ಭಾಷೆಯ ಬಳಕೆ ಮತ್ತು ಬೆಳವಣಿಗೆ
****”*************************
ಯಾವುದೇ ಭಾಷೆ ಬೆಳೆಯುವದು ಇತರ ಸೋದರ ಭಾಷೆಗಳ ಸಹಕಾರದಿಂದ. ಆದರೆ ಭಾಷೆ ಉಳಿಯುವದು ಮಾತ್ರ ಅದನ್ನಾಡುವ / ಬಳಸುವ ಜನರಿಂದಲೇ. ಕನ್ನಡವಿರಲಿ, ಯಾವ ಭಾಷೆಯೇ ಇರಲಿ, ಅದರಲ್ಲಿ ಇತರ ಭಾಷೆಗಳ ಶಬ್ದಗಳು ಸೇರುತ್ತ ಹೋಗುತ್ತವೆ. ಆದರೆ ಅದರ ಅರ್ಥ ನಮ್ಮ ಭಾಷೆಯನ್ನು ಮರೆತು , ನಮ್ಮ ಮೂಲ ಕನ್ನಡ ಶಬ್ದಗಳನ್ನೇ ಬಳಸದೆ, ಬೇರೆ ಭಾಷೆಗಳ ವ್ಯಾಮೋಹ ಬೆಳೆಸಿಕೊಂಡು ನಮ್ಮ ಭಾಷೆಯನ್ನು ದೂರ ಸರಿಸಬೇಕೆಂದಲ್ಲ.
ಈಗ ಕನ್ನಡದಲ್ಲಿ ನಮಗೇ ಗೊತ್ತಿಲ್ಲದಂತೆ ಇಂಗ್ಲಿಷ್ , ಉರ್ದು ಮತ್ತಿತರ ಭಾಷೆಗಳ ಅಸಂಖ್ಯಾತ ಶಬ್ದಗಳು ಸೇರಿಕೊಂಡಿವೆ. ನಮಗೇ ಅವು ಬೇರೆ ಭಾಷೆಯವುಗಳೆಂಬ ಅರಿವಿಲ್ಲದೆ ನಾವು ಅವನ್ನು ಬಳಸುತ್ತಿರುತ್ತೇವೆ. ಏಕೆಂದರೆ ಅವು ಈಗಾಗಲೇ ಕನ್ನಡೀಕರಣಗೊಂಡು ನಮ್ಮ ಭಾಷೆಯೊಡನೆ ಸಮ್ಮಿಳಿತಗೊಂಡುಬಿಟ್ಟಿವೆ.
ಆದರೆ ನಾವು ಅನಗತ್ಯವಾಗಿ ಬೇರೆ ಭಾಷೆಯ ಶಬ್ದಗಳನ್ನೇ ಹೆಚ್ಚು ಬಳಸುತ್ತ ನಮ್ಮ ಕನ್ನಡ ಶಬ್ದಗಳನ್ನೇ ಮರೆಯುತ್ತ ಹೋದರೆ ಕ್ರಮೇಣ ಕನ್ನಡ ದುರ್ಬಲವಾಗಬಹುದು. ಈಗಾಗಲೇ ನಾವು ಸಣ್ಣವರಿದ್ದಾಗ ಬಳಸುತ್ತಿದ್ದ ಅಸಂಖ್ಯಾತ ಪದಗಳು ಮಾಯವಾಗಿಬಿಟ್ಟಿವೆ. ಅಂದರೆ ನಾವು ಅವನ್ನು ಕಳೆದುಕೊಂಡುಬಿಟ್ಟಿದ್ದೇವೆ. ಅದರ ಅರಿವು ನಮಗೇ ಇಲ್ಲ.
ಈ ಮಧ್ಯೆ ನಮ್ಮ ಕರ್ನಾಟಕದ ಪತ್ರಿಕೆಗಳು, ಟಿವಿ ಚಾನೆಲ್ ಗಳು ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಬದಲು ಮಾರಕವಾಗುವ ಅಪಾಯಗಳೂ ಕಂಡುಬರುತ್ತಿವೆ ಎಂಬ ಆತಂಕ ಹಲವರದಾಗಿದೆ. ತೀರಾ ಅನಿವಾರ್ಯವಿದ್ದಲ್ಲಿ ಬೇರೆ ಭಾಷೆಯ ಶಬ್ದವನ್ನು ಬಳಸುವದು ಬೇರೆ, ಅಗತ್ಯವಿಲ್ಲದಿದ್ದಾಗಲೂ ವಿನಾಕಾರಣ ಶಬ್ದ ಬಳಸುವದು ಬೇರೆ. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳುವದಗತ್ಯವಿದೆ.
ಇಂದು ಬೆಳಿಗ್ಗೆ ಒಂದು ಕನ್ನಡ ಟಿವಿಚಾನೆಲ್ ನಲ್ಲಿ “ನಯಾ” ಎಂಬ ಶಬ್ದವನ್ನು ಎರಡು ಮೂರುಕಡೆ ಬಳಸಲಾಯಿತು. ಯಾಕೆ? ಕನ್ನಡದ “ಹೊಸ” ಎಂಬ ಶಬ್ದ ಬಳಸಿದರೆ ಕನ್ನಡಿಗರಿಗೆ ಅರ್ಥವಾಗುವದಿಲ್ಲವೋ ಅಥವಾ ಟಿವಿಯಲ್ಲಿದ್ದವರಿಗೇ “ಹೊಸ” ಎಂಬ ಶಬ್ದವೊಂದು ಇದೆ ಎನ್ನುವದು ಗೊತ್ತಿಲ್ಲವೋ ಅವರೇ ಹೇಳಬೇಕು. ಎಲ್ಲವನ್ನೂ ಕನ್ನಡ ಜನ ಸಹಿಸಿಕೊಂಡು ಹೋಗಬೇಕೆಂದಿಲ್ಲ. ಕನ್ನಡ ಓರಾಟಗಾರರಿಗೆ ಇವೆಲ್ಲ ತಿಳಿಯುವ ಸಂಭವ ವಿಲ್ಲ . ಅವರಿಗೆ ಮೊದಲು ಸರಿಯಾಗಿ ಕನ್ನಡ ಬರಬೇಕಲ್ಲ.
ಇದನ್ನೇನೂ ಭಾಷಾ ದುರಭಿಮಾನ ಎಂದು ತಿಳಿಯಬೇಕಿಲ್ಲ. ಈ ಬಗೆಯ ಬೆಳವಣಿಗೆಯನ್ನು ತಡೆಗಟ್ಟದಿದ್ದರೆ ಕನ್ನಡ ಭಾಷೆ ಕ್ಷೀಣಿಸಲು ನಾವೇ ಅವಕಾಶ ಮಾಡಿಕೊಟ್ಟಂತೆ. ಕನ್ನಡದ ರಕ್ಷಣೆಗೆ ಒಂದು ಚಳವಳಿ ಆರಂಭವಾಗಬೇಕಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯಪರಿಷತ್ತು,, ವಿವಿಧ ಕನ್ನಡ ಅಕಾಡೆಮಿ,ಪ್ರಾಧಿಕಾರ, ಕನ್ನಡ ಅಧ್ಯಯನಪೀಠಗಳು, ಹಂಪಿ ಕನ್ನಡ ವಿಶ್ವ ವಿದ್ಯಾಲಯ, ಆಯೋಗ- ಈಯೋಗಗಳೆಲ್ಲ ಯಾಕೆ ಇವೆ? ಅವಕ್ಕೆ ಈ ಅಪಾಯ ಯಾಕೆ ಕಾಣಿಸುತ್ತಿಲ್ಲ? ಅವರೇನು ಮಾಡುತ್ತಿದ್ದಾರೆ? ಈ ಬಗ್ಗೆ ಯೋಚಿಸದೇ ಇದ್ದರೆ ಅವು ಯಾಕಿರಬೇಕು?
– ಎಲ್. ಎಸ್. ಶಾಸ್ತ್ರಿ, ಬೆಳಗಾವಿ