ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಕ್ಲಾಸ್ ಟೀಚರ್ ಬೈದಿದ್ದರು. ಅವಮಾನ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟ “ಹುಡುಗಿಯ ಸಾವಿಗೆ ಟೀಚರೇ ಕಾರಣ, ಅವರನ್ನು ನಮ್ಮ ಕೈಗೆ ಕೊಡಿ”. ಬಹುಶಃ ಕೈಗೆ ಸಿಕ್ಕರೆ ಮಗುವಿನೊಂದಿಗೆ ಟೀಚರನ್ನೂ ಸಮಾಧಿ ಮಾಡುವ ಯೋಚನೆ ಇರಬಹುದು. ಸ್ವಲ್ಪ ದಿನದ ಮುಂಚೆ ಇದೇ ರೀತಿಯ ಪ್ರಸಂಗ ನಡೆದಿತ್ತು. ಪರೀಕ್ಷೆಯಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ಹುಡುಗನೊಬ್ಬನನ್ನು ಶಿಕ್ಷಕಿ ಹೊರಗೆ ನಿಲ್ಲುವಂತೆ ಸೂಚಿಸಿದ್ದರು. ಹುಡುಗ ನೇರ ಅಪಾರ್ಟ್ ಮೆಂಟ್ ಗೆ ತೆರಳಿ, ಕಟ್ಟಡದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರಣ ಆತನಿಗೆ ಅದು ಸಹಿಸಲಾರದ ಅವಮಾನವಾಗಿತ್ತು. ಪೋಷಕರು ರೊಚ್ಚಿಗೆದ್ದು ಶಿಕ್ಷಕಿ ಮೇಲೆ ಕೇಸು ದಾಖಲಿಸಿದ್ದರು. ಈ ಎರಡೂ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹತ್ತನೇ ತರಗತಿ ಕಲಿಯುತ್ತಿದ್ದರು.
ಈ ಮೇಲಿನ ಎರಡು ಘಟನೆಗಳಲ್ಲದೆ ಇನ್ನೂ ನೂರಾರು ಘಟನೆಗಳು ನಮ್ಮ ಮುಂದಿವೆ. ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಅಪ್ಪ ಬೈದ ಕಾರಣಕ್ಕಾಗಿ ಅವಮಾನಗೊಂಡು ಆತ್ಮಹತ್ಯೆ ಮಾಡಿಕೊಂಡದ್ದು ಅದರಲ್ಲೊಂದು. ಅಮ್ಮ ಮೊಬೈಲ್ ಮುಟ್ಟಬೇಡ, ಓದು ಎಂದು ಹೇಳಿದ ತಕ್ಷಣ ಮಗಳು ಮೊಬೈಲ್ ಬದಿಗಿಟ್ಟು, ಮೈಕೊಡವಿ ರೂಮಿನೊಳಗೆ ತೆರಳುತ್ತಾಳೆ. ಬಹಳ ಹೊತ್ತು ಹೊರಗೆ ಬಾರದಿದ್ದಾಗ, ಬಾಗಿಲು ತೆಗೆದು ಒಳಗಡೆ ನೋಡಿದರೆ ಮಗಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಧಿಕೃತ ವರದಿಯ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣ ಕಳೆದವರ್ಷ ಶೇಕಡಾ 7 ರಷ್ಟು ಹೆಚ್ಚಾಗಿರುವುದು ಪ್ರಜ್ಞಾವಂತ ಸಮಾಜವನ್ನು ಕಳವಳಕ್ಕೀಡು ಮಾಡಿದೆ.
ಆತ್ಮೀಯರೇ,
ಅಭಿಮನ್ಯು ತನ್ನ ಹದಿಮೂರನೇ ವಯಸ್ಸಿನಲ್ಲಿ ಚಕ್ರವ್ಯೂಹಕ್ಕೆ ನುಗ್ಗಿದ ಬಗ್ಗೆ ಓದಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಆತನಲ್ಲಿ ಅಷ್ಟೊಂದು ಪ್ರಬುದ್ಧತೆ ಇತ್ತು. ರಾಮ – ಲಕ್ಷ್ಮಣರು ವಿದ್ಯೆ ಅರಸಿ ಅರಮನೆ ತೊರೆದು ಕಾಡಿಗೆ ಹೋಗುವಾಗ ಇನ್ನೂ ಚಿಕ್ಕ ವಯಸ್ಸಿನವರೇ ಆಗಿದ್ದರು. ಅಷ್ಟೇಕೆ, ಖ್ಯಾತ ವಿಜ್ಞಾನಿ ಐನ್ ಸ್ಟೈನ್ ತನ್ನ ಹದಿನೈದನೇ ವಯಸ್ಸಿಗೆ ಪ್ರಸಿದ್ಧಿ ಪಡೆದಿದ್ದ. ಇನ್ನು ಸ್ವಾತಂತ್ರ್ಯ ಹೋರಾಟವನ್ನೇ ಗಮನಿಸಿದರೂ ಹದಿಹರೆಯದ ಅದೆಷ್ಟೋ ಹೋರಾಟಗಾರರು ನಮ್ಮ ಚರಿತ್ರೆಯ ಪುಟ ತುಂಬಿದ್ದಾರೆ. ಹಾಗಾದರೆ ಈಗಿನ ಮಕ್ಕಳ ಅವಸ್ಥೆಗೆ ಕಾರಣವೇನು ಎಂದು ಯೋಚಿಸುವ ಪ್ರಯತ್ನ ಮಾಡಬೇಡವೇ?
ಹಿಂದೆ ನಾವು ಶಾಲೆಗೆ ಹೋಗುತ್ತಿದ್ದ ಕಾಲ ನೆನಪಾಗುತ್ತಿದೆ. ಸ್ವಲ್ಪ ಎಡವಟ್ಟಾದರೂ ಬಾಸುಂಡೆ ಬರುವಂತೆ ಮನೆಯಲ್ಲಿ ಅಪ್ಪನ ಪೆಟ್ಟು. ಕಡೆಗೆ ರಾತ್ರಿ ಅಮ್ಮ ಅಪ್ಪನಿಗೆ ಕಾಣದಂತೆ ಕದ್ದು ಎಣ್ಣೆ ಹಚ್ಚಿದ್ದೂ ಇದೆ. ಶಾಲೆಗೆ ಹೋದರೆ ಮೇಸ್ಟ್ರ ಭಯ. ಸ್ವಲ್ಪ ತಪ್ಪಾದರೂ ಬೀಳುತ್ತಿದ್ದ ಛಡಿಯೇಟು. ಮನೆಗೆ ದೂರು ತಂದರೆ ಮನೆಯಲ್ಲಿ ಮತ್ತೆ ಪೆಟ್ಟು. ಹಾಗಾಗಿ ಶಾಲೆಯ ವಿಚಾರ ಮನೆಗೆ ಬರುತ್ತಾನೇ ಇರಲಿಲ್ಲ. ಕೆಲವೊಮ್ಮೆ ಮಕ್ಕಳನ್ನು ಹೆದರಿಸಲು ಪೋಷಕರು “ನಿನ್ನ ಮೇಸ್ಟರಿಗೆ ಹೇಳುತ್ತೇನೆ” ಎಂದು ಹೆದರಿಸಿ ಬಾಯಿಮುಚ್ಚಿಸಿದ್ದೂ ಇದೆ. ಹಲವು ಬಾರಿ ಹೇಳಿ ಇನ್ನೂ ಹೆಚ್ಚು ಶಿಕ್ಷೆ ಅನುಭವಿಸಿದ್ದು ಇದೆ. ಆಶ್ಚರ್ಯವೆಂದರೆ ಅಂತಹ ಪರಿಸ್ಥಿತಿಯಲ್ಲೇ ಬೆಳೆದುಬಂದ ಅನೇಕ ಮಹಾನೀಯರು ನಮ್ಮ ಮುಂದಿದ್ದಾರೆ. ವಿಶ್ವೇಶ್ವರಯ್ಯ, ಸಿ.ವಿ.ರಾಮನ್, ಗಾಂಧೀಜಿ, ಅಬ್ದುಲ್ ಕಲಾಂ… ಹೀಗೇ. ಇವರೆಲ್ಲಾ ಹಿಂದಿನ ಪದ್ಧತಿಯಲ್ಲೇ ಬೆಳೆದು ಖ್ಯಾತಿ ಪಡೆದವರು. ಶಿಕ್ಷೆ ಪಡೆಯುತ್ತಲೆ ಶಿಕ್ಷಣ ಪಡೆದವರು.
ಇತ್ತೀಚೆಗೆ ಪೋಷಕರಿಗೆ ಮಕ್ಕಳ ಮೇಲಿನ ಮಮತೆ ಬಹಳನೇ ಹೆಚ್ಚಾಗಿ ಅತಿರೇಖವಾಗಿದೆ. ಮಕ್ಕಳು ಕೇಳಿದರೆ ಚಂದ್ರನನ್ನ ತರಲು ಚಂದ್ರಯಾನಕ್ಕೂ ತಯಾರಿದ್ದೇವೆ. ಬಾಯಿಬಾರದ ಮಗು ಅತ್ತಾಗ ಮೊಬೈಲ್ ಕೈಗಿಟ್ಟು ಸಮಾಧಾನ ಪಡಿಸಲಾಗುತ್ತಿದೆ. ಮನೆಯಲ್ಲಿರುವ ನಾಲ್ಕು ಮಂದಿ ನಾಲ್ಕು ದಿಕ್ಕಿಗೆ ಮುಖ ಹಾಕಿ ಮೊಬೈಲ್ ನಲ್ಲಿ ಬ್ಯುಸಿಯಾಗಿರುವ ಚಿತ್ರಣ ಬಹುತೇಕ ಮನೆಯದ್ದು. ಮನೆಯ ಯಾವ ಕೆಲಸವನ್ನು ಮಕ್ಕಳಿಂದ ಮಾಡಿಸಲಾರೆವು. ಏಕೆಂದರೆ ಅವರು ಓದಬೇಕು. ಪದವಿ ಪಡೆದ ಮಗಳಿಗೆ ಚಹಾಪುಡಿ ಮತ್ತು ಸಾಸಿವೆ ಅಥವಾ ಸಕ್ಕರೆ ಮತ್ತು ಉಪ್ಪಿನ ನಡುವಿನ ವ್ಯತ್ಯಾಸ ಗೊತ್ತಿಲ್ಲವಾಗಿದೆ. Platform hero ಗಳಾದ ನಮ್ಮ ಮಕ್ಕಳು practically Zero ಗಳಾಗುತ್ತಿದ್ದಾರೆ. Mentally strong ಆಗಬೇಕಿತ್ತು, ಆದರೆ strongly mental ಆಗುತ್ತಿದ್ದಾರೆ ಎಂದರೆ ತಪ್ಪಾಗದು.
ಇವತ್ತು ಮಕ್ಕಳಲ್ಲಿ ತರಗತಿ ಕೋಣೆ ಗುಡಿಸಲು ಹೇಳಿದರೆ ಅಪರಾಧ, ಕಸ ಹೆಕ್ಕಿಸಿದರೆ ಅಪರಾಧ, ಶುಚಿಗೊಳಿಸಿದರೆ ಅಪರಾಧ…
ಹೀಗೇ ಅಪರಾಧಗಳ ಪಟ್ಟಿಯೇ ಬೆಳೆಯುತ್ತದೆ. ಹಾಗಾದರೆ ಮಕ್ಕಳಲ್ಲಿ ಮಾಡಿಸೋ ಕೆಲಸ ಯಾವುದು?
ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಅತ್ಯಂತ ಕ್ಲಿಷ್ಟಕರವಾದ ವೃತ್ತಿಯೆಂದರೆ ಶಿಕ್ಷಕ ವೃತ್ತಿಯಾಗಿದೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಡಿಯಿಂದ ಮುಡಿಯವರೆಗೆ ನಕಲು ನಡೆಯಲು ಕಾರಣವೇನು ?….
ಅದು ಅಂದು ಶಾಲೆಯ ಪರೀಕ್ಷೆಯಲ್ಲಿ ಚೀಟಿ ಇಟ್ಟು ಬರೆದ ಪ್ರತಿಫಲವಾಗಿರಬಹುದಲ್ಲವೇ?
ಪರೀಕ್ಷೆಯಲ್ಲಿ ಚೀಟಿ ಇಟ್ಟರೂ ಶಿಕ್ಷಕರು ಮೌನವಾಗಿರಬೇಕೆಂದು ಸಮಾಜದ ನಿರೀಕ್ಷೆಯೇ ?….
ಹಾಗಾದರೆ ಪರೀಕ್ಷೆಯೆಂಬ ನಾಟಕವೇಕೆ?
ಹೋಮ್ ವರ್ಕ್ ಕೊಡದಿದ್ದರೆ ಮೇಲಧಿಕಾರಿಯಿಂದ ತರಾಟೆ. ಹೋಂ ವರ್ಕ್ ಮಾಡಿದ ಬಗ್ಗೆ ಶಾಲೆಯಲ್ಲಿ ಮಕ್ಕಳನ್ನು ವಿಚಾರಿಸಿದರೆ ಮಕ್ಕಳಿಗೆ ಅವಮಾನ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ ಶಿಕ್ಷಕರು ಅಪರಾಧಿಗಳು, ಮಾರ್ಕ್ ಹೆಚ್ಚು ಬರಲು ಪ್ರಯತ್ನಿಸಿದರೆ ಮಕ್ಕಳಿಗೆ ಒತ್ತಡ…
ಹೀಗೇ ಮಕ್ಕಳಿಗೆ ರಕ್ಷಣೆ ನೀಡುವ ವಿಪರೀತ ಪ್ರಯತ್ನ ಮಕ್ಕಳ ಒತ್ತಡ ನಿರೋಧಕ ಶಕ್ತಿಯನ್ನೇ ಕಸಿದುಕೊಂಡಿಲ್ಲವೇ?..
ನನ್ನಪ್ಪ ಅಮ್ಮನಿಗೆ ಹದಿನಾಲ್ಕರ ಹರೆಯದಲ್ಲಿ ಮದುವೆ. ಅತ್ತೆಗೆ ಹನ್ನೆರಡರಲ್ಲೇ ಮದುವೆಯಂತೆ. ಆದರೆ ಅವರು ಸುದೀರ್ಘ ಅವಧಿ ಒಟ್ಟಾಗಿ, ಒಂದಾಗಿ ಅದೆಷ್ಟು ಸುಂದರವಾಗಿ ಬದುಕಿದರು. ಆದರೆ ಪ್ರಬುದ್ಧ ವಯಸ್ಸು ಬಂದು ವಿವಾಹವಾದ ಯುವಕ ಯುವತಿಯರು ವರ್ಷ ಪೂರ್ತಿಯಾಗುವ ಮುಂಚೆ ಡೈವೋರ್ಸ್ ಗಾಗಿ ಅಲೆದಾಡುತ್ತಿಲ್ಲವೇ ?…. ಹಾಗಂತ ವಯಸ್ಸಿಗಿಂತ ವಯಸ್ಸನ್ನು ಮಾಗಿಸುವ ವಿಧಾನ ಬದಲಾಗಬೇಕಿದೆ. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಮನೋಸ್ಥಿತಿ ಬೆಳೆಸಬೇಕಿದೆ.
ಮಕ್ಕಳಲ್ಲಿ ನಿದ್ರಾಹೀನತೆ ಇಂದು ಅಸಹಿಷ್ಣುತೆಗೆ ಬಹುಮುಖ್ಯ ಕಾರಣಗಳಲ್ಲಿ ಒಂದು. ಖಿನ್ನತೆ, ಅತಿಯಾದ ಮೊಬೈಲ್ ಬಳಕೆಗಳಲ್ಲದೆ ಮಾದಕ ವಸ್ತುಗಳು ಮಕ್ಕಳ ಮನಸ್ಸನ್ನು ಕದಡುತ್ತಿವೆ.
ಇಂದು ಶಿಕ್ಷಕರು ಅಸಹಾಯಕರಾಗಿದ್ದಾರೆಂದರೆ ತಪ್ಪಾಗದು. ಮಕ್ಕಳನ್ನು ಯಾವ ಬಗೆಯಲ್ಲಿ ನಿರ್ವಹಿಸಬೇಕೆಂಬುವುದೇ ಯಕ್ಷಪ್ರಶ್ನೆ. ಹೇಗಿರಬೇಕೆಂದು ಹೇಳುವುದಕ್ಕೂ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ತರಗತಿಯಲ್ಲಿ ಮಕ್ಕಳನ್ನು ವಿಚಾರಿಸಿದಾಗ ನಾಲ್ಕು ಮಂದಿಯಲ್ಲಿ ಮೊಬೈಲ್ ಪತ್ತೆಯಾಯಿತು. ಮೊಬೈಲ್ ತೆಗೆದು ಒಳಗಿಟ್ಟೆವು. ಆದರೆ ರಾತ್ರಿಪೂರ್ತಿ ನಿದ್ರೆಯಿಲ್ಲ. ಮಕ್ಕಳು ಏನಾದರೂ ಅನಾಹುತ ಮಾಡಿಕೊಂಡರೆ..! . ಮರುದಿನ ಗೌರವದಿಂದ ಅವುಗಳನ್ನು ಕೊಟ್ಟು ಕಳಿಸಿದೆವು. ಏಕೆಂದರೆ ನಾವು ಬದುಕಬೇಕಿತ್ತು.
ಇಂತಹದ್ದೇ ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ಹುಡುಗನೊಬ್ಬ ಶಾಲೆಗೆ ಆಗಾಗ ತಪ್ಪಿಸುತ್ತಿದ್ದ. ಪೋಷಕರ ಗಮನಕ್ಕೆ ತಂದಿದ್ದೆ. ಅಂದು ಆತ ಶಾಲೆಗೆ ಬಂದಿರಲಿಲ್ಲ. ಸಂಜೆ ಅಪ್ಪನಿಂದ ಪೋನಲ್ಲಿ ಮಗನ ಬಗ್ಗೆ ವಿಚಾರಿಸಿದರು. ಮಗ ಶಾಲೆಗೆ ಬಂದಿಲ್ಲ ಅಂದೆ. ಆಗ ಮೊಬೈಲ್ ಮಗನ ಕೈಗೆ ಕೊಟ್ಟರು. “ಸರ್, ನೀವ್ಯಾಕೆ ಸುಳ್ಳು ಹೇಳೋದು, ನಾನು ಕ್ಲಾಸಲ್ಲೇ ಕುಳಿತಿದ್ದೆ. ನೀವೇ ಇವತ್ತು ಶಾಲೆಗೆ ಬಂದಿಲ್ಲ.” ಅನ್ನಬೇಕೆ. ನನಗೆ ಶಾಕ್. “ಎಲ್ಲಿ ಮಾರಾಯಾ, ನಾನು ಎಂಟು ಗಂಟೆಗೆ ಶಾಲೆಯಲ್ಲಿದ್ದೆ. ನಿನ್ನ ಕ್ಲಾಸಿಗೆ ಎರಡು ಅವಧಿ ಪಾಠ ಮಾಡಿದ್ದೆ” ಅಂದಾಗ “ಸರ್, ನೀವು ಈ ರೀತಿ ಸುಳ್ಳು ಯಾಕೆ ಹೇಳುತ್ತೀರಿ? ಮಾಸ್ಟ್ರಾಗಿ ನೀವು ಸುಳ್ಳು ಹೇಳಬಹುದಾ?” ಎಂದು ಕೇಳಿದಾಗ ನಾನು ತತ್ತರಿಸಿದ್ದೆ. ಕರೆ ಕಟ್ ಮಾಡಿ ಒಂದಿಬ್ಬರು ವಿದ್ಯಾರ್ಥಿಗಳಲ್ಲಿ ವಿಚಾರಿಸಿದೆ, ಇತರೆ ಶಿಕ್ಷಕರಲ್ಲೂ ವಿಚಾರಿಸಿದೆ. ಆತ ಶಾಲೆಗೆ ಬಂದಿಲ್ಲ ಎಂಬುವುದನ್ನು ದೃಢಪಡಿಸಿದೆ. ಮತ್ತೆ ಕಾಲ್ ಮಾಡಿದೆ. ತೆಗೆದದ್ದು ಅಪ್ಪ. ಅಪ್ಪನಿಗೆ ನನ್ನ ಮಾತಲ್ಲಿ ನಂಬಿಕೆ ಬರಲೇ ಇಲ್ಲ. “ನನ್ನ ಮಗ ಯಾಕೆ ಸುಳ್ಳು ಹೇಳುತ್ತಾನೆ?” ಎಂದು ನನ್ನನ್ನೇ ಪ್ರಶ್ನಿಸಬೇಕೇ?….
ಇಂತಹದ್ದೇ ಇನ್ನೊಂದು ಪ್ರಸಂಗದಲ್ಲಿ ವಿದ್ಯಾರ್ಥಿನಿಯ ತಾಯಿಯೊಬ್ಬಳು “ನನ್ನ ಮಗಳು ಈ ತನಕ ಸುಳ್ಳು ಹೇಳಿಲ್ಲ, ಇನ್ನೂ ಹೇಳಲ್ಲ” ಎಂದು ನನ್ನ ಮೇಲೆ ರೇಗಿದ್ದಳು.
ಪೋಷಕರಾದ ನಾವೆಲ್ಲಾ ಈ ನಿಟ್ಟಿನಲ್ಲಿ ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ. ನಮ್ಮಿಂದ ಅಥವಾ ನಮ್ಮ ಮಕ್ಕಳಿಂದ ಆದ ತಪ್ಪಿಗೆ ಶಿಕ್ಷಕರ ಮೇಲೆ ಗೂಬೆ ಕೂರಿಸುವ ನಮ್ಮ ಮನಸ್ಥಿತಿ ಸರಿಪಡಿಸಿಕೊಂಡು ನಡೆಯಬೇಕಾಗಿದೆ. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ತೀರಾ ಹದಗೆಟ್ಟ ಪರಿಸ್ಥಿತಿ ನಮ್ಮದಾಗಬಹುದು. ಸರಿಪಡಿಸಲಾರದ ಸ್ಥಿತಿಗೆ ತಲುಪಿದಾಗ ಪಶ್ಚಾತ್ತಾಪವೊಂದೇ ನಮ್ಮ ಮುಂದೆ ಉಳಿದ ದಾರಿಯಾಗಬಹುದು….
ಈಗಿನ ಜನತೆಗೆ ಮಾಡಿದ ತಪ್ಪನ್ನು ಅರಿತು ಪಶ್ಚಾತ್ತಾಪ ಪಡುವಷ್ಟು ವ್ಯವಧಾನವೂ ಇಲ್ಲದಾಗಿದೆ ಎಂಬುದು ಪ್ರಾಯಶಃ ಅಪ್ಪಟ ಸತ್ಯ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
ವಾಸ್ತವಿಕತೆಯ ಕನ್ನಡಿ.
ಮುಂದಿನ ಶೈಕ್ಷಣಿಕತೆಗೆ ಮುನ್ನುಡಿ.
ಪ್ರಚಲಿತ ವಿದ್ಯಮಾನಗಳ ಬದಲಾವಣೆಗೆ ಎಲ್ಲಾ ಶಿಕ್ಷಕರಿಗೂ ಸಹಕಾರಿ.
ತಮ್ಮ ಲೇಖನ ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿತಲ್ದೇ ಇಂದಿನ ತಂದೆ ತಾಯಿಗಳಿಗೆ ಮಕ್ಕಳ ಜವಾಬ್ದಾರಿ ಏನು ಎಂದು ತಿಳಿದು ನಂತರ ಶಿಕ್ಷಕರನ್ನು ದೂರಲಿ.