ಕವನ

Must Read

ಹೀಗೊಂದು ಕಿವಿ ಮಾತು

ಒಳ್ಳೆಯವರಿಗಿದು ಕಾಲವಲ್ಲ ಅನ್ನುವವರ ನಡುವೆ ಒಳ್ಳೆಯವರು ಸಿಕ್ಕಾಗೆಲ್ಲ ಖುಷಿಗೂ ಕಣ್ಣೀರಾಗುತ್ತೇನೆ ನಾನು…

ಅಪರಿಚಿತ ಊರಿನಲ್ಲಿ ಸಿಕ್ಕ ಆಪತ್ಭಾಂಧವರ ಕಂಡು ನಿಡುಸುಯ್ಯುತ್ತೇನೆ….
ಕಾಲ ಕೆಟ್ಟಿಲ್ಲ ಕೆಟ್ಟದ್ದು ಮನುಷ್ಯನಷ್ಟೇ ಅನ್ನುವ ಅರಿವಾದಾಗ…

ಬಿಸಿಲ ಝಳದ ನಡುವೆ ನಡೆದು ಹೋಗುವಾಗ ಯಾರೋ ಬಂದು ಕೊಡೆ ಹಿಡಿಯುತ್ತಾರೆ,
ರಸ್ತೆ ದಾಟಲು ಪರದಾಡುವ ಮುದುಕ ಮುದುಕಿಯರ ಕೈ ಹಿಡಿದು ದಾಟಿಸುತ್ತಾರೆ.

ಕೊಚ್ಚೆಗೆ ಬಿದ್ದ ಬೆಕ್ಕಿನ ಮರಿಯನ್ನು ಆಳಕ್ಕೆ ಇಳಿದು ಮೇಲೆತ್ತುತ್ತಾರೆ.
ನಗುವವರ ನಡುವೆಯೇ ಮೌನವಾಗಿ ಅಲ್ಲಿಂದ ಕಳೆದು ಹೋಗುತ್ತಾರೆ.

ಎನ್ ಜಿ ಓ ಬಿಡು ಮಾರಾಯ ದುಡ್ಡು ಬರುತ್ತೆ ಅನ್ನುವವರ ನಡುವೆಯೇ ಸಮಾಜದ ಕೊನೆಯ ವ್ಯಕ್ತಿಗೂ ಅವರು ಯಾರೋ ಶಕ್ತಿ ತುಂಬುತ್ತಾರೆ…

ಬರಿ ಮೋಸದ ಜಾಲವೇ ತುಂಬಿದೆ ಲೋಕದಲ್ಲಿ ಅನ್ನುವವರ ನಡುವೆ ನಿರ್ವಾಹಕನೊಬ್ಬ ಪ್ರಯಾಣಿಕರ ಇಳಿಸುವಾಗ ಚಿಲ್ಲರೆ ಯಾರಲ್ಲಿ ಕೇಳಿ ಪಡೆಯಿರಿ ಅಂತ ಕೂಗು ಹಾಕುತ್ತಾರೆ.

ರೈಲು ಪ್ಲಾಟ್ ಫಾರ್ಮಗಳಲ್ಲಿ ದಿಕ್ಕಿಲ್ಲದೆ ಕುಳಿತವನಿಗೆ ಯಾರೋ ಬಂದು ಊಟ ನೀರು ಕೊಡುತ್ತಾರೆ.

ರಾತ್ರಿ ತಡವಾಗಿ ಬಾರದ ಬಸ್ಸಿಗೆ ಕಾಯುತ್ತ
ಕುಳಿತ ಒಂಟಿ ಮಹಿಳೆಗೆ ಅಕ್ಕ ಭಯ ಪಡಬೇಡಿ ನಾವಿದ್ದೀವಿ ಅಂತ ಇನ್ಯಾರೋ ಧೈರ್ಯ ತುಂಬುತ್ತಾರೆ

ಅಷ್ಟೇ ಯಾಕೆ ಸ್ವಾಮಿ ಬಿದ್ದು ನೋಡಿ ಬೈಕಿನಿಂದೊಮ್ಮೆ ಆಯ ತಪ್ಪಿ ಜನರು ಓಡಿ ಬಂದು ಎಬ್ಬಿಸಿ ನೀರು ಕೊಟ್ಟು ಸುಧಾರಿಸಿಕೊಳ್ಳಿ ಅನ್ನುತ್ತಾರೆ…

ಒಳ್ಳೆಯವರ ಕೊರತೆ ಖಂಡಿತ ಇಲ್ಲ ನಮಗೆ ಈ ಲೋಕ ಸುಂದರವಾಗಿ ಕಾಣಿಸಲು ನಂಬಿಕೆಯ ಕೊರತೆ ಇದೆ ಅಷ್ಟೇ…

ಪೋಲಿಸರು ಬೆತ್ತದಿಂದ ಬಾರಿಸುತ್ತಾರೆ ಅವಾಚ್ಯವಾಗಿ ಬೈಯ್ಯುತ್ತಾರೆಂದು ಹಳಿಯುವವರೇ ಹುಡುಕಿ ನೋಡಿ ಎಷ್ಟೋ ಜನ ಖೈದಿಗಳಿಗೂ ಊಟ ಕೊಟ್ಟು ತಲೆಯ ನೇವರಿಸುತ್ತಾರೆ..
ಮತ್ತೆ ತಪ್ಪುಗಳ ಮಾಡದಂತೆ ಬುದ್ದಿ ಹೇಳಿ ತಿದ್ದುತ್ತಾರೆ

ನಿಮ್ಮ ಬೇಜವಾಬ್ದಾರಿಗೆ ಕಳೆದುಕೊಂಡ ಅಂಕಪಟ್ಟಿ ಅಷ್ಟೇ ಅಲ್ಲ ಕದ್ದ ಮಾಲನ್ನೂ ಕಳ್ಳರು ಒಮ್ಮೊಮ್ಮೆ ಪ್ರಾಮಾಣಿಕವಾಗಿ ಮರಳಿಸುತ್ತಾರೆ….

ಈಗೀಗ ಪ್ರಾಮಾಣಿಕರೇ ಉಳಿದಿಲ್ಲ ಎಂದು ಹಳ ಹಳಿಸುವವರೇ ಬದುಕ ಪಯಣದಲ್ಲಿ ಒಬ್ಬರ ಕಷ್ಟಕ್ಕೆ ಸ್ಪಂದಿಸಿ ನೋಡಿ ನಿಮಗೆ ಕಷ್ಟಗಳೆ ಬರದಂತೆ ಮತ್ಯಾರೋ ತಡೆಯುತ್ತಾರೆ..

ಚಪ್ಪಾಳೆ ತಟ್ಟಲು ಹಿಂದೇಟು ಹಾಕುವವರೇ
ಬೆಳೆಯುವ ಪ್ರತಿಭೆಗಳ ಬೆನ್ನು ತಟ್ಟಿ ನೋಡಿ ಮುಗಿಲೆತ್ತರ ಬೆಳೆದರೂ
ನಿಮ್ಮನ್ನು ಮತ್ಯಾರೋ ಗುರು ಅನ್ನುತ್ತಾರೆ ಅವಕಾಶ ಸಿಕ್ಕುವ ಗುರುತಿಸಿ ಗೌರವಿಸಿತ್ತಾರೆ

ಮನುಷ್ಯತ್ವ ಕಳೆದಿದೆ ಎಂದು ಮರಗುವವರೇ
ಮತ್ತೊಬ್ಬರ ಮೇಲೆ ಗೂಬೆ ಕೂಡಿಸುವದು ಬಿಟ್ಟು ಮನುಷ್ಯರಾಗಿ ನೋಡಿ ಒಮ್ಮೆ ನಿಮ್ಮ ಕಣ್ಣಿಗೂ ಒಳ್ಳೆಯ ಮನುಷ್ಯರೇ ಕಾಣಿಸುತ್ತಾರೆ…ನಿಮ್ಮ ಕಣ್ಣಿಗೂ ಒಳ್ಳೆಯ ಮನುಷ್ಯರೇ ಕಾಣಿಸುತ್ತಾರೆ..

ದೀಪಕ ಶಿಂಧೇ
9483766018

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group