯ ಸಂಚಾಲಕ ನೆಹರೂಜಿ ಪೋರವಾಲ, ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಹ.ಮ.ಪೂಜಾರ, ಆಡಳಿತಾಧಿಕಾರಿ ಬಿ.ಜಿ.ಮಠ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಶಿಕ್ಷಕ ಎಸ್.ಎಮ್.ಬಿರಾದಾರ, ಬಸಯ್ಯ ಮಠ, ಉಪನ್ಯಾಸಕ ವೀರೇಶ ಜೋಗೂರ, ಶ್ರೀಶೈಲ ನಂದಿಕೋಲ ಸೇರಿದಂತೆ ಇತರರು ಉಪಸ್ಥಿತರಿದ್ದರು.