ಇದೇ ಜೂನ್ ಒಂದರಂದು ಹಿಮಾಚಲ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಿತ್ರನಟಿ ಕಂಗನಾ ರಾಣಾವತ್ ನಟಿಸಿರುವ ‘ ಎಮರ್ಜೆನ್ಸಿ ‘ ಚಿತ್ರ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಣಿಕರ್ಣಿಕಾ ಪ್ರೊಡಕ್ಷನ್ಸ್ ಚಿತ್ರ ತಂಡ, ಲೋಕಸಭಾ ಚುನಾವಣೆಯ ಕಾರಣ ಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ ಎಂದು ತಿಳಿಸಿದರು. ಈ ಮುಂಚೆ ಕಳೆದ ವರ್ಷದ ನವೆಂಬರ್ ೨೪ ರಂದು ಚಿತ್ರ ಬಿಡುಗಡೆಯಾಗಬೇಕಿತ್ತು ಆಗಲಿಲ್ಲ ಎಂದಿದೆ.
ನಮ್ಮ ನಾಯಕಿ ದೇಶ ಸೇವೆಗೆ ಕಟಿಬದ್ಧರಾಗಿರುವುದರಿಂದ ನಮ್ಮ ಚಿತ್ರ ‘ ಎಮರ್ಜೆನ್ಸಿ ‘ ಬಿಡುಗಡೆ ಕಾರ್ಯಕ್ರಮ ಮುಂದೂಡಲಾಗಿದೆ. ಕಂಗನಾ ರಾಣಾವತ್ ಅವರ ನಿರ್ಧಾರದಿಂದ ನಮ್ಮ ಹೃದಯ ತುಂಬಿ ಬಂದಿದೆ ಎಂದು ಮಣಿಕರ್ಣಿಕಾ ಸಂಸ್ಥೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ಕಂಗನಾ ಅವರು ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಮಿಂಚಿದ್ದು, ಭಾರತದ ರಾಜಕೀಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿ ಹೊರಹೊಮ್ಮಲಿದೆ. ಚಿತ್ರ ಬಿಡುಗಡೆಯ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಎಮರ್ಜೆನ್ಸಿ ಚಿತ್ರದಲ್ಲಿ ಅನುಪಮ ಖೇರ, ಮಹಿಮಾ ಚೌಧರಿ, ಮಿಲಿಂದ ಸುಮನ್ ಸೇರಿದಂತೆ ಅನೇಕರಿದ್ದಾರೆ.