spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಬಯಲುಂಡ ಬೆಳಕಿನ ಕಥನ
* * * * * * *
ಪುಸ್ತಕದ ಹೆಸರು : ಭವಕ್ಕೆ ಬಂದ ಬೆಳಕು (ಸಿದ್ಧೇಶ್ವರ ಸ್ವಾಮಿಗಳವರ ಕುರಿತು ಮಹಾಕಾವ್ಯ)
ಲೇಖಕರು : ಡಾ. ಎಂ. ಬಿ. ಹೂಗಾರ
ಲೇಖಕರ ಸಂಪರ್ಕವಾಣಿ : ೯೯೮೬೯೪೩೫೭೪
* * * * * * *

ಅರಿವೆ ಗುರು, ಆಚಾರವೇ ಶಿಷ್ಯ
ಜ್ಞಾನವೇ ಲಿಂಗ, ಪರಿಣಾಮವೆ ತಪ
ಸಮತೆಯೆಂಬುದೆ ಯೋಗದಾಗು ನೋಡಾ
ಈಸುವನರಿಯದೆ ವೇಷವಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು

ಈ ಶರಣವಾಣಿಗೆ ವ್ಯಾಖ್ಯಾನವಾಗಿ ಬದುಕಿದವರು ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು. ಲಕ್ಷ ಲಕ್ಷ ಜನರ ಹೃದಯದಲ್ಲಿ ನಡೆದಾಡುವ ದೇವರಾಗಿದ್ದ ಪೂಜ್ಯರು ತಮ್ಮ ವೈಯಕ್ತಿಕ ಬದುಕನ್ನು ಕುರಿತು ಎಂದೂ ಒಂದಕ್ಷರವನ್ನೂ ಹೇಳಿದವರಲ್ಲ. ತಾವು ಬದುಕಿದ್ದಾಗಲಂತೂ ತಮ್ಮ ಬಗ್ಗೆ ಯಾರಾದರೂ ಪುಸ್ತಕ ಬರೆಯುತ್ತೇವೆ ಎಂದರೆ ನಯವಾಗಿಯೇ ತಿರಸ್ಕರಿಸಿದವರು. ಇಂತಹ ನಿರ್ಲಿಪ್ತ ನಿರಪೇಕ್ಷ ವ್ಯಕ್ತಿಗಳು ದೊರೆಯುವುದು ದುರ್ಲಭ. ಪೂಜ್ಯರ ಜೀವನ ಮತ್ತು ಸಂದೇಶಗಳನ್ನು ತಿಳಿಸುವ ಕೆಲವು ಕೃತಿಗಳು ಇತ್ತೀಚೆಗೆ ಪ್ರಕಟವಾಗುತ್ತಿವೆ. ಅವುಗಳಲ್ಲಿ ಡಾ. ಎಂ. ಬಿ. ಹೂಗಾರ ಅವರು ರಚಿಸಿದ “ಭವಕ್ಕೆ ಬಂದ ಬೆಳಕು” ಮಹಾಕಾವ್ಯ ಕೃತಿ ತುಂಬ ಗಮನ ಸೆಳೆಯುತ್ತದೆ.

- Advertisement -

ಡಾ. ಎಂ. ಬಿ. ಹೂಗಾರ ಅವರು ೧೯೭೦ರ ದಶಕದಿಂದ ಪೂಜ್ಯರನ್ನು ತುಂಬ ಹತ್ತಿರದಿಂದ ಕಂಡವರು. ಹತ್ತಿರಹತ್ತಿರ ಐವತ್ತು ವರ್ಷಗಳ ಕಾಲ ಪೂಜ್ಯರ ಸಂಪರ್ಕ ಸಾನ್ನಿಧ್ಯ ಸುಖವನ್ನು ಅನುಭವಿಸಿದವರು. ಗುಣಗ್ರಾಹಿಗಳಾಗಿದ್ದ ಪೂಜ್ಯರು ಎಂ.ಬಿ.ಹೂಗಾರ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದವರು. ಪೂಜ್ಯರೊಂದಿಗೆ ಅವರದು ಗುರುಬಂಧುವಿನ ಸಂಬಂಧ. ಅಧ್ಯಾತ್ಮ ಸಂಬಂಧ. ಸಾಹಿತ್ಯ ಸಂಬಂಧ. ಹೀಗಾಗಿ ಮೂರು ದಶಕಗಳ ಹಿಂದೆಯೇ ‘ಬ್ರಹ್ಮಸಿದ್ಧಾಂತ ಮಾಲಾ’ ಎಂಬ ಮರಾಠಿ ಕೃತಿಯನ್ನು, ‘ಗೀತಾ ಮಾಧುರ್ಯ’ ಎಂಬ ಗೋರಖಪುರದ ಹಿಂದಿ ಕೃತಿಯನ್ನು ಎಂ. ಬಿ. ಹೂಗಾರ ಅವರಿಂದ ಕನ್ನಡಕ್ಕೆ ಅನುವಾದಿಸಿ ಪೂಜ್ಯರು ಪ್ರಕಟಿಸಿದ್ದರು. ಇತ್ತೀಚೆಗೆ ನನಗೆ ‘ಗೀತಾಮಾಧುರ್ಯ’ ಕೃತಿ ನೋಡಲು ದೊರೆಯಿತು. ಅವರೊಬ್ಬ ಕನ್ನಡ ಪ್ರಾಧ್ಯಾಪಕರು ಮಾತ್ರ ಎಂದು ಭಾವಿಸಿದ್ದ ನನಗೆ ಆಗ ಎಂ.ಬಿ.ಹೂಗಾರ ಅವರ ಬಹುಶ್ರುತ ಪಾಂಡಿತ್ಯದ ಆಳ ಅರಿವು ನನಗಾಯಿತು. ಒಮ್ಮೆ ಎಂ.ಬಿ.ಹೂಗಾರ ಅವರು ‘ಗಾಂಧಾರಿ ಸ್ವಗತ’ ಕಾವ್ಯಕೃತಿಯನ್ನು ರಚಿಸಿ, ಪೂಜ್ಯರ ಮುಂದೆ ಓದಲು ಪ್ರಾರಂಭಿಸಿದರು. ಓದುತ್ತ ಹೋದಂತೆ ಉಭಯತರೂ ಮೈ ಮರೆತರು. ಪೂಜ್ಯರ ಪೂಜೆ ಪ್ರಸಾದದ ಸಮಯವಾಯಿತು. ಸೇವಕರು ಬಂದು ಎಚ್ಚರಿಸಿದರು. ಆದರೂ ಪೂಜ್ಯರು ಈ ಕಾವ್ಯವನ್ನು ಪೂರ್ತಿಯಾಗಿ ಕೇಳಿಯೇ ಎದ್ದರು ಎಂಬ ಘಟನೆಯನ್ನು ಕೇಳಿದಾಗ, ಎಂ. ಬಿ.ಹೂಗಾರ ಅವರ ಕಾವ್ಯಶಕ್ತಿ ಎಂತಹದು ಎಂಬುದರ ಪರಿಕಲ್ಪನೆ ನಮಗಾಗುವುದು. ಇಂತಹ ಹಿರಿಯ ವಿದ್ವಾಂಸರು ಪೂಜ್ಯರ ಕುರಿತು ಕಾವ್ಯವೊಂದನ್ನು ಬರೆಯಲು ಅವರಿದ್ದಾಗಲೇ ಹೊಳವು ಹಾಕಿಕೊಂಡಿದ್ದರು. ಪೂಜ್ಯರ ಗಮನಕ್ಕೆ ಕೂಡ ತಂದಿದ್ದರು. ಆದರೆ ಕಾವ್ಯಕೃತಿ ಮುಕ್ತಾಯವಾಗಿ ಪ್ರಕಟವಾಗುವ ಹೊತ್ತಿಗೆ ಪೂಜ್ಯರು ಬಯಲಿನಲ್ಲಿ ಬಯಲಾದರು. ಪೂಜ್ಯರ ಪ್ರಥಮ ಪುಣ್ಯಸ್ಮರಣೆ ಕಾಲಕ್ಕೆ ಈ ಕೃತಿ ಹೊರಬಂದಿರುವುದು ಸಂತಸದ ಸಂಗತಿಯಾಗಿದೆ.

‘ಬುದ್ಧೀಜಿಯವರು ಸಾಗರ! ಅವರ ಇಡಿಯಾದ ಬದುಕನ್ನು ನನ್ನ ಕಾವ್ಯದ ಕೊಡದೊಳಗೆ ಹಿಡಿದಿಡಲಾಗದು’ ಎಂಬ ವಿನಮ್ರ ಭಾವದಿಂದಲೇ ಕಾವ್ಯವನ್ನು ಆರಂಭ ಮಾಡುವ ಎಂ. ಬಿ. ಹೂಗಾರ ಅವರು ಸಿದ್ಧೇಶ್ವರ ಶ್ರೀಗಳ ಜೀವನದ ಪ್ರಧಾನ ಘಟನೆಗಳನ್ನು ಆಧರಿಸಿ ಬರೆದ ಗೀತಕಾವ್ಯವಿದು. ಭಕ್ತಿ ಮತ್ತು ತನ್ಮಯತೆ ಇಲ್ಲಿ ಮೈದುಂಬಿ ನಿಂತಿದೆ. ಅಂತೆಯೆ ಇದೊಂದು ಮಾಗಿದ ಬದುಕಿನ ನವಚೇತನದ ಅಭಿವ್ಯಕ್ತಿಯಾಗಿದೆ.

‘ವ್ಯುತ್ಪತ್ತಿಯಿಂದಾಗಬಹುದಾದ ದೋಷವನ್ನು ಸಹ ಪ್ರತಿಭೆ ಮುಚ್ಚಬಲ್ಲುದು, ಆದರೆ ಪ್ರತಿಭೆಯಿಲ್ಲದೆ ಕಾವ್ಯವೇ ಹುಟ್ಟದು’ ಎಂದು ಪ್ರಾಚೀನ ಅಲಂಕಾರಿಕರು ಹೇಳಿದ ಮಾತಿನಂತೆ ಬೌದ್ಧಿಕ ಕಸರತ್ತಿನಿಂದ ಕಾವ್ಯ ಹುಟ್ಟುವುದಿಲ್ಲ. ಪ್ರತಿಭಾವಿಲಾಸ ಮಾತ್ರದಿಂದಲೇ ಈ ಕಾವ್ಯ ಹುಟ್ಟುತ್ತದೆ ಎಂಬುದಕ್ಕೆ ‘ಭವಕ್ಕೆ ಬಂದ ಬೆಳಕು’ ಒಂದು ಉಜ್ವಲ ನಿದರ್ಶನವಾಗಿದೆ.

- Advertisement -

ನಾಲ್ಕು ಸಾಲಿನ ಚೌಪದಿಯಲ್ಲಿ ಕಾವ್ಯದ ಸೂಕ್ಷ್ಮ ರೂಪ ಭಾಷೆ, ಲಯ, ಪ್ರತಿಮೆ, ಶಿಲ್ಪ ಮುಂತಾದವುಗಳ ಸೃಜನಶೀಲ ಪರಿಪಾಕ ಅನನ್ಯವಾಗಿ ಮೂಡಿದೆ. ಇದು ಲೇಖಕರ ಕಾವ್ಯದ ಹಂದರದೊಳಗಿನ ಪ್ರತಿಯೊಂದು ಪದ್ಯವನ್ನು ಗಮನಿಸಿದಾಗ ಗೋಚರಿಸುವ ಅಂಶ. ಈ ಕೃತಿಯ ನಿರುಪಮ ವೈಶಿಷ್ಟ್ಯವಿರುವುದು ಅಲ್ಲಿಯ ಪಾತ್ರ ರಚನೆಯಲ್ಲಿ, ಸಿದ್ಧೇಶ್ವರ ಶ್ರೀಗಳೊಂದಿಗೆ ತಳಕು ಹಾಕಿಕೊಳ್ಳುವ ಪ್ರತಿಯೊಂದು ಪಾತ್ರರಚನೆಯೂ ಕವಿಯ ದರ್ಶನಾಭಿವ್ಯಕ್ತಿಗೆ ಮಾಧ್ಯಮವಾಗಿವೆ. ಹೀಗಾಗಿ ಈ ಕಾವ್ಯ ಒಂದು ಮಹೋದಧಿಯಾಗಿದೆ. ಹತ್ತು ಮಾತಿನಲ್ಲಿ ಹೇಳುವುದನ್ನು ಎರಡು ಮಾತಿನಲ್ಲಿ ಹೇಳುವ ಕೌಶಲ ಲೇಖಕರಿಗೆ ಸಿದ್ಧಿಸಿದೆ. ಎಂತಹ ಗಹನ ವಿಷಯವಾದರೂ ಕ್ಲಿಷ್ಟತೆಗೆ ಅವಕಾಶವಿಲ್ಲದಂತೆ ಸುಸ್ಪಷ್ಟವಾಗಿ ಸರ್ವಗ್ರಾಹ್ಯವಾಗಿ ಹೇಳುವ ಅತುಲ ಸಾಮರ್ಥ್ಯ ಅವರ ಕಾವ್ಯದಲ್ಲಿದೆ. ಪಾತ್ರಗಳಲ್ಲಿ, ಸನ್ನಿವೇಶಗಳಲ್ಲಿ, ಉಪಮೆಗಳಲ್ಲಿ, ವರ್ಣನೆಗಳಲ್ಲಿ ಒಟ್ಟಾರೆ ಪದ ಪದಗಳಲ್ಲಿ ಅಭಿವ್ಯಕ್ತಗೊಳ್ಳುವ ದರ್ಶನವನ್ನು ರಸಬಿಂದುಗಳನ್ನು ಗ್ರಹಿಸುವುದರಲ್ಲಿ, ಗ್ರಹಿಸಿದ್ದನ್ನು ವಿವರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಕಾವ್ಯ ರಚನೆಗೆ ಅವರು ಮಾಡಿಕೊಂಡ ಪೂರ್ವಸಿದ್ಧತೆ, ಆಳ ಅಧ್ಯಯನ, ಗಳಿಸಿರುವ ವಿದ್ವತ್ತು ಪಾಂಡಿತ್ಯ ಎಂತವರಲ್ಲಿಯೂ ಆಶ್ರ್ಯವನ್ನುಂಟು ಮಾಡುತ್ತದೆ.

ಈ ಕಾವ್ಯಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಇದೊಂದು ಮಹಾಕಾವ್ಯದ ಸ್ವರೂಪ ಲಕ್ಷಣಗಳನ್ನು ಹೊಂದಿರದಿದ್ದರೂ ಮಹಾಕಾವ್ಯವೇ ಆಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕುರಿತು ಲೇಖಕರೇ ಒಂದು ಸ್ಪಷ್ಟವಾದ ಸ್ಪಷ್ಟೀಕರಣವನ್ನು ನೀಡಿದ್ದಾರೆ : ‘ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಕುರಿತ ಪ್ರಸ್ತುತ ಕಾವ್ಯವು ನಾಡನ್ನು ಉದ್ಧರಿಸಲು ಭವಕೆ ಬಂದ ಬೆಳಕು ಸಂತನ ಬದುಕಿನ ಚಿತ್ರಪಟ. ಈ ಬೆಳಕು ಮಹಾಬೆಳಕು! ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಜ್ಞಾನದ ದಿವ್ಯ ಬೆಳಕು. ಇಂಥ ‘ಮಹತ್ತು’ ಮಾನವ ರೂಪದಲ್ಲಿ ಬಂದು ಜಗದ ಕತ್ತಲೆಯನ್ನು ಕಳೆಯಲೆಂದೇ ಪ್ರಯತ್ನಿಸಿದ್ದು ಈ ಯುಗದ ಭಾಗ್ಯ. ಮಹಾಚೇತನವನ್ನು ಕುರಿತು ಬರೆದ ಈ ಕಾವ್ಯ ಒಂದರ್ಥದಲ್ಲಿ ಮಹಾಕಾವ್ಯ! ಮಹಾಕಾವ್ಯದ ಲಕ್ಷಣಗಳನ್ನು ಇದರಲ್ಲಿ ಹುಡುಕುವುದು ಸರಿ ಎಂದು ನನಗನಿಸುವುದಿಲ್ಲ. ಕಾವ್ಯದ ನಾಯಕನೇ ‘ಮಹಾನ್’ ಇರುವುದು ಈ ಕಾವ್ಯದ ಒಂದು ವಿಶೇಷ.’ ಹೌದು, ಇಲ್ಲಿ ಅಷ್ಟಾದಶ ವರ್ಣನೆಗಳು, ಸ್ವರ್ಗಾದಿ ವಿವರಣೆಯಿಲ್ಲದಿದ್ದರೂ ಕಾವ್ಯದ ನಾಯಕನೇ ‘ಮಹಾನ್’ ಆಗಿರುವುದು ಅಕ್ಷರಶಃ ನಿಜ. ಮಹಾಕಾವ್ಯದ ಸ್ವರೂಪವೇ ಪೂಜ್ಯರು ಆಗಿದ್ದರು. ಅಂತೆಯೆ ಇದನ್ನು ಮಹಾಕಾವ್ಯ ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ.

ಹಾಗೆ ನೋಡಿದರೆ, ಇದು ಆದಿ ಅಂತ್ಯವಿಲ್ಲದ ಓತಪ್ರೋತವಾಗಿ ಹರಿವ ಸಲಿಲ ಧಾರೆ. ಆದರೂ ಲೇಖಕರು ೧. ಬೆಳಕು ಮೂಡುವ ಮುನ್ನ, ೨. ಮೂಡಿದ ಬೆಳಕು, ೩. ಬೆಳಕು ಕಂಡ ಬೆಳಕು, ೪.ಬೆಳಕು ಅರಸಿ ಬಂದವರು, ೫. ಬೆಳಗಿದ ಬೆಳಕು, ೬. ಅನುಸಂಧಾನ ಬೆಳಕಿನೊಂದಿಗೆ, ೭. ಬರೀ ಬೆಳಕು, ೮. ಬೆಳಕಿನೊಳಗೆ ಬೆಳಕು ಎಂಬ ಎಂಟು ಅಧ್ಯಾಯಗಳಲ್ಲಿ ಕಾವ್ಯವನ್ನು ವಿಸ್ತರಿಸಿದ್ದಾರೆ.

ಇಂದು ಯಾವ ವ್ಯಕ್ತಿಯನ್ನೇ ಆಗಲಿ ಜಾತಿಯ ಮಾನದಂಡದಿಂದಲೇ ಅಳೆಯುವ ಕೆಟ್ಟ ಪ್ರವೃತ್ತಿ ಸಮಾಜದಲ್ಲಿ ಬೆಳೆದು ನಿಂತಿದೆ. ಹೀಗಾಗಿ ಎಂ. ಬಿ. ಹೂಗಾರ ಅವರು ಜಾತಿ-ಮತಗಳನ್ನು ಮೀರಿದ ಸಿದ್ಧೇಶ್ವರ ಶ್ರೀಗಳ ನಿಲುವನ್ನು ಕುರಿತು ಹೀಗೆ ಹೇಳುತ್ತಾರೆ:

ಪೂರ್ವಾಶ್ರಮ ಕೇಳಿ ಜನರು
ಬೆಲೆಯ ಕಟ್ಟುತಿರುವರು
ನದಿಯ ಮೂಲ ಋಷಿಯ ಮೂಲ
ತಿಳಿಯಬಾರದರಿಯರು

ಇಂದು ಶ್ರೀಗಳ ಮೂಲ ಜಾತಿಯನ್ನೇ ಕೇಳಿ, ಆ ಜಾತಿಯ ಮಾಪನದಿಂದಲೇ ಅವರ ವ್ಯಕ್ತಿತ್ವವನ್ನು ಅಳೆಯುವ ಕೀಳು ಅಭಿರುಚಿಯನ್ನು ಲೇಖಕರು ತಿರಸ್ಕರಿಸುತ್ತಾರೆ. ನೀರಡಿಕೆಯಾದಾಗ ಯಾವ ಊರ ಗಂಗೆ ಎಂದು ಕೇಳದೆ, ಕುಡಿದು ಸಂತೃಪ್ತರಾಗುವ ಪರಿಯಲ್ಲಿ ಶ್ರೀಗಳ ಮೂಲ ತಂದೆ ತಾಯಿ ಹೆಸರು ಹೇಳದೆ-

ತಂದೆ ತಾಯಿ ಹೆಸರು ಕೇಳೆ
ಲೋಕ ಜನರು ಆತುರ
ಭೂಮಿ ತಾಯಿ ಅವರ ಅವ್ವ
ತಂದೆ ಅವನು ಸಾಗರ

ಎಂದು ಸೂಚ್ಯವಾಗಿ ಹೇಳಿದ್ದು ಗಮನಾರ್ಹ. ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ಪ್ರಭುವಿನ ತಂದೆ-ತಾಯಿಗಳ ಹೆಸರನ್ನು ಸಾಂಕೇತಿಕವಾಗಿ ಸುಜ್ಞಾನಿ ನಿರಹಂಕಾರ ಎಂದು ಹೇಳಿದಂತೆ, ಲೇಖಕರು ಭೂಮಿ-ಸಾಗರಗಳ ಸಾಂಕೇತಿಕತೆಯನ್ನು ಪ್ರಸ್ತಾಪಿಸಿರುವುದು ಶ್ರೀಗಳ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಪೂಜ್ಯರು ದೇಹಾತ್ಮ ಭಾವವನ್ನು ಮೀರಿ ನಿಂತವರಾಗಿದ್ದರು. ಪೂಜ್ಯರು ಆಕಸ್ಮಿಕವಾಗಿ ಹಲವಾರು ಬಾರಿ ದೈಹಿಕ ತೊಂದರೆಗಳಿಗೆ ಒಳಗಾದರು. ಆಗೆಲ್ಲ ಶಿಷ್ಯರು ಮಾತನಾಡಿಸಲು ಬಂದಾಗ ಶ್ರೀಗಳು ದೇಹ ಬೇರೆ-ಆತ್ಮ ಬೇರೆ. ಈ ರೋಗ-ರುಜಿನ ಎಲ್ಲವೂ ದೇಹಕ್ಕಿದೆ, ಒಳಗಿರುವ ಆತ್ಮಕ್ಕಿಲ್ಲ ಎಂದು ನಿರ್ಭಾವುಕರಾಗಿ ಹೇಳುತ್ತಿದ್ದರು. ಅದನ್ನೇ ಲೇಖಕರು-

ದೇಹ ಅಳಿದರೇನು ಆತ್ಮ
ಶಕ್ತಿ ಇಲ್ಲಿ ಇರುವುದು
ಸಾವು ನೋವು ರೋಗ ರುಜಿನ
ಆತ್ಮಕೆಲ್ಲಿ ಬರುವುದು?

ಎಂಬ ಪದ್ಯದಲ್ಲಿ ವಿವರಿಸುತ್ತಾರೆ. ದೇಹಾಭಿಮಾನ ತೊರೆದು, ಆತ್ಮತತ್ವದ ಚಿಂತನೆಯಲ್ಲಿ ಕಾಲಕಳೆಯಬೇಕೆಂಬ ಭಾವ ಶ್ರೀಗಳದಾಗಿತ್ತು ಎಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ.

ಶ್ರೀಗಳು ಕೇವಲ ಅಧ್ಯಾತ್ಮ ಸಾಧನೆಯಲ್ಲಿಯೇ ಕಾಲ ಕಳೆದವರಲ್ಲ. ಸಮಾಜದ ಸ್ವಾಸ್ಥ್ಯ, ನಾಡಿನ ಏಳ್ಗೆಗಾಗಿಯೂ ಹಗಲಿರುಳು ಶ್ರಮಿಸಿದವರು ಎಂಬುದಕ್ಕೆ ಲೇಖಕರು ಅನೇಕ ಘಟನೆಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ‘ಇಂಜನಿಯರರಿಗೆ ಪ್ರಮಾಣ ವಚನ’ ಎಂಬ ಕಿರು ಅಧ್ಯಾಯದಲ್ಲಿ ಹಲವು ಪದ್ಯಗಳನ್ನು ಓದಿದಾಗ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಇಂಜನಿಯರರು ಕಾರ್ಯ ನಿರ್ವಹಿಸಿದರೆ, ನಾಡಿನ ಏಳ್ಗೆ ತನ್ನಿಂದ ತಾನೆ ಸಾಧ್ಯ ಎಂದು ಶ್ರೀಗಳು ಅವರಿಗೆ ಪ್ರಮಾಣ ವಚನ ರೂಪದಲ್ಲಿ ಪ್ರಾಮಾಣಿಕತೆಯ ದೀಕ್ಷೆಯನ್ನು ಅನುಗ್ರಹಿಸಿದ ಒಂದು ಘಟನೆ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ.

ದುಡಿಮೆ ಹಣದಿ ಬದುಕುವಾಸೆ
ಲಂಚ ಮುಟ್ಟಲಾರೆವು
ಕಿಸೆಯು ನಮ್ಮ ಅಂಗಿಗಿಹವು
ಸಂಬಳಕ್ಕೆ ಮಾತ್ರವು

ಎಂಬ ಪ್ರಮಾಣವನ್ನು ಶ್ರೀಗಳಿಂದ ಐದು ನೂರು ಜನ ಯುವ ಇಂಜನಿಯರರು ಸರ್ಕಾರಿ ಸೇವೆಗೆ ಸೇರಿದ ಸಂದರ್ಭದಲ್ಲಿ ಮಾಡಿದ ಘಟನೆಯನ್ನು ಲೇಖಕರು ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ವಿಜಯಪುರ ಜಿಲ್ಲೆ ಹೇಳಿ ಕೇಳಿ ಬರಗಾಲದ ಜಿಲ್ಲೆ ಎಂದು ಖ್ಯಾತ ಪಡೆದಿತ್ತು. ಇಂತಹ ಜಿಲ್ಲೆಗೆ ನೀರು ಹರಿಸುವಲ್ಲಿ ಶ್ರೀಗಳು ಮಾಡಿದ ಪ್ರಯತ್ನಗಳನ್ನು ಡಾ. ಹೂಗಾರ ಅವರು ತಾವು ಕಂಡು ಅನುಭವಿಸಿದ ಘಟನೆಗಳ ಆಧಾರದ ಮೇಲೆ ಅತ್ಯಂತ ವಾಸ್ತವವಾಗಿ ಚಿತ್ರಿಸಿದ್ದಾರೆ.

ವಿಜಯಪುರದ ಹಿರಿಯ ಜನಕೆ
ಮತ್ತೆ ಮತ್ತೆ ನುಡಿವರು
ಎಲ್ಲ ಕೆಲಸ ಇಟ್ಟು ಬದಿಗೆ
ನೀರು ಹರಿಸಿರೆನುವರು

ನೀರು ಹರಿಸಿದರೆ ರೈತರ ಬದುಕು ಬಂಗಾರವಾಗುತ್ತದೆ ಎಂಬುದನ್ನು ಶ್ರೀಗಳು ಮನಗಂಡಿದ್ದರು. ಊರ ಹಿರಿಯರನ್ನು ಕರೆದು ಮಾತನಾಡಿ ಅವರಿಗೆಲ್ಲ ನೀರಿನ ಮಹತ್ವ ತಿಳಿಸಿ, ನೀರಿನ ಉಳವಿಗಾಗಿ ಶ್ರೀಗಳು ಶ್ರಮಿಸಿದರು. ಇಂದು ಆಲಮಟ್ಟಿ ಆಣೆಕಟ್ಟು ಆಗುವುದರ ಹಿಂದೆ ಶ್ರೀಗಳ ಪ್ರಯತ್ನವೂ ಇತ್ತು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಸದ್ದು ಗದ್ದಲವಿಲ್ಲದೆ ಶ್ರೀಗಳು ಮಾಡಿದ ಪ್ರಯತ್ನದ ಹಲವು ಸಂಗತಿಗಳನ್ನು ಈ ಕಾವ್ಯದಲ್ಲಿ ಕಾಣುತ್ತೇವೆ.

ಡಾ. ಎಂ. ಬಿ.ಹೂಗಾರ ಅವರು ತಮ್ಮ ಕಣ್ಣು ಮುಂದೆ ನಡೆದ ಘಟನೆಗಳಿಗೆ ಪ್ರಧಾನ ಪ್ರಾಶಸ್ತ್ಯ ನೀಡಿರುವುದು ಕಾವ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದೆ. ಅದರಲ್ಲೂ ಕಾಗವಾಡ ಶಿವಾನಂದ ಕಾಲೇಜು ಸ್ಥಾಪನೆಯ ಕಾಲಕ್ಕೆ ನಡೆದ ಘಟನೆಗಳು, ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಅವರು ಬಂದು ಪರಿವೀಕ್ಷಣೆ ಮಾಡಿ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಅನುಮೋದನೆ ನೋಡುವ ಘಟನೆಗಳು ಇಲ್ಲಿ ಹೃದಯಸ್ಪರ್ಶಿಯಾಗಿ ಬಂದಿವೆ. ನಮ್ಮ ಭಾಗದ ಮಕ್ಕಳು ವಿದ್ಯಾವಂತರಾಗಬೇಕು, ಬಡತನವನ್ನು ಮೆಟ್ಟಿ ನಿಲ್ಲುವಂತವರಾಗಬೇಕು ಎಂಬ ಕಾಳಜಿ-ಕಳಕಳಿ ಕಾರಣವಾಗಿ ಶ್ರೀಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟರು ಎಂಬುದನ್ನು ಲೇಖಕರು ಕಾವ್ಯತ್ಮಕವಾಗಿ ರಸಪೂರಿತವಾಗಿ ವಿವರಿಸಿದ್ದಾರೆ.

ಶ್ರೀಗಳ ವಿದೇಶ ಪ್ರವಾಸ, ಪದ್ಮಶ್ರೀ ಪ್ರಶಸ್ತಿ ತ್ಯಾಗ, ದಸರಾ ಉತ್ಸವ ಉದ್ಘಾಟನೆ, ನಾಡಹಬ್ಬದ ಉದ್ಘಾಟನೆ ಮೊದಲಾದ ಲೌಕಿಕ ಘಟನೆಗಳನ್ನು ವಿವರಿಸಿದ ತರುವಾಗ ‘ಅನುಸಂಧಾನ ಬೆಳಕಿನೊಂದಿಗೆ’ ಎಂಬ ಅಧ್ಯಾಯದಿಂದ ಶ್ರೀಗಳ ಸಂದೇಶಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಶ್ರೀಗಳು ಪ್ರವಚನದಲ್ಲಿ ಹೇಳುವ ನುಡಿಗಳನ್ನು ವರ್ತಮಾನದ ಬೆಳಿಕಿನಲ್ಲಿ ಅನುಸಂಧಾನ ಮಾಡಿದ್ದಾರೆ. ಧರ್ಮ ತತ್ವ ಸಿದ್ಧಾಂತಗಳನ್ನು ಶ್ರೀಗಳು ಹೇಗೆಲ್ಲ ಸರಳೀಕರಣಗೊಳಿಸಿ ಜನಮನಕ್ಕೆ ಮುಟ್ಟುವಂತೆ ಹೇಳುತ್ತಿದ್ದರೋ ಅದೇ ತೆರನಾಗಿ ಲೇಖಕರು ಶ್ರೀಗಳ ವಿಚಾರಗಳನ್ನು ತುಂಬ ಹೃದ್ಯವಾದ ಭಾಷೆಯಲ್ಲಿ ನಿರೂಪಿಸಿದ್ದಾರೆ. ಮುಂದಿನದೆಲ್ಲ ತತ್ವಘಟಿತ ವಿಚಾರಗಳೇ ತುಂಬಿವೆ. ಅಂತೆಯೆ ಮುನ್ನುಡಿ ಬರೆದ ಮಲ್ಲೇಪುರಂ ಜಿ. ವೆಂಕಟೇಶ ಅವರು ‘ಕವಿ ಹೂಗಾರರು ತಾತ್ತ್ವಿಕ ರೂಪವನ್ನು ಹೊಂದಿರುವ ಹತ್ತಾರು ಬಗೆಗಳನ್ನು ನಮ್ಮ ಮುಂದೆ ಹರಡುತ್ತಾರೆ. ಬೇಕಾದವರು ತಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು’ ಎಂದು ಹೇಳುತ್ತಾರೆ.

ಚೀಟಿ ದಾರ ಮಂತ್ರ ತಂತ್ರ
ಸಿಗದೆAದು ತೃಪ್ತಿಯು
ಸರಳ ಬದುಕು ಮುಕ್ತಮನಸು
ಸಾಕು ದೇವ ಒಲುಮೆಯು

ಜೀವ ಪ್ರೀತಿ ಹರಿದುದಲ್ಲಿ
ಇರಲಿ ಒಲವು ಬದುಕಲಿ
ಬತ್ತಿ ಹೋಗೆ ಪ್ರೀತಿ ಸೆಲೆಯು
ಅರ್ಥವಿರದು ಬಾಳಲಿ

ಕಷ್ಟ ಯಾರ ಬಿಟ್ಟುದಿಲ್ಲ
ಜನರು ಹೆದರೆ ದೈವಕೆ
ರಾಮ ಸಹಿತ ಹೊಕ್ಕ ಕಾಡು
ವಿಧಿಯು ಇಹುದು ಕಷ್ಟಕೆ

ಎಂಬ ಪದ್ಯಗಳಲ್ಲಿ ನಿರಂತರವಾಗಿ ಶ್ರೀಗಳ ಆಲೋಚನಾ ನುಡಿಗಳು ಎಳೆ ಎಳೆಯಾಗಿ ಮೂಡಿ ಬಂದಿವೆ. ಕಾವ್ಯವನ್ನು ಓದುತ್ತ ಹೋದಂತೆ, ನಮ್ಮನ್ನೇ ನಾವು ಕಳೆದುಕೊಂಡು ಬಿಡುತ್ತವೆ. ಅಷ್ಟೊಂದು ಆಪ್ತವಾದ ಭಾಷೆಯಲ್ಲಿ ಇಲ್ಲಿಯ ಕಾವ್ಯ ರೂಪಗೊಂಡಿದೆ.

ಕೊನೆಯ ಅಧ್ಯಾಯ ಬೆಳಕಿನೊಳು ಬೆಳಕು ಓದುವಾಗ ಎಂತವರ ಹೃದಯದಲ್ಲಿಯೂ ಕಂಪನವುಂಟಾಗುತ್ತದೆ. ಹೃದಯ ಭಾರವಾಗುತ್ತದೆ. ಕಣ್ಣಂಚಿನಲ್ಲಿ ನೀರು ತಾನಾಗಿಯೇ ಬರುತ್ತದೆ. ಅಷ್ಟೊಂದು ಹೃದಯಸ್ಪರ್ಶಿ ವಿಷಯವನ್ನು ಡಾ. ಹೂಗಾರ ಅವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಅರುಣಾಚಲದ ಅನುಭಾವಿ ರಮಣ ಮಹರ್ಷಿಗಳು ತಮ್ಮ ಜೀವನದ ಕೊನೆಯ ಘಟ್ಟದಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ನಗುನಗುತ ಸಹಿಸಿದಂತೆ, ಶ್ರೀಗಳು ಕೂಡ ದೇಹಾತ್ಮ ಭಾವ ನೀಗಿ, ಒಳಗಿನ ಆತ್ಮಚೈತನ್ಯವನ್ನು ಬೆಳಗಿದರು ಎಂಬ ಸಂಗತಿ ಗಮನಿಸುವಂತಹದು. ಪೂಜ್ಯರು ತಮ್ಮ ಜೀವನದ ಕೊನೆಯ ದಿನ ಶಿಷ್ಯರನ್ನು ಕರೆದು-

ನಾನು ಹೋದ ಬಳಿಕ ನೀವು
ಶೋಕಗಯ್ಯಬಾರದು
ಎಲ್ಲ ತಿಳಿದ ಜ್ಞಾನಿ ಮನುಜ
ದುಗುಡ ಮೀರಿ ನಿಲುವುದು

ಎಲ್ಲರಂತೆ ನಾನು ಒಬ್ಬ
ಎಲ್ಲರಂತೆ ಹೋಗುವೆ
ಎಷ್ಟು ವರುಷ ಇರುವುದಿಲ್ಲಿ
ಶಿವನ ಸದನ ಕಾಣುವೆ

ಎಂದು ಶ್ರೀಗಳೇ ನಮ್ಮೆದುರು ಹೇಳುತ್ತಿದ್ದಾರೆಂಬ ಕಾರುಣ್ಯದ ಭಾವ ನಮ್ಮಲ್ಲಿ ಉಂಟಾಗುವುದು. ಇಂತಹ ಮಾತೃಮಮತಾಮೂರ್ತಿಯ ಪ್ರೀತಿ ಅಂತಃಕರಣದ ನುಡಿ ಸಂದೇಶದ ಪದ್ಯಗಳನ್ನು ಓದುವಾಗ ಅಕ್ಷರಶಃ ಹೃದಯ ತುಂಬಿ ಬರುತ್ತದೆ.

ಯದ್ಯದಾಚರತಿ ಶ್ರೇಷ್ಠ ಸ್ತದ್ಯದೇವೇತರೋ ಜನಾಃ||
ಸಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೆ||

ಸಮಾಜದ ಗುರುವೆನಿಸಿದ ಶ್ರೇಷ್ಠನು ತನ್ನ ನಿತ್ಯ ನಡೆ-ನುಡಿಯ ಮೂಲಕ ಹೇಗೆ ಆಚರಿಸುತ್ತಾನೆಯೋ ಲೋಕದ ಜನರು ಅಂದರೆ ಸಮಾಜವು ಅವನ ನಡೆ ನುಡಿಯನ್ನೇ ಪ್ರಮಾಣವನ್ನಾಗಿ ತಿಳಿದು ಅದೇ ಪ್ರಕಾರ ನಡೆಯುತ್ತದೆ ಎಂಬ ಗೀತೋಕ್ತಿಯಂತೆ ಸಿದ್ಧೇಶ್ವರ ಶ್ರೀಗಳು ತಮ್ಮ ನಡೆ-ನುಡಿಗಳಿಂದ ಲೋಕದ ಜನರಿಗೆ ಒಂದು ದಿವ್ಯ ಸಂದೇಶವನ್ನು ಕರುಣಿಸಿ ಹೋಗಿದ್ದಾರೆ. ಇಂತಹ ಮಹಾತ್ಮರ ಚರಿತೆಯನ್ನು ‘ತಲಷಟ್ಪದಿ’ಯ ಛಂದಸ್ಸಿನಲ್ಲಿ, ಚೌಪದಿ ರೂಪದಲ್ಲಿ ಕಟ್ಟಿಕೊಟ್ಟ ಡಾ. ಎಂ. ಬಿ. ಹೂಗಾರ ಅವರು ಈ ಕೃತಿಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ. ಪಂಪ-ರನ್ನರಂತೆ ಡಾ. ಹೂಗಾರ ಅವರ ಈ ಕಾವ್ಯವು ಅಜರಾಮರವಾಗುವದರಲ್ಲಿ ಸಂದೇಹವಿಲ್ಲ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಡಾ. ಎಂ. ಬಿ. ಹೂಗಾರ ಅವರಿಗೆ ವಂದನೆ-ಅಭಿನಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಹುನಗುಂದದ ಜನ ಭಕ್ತಿವಂತರು – ಪ್ರಶಾಂತ ದೇವರು

ಹುನಗುಂದ :-ಧರ್ಮ ಮಾನವನ ಅವಿಭಾಜ್ಯ ಅಂಗ ಧರ್ಮ ಎಂದರೆ ಬದುಕಿನ ರೀತಿ ಮಾನವ ಕುಲ ಸುಖದಿಂದ ಇರಬೇಕಾದ ಧರ್ಮ ಬೇಕೇ ಬೇಕು ಧರ್ಮದಿಂದ ಮಾತ್ರ ಜಗತ್ತಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group