spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

- Advertisement -

ಕಾವ್ಯ: ನನಗನಿಸಿದ ಹಾಗೆ..‌

” ಕಾವ್ಯಕ್ಕೆ ನಿರ್ದಿಷ್ಟ ವಿಷಯ ಕೊಡುವದು ಸರಿಯೇ ಎಂದು ನಾನು ಕೇಳಿದ್ದೆ. ಅದರ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ವಿಷಯ ಇರಲಿ ಎಂದವರೂ ಇದ್ದಾರೆ. ಸರಿಯಲ್ಲ ಎಂದವರೂ ಇದ್ದಾರೆ. ನಾನು ಕಾವ್ಯದ ಬಗ್ಗೆ ಈ ಹಿಂದೆ ಕೆಲ ವಿಚಾರ ಬರೆದಿದ್ದುಂಟು. ಕಳೆದ ಅರವತ್ತು ವರ್ಷಗಳಿಂದ ಕಾವ್ಯಲೋಕದಲ್ಲಿರುವ ಮತ್ತು ಸಾಧ್ಯವಾದಷ್ಟು ಕಾವ್ಯವನ್ನು ಓದಿರುವ ಮತ್ತು ಅದರ ಬಗ್ಗೆ ಬೇರೆ ಬೇರೆ ಮಗ್ಗುಲುಗಳಿಂದ ಯೋಚಿಸಿರುವ ನನಗೂ ನನ್ನದೇ ಆದ ಅಭಿಪ್ರಾಯಗಳಿವೆ. ಇತರರ ಅಭಿಪ್ರಾಯಗಳನ್ನು ಗೌರವಿಸುತ್ತಲೇ ನಾನು ನನ್ನ ವಿಚಾರ ಹೇಳುತ್ತಿದ್ದೇನೆ.

ವಿಷಯಗಳು ‘ಇರುವದು’ ಬೇರೆ, ವಿಷಯ ‘ಕೊಡುವದು’ ಬೇರೆ. ಅಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ವಿಷಯವೇ ಇಲ್ಲದೆ ಯಾವ ಕಾವ್ಯವೂ ಇರುವದಿಲ್ಲ. ಕವಿ ಏನು ಬರೆದರೂ ಅದಕ್ಕೊಂದು ವಿಷಯದ ಹಿನ್ನೆಲೆ ಇದ್ದೇ ಇರುತ್ತದೆ. ಏಕೆಂದರೆ ಬದುಕನ್ನು ಬಿಟ್ಟು ಕಾವ್ಯವಿಲ್ಲ. ಬದುಕಿನ ಅನುಭವಗಳೇ ತಾನೇ ಕಾವ್ಯವಾಗಿ ಹೊರಬರುವದು? ಪಂಪರನ್ನರಂತಹ ಕವಿಗಳ ಕಾವ್ಯವೂ ವಿಷಯಾಧಾರಿತವೇ. ಪಂಪನ ವಿಕ್ರಮಾರ್ಜುನ ವಿಜಯವಿರಲಿ, ರನ್ನನ ಸಾಹಸಭೀಮ ವಿಜಯವಿರಲಿ, ರತ್ನಾಕರವರ್ಣಿಯ ಭರತೇಶ ವೈಭವವಿರಲಿ, ಕುಮಾರವ್ಯಾಸನ ಭಾರತವಿರಲಿ ಎಲ್ಲವೂ ವ್ಯಕ್ತಿ- ವಿಷಯವನ್ನಿಟ್ಟುಕೊಂಡೇ ಬರೆದವುಗಳು. ಅಷ್ಟೇ ಏಕೆ, ರಾಮಾಯಣ ಮಹಾಭಾರತಗಳು ಸಹ. ಹಾಗೆ ಮಹಾನ್ ಕವಿಗಳು ತಮ್ಮ ಅನನ್ಯ ಪ್ರತಿಭಾಸಂಪನ್ನತೆಯಿಂದ ಬರೆಯುವ ಕಾವ್ಯಗಳು ಅವುಗಳ ಸತ್ವದಿಂದ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅಲ್ಲಿ ಅವರೆತ್ತಿಕೊಳ್ಳುವ ವಿಷಯಗಳಿಗಿಂತ ಅವರು ಅದನ್ನು ಬರೆಯುವ ರೀತಿ, ಸ್ವರೂಪ , ಅವರು ಬಳಸುವ ರೂಪಕಗಳು, ಪ್ರತಿಮೆ, ಅಸಾಧಾರಣ ಕಲ್ಪನೆಗಳು, ಅಲಂಕಾರ, ಧ್ವನಿ ಶಕ್ತಿ ಮೊದಲಾದವುಗಳು ಮುಖ್ಯವಾಗುತ್ತವೆ. ಅವೆಲ್ಲ ಮೈದುಂಬಿಕೊಂಡಾಗಲೇ ಶ್ರೇಷ್ಠ ಕಾವ್ಯ ತಯಾರಾಗುವದು. ನಾವು ಅವನ್ನು ಓದಿ ಅವುಗಳ ರಸಾಸ್ವಾದನೆ ಮಾಡುತ್ತ ಬೆರಗಾಗುತ್ತೇವೆ. ಆನಂದ ಅನುಭವಿಸುತ್ತೇವೆ. ಅವುಗಳ ಹಿಂದೆ ಒಂದು ವಿಷಯವಿದ್ದರೂ ಸಹಿತ ಅವನ್ನು ನಿಜವಾದ ಪ್ರತಿಭಾವಂತ ಕವಿ ಯಾವ ಒತ್ತಾಯಕ್ಕೆ, ಅಥವಾ ಬಲಾತ್ಕಾರಕ್ಕೆ ಒಳಗಾಗದೇ ಸಹಜವಾಗಿ, ಸರಾಗವಾಗಿ ಬರೆದುಕೊಂಡು ಹೋಗುತ್ತಾನೆ. ಸಾವಿರ ವರ್ಷಗಳ ನಂತರವೂ ಅವು ತಮ್ಮ ಮಹತ್ವವನ್ನು ಉಳಿಸಿಕೊಳ್ಳುತ್ತವೆ.
ಈಗ ಯೋಚಿಸಬೇಕಾದ್ದು ನಾವೂ ಹಾಗೆ ವಿಷಯವನ್ನಿರಿಸಿಕೊಂಡು ಬರೆಯುವದರಲ್ಲಿ ತಪ್ಪೇನಿದೆ? ತಪ್ಪೇನಿಲ್ಲ. ಯಾರು ಬರೆಯಬೇಡಿ ಅಂದವರು, ಅಲ್ಲವೇ? ಆದರೆ ಇಲ್ಲಿ ಚಿಂತನೆ ನಡೆಸಬೇಕಾದ ಕೆಲವು ಬೇರೆ ಅಂಶಗಳೂ ಇವೆ. ಅದು ನಮ್ಮ ಕಾವ್ಯ ಶಕ್ತಿಯನ್ನು ಅವಲಂಬಿಸಿದ್ದು.

- Advertisement -

ಜಗತ್ತಿನಲ್ಲಿ ಎಲ್ಲರೂ ಕವಿಗಳಾಗಿರುವದಿಲ್ಲ. ಆಗಬೇಕೆಂದೂ ಇಲ್ಲ. ” ಸಾಹಿತ್ಯ ಎಲ್ಲರಿಗಿಲ್ಲ” ಎಂದು ಸರ್ವಜ್ಞ ಹೇಳಿದ್ದು ಇದೇ ಅರ್ಥದಲ್ಲಿ. ಹಾಗೆ ಹುಟ್ಟಿದವರೆಲ್ಲ ಕಾವ್ಯ ಬರೆಯುತ್ತ ಹೊರಟರೆ ಓದುವವರು ಯಾರು? ಕವಿಯಾಗುವ ಸಾಮರ್ಥ್ಯ ಎಲ್ಲರಲ್ಲೂ ಇರುವದಿಲ್ಲ. ಕಾವ್ಯ ಮೀಮಾಂಸಕರು ಹೇಳುವ ಹಾಗೆ ಎಲ್ಲದಕ್ಕೂ ಮೂಲ ” ಪ್ರತಿಭೆ” ಎಂಬ ವಸ್ತು ಅಥವಾ ಶಕ್ತಿ. ಅದು ಕೆಲವರಲ್ಲಿ ಒರಿಜಿನಲ್ ಆಗಿ ಬಂದಿರುತ್ತದೆ.

ಕೆಲವರು ಒತ್ತಾಯದಿಂದ ತಂದುಕೊಳ್ಳಲು ಪ್ರಯತ್ನಿಸುತ್ತಾರೆ ಅಂದರೆ ತಾವೂ ಕವಿಯೆನಿಸಿಕೊಳ್ಳಬೇಕೆಂದು ಬಯಸುತ್ತಾರೆ. ಹಾಗೆ ಬಯಸುವದು ತಪ್ಪಲ್ಲವಾದರೂ ಮೂಲವಸ್ತುವಿಲ್ಲದೇ ಕಾವ್ಯ ಸತ್ವಯುಕ್ತವಾಗಿ ಹೊರಬರಲಾರದು. ಹಾಗಂತ ಪ್ರತಿಭೆಗೆ ಪೂರಕವಾಗುವ ಕೆಲವು ಇತರ ಅಂಶಗಳೂ ಇರುವದರಿಂದ ಅವನ್ನೂ ದುಡಿಸಿಕೊಂಡಾಗ ಮಾತ್ರ ಒಳ್ಳೆಯ ಕಾವ್ಯ ಹೊರಬರಲು ಸಾಧ್ಯ.

ಹಿರಿಯರು ಹೇಳುವದುಂಟು- ಕಾವ್ಯವೆಂದರೇನೆಂದು ತಿಳಿದುಕೊಂಡು ಕವನ ಬರೆಯಿರಿ ಎಂದು. ಹಾಗೆಂದರೇನು? ಗದ್ಯಕ್ಕೂ ಪದ್ಯಕ್ಕೂ ಇರುವ , ಇರಲೇಬೇಕಾದ ವ್ಯತ್ಯಾಸವೇ ಹಾಗೆ ಹೇಳಲು ಕಾರಣ. ಈ ವ್ಯತ್ಯಾಸವನ್ನು ಅರಿತಾಗ ಮಾತ್ರ ಕವಿಯಾಗುವದಕ್ಕೆ ಬೇಕಾದ ಮೊದಲ ಲೈಸೆನ್ಸ್ ದೊರಕಿದ ಹಾಗೆ.

- Advertisement -

ಅದಕ್ಕೇ ಕವಿಯಾಗಬಯಸುವವರು ಕಾವ್ಯ ಲಕ್ಷಣಗಳನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಆ ಲಕ್ಷಣಗಳು ಯಾವವು ಎಂಬ ಪ್ರಶ್ನೆಗೆ ಬಹಳ ದೀರ್ಘ ವಿವರಣೆ ಕೊಡಬೇಕಾಗುತ್ತದೆ. ಆಸಕ್ತರು ತೀನಂಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಓದುವದು ಒಳ್ಳೆಯದು. ಹಾಗೆ ಓದಿದಾಕ್ಷಣ ನಮಗೆ ಉತ್ತಮ ಕಾವ್ಯ ರಚನೆ ಸಾಧ್ಯವಾಗುತ್ತದೆಂದೇನೂ ಇಲ್ಲ. ಕವಿಗಳು ಕಮ್ಮಟದಲ್ಲಿ ,ಶಾಲೆ ಕಾಲೇಜುಗಳಲ್ಲಿ ತಯಾರಾಗುವ ಪ್ರೊಡಕ್ಟ್ಸ್ ಅಲ್ಲ. ಮೂಲತಃ ನಮ್ಮಲ್ಲೆಲ್ಲೋ ಅಡಗಿಕೊಂಡ ಒಂದು ನಿಗೂಢ ಶಕ್ತಿ ನಮ್ಮನ್ನು ಕಾವ್ಯ ಬರೆಯುವಂತೆ ಪ್ರೇರೇಪಿಸಬೇಕು. ಹಾಗೆ ಪ್ರೇರೇಪಿಸಿದಾಗ ತನ್ನಿಂದ ತಾನೇ ಹೊರಹೊಮ್ಮುವ ಭಾವನೆಗಳು ಶಬ್ದರೂಪದಲ್ಲಿ ಹೊರಬಂದಾಗ ಒಳ್ಳೆಯ ಒಂದೆರಡು ಕವನ ಅಥವಾ ಒಂದೆರಡು ಒಳ್ಳೆಯ ಸಾಲುಗಳಾದರೂ ಸಿಗಬಹುದು.

ಬೇಂದ್ರೆಯವರಿಗೆ ಒಬ್ಬ ಯುವಕವಿ ಕೇಳಿದ್ದನಂತೆ- ” ಕವಿಯೆನಿಸಿಕೊಳ್ಳಬೇಕಾದರೆ ನಾವು ಎಷ್ಟು ಕವನಗಳನ್ನು ಬರೆಯಬೇಕು?” ಎಂದು. ಆಗ ಬೇಂದ್ರೆ ತಿರುಗಿ ಕೇಳಿದ್ದರಂತೆ-” ತಾಯಿಯೆನಿಸಿಕೊಳ್ಳಬೇಕಾದರೆ ಎಷ್ಟು ಮಕ್ಕಳನ್ನು ಹಡೆಯಬೇಕಾಗುತ್ತದಪಾ?” ಎಂದು.

ಕವಿ ಎಷ್ಟು ಕವನ ಬರೆಯುತ್ತಾನೆ, ಎಷ್ಟು ಸಾಲು ಅಥವಾ ಎಷ್ಟು ಪುಟ ಬರೆಯುತ್ತಾನೆ ಎನ್ನುವದು ಮಹತ್ವದ್ದಲ್ಲ. ನಮ್ಮ ಅನೇಕ ಹಿರಿಯ ಕವಿಗಳು ತಮ್ಮ ಒಂದೆರಡು ಕವನದಿಂದ ಅಥವಾ ತಮ್ಮ ಕವನದ ಒಂದೆರಡು ಸಾಲುಗಳಿಂದಲೇ ಪ್ರಸಿದ್ಧರಾಗಿದ್ದುಂಟು. ಆ ಮೂಲಕವೇ ನಾವು ಅವರನ್ನು ಶ್ರೇಷ್ಠ ಕವಿಗಳೆಂದು‌ಗೌರವಿಸುತ್ತೇವೆ. ಈಶ್ವರ ಸಣಕಲ್ಲರು ತಮ್ಮ ” ಜಗವೆಲ್ಲ ನಗುತಿರಲಿ, ಜಗದಳಲು ನನಗಿರಲಿ” ಎಂಬ ಎರಡು ಸಾಲುಗಳಿಂದಲೇ ಜನಮನದಲ್ಲಿ ನೆಲೆಗೊಂಡಿದ್ದಾರೆ. “ಹಚ್ಚೇವು ಕನ್ನಡದ ದೀಪ‌” ಎಂಬ ಕವನ ನಮಗೆ ತಕ್ಷಣ ಡಿ. ಎಸ್. ಕರ್ಕಿಯವರನ್ನು ನೆನಪಿಸುತ್ತದೆ. “ಏನಾದರೂ ಆಗು, ಮೊದಲು ಮಾನವನಾಗು” ಎಂಬ ಸಾಲುಗಳು ಸಿದ್ದಯ್ಯ ಪುರಾಣಿಕರನ್ನು ನೆನಪಿಸಿದರೆ , ನಿಸಾರಹ್ಮದರು “ನಿತ್ಯೋತ್ಸವದ” ಕವಿಯಾಗಿ ನಮಗೆ ಪರಿಚಿತರಾಗಿದ್ದಾರೆ. ಅಂದರೆ ನಾವು ಎಷ್ಟು ಬರೆಯುತ್ತೇವೆ ಎನ್ನುವದಕ್ಕಿಂತ ಹೇಗೆ ಬರೆಯುತ್ತೇವೆ ಎನ್ನುವದು ಮುಖ್ಯ.

ಕವಿಗೆ ಪ್ರತಿಭೆಯೆಂಬ ಮೂಲ ವಸ್ತುವಿನ ಸಂಗಡ ಇತರ ಕಾವ್ಯ ಲಕ್ಷಣಗಳು ಸೇರಿಕೊಂಡಾಗ ಮಾತ್ರ ಕಾವ್ಯ ರಚನೆಯ ಶಕ್ತಿ ದೊರಕುತ್ತದೆ. ಯಾವುದೇ ಒಂದು ವಸ್ತು ವಿಷಯವನ್ನು ಪ್ರತಿಭಾವಂತ ಕವಿ ನೋಡಿದಾಗ ಅವನಲ್ಲಿ ಉಂಟಾಗುವ ಕಲ್ಪನೆಗೂ, ಭಾವನೆಗೂ, ಅದನ್ನು ಅವನು ನೋಡುವ ದೃಷ್ಟಿಗೂ, ಅದನ್ನು ಬರೆಯುವ ರೀತಿಗೂ, ನಮ್ಮಂಥವರು ನೋಡುವ, ಬರೆಯುವ ರೀತಿಗೂ ವ್ಯತ್ಯಾಸವಿರುತ್ತದೆ.

ಸೂರ್ಯೋದಯ ಸೂರ್ಯಾಸ್ತಗಳನ್ನೇ ಬೇಂದ್ರೆಯವರಂತಹ ಕವಿ ಬಣ್ಣಿಸುವ ರೀತಿ , ಅವರು ಕಾಣುವ ಆ ಅದ್ಭುತ ಕಲ್ಪನೆ ನಮಗೇಕೆ ಸಾಧ್ಯವಾಗುವದಿಲ್ಲ? ” ಇದು ಬರಿ ಬೆಳಗಲ್ಲೋ ಅಣ್ಣಾ” ಎನ್ನುವ ಅಂಬಿಕಾತನಯದತ್ತರು , “ಗಿಡಗಂಟೀಯಾ ಕೊರಳೊಳಗಿಂದ ಹೊರಟಿತ್ತೋ ಹಾಡು” ಎಂದಾಗ ಅಬ್ಬಾ, ಇದೆಂತಹ ಕಲ್ಪನೆ ಎಂದು ನಾವು ಬೆರಗಾಗುತ್ತೇವೆ. ಬೇಂದ್ರೆಯವರ ಹೆಚ್ಚಿನ ಕವನಗಳು ನಮಗೆ ಊಹಿಸಲೂ ಆಗದಂತಹ ಕಲ್ಪನೆಗಳಿಂದ ಕೂಡಿರುವದನ್ನು ನಾವು ಕಾಣಬಹುದಾಗಿದೆ.

ದಿನಕರ ದೇಸಾಯಿಯವರು ಹೇಳುತ್ತಾರೆ- ” ಮಣ್ಣಿನಿಂದಲೆ ಬ್ರಹ್ಮ ರಚಿಸಿದನು ಸೃಷ್ಟಿ,
ಕವಿಗೆ ಮಣ್ಣೂ ಬೇಡ, ಅವನದೇ ದೃಷ್ಟಿ”
ಕವಿಯ ದೃಷ್ಟಿ ಇತರರ ದೃಷ್ಟಿಗಿಂತ ಬೇರೆಯಾಗಿದ್ದಾಗ ಮಾತ್ರ ಅವನು ಒಳ್ಳೆಯ ಕವಿಯೆನಿಸಿಕೊಳ್ಳಲು ಸಾಧ್ಯ.
( ಮುಂದುವರಿಯುತ್ತದೆ)

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group