ಮೂಡಲಗಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೇ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ ಷಷ್ಟ್ಯಬ್ಧಿ ಸಂಭ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮನುಷ್ಯ ತಾನು ಗಳಿಸಿದ ಸಂಪತ್ತು ಸತ್ತ ಮೇಲೆ ಜೊತೆಗೆ ತಗೆದುಕೊಂಡು ಹೋಗುವುದಿಲ್ಲ. ಮನುಷ್ಯ ಜೀವಂತ ಇದ್ದಲ್ಲಿ ವಯೋವೃದ್ದರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಅಲ್ಲದೇ ಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರ ನೀಡಿದರೇ ಪುಣ್ಯ ಪ್ರಾಪ್ತಿಯಾಗುತ್ತಿದೆ. ಮನುಷ್ಯನ ಈ ಶರೀರ ನಾಶವಾಗುತ್ತದೆ. ಸತ್ಕಾರ್ಯಗಳಿಗೆ ನೀಡಿದ ಸಹಾಯವೇ ಶ್ರೇಷ್ಠವಾಗುತ್ತದೆ. ನಾವು ಆನಂದ, ಸುಖದಿಂದ ಇದ್ದರೇ ಸಾಲದು ಪರರಿಗೂ ಸಹಾಯ ಮಾಡಿದರೇ ಅದುವೇ ಸುಖ,ಆನಂದ ಸಿಗುತ್ತದೆ. ಇನ್ನೊಬ್ಬರಿಗೆ ಕಷ್ಟದಲ್ಲಿ ಸ್ಪಂದಿಸಿದರೇ ಮುಂದಿನ ಜನ್ಮದಲ್ಲಿ ಮಾನವ, ಮಹಾದೇವನ ರೂಪದಲ್ಲಿ ಹುಟ್ಟುತ್ತೇವೆ. ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಮಹಾತ್ಮರ ಆಶೀರ್ವಚನ ಕೇಳುವುದರ ಮೂಲಕ ಜನ್ಮ ಸಾರ್ಥಕವಾಗುತ್ತದೆ. ಗುರುಗಳ ಅಪೇಕ್ಷೆಗಿಂತ ಭಕ್ತರು ನಿಷ್ಫಲ ಮನಸ್ಸಿನಿಂದ ಕಾರ್ಯ ಮಾಡಿದರೆ ಗುರುವಿನ ಆಶೀರ್ವಾದ ಸದಾ ಇರುತ್ತದೆ. ಮನುಷ್ಯನಿಗೆ ಯಾವುದೇ ಕಷ್ಟ ಬಂದರೂ ಸಹ ಗುರು ಅದನ್ನು ದೂರಮಾಡುತ್ತಾನೆ. ಗುರುವಿನ ಸೇವೆ ಅತೀಅಮೂಲ್ಯವಾದದ್ದು ಅದನ್ನು ಸದುಪಯೋಗ ಪಡಿಸಿಕೊಂಡರೆ ಮನುಷ್ಯ ಜನ್ಮವು ಪಾವನವಾಗುತ್ತದೆ. ಭಕ್ತಿ,ಶೃದ್ಧೆಯಿಂದ ಗುರುವಿನಲ್ಲಿ ಕಾಣಬೇಕೆಂದರು. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾದದ್ದು ಆದ್ದರಿಂದ ನಿಜಗುಣ ದೇವರು ಗುರುವಿನ ಕೃಪಾ ಆಶೀರ್ವಾದದಿಂದ ಶ್ರೀಮಠವು ಶೈಕ್ಷಣಿಕ, ಸಾಮಾಜಿಕ, ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಂಗಕ್ಕೆ ಒಯ್ಯುತ್ತಿದ್ದಾರೆ ಎಂದರು.
ವೇದಿಕೆ ಮೇಲೆ ಶ್ರೀಮಠದ ಶ್ರೀ ನಿಜಗುಣ ದೇವರು, ಷಷ್ಟ್ಯಬ್ಧಿ ಸಂಭ್ರಮದ ಗೌರವಾಧ್ಯಕ್ಷರು ಹಾಗೂ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರಿನ ಗಣೇಶಾನಂದ ಮಹಾರಾಜರು, ಸುಣಧೋಳಿಯ ಶ್ರೀ ಅಭಿನವ ಶಿವಾನಂದ ಮಹಾಸ್ವಾಮೀಜಿ, ಬೆಂಗಳೂರಿನ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಮಾದಾರ ಚನ್ನಯ್ಯಪೀಠದ ಚನ್ನಯ್ಯ ಮಹಾಸ್ವಾಮಿಗಳು, ಕೊಟಬಾಗಿಯ ಶ್ರೀ ಪ್ರಭುದೇವರು, ಶಾಮಾನಂದ ಪೂಜೇರಿ ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ದಾನಿಗಳಿಗೆ, ಗಣ್ಯರಿಗೆ, ಪೂಜ್ಯರಿಗೆ ಸನ್ಮಾನಿಸಲಾಯಿತು. ಗುರುನಾಥ ಶಾಸ್ತ್ರೀ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.