ಏಕಾಂಗಿಯಾಗಿ ಧರಣಿಗೆ ಕುಳಿತ ಗುರು ಗಂಗಣ್ಣವರ
ಮೂಡಲಗಿ – ಸಹಕಾರ ಸಂಘಗಳ ನಿಯಮಗಳ ಪ್ರಕಾರ ಸಿಬ್ಬಂದಿ ನೇಮಕಕ್ಕೆ ಪೂರ್ವ ನೋಟಿಫಿಕೇಶನ್ ನೀಡದೆ ಏಕಾಏಕಿ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಂಡಿದ್ದನ್ನು ಪ್ರತಿಭಟಿಸಿ ಸಮಾಜ ಸೇವಕ ಗುರು ಗಂಗಣ್ಣವರ ಅವರು ಕಾರ್ಯಾಲಯದ ಎದುರು ಡಾ. ಅಂಬೇಡ್ಕರ್ ಫೋಟೋ ಇಟ್ಟುಕೊಂಡು ಏಕಾಂಗಿಯಾಗಿ ಧರಣಿ ನಡೆಸಿದರು.
ಸಮೀಪದ ಗುಜನಟ್ಟಿ ಗ್ರಾಮದ ಪಿಕೆಪಿಎಸ್ ಸೊಸಾಯಿಟಿಯಲ್ಲಿ ಎರಡು ವರ್ಷಗಳ ಹಿಂದೆ ನಿಯಮಬಾಹಿರವಾಗಿ ಎರಡು ಹುದ್ದೆಗಳನ್ನು ನೇಮಕ ಮಾಡಿಕೊಂಡಿದ್ದರು ಆ ಬಗ್ಗೆ ಕೇಳಿದಾಗ ಅದು ತಾತ್ಕಾಲಿಕವಾಗಿದೆ ಎಂದು ಸಮಜಾಯಿಸಿ ನೀಡಿ ನಂತರದ ದಿನಗಳಲ್ಲಿ ಅವುಗಳನ್ನು ಪರ್ಮನೆಂಟ್ ಮಾಡಿಕೊಂಡರು. ಈಗ ಮತ್ತೆ ಸೊಸಾಯಿಟಿಗೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೋಟಿಫಿಕೇಶನ್ ಕೊಡದೆ ಒಂದು ಹುದ್ದೆ ತುಂಬಿಕೊಂಡಿದ್ದು ಇದರಲ್ಲಿ ಸ್ವಜನ ಪಕ್ಷಪಾತ ಮಾಡಲಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದರು.
ಸಹಕಾರ ಸಂಘಗಳ ನಿಯಮಗಳ ಪ್ರಕಾರ ಸಿಬ್ಬಂದಿ ನೇಮಕಕ್ಕೆ ಅರ್ಜಿ ಕರೆಯಬೇಕು, ಅಭ್ಯರ್ಥಿಗಳ ಸಂದರ್ಶನ ಕರೆಯಬೇಕು ಹಾಗೂ ಸೂಕ್ತ ಹಾಗೂ ಪ್ರತಿಭಾವಂತ ಅಭ್ಯರ್ಥಿಯ ನೇಮಕ ಮಾಡಿಕೊಳ್ಳಬೇಕು ಆದರೆ ಗುಜನಟ್ಟಿಯ ಈ ಪಿಕೆಪಿಎಸ್ ಸಂಘದಲ್ಲಿ ನೇರವಾಗಿ ತಮ್ಮ ಸಂಬಂಧಿಯನ್ನು ನೇಮಕ ಮಾಡಿಕೊಂಡಿದ್ದು ಅಕ್ರಮವಾಗಿದೆ. ಅದರ ವಿರುದ್ಧ ಮೇಲಧಿಕಾರಿಗಳು ಬಂದು ಅಹವಾಲು ಸ್ವೀಕರಿಸಿ ಸಮಜಾಯಿಷಿ ನೀಡುವವರೆಗೂ ತಮ್ಮ ಧರಣಿ ಮುಂದುವರೆಯುವುದು ಎಂದು ಗಂಗಣ್ಣವರ ಹೇಳಿದರು.