spot_img
spot_img

ಲಿಂಗಾಯತ ಕವಿಯೂ ಒಂದು ರಾಮಾಯಣ ಬರೆದ ; ಅದರ ಹೆಸರು ಕೌಶಿಕ ರಾಮಾಯಣ!

Must Read

spot_img
- Advertisement -

ಮಹರ್ಷಿ ವಾಲ್ಮೀಕಿಗಳು ಮೂಲ ರಾಮಾಯಣವನ್ನು ಬರೆದ ನಂತರ ದೇಶ-ವಿದೇಶಗಳಲ್ಲಿ ಅನೇಕರು ಈ ಕೃತಿಯನ್ನು ಅನುಕರಿಸಿ ನೂರಾರು ರಾಮಾಯಣ ಕೃತಿಗಳನ್ನು ರಚಿಸಿದ್ದಾರೆ. ನಿರೀಶ್ವರವಾದಿಗಳಾದ ಜೈನರೂ ಕೂಡ ಈ ರಾಮಾಯಣದ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ರಾಮಚಂದ್ರಚರಿತ ಪುರಾಣ ಅಥವಾ ಪಂಪ ರಾಮಾಯಣ, ಕುಮುದೇಂದು ರಾಮಾಯಣ ಮೊದಲಾದ ಕಾವ್ಯಗಳು ಇದಕ್ಕೆ ಸಾಕ್ಷಿ. ಅದಕ್ಕೆ ಕುಮಾರವ್ಯಾಸ ತನ್ನ ಭಾರತ ಕಥಾ ಮಂಜರಿಯಲ್ಲಿ ‘ತಿಣುಕಿದನು ಫಣಿರಾಯ ರಾಮಾಯಣ ಕವಿಗಳ ಭಾರದಲಿ’ ಎಂದು ಹೇಳುತ್ತಾನೆ. ಇಡೀ ಭೂಮಂಡಲವನ್ನೇ ಹೊತ್ತು ನಿಂತ ಆದಿಶೇಷ ಕೂಡ ಈ ರಾಮಾಯಣ ಬರೆದ ಕವಿಗಳ ಭಾರಕ್ಕೆ ತಿಣುಕಾಡಿದನು ಎಂದು ಕುಮಾರವ್ಯಾಸ ಹೇಳುತ್ತಾನೆ. ಹೀಗಾಗಿ ಇಡೀ ಭಾರತ ಮಾತ್ರವಲ್ಲದೆ, ಜಗತ್ತಿನ ನಾನಾ ಸಮುದಾಯದವರು ಈ ರಾಮಾಯಣದ ಪ್ರಭಾವ-ಪ್ರೇರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಲಿಂಗಾಯತ ಕವಿಯಾದ ಬತ್ತಲೇಶ್ವರನು ಕೂಡ ಒಂದು ರಾಮಾಯಣವನ್ನು ರಚಿಸಿದ. ಅದರ ಹೆಸರು ಕೌಶಿಕ ರಾಮಾಯಣ ಎಂದೇ ಖ್ಯಾತವಾಗಿದೆ.

೧೯೬೬ರಲ್ಲಿ ಈ ರಾಮಾಯಣ ಪುತ್ತೂರಿನಿಂದ ಪ್ರಕಟವಾಗಿದೆ. ಶಿವರಾಮ ಕಾರಂತರು ಸಂಪಾದಿಸಿ ಪ್ರಕಟಿಸಿದ್ದಾರೆ. ೪೪ ಸಂಧಿಗಳು, ೨೬೦೦ ಭಾಮಿನಿ ಷಟ್ಪದಿ ಪದ್ಯಗಳನ್ನು ಒಳಗೊಂಡ ಬೃಹತ್ ಕಾವ್ಯ ಇದಾಗಿದೆ. ಬತ್ತಲೇಶ್ವರ ಕವಿ ಕುರಿತು ನಮಗೆ ಸಿಗುವ ವಿವರಗಳು ಸಂಕ್ಷಿಪ್ತವಾಗಿವೆ. ಬತ್ತಲೇಶ್ವರ ಕಾವ್ಯದಲ್ಲಿ ತನ್ನ ಹೆಸರನ್ನು ಆತ ಮೇಲಿಂದ ಮೇಲೆ ಹೇಳುತ್ತ ಹೋಗಿಲ್ಲ. ರಾಮಾಯಣದ ಕತೆ ವಾಲ್ಮೀಕಿಯಿಂದ ಬಂದುದೆಂಬುದರಿಂದ, ಅವನಿಗೆ ಪ್ರಥಮ ಮನ್ನಣೆಯನ್ನು ಸಲ್ಲಿಸಿ, ಮೂಲ ರಾಮಾಯಣದಲ್ಲಿ ಇಲ್ಲದಿರುವ ಮೈರಾವಣನ ಕಾಳಗವನ್ನು ಸೇರಿಸಿದಲ್ಲಿ ಮಾತ್ರ ಎರಡೋ, ಮೂರೋ ಕಡೆ ತನ್ನ ಹೆಸರನ್ನು ತಿಳಿಸಿದ್ದಾನೆ.

ಕವಿಯ ಕಾಲದ ಕುರಿತು ಕವಿ ಚರಿತೆಕಾರರಾದ ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಕವಿಯ ಹೆಸರು ಬತ್ತಲೇಶ್ವರ ಎಂದಿರುವಂತೆ, ಕೆಲವು ಕಡೆ “ನಿರ್ವಾಣ ನಾಯಕ’, ‘ನಿರ್ವಾಣಲಿಂಗ’ ಎಂಬ ಪರ್ಯಾಯ ಪದಗಳಿವೆ- ಎಂದಿದ್ದಾರೆ. ಕವಿ ಈ ರಾಮಾಯಣದ ಮೈರಾವಣನ ಕಾಳಗದಲ್ಲಿ ಎರಡು ಮೂರು ಕಡೆ ಮಾತ್ರವೇ ತಾನು ಬತ್ತಲೇಶ್ವರ ಎಂದು ಹೇಳಿಕೊಂಡಿದ್ದಾನೆ. ರುಂಡ ಭೈರವನ ಕಥೆಯಲ್ಲಿಯೂ ಒಂದೆರಡು ಬಾರಿ ಬತ್ತಲೇಶ್ವರ ಎಂದು ಹೇಳಿದಂತಿದೆ. ಕವಿಚರಿತೆಕಾರರು ಕೊಟ್ಟಿರುವ ಮುಖ್ಯ ಆಧಾರ- ಗುರುರಾಜ ಚಾರಿತ್ರದಲ್ಲಿ (ಸು ೧೬೫೦) ದೇವರಾಯನ (೧೪೧೯-೧೪೪೬) ಆಳಿಕೆಯಲ್ಲಿ ಕರಸ್ಥಳದ ನಾಗಲಿಂಗ, ವೀರೊಣ್ಣೊಡೆಯರು ಮುಂತಾದ ೧೦೧ ವಿರಕ್ತರ ಹೆಸರಲ್ಲಿ ಅವನ ಹೆಸರಿದೆ ಎಂದು ತಿಳಿಸಿದ್ದಾರೆ. ಈ ೧೦೧ ವಿರಕ್ತರಲ್ಲಿ ಬತ್ತಲೇಶ್ವರ ಒಬ್ಬನಾಗಿದ್ದಾನೆ. ವಿರಕ್ತರ ಗೋಷ್ಠಿಯಲ್ಲಿ ಬತ್ತಲೇಶ್ವರನೆಂಬ ವಿರಕ್ತನಿದ್ದನೆಂಬ ಉಲ್ಲೇಖ ವಿರೂಪಾಕ್ಷನ ಚನ್ನಬಸವ ಪುರಾಣದ ಪದ್ಯದಲ್ಲಿ ಬರುತ್ತದೆ.

- Advertisement -

ಬತ್ತಲೇಶ್ವರನೆಂಬ ಶಿವಯೋಗಿ ಗುಹೆಯಲ್ಲಿ 

ಬತ್ತಿದ ಶರೀರದಿಂದಿರೆ ನೃಪತಿ ನೋಡುತ್ತೆ

ವೃತ್ತ ಕುಚೆ ನೀನೀತನಂ ಒಲಿಸಲಾಷೆಯೂ ಎಂದೊಡಾ ಪದ್ಮಾವತಿ……….. 

- Advertisement -

ಈ ಕವಿಯು ತನ್ನ ಕಾವ್ಯದಲ್ಲಿ ರಾವಣ ಬತ್ತಲೆಯಾದ ಎಂಬ ಸಂದರ್ಭದಲ್ಲಿ- ಭೈರವನಾದ ಎಂದು ವರ್ಣಿಸಿದ್ದಾನೆ; ಬತ್ತಲೆಯಾಗಿ ಓಡಿದ ರಕ್ಕಸರನ್ನು ಬತ್ತಲೇಶ್ವರರಾಯ್ತು ಎಂದು ಬಣ್ಣಿಸಿದ್ದಾನೆ. ಅವನ ಕಾಲದಲ್ಲಿ ಭೈರವನು ಬತ್ತಲೆ ಎಂಬ ಒಂದು ಕಲ್ಪನೆಯಿದ್ದಂತೆ ಕಾಣಿಸುತ್ತದೆ. ಪುರಾಣಗಳು ಶಿವ ಬತ್ತಲೆ ಎನ್ನುವ ಆಧಾರಗಳನ್ನು ಒದಗಿಸುವುದಿಲ್ಲ. ‘ಬತ್ತಲೇಶ್ವರ’ ಎಂಬ ಶಬ್ದದ ನಿಷ್ಪತ್ತಿ ತುಸು ಕಷ್ಟ. 

ಈ ಪುರಾಣದಲ್ಲಿ ಪ್ರಮುಖ ಪವಿತ್ರ ಸ್ಥಳವಾಗಿ ಕಾಣಿಸಿಕೊಂಡ ‘ಯಾಣ’ಕ್ಕೆ ಅನೇಕ ಲಿಂಗಾಯತರು ಯಾತ್ರೆಗೆ ಬರುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಹೀಗಿದ್ದ ಪಕ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ೧೬ನೇ ಶತಮಾನದ ಕಾಲಕ್ಕೆ ಬತ್ತಲೇಶ್ವರ ಎಂಬ ಲಿಂಗಾಯತ ಕವಿ ಅಲ್ಲಿಯ ಪರಿಸರಕ್ಕೆ ಅನುಗುಣವಾಗಿ ರಾಮಾಯಣ ಕಥೆಯನ್ನು ಬರೆದ ಎಂಬುದು ನಿಜವೆನಿಸುತ್ತದೆ.  ಚನ್ನಬಸವೇಶ್ವರರ ಉಳವಿ, ಭೈರವನ ಯಾಣ, ಮಹಾಬಲೇಶ್ವರನ ಗೋಕರ್ಣ ಸುಮಾರು ೩೦ ಮೈಲುಗಳ ಮಗ್ಗುಲುಳ್ಳ ಒಂದು ತ್ರಿಕೋಣ ಪ್ರದೇಶದ ಮೂರು ಮೂಲೆಗಳಂತಿವೆ. ಹೀಗಾಗಿ ಈ ಪರಿಸರದಲ್ಲಿದ್ದುಕೊಂಡು ಬತ್ತಲೇಶ್ವರ ತನ್ನ ರಾಮಾಯಣ ಕೃತಿಯನ್ನು ರಚನೆ ಮಾಡಿದ್ದಾನೆ. ಈ ಕವಿಯ ದೃಷ್ಟಿಯಲ್ಲಿ ರಾಮ ಬೇರೆಯಲ್ಲ, ಶಿವ ಬೇರೆಯಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಈ ರಾಮಾಯಣ ಮೂಲ ವಾಲ್ಮೀಕಿ ರಾಮಾಯಣದ ಯಥಾವತ್ತಾದ ಕನ್ನಡ ಭಾವಾನುವಾಗಿದೆ. ಇದರಲ್ಲಿ ಮೈರಾವಣನ ಕಥೆಯೊಂದನ್ನು ಹೊರತು ಪಡಿಸಿದರೆ ವಾಲ್ಮೀಕಿಗಿಂತ ಹೊಸ ಅಂಶಗಳಾವವೂ ಇಲ್ಲ. ಆದರೆ ಅಚ್ಚಗನ್ನಡದ ಭಾಮಿನಿಯ ವೈಭವ ವಿಲಾಸದಲ್ಲಿ ಕನ್ನಡ ಓದುಗರಿಗೆ ಇದು ತುಂಬ ಆಪ್ಯಾಯಮಾನವಾದ ಕಾವ್ಯವಾಗಿ ರೂಪಗೊಂಡಿದೆ. ಪ್ರಾಯಶಃ ೧೬-೧೭ನೇ ಶತಮಾನದಲ್ಲಿ ಈ ಕೃತಿಯ ಗಮಕ ವಾಚನಗಳು ಸಾಕಷ್ಟು ಪ್ರಮಾಣದಲ್ಲಿ ನಡೆದಿರುವ ಸಾಧ್ಯತೆ ಇದೆ.

 ಏನೇ ಆಗಲಿ ಲಿಂಗಾಯತ ಕವಿಯೊಬ್ಬ ರಾಮಾಯಣ ಕೃತಿಯನ್ನು ರಚಿಸಿದ್ದು ಗಮನಾರ್ಹ ಅಂಶವಾಗಿದೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group