‘ವಂದೇ ಮಾತರಂ’ ‘ತಾಯಿ ವಂದಿಸುವೆ’ ಈ ಮಾತಿನ ಮೋಡಿ ಎಂಥಾದ್ದು? ಈ ಮಾತಿನ ಮೋಡಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಜನ ನಗುನಗುತ್ತಾ ನೇಣು ಗಂಬವನ್ನೇರಿ ಹುತಾತ್ಮರಾಗಿದ್ದಾರೆ. ರಕ್ತದ ಕಣಕಣಗಳಲ್ಲಿ ಕ್ಷಣ ಮಾತ್ರದಲ್ಲಿ ದೇಶಭಕ್ತಿಯ ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದ್ದ ರಣಮಂತ್ರ ವಂದೇ ಮಾತರಂ. ಇಂದು ಈ ರಣಮಂತ್ರದ ಜನ್ಮದಾತನಾದ ಬಂಕಿಮ ಚಂದ್ರ ಚಟರ್ಜಿ ಜನ್ಮದಿನ.
ಯಾರು ಈ ಬಂಕಿಮ!
ಬಂಕಿಮ 1839 ಜೂನ್ 27 ರಂದು ಕಂಥಾಲಪಾರ ಎಂಬ ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ಹೂಗ್ಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಬಂಕಿಮ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 18 ವರ್ಷದ ಯುವಕ. 1858 ರ ಹೊತ್ತಿಗೆ ಸಂಗ್ರಾಮ ಕೊನೆಯ ಹಂತ ತಲುಪಿತ್ತು.
ರಾಣಿ ಲಕ್ಷ್ಮೀಬಾಯಿ, ತಾಂತ್ಯಾಟೋಪಿ, ಕುವರಸಿಂಹ ಮೊದಲಾದ ನಾಯಕರು ಹತರಾಗಿದ್ದರು. ದೆಹಲಿಯ ಬಹದ್ದೂರ್ ಷಾ ಸೆರೆಮನೆ ಸೇರಿದ್ದರು. ಮತ್ತೋರ್ವ ನಾಯಕ ನಾನಾ ಸಾಹೇಬ್ ಪೇಶ್ವೆ ಅಜ್ಞಾತರಾಗಿದ್ದರು. ಇದು ಬಂಕಿಮಗೆ ನುಂಗಲಾರದ ತುತ್ತು. ಅದೇ ವರ್ಷ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪದವೀಧರನಾದ ಬಂಕಿಮ ನಂತರ ಕಾನೂನು ಪದವೀಧರನಾಗಿ ಬ್ರಿಟಿಷ್ ಸರ್ಕಾರದಡಿಯಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ನಿರ್ವಹಿಸಿದರು. ಆದರೆ ಬ್ರಿಟಿಷರು ದೇಶದಲ್ಲಿ ನಡೆಸುತ್ತಿದ್ದ ವಿಧ್ವಂಸಕ ಕೃತ್ಯಗಳನ್ನು ನೋಡಿ ನೊಂದು ಕೆಲಸವನ್ನು ತ್ಯಜಿಸಿದರು.
ಬಂಕಿಮರಿಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ನೋಡಿದಾಗ ಕೋಟಿ ಕೋಟಿ ಭಾರತೀಯರು ಕೆಲವು ಸಾವಿರ ಬ್ರಿಟಿಷರಿಗೆ ಅಡಿಯಾಳಾಗಿದ್ದು ಹೇಗೆ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ಝಾನ್ಸಿರಾಣಿ ಲಕ್ಷ್ಮಿಬಾಯಿ ಇವರ ಜೀವನ ಮತ್ತು ವಿಚಾರದಿಂದ ಪ್ರೇರಿತರಾದ ಬಂಕಿಮರಿಗೆ ಗೋಚರಿಸಿದ್ದು ಬ್ರಿಟಿಷರ ತಂತ್ರಗಳಲ್ಲಿ ಒಂದಾದ ಸಾಂಸ್ಕೃತಿಕ ಆಕ್ರಮಣ ಹಾಗೂ ಆ ಮೂಲಕ ರಾಷ್ಟ್ರಭಕ್ತಿಯ ಅಪಹರಣ. ಅಂದಿನ ಭಾರತೀಯರು ಆಂಗ್ಲರ ವೇಷಭೂಷಣ, ನಡವಳಿಕೆ, ಭಾಷೆ ಎಲ್ಲವನ್ನೂ ಅನುಕರಿಸಲು ಉತ್ಸುಕರಾಗಿದ್ದರು. ತಮ್ಮ ಸಾವಿರಾರು ವರ್ಷ ಇತಿಹಾಸವುಳ್ಳ ಪರಂಪರೆ, ಜೀವನ ಪದ್ಧತಿಯನ್ನು ತೊರೆದು ಪಾಶ್ಚಿಮಾತ್ಯ ನಾಗರೀಕತೆಯನ್ನು ಅಪ್ಪಿಕೊಳ್ಳಲು ಪ್ರಾರಂಭಿಸಿದ್ದರು.
ಬಂಕಿಮರಿಗೆ ಸ್ವಾತಂತ್ರ್ಯದ ಮಹತ್ವಾಕಾಂಕ್ಷೆ ಇತ್ತು. ಯಾವ ರೀತಿಯ ಸ್ವಾತಂತ್ರ್ಯ? ಕೇವಲ ಬ್ರಿಟಿಷ್ ಮುಕ್ತ ಭಾರತವಲ್ಲ. ಜಾತಿಗಳ ನಡುವೆ ಸಂಘರ್ಷಮುಕ್ತ ಭಾರತ. ಸ್ತ್ರೀ ಶೋಷಣೆ ಮುಕ್ತ ಭಾರತ, ಬಡವರ ಮೇಲೆ ಶ್ರೀಮಂತರ ದೌರ್ಜನ್ಯ ಮುಕ್ತ ಭಾರತದ ನಿರ್ಮಾಣದ ಹೆಬ್ಬಯಕೆ ಆತನದು. ಬ್ರಿಟಿಷರ ಆಘಾತಗಳಿಗೆ ಶಿಥಿಲವಾಗುತ್ತಿದ್ದ ಭಾರತವೆಂಬ ಮಹಾಸೌಧವನ್ನು ಜೀರ್ಣೋದ್ಧಾರ ಮಾಡಲು ಆಯ್ದುಕೊಂಡ ಮಾರ್ಗ ಕಾದಂಬರಿಗಳು. ಅಂದಿನ ಬಂಗಾಳಿ ಸಾಹಿತ್ಯ ನೀರಸ, ನಿಸ್ಸಾರ, ಏಕತಾನತೆಯಿಂದ ಕೂಡಿದ್ದಾಗ ಬಂಕಿಮರು ತಮ್ಮ ಪ್ರಖರ ಕೃತಿಗಳಿಂದ ಜೀವ ತುಂಬುವ ಕೆಲಸ ಮಾಡಿದರು. ಇವರ ಸಾಹಿತ್ಯದ ಪ್ರಭಾವದಿಂದ ಶೇಕ್ಸ್‌ಪಿಯರ್, ಮಿಲ್ಟನ್, ಷೆಲ್ಲಿ ಇವರ ಕೃತಿಗಳನ್ನು ಓದುತ್ತಿದ್ದ ಜನರು ಸ್ವದೇಶಿ ಚಿಂತನೆ ಪ್ರಾರಂಭಿಸಿದರು. ಕಾಳಿದಾಸ, ಚಂಡಿದಾಸರ ಕೃತಿಗಳನ್ನು ಓದಲು ಪ್ರಾರಂಭಿಸಿದರು. ಸ್ವದೇಶಿ ಚಿಂತನೆ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹರಡಲು ಪ್ರಾರಂಭಿಸಿತು. ನಮ್ಮ ಭಾಷೆ, ಸಂಸ್ಕೃತಿ, ದೇಶದ ಬಗ್ಗೆ ಜನ ಹೆಮ್ಮೆ ಪಡಲು ಪ್ರಾರಂಭಿಸಿದರು. ಈ ಕಾರಣಕ್ಕಾಗಿ ಬಂಕಿಮರನ್ನು ಬಂಗಾಲಿ ಸಾಹಿತ್ಯದ ‘ಸಾಮ್ರಾಟ್’ ಎಂದು ಕರೆಯಲಾಗುತ್ತದೆ. ಇವರು ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ. ದುರ್ಗೇಶನಂದಿನಿ, ಕಪಾಲಕುಂಡ, ವಿಷವೃಕ್ಷ, ರಾಜಸಿಂಹ, ದೇವಿ ಚೌದುರಾಣಿ ಇತ್ಯಾದಿ. ಜೊತೆಗೆ ಭಗವದ್ಗೀತೆಯ ಭಾವಾರ್ಥವನ್ನು ಬರೆದರು. ಇವುಗಳ ಪೈಕಿ ಬಂಕಿಮ ಚಂದ್ರ ಚಟರ್ಜಿಯ ಹೆಸರನ್ನು ಭಾರತದಲ್ಲಿ ಅಮರಗೊಳಿಸಿದ ಕೃತಿಯೇ ‘ಆನಂದಮಠ’. ಈ ಆನಂದಮಠದ ಭಾಗವೇ ‘ವಂದೇ ಮಾತರಂ.’
ವಂದೇಮಾತರಂ ಜನನ
1867 ರಲ್ಲಿ ನಡೆದ ಒಂದು ಅಧಿವೇಶನದಲ್ಲಿ
‘ಜೈ ಭಾರತ್’ ಎನ್ನುವ ಹಾಡನ್ನು ಬಂಕಿಮ ಕೇಳಿರುತ್ತಾರೆ. ಆ ಹಾಡಿನ ಸಾಹಿತ್ಯ ಇವರನ್ನು ಬಹಳವಾಗಿ ಆಕರ್ಷಿಸಿರುತ್ತದೆ. ಸ್ವಾತಂತ್ರ್ಯದ ಅಭಿಲಾಷೆ ಮುಗಿಲು ಮುಟ್ಟಿರುವ ಸಂದರ್ಭದಲ್ಲಿ ಭಾರತೀಯರಿಗೆ ಅವಶ್ಯಕವಾಗಿರುವ ಒಂದು ಸ್ಫೂರ್ತಿದಾಯಕ ಗೀತೆಯನ್ನು ಬರೆಯಬೇಕೆಂದು ಇಚ್ಛೆ ಪಡುತ್ತಾರೆ ಬಂಕಿಮ. ಭೂಮಿಯನ್ನು, ನದಿಯನ್ನು, ಗೋವನ್ನು ತಾಯಿಯೆಂದು ಪೂಜಿಸುವ ಭಾರತೀಯನಾದ ಬಂಕಿಮರಿಗೆ ಭಾರತವನ್ನು ಮಾತೆ ಎಂದು ಕರೆಯುವುದು ಕಷ್ಟವಾಗಿರಲಿಲ್ಲ. ಆದರೆ ಬೇಕಾದದ್ದು ಸರಿಯಾದ ಪದಪುಂಜ. ನವೆಂಬರ್ 7, 1875 ರಂದು ಗಂಗಾತಟದಲ್ಲಿರುವ ತಮ್ಮ ಮನೆಯಲ್ಲಿ ಧ್ಯಾನಾಸಕ್ತರಾಗಿದ್ದ ಸಂದರ್ಭದಲ್ಲಿ ಕಿವಿಗೆ ಬಿದ್ದದ್ದು ಮೀನುಗಾರರು ಹಾಡುತ್ತಿದ್ದ ಒಂದು ಜನಪದ ಹಾಡು. “ಗಂಗಾಮಾತ ನಮಗೆ ತಾಯಿ. ಆಕೆ ದುರ್ಗೆಯಂತೆ ಶಕ್ತಿಸ್ವರೂಪಿಣಿ. ಆಕೆಗಾಗಿ ಪ್ರಾಣವನ್ನೇ ಕೊಡಲು ಸಿದ್ಧ”. ಆಗ ಕಣ್ಣ ಮುಂದೆ ಬಂದದ್ದು ಶಕ್ತಿಸ್ವರೂಪಿಣಿ, ಸಿಂಹವಾಹಿನಿಯಾದ ದುರ್ಗೆ. ನಂತರ ಒಂದೇ ಉಸುರಿಗೆ ಬರೆದದ್ದು ವಂದೇಮಾತರಂ. ನಂತರ ಅದು ‘ಆನಂದಮಠ’ ಕಾದಂಬರಿಯ ಒಂದು ಪ್ರಮುಖ ಭಾಗವಾಯಿತು.
ಆನಂದಮಠವೇನೂ ಸಾಮಾನ್ಯ ಕಾದಂಬರಿಯಲ್ಲ. ಅದು ವೀರರಸಭರಿತ ಕಾದಂಬರಿ. ಸನ್ಯಾಸಿಗಳ ಗುಂಪೊಂದು ತಮ್ಮನ್ನು ತಾವು ಮಕ್ಕಳು ಎಂದೂ, ಭಾರತವನ್ನು ತಾಯಿ ಎಂದು ಭಾವಿಸಿ ವೈರಿಗಳನ್ನು ದಮನ ಮಾಡುವ ಕಥಾವಸ್ತುವೇ ಆನಂದಮಠ. ಭೀಕರ ಬರಗಾಲ, ಅದರಿಂದಾಗುವ ಅಪಾರ ಸಾವು-ನೋವು, ಇದರ ಜೊತೆಗೆ ಆಕ್ರಮಣಕಾರರ ದೌರ್ಜನ್ಯ. ಅವರೊಂದಿಗೆ ಕೆಚ್ಚೆದೆಯಿಂದ ಹೋರಾಡುವ ಸನ್ಯಾಸಿಗಳ ದೈವಭಕ್ತಿ. ದೇಶಭಕ್ತಿ ಓದುಗರನ್ನು ಪುಳಕಿತಗೊಳಿಸುತ್ತದೆ. ಈ ಕಾದಂಬರಿಯ ಕೆಲವು ಸಾಲುಗಳು ಹೀಗಿವೆ.
“ನನ್ನನ್ನು ಯಾರೆಂದು ತಿಳಿದಿದ್ದೀಯೆ, ಭಾರತಮಾತೆಯ ಮಗ, ವೈರಿಗಳ ರಕ್ತದಿಂದ ಭೂಮಿಯನ್ನು ತಣಿಸಿ ನನ್ನ ತಾಯಿಯನ್ನು ಶಕ್ತಿಸ್ವರೂಪಿಣಿಯನ್ನಾಗಿ ಮಾಡುತ್ತೇನೆ.”
ಮಹೇಂದ್ರ ಒಬ್ಬ ಹೊಸದಾಗಿ ಸೇರಿದ ಕ್ರಾಂತಿಕಾರಿ. ಆತ ಆಭರಣಭರಿತ, ಸುಂದರ ಸ್ತ್ರೀ ದೇವತೆಯ ಮೂರ್ತಿಯನ್ನು ನೋಡುತ್ತಾನೆ. ಆತ ಕೇಳುತ್ತಾನೆ “ಯಾರಿದು?”. ಸ್ವಾಮಿ ಸತ್ಯಾನಂದ ಹೇಳುತ್ತಾರೆ “ಈಕೆ ನಮ್ಮ ತಾಯಿ, ಬಹಳ ಹಿಂದೆ ಈಕೆ ಹೀಗೆ ಇದ್ದಳು”. ಮಹೇಂದ್ರನನ್ನು ಮತ್ತೊಂದು ಕೋಣೆಗೆ ಕರೆದೊಯ್ಯಲಾಗುತ್ತದೆ. ಅಲ್ಲೂ ಒಂದು ಪ್ರತಿಮೆ. ಆದರೆ ಈ ಪ್ರತಿಮೆ ಕಪ್ಪುವರ್ಣದ, ನಗ್ನವಾದ, ಭೀಕರವಾದ, ಸ್ತ್ರೀದೇವತೆಯ ಪ್ರತಿಮೆ. ಸತ್ಯಾನಂದ ಹೇಳುತ್ತಾರೆ “ಇವಳು ಕಾಳಿ. ಆಕ್ರಮಣಕಾರರ ದೌರ್ಜನ್ಯದಿಂದ ದೇಶ ಸ್ಮಶಾನ ಸದೃಶವಾಗಿದೆ. ಹಾಗಾಗಿಯೇ ಇವಳು ತಲೆ ಬುರುಡೆಯ ಮಾಲೆಯನ್ನು ಧರಿಸಿದ್ದಾಳೆ. ಈಕೆಯನ್ನು ಪುನಃ ಹಿಂದಿನ ಸ್ಥಿತಿಗೆ ಕರೆದೊಯ್ಯುವುದೇ ನಮ್ಮ ಉದ್ದೇಶ”.
ಕಾದಂಬರಿಯ ಉದ್ದಕ್ಕೂ ಇಂತಹ ವೀರಾವೇಶದ ಮಾತುಗಳು, ಅನೇಕ ಯುದ್ಧದ ಪ್ರಸಂಗಗಳು. ಒಟ್ಟಾರೆ ಅಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಕೈಗನ್ನಡಿಯಂತಿದ್ದ ಈ ಮೇರುಕೃತಿ ಸುಪ್ರಸಿದ್ಧವಾದದ್ದು, ನಂತರ ಬ್ರಿಟಿಷರಿಂದ ನಿಷೇಧಕ್ಕೊಳಗಾಗಿದ್ದರಲ್ಲಿ ಆಶ್ಚರ್ಯವೇ ಇಲ್ಲ.
ನಂತರ 1896 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಹಾಡಲ್ಪಟ್ಟ ವಂದೇ ಮಾತರಂ, ರಣಮಂತ್ರವಾದದ್ದು 1905 ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದಾಗ, 1857 ರಲ್ಲಿ ‘ಮಾರೋ ಫಿರಂಗಿ ಕೋ’ ಎಂದು ಬೀದಿಗಿಳಿದು ಜನರು ಹೋರಾಡಿದ್ದಾರೆ. 1905 ರಲ್ಲಿ ‘ವಂದೇಮಾತರಂ’ ಎಂದು ಹೋರಾಡಿದರು. ಅರವಿಂದ ಘೋಷರು, ‘ವಂದೇಮಾತರಂ’ ಎಂಬ ಪತ್ರಿಕೆ ಆರಂಭಿಸಿದರು. ಮೇಡಂ ಕಾಮಾ ಮತ್ತು ಇತರರು ಪ್ಯಾರಿಸ್, ಬರ್ಲಿನ್‌ಗಳಲ್ಲಿ ಹಾರಿಸಿದ ರಾಷ್ಟ್ರಧ್ವಜದಲ್ಲಿ ವಂದೇಮಾತರಂ ರಾರಾಜಿಸಿತು. ಮೋತಿಲಾಲ್ ನೆಹರು, ಬಿಪಿನ್ ಚಂದ್ರಪಾಲ್, ಸೋದರಿ ನಿವೇದಿತ ಮೊದಲಾದವರು ವಂದೇ ಮಾತರಂ ಘೋಷಿಸತೊಡಗಿದರು. ಖುದಿರಾಮ್ ಬೋಸ್, ಮದನ್‌ಲಾಲ್ ಧಿಂಗ್ರ ಮೊದಲಾದ ಕ್ರಾಂತಿಕಾರಿಗಳು ವಂದೇಮಾತರಂ ಎಂದು ಹೇಳಿ ನೇಣುಗಂಬವನ್ನೇರಿ ಬ್ರಿಟಿಷರ ನಿದ್ದೆಗೆಡಿಸಿದರು.
ಬ್ರಿಟಿಷ್ ಭಾರತದಲ್ಲಿ ವಿಭಜನೆಗೊಂಡ ಗೀತೆ ನಂತರ ಸ್ವತಂತ್ರ್ಯ ಭಾರತದಲ್ಲೂ ವಿಭಜಿತ ಆಗಿರುವುದು ವಿಪರ್ಯಾಸ. ಅನೇಕರಿಗೆ ಸಂಪೂರ್ಣ ವಂದೇ ಮಾತರಂ ಗೊತ್ತಿಲ್ಲ. ಬರೆದವರ ಬಗ್ಗೆಯೂ ಮಾಹಿತಿಯಿಲ್ಲ. ಇದು ನಮ್ಮ ಇತಿಹಾಸ ಪ್ರಜ್ಞೆಗೆ ಸಾಕ್ಷಿ.
ಸ್ವಾತಂತ್ರ್ಯ ಬಂದು ದಶಕಗಳು ಉರುಳಿವೆ. ಆದರೆ ಭಾರತ ಎದುರಿಸುತ್ತಿರುವ ಸಮಸ್ಯೆಗಳೇನೂ ಕಡಿಮೆಯಿಲ್ಲ. ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ, ಅತ್ಯಾಚಾರದಂತಹ ಸಮಸ್ಯೆಗಳು, ಭಾರತವನ್ನು ಬಗ್ಗು ಬಡಿಯಲು ಕಾದು ಕುಳಿತಿರುವ ಶತ್ರು ರಾಷ್ಟ್ರಗಳು, ಪ್ರಕೃತಿ ಸಂಪತ್ತನ್ನು ನುಂಗಿ ನೀರು ಕುಡಿಯುತ್ತಿರುವ ವಿನಾಶಕಾರಿ ಪ್ರವೃತ್ತಿ, ಮಿತಿ ಮೀರುತ್ತಿರುವ ಸಾಂಸ್ಕೃತಿಕ ಆಕ್ರಮಣ ಹಾಗೂ ಇವೆಲ್ಲದರ ನಡುವೆ ನಿರ್ಲಿಪ್ತರಾಗಿರುವ ಭಾರತೀಯರು. ಮಹರ್ಷಿ ಅರವಿಂದರು ಹೇಳುತ್ತಾರೆ ‘ಭಾರತ ಕೇವಲ ಒಂದು ಭೂಪ್ರದೇಶವಲ್ಲ, ಅದು ಒಂದು ಶಕ್ತಿಯ ಸ್ವರೂಪ’. ಆದರೆ ಈ ಶಕ್ತಿ ಸ್ವರೂಪಿಣಿಯ ಆರಾಧನೆಯಾಗಬೇಕಿದೆ. ಭಾರತೀಯರು ಜಾತಿ, ಪ್ರಾಂತ್ಯ, ಭಾಷೆ, ಧರ್ಮವನ್ನು ಮೀರಿ ರಾಷ್ಟ್ರೀಯತೆಯನ್ನು ಒಪ್ಪಬೇಕಾಗಿದೆ. ಹಾಗೆ ಆದಾಗಲೇ, ಭಾರತದ ಪುನರುತ್ಥಾನ ಸಾಧ್ಯ. ಇದಕ್ಕೆ ವಂದೇಮಾತರಂ ಸ್ಫೂರ್ತಿಯಾಗಬಾರದೇಕೆ?
ಹೇಮಂತ ಚಿನ್ನು
*ಕರ್ನಾಟಕ ಶಿಕ್ಷಕರ ಬಳಗ*
ಕೃಪೆ : ಕನ್ನಡ ಫ್ರಭದಲ್ಲಿ ಪ್ರಕಟಿತ
‘ವಂದೇ ಮಾತರಂ’ ಎಂಬ ಭಕ್ತಿ ಕಂಪನ ಕವಿ ಬಂಕಿಮರ 175ನೇ ಜನ್ಮದಿನ ಲೇಖನ.