ಹೈದರಾಬಾದ್ – ಮೇ ೧೩ ರಂದು ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನದ ವೇಳೆ ವೈಎಸ್ ಆರ್ ಕಾಂಗ್ರೆಸ್ ನ ಶಾಸಕ ರಾಮಕೃಷ್ಣ ರೆಡ್ಡಿ ವಿವಿಪ್ಯಾಟ್ ಯಂತ್ರವನ್ನು ಎತ್ತಿ ಕೆಳಗೆಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಈ ಘಟನೆಯ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಮತದಾನ ಕೇಂದ್ರದಲ್ಲಿ ಕೆಲವು ಬೆಂಬಲಿಗರೊಂದಿಗೆ ನೇರವಾಗಿ ಒಳಗೆ ಬಂದ ಶಾಸಕ ವಿವಿಪ್ಯಾಟ್ ಯಂತ್ರದ ಹತ್ತಿರ ಹೋಗಿ ಅದನ್ನು ಕೋಪದಿಂದ ಎತ್ತಿ ಎಸೆಯುತ್ತಾನೆ. ಆಗ ಅಲ್ಲಿಯೇ ಇದ್ದ ನಾಗರಿಕರೊಬ್ಬರು ಶಾಸಕನ ಬೆಂಬಲಿಗನಿಗೆ ಕಪಾಳ ಮೋಕ್ಷ ಮಾಡಿದ್ದು ಶಾಸಕ ಆತನಿಗೆ ಬೆರಳು ತೋರಿಸುತ್ತ ಧಮಕಿ ಹಾಕಿ ಹೋಗಿದ್ದು ವೈರಲ್ ಆಗಿದೆ.
ಆಂಧ್ರದಲ್ಲಿ ಭಾರತೀಯ ಜನತಾ ಪಕ್ಷದತ್ತ ಜನತೆಯ ಒಲವು ಹೆಚ್ಚುತ್ತಿದ್ದು ಸೋಲಿನ ಭೀತಿಯಿಂದ ವೈಎಸ್ಆರ್ ಕಾಂಗ್ರೆಸ್ ಶಾಸಕ ಮತದಾನ ಯಂತ್ರದ ಮೇಲೆ ತನ್ನ ಕೋಪ ತೋರಿಸಿದ್ದಾರೆಂದು ಹೇಳಲಾಗುತ್ತಿದೆ. ಸದರಿ ಶಾಸಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಚುನಾವಣಾ ಆಯೋಗವು ಆಂಧ್ರಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡಿದೆಯೆಂಬುದಾಗಿ ಪಿಟಿಐ ಎಕ್ಸ್ ನಲ್ಲಿ ತಿಳಿಸಿದೆ.