spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಶರಣ ವೈದ್ಯ ಸಂಗಣ್ಣ

ಮಾನವನ ಮೈ ಮನಕ್ಕೆ ಮದ್ದನ್ನೀಯುವ ವೈದ್ಯ ಶರಣ ಸಂಗಣ್ಣ. ಶರೀರಕ್ಕೆ ಬರುವ ಬಾಹ್ಯಕಾಯಿಲೆಗಳಂತೆ ಮನಸ್ಸಿಗೆ ಬರುವ ಕಾಯಿಲೆಗಳು ಅಷ್ಟೇ ಅಪಾಯಕಾರಿ. ತನು-ಮನಗಳೆರಡನ್ನೂ ಶುದ್ಧವಾಗಿಟ್ಟುಕೊಂಡಾಗಲೇ ಮನುಷ್ಯ ಆರೋಗ್ಯದಿಂದಿರಲು ಸಾಧ್ಯ ಎಂದು ವೈದ್ಯ ಸಂಗಣ್ಣ ತೋರಿಸಿಕೊಟ್ಟಿದ್ದಾರೆ.

ಕನಾ೯ಟಕದ ಇತಿಹಾಸದಲ್ಲಿ 12ನೇಯ ಶತಮಾನವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಹೊಂದಿದೆ. ಕಾರಣ ಅಣ್ಣ ಬಸವಣ್ಣನವರು ಲಿಂಗ-ವಗ೯-ವಣ೯ ರಹಿತ ಲಿಂಗಾಯತ ಸಮಾಜವನ್ನು ಕಟ್ಟಿದ್ದರು. ಇವರ ಕಾಯಕ ಕ್ಷೇತ್ರ ಇಂದಿನ ಬೀದರ ಜಿಲ್ಲೆಯ ಕಲ್ಯಾಣವಾಗಿತ್ತು. ಬಸವಣ್ಣನವರ ವ್ಯಕ್ತಿತ್ವದಿಂದ ದೇಶದ ಮೂಲೆ-ಮೂಲೆಗಳಿಂದ ಜನರು ಆಕಷಿ೯ತರಾಗಿ ಕಲ್ಯಾಣದೆಡೆಗೆ ಧಾವಿಸುತ್ತಿದ್ದರು. ಶರಣತ್ವವನ್ನು ಹೊಂದಿದ ಇವರೆಲ್ಲ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಯಾವುದೇ ತರಹದ ಬೇಧ-ಭಾವಗಳಿಲ್ಲದೇ, ಮೇಲು ಕೀಳುಗಳಿಲ್ಲದೇ ಸಮಾಜದಲ್ಲಿಯ ಆಗು ಹೋಗುಗಳನ್ನು ಚಚಿ೯ಸುವ, ಮನಸ್ಸಿನ ಭಾವನೆಗಳನ್ನು ಹೊರಹಾಕುವ ಸ್ವಾತಂತ್ರ್ಯವನ್ನು ಹೊಂದಿದ್ದರು. ಇಂತಹ ಅನೇಕ ಶರಣರಲ್ಲಿ ಅತ್ಯಂತ ಕ್ರಿಯಾಶೀಲರೂ, ಸಮಾಜ ಸೇವೆಗೆ ತಮ್ಮನ್ನು ಸಂಪೂಣ೯ವಾಗಿ ಮೀಸಲಿಟ್ಟ, ಸಮಾಜದಲ್ಲಿ ಮಹೋನ್ನತರಾಗಿ ಗುರುತಿಸಲ್ಪಟ್ಟ 770 ಅಮರಗಣಂಗಳಲ್ಲಿ ವೈದ್ಯಸಂಗಣ್ಣನವರೂ ಒಬ್ಬರು. ಇವರು ಕಲ್ಯಾಣದ ಜನರ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರೆಂದು ತಿಳಿದುಬರುತ್ತದೆ.

- Advertisement -

ಶರಣ ಸಂಗಣ್ಣನವರ ತಂದೆ-ತಾಯಿ, ಕುಟುಂಬ ವ್ಯವಸ್ಥೆ, ಜನ್ಮಸ್ಥಳದ ಬಗ್ಗೆ ಹೆಚ್ಚಿನ ವಿವರಗಳು ದೊರೆತಿಲ್ಲ. ಕಲ್ಯಾಣದ ಸಮೀಪದಲ್ಲಿ ಕಲ್ಬುಗಿ೯ ಜಿಲ್ಲೆಯ ಒಂದೂರು ಇವರದಾಗಿರಬಹುದೆಂದು ಕೆಲವರು, ದೂರದ ಆಫಘಾನಿಸ್ತಾನದಿಂದ ಬಂದಿರಬಹುದು ಎಂದು ಕೆಲವರು (ಇದಕ್ಕೆ ಕಾರಣ ಇವರ ಅಂಕಿತನಾಮದಲ್ಲಿ ಇದ್ದ ಮರುಳ ಶಂಕರ ದೇವರು ಅಫಘಾನಿಸ್ತಾನದವರು) ಅಭಿಪ್ರಾಯ ಪಡುತ್ತಾರೆ. ಇವರು ಬಸವಣ್ಣನವರ ಸಮಕಾಲೀನರೂ (೧೧೬೦), ಶರಣ ಧಮ೯ ಮದ್ದನ್ನು ಬಲ್ಲವರೂ, ಶ್ರೇಷ್ಠ ವಚನಕಾರರೂ ಆಗಿದ್ದರು ಎಂದು ಕಂಡುಬರುತ್ತದೆ. ಇವರು ಒಂದು ವಚನದಲ್ಲಿ,

ಕಕ್ಕಯ್ಯನೆನಗೆ ಕಾಮಧೇನುವಯ್ಯಾ
ಚೆನ್ನಯ್ಯನೆನಗೆ ಕಲ್ಪವೃಕ್ಷವಯ್ಯಾ
ಹರಳಯ್ಯನೆನಗೆ ಚಿಂತಾಮಣಿಯಯ್ಯಾ
ಕೆಂಭಾವಿಭೋಗಣ್ಣನೆನಗೆ ಸದಾಬ್ಧಿಯಯ್ಯಾ
ಶಿವನಾಗಮಯ್ಯನೆನಗೆ ಪರುಷದಗಿರಿಯಯ್ಯಾ
ಇಂತಿ ಐವರ ಕಾರುಣ್ಯ ಪ್ರಸಾದವ ಕೊಂಡು ಬದುಕಿದೆನಯ್ಯಾ
ಮರುಳ ಶಂಕರ ಪ್ರಿಯ ಸಿದ್ಧರಾಮೇಶ್ವರಯ್ಯಾ

ಎಂದು ಕಕ್ಕಯ್ಯ, ಚೆನ್ನಯ್ಯ, ಹರಳಯ್ಯ, ಕೆಂಭಾವಿ ಭೋಗಣ್ಣ, ಮತ್ತು ಶಿವನಾಗಮಯ್ಯರ ಹೆಸರುಗಳನ್ನು ನಮೂದಿಸಿದ್ದು, ಅವರು ಬಸವಾದಿಶರಣರ ಕಾಲಕ್ಕೆ ಸೇರಿದವರೆಂದು ದೃಢಪಡಿಸುತ್ತದೆ. ಈ ಶರಣರಲ್ಲಿ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಸದಾಬ್ಧಿ, ಪರುಷಗಳನ್ನು ಪಡೆದೆ ಎಂದು ಅಭಿಮಾನದಿಂದ ಹೇಳುವಲ್ಲಿ, ಸಂಗಣ್ಣನವರು ಅತ್ಯಂತ ವಿನಮ್ರರೂ, ಜಾತಿ-ವಗ೯-ವಣ೯ಗಳ ಬೇಧವಿಲ್ಲದೆ ಶರಣರ ಅಂತಃಪ್ರತಿಭೆಯನ್ನು ಗುರುತಿಸುವವರೂ, ಉಪಕಾರವನ್ನು ಸ್ಮರಿಸುವವರೂ ಆಗಿದ್ದರೆಂದು ಕಂಡು ಬರುತ್ತದೆ.

- Advertisement -

ವೈದ್ಯ ಸಂಗಣ್ಣನವರು ರಚಿಸಿದ ೨೧ ವಚನಗಳು ಲಭ್ಯವಾಗಿವೆ. ಆದರೆ ಇವರು ಇನ್ನೂ ಅಧಿಕ ವಚನಗಳನ್ನು ರಚಿಸಿರಬಹುದು. ಕಲ್ಯಾಣಕ್ರಾಂತಿಯ ಸಮಯದಲ್ಲಿ ಶರಣರು ರಚಿಸಿದ ಲಕ್ಷಾಂತರ ವಚನಗಳು ಬೆಂಕಿಗಾಹುತಿಯಾದಂತೆ, ನಾಶವಾದಂತೆ ಇವರು ರಚಿಸಿದ ವಚನಗಳ ಕಟ್ಟುಗಳೂ ಮಾಯವಾಗಿರಬಹುದು.
ಇವರ ವಚನನಾಮಾಂಕಿತ “ಮರುಳಶಂಕರ ಪ್ರಿಯ ಸಿದ್ಧರಾಮೇಶ್ವರ ಲಿಂಗ” ಎಂಬುದಾಗಿದೆ. ಇದರಿಂದ ವೈದ್ಯ ಸಂಗಣ್ಣನವರಿಗೆ ಮರುಳಶಂಕರ ದೇವ ಹಾಗೂ ಸಿದ್ಧರಾಮೇಶ್ವರ ಇವರಿಬ್ಬರ ಬಗ್ಗೆ ಅಪಾರ ಭಕ್ತಿ, ಗೌರವ, ವಿಶ್ವಾಸ, ಪ್ರೀತ್ಯಾದರಗಳು ಇದ್ದಿರಬಹುದು ಎಂದು ತಿಳಿಯುತ್ತದೆ.

ವೈದ್ಯ ಸಂಗಣ್ಣನವರಿಗೆ ವೈದ್ಯಕೀಯ ಶಾಸ್ತ್ರದಲ್ಲಿ ಅಪಾರ ಜ್ಞಾನವಿತ್ತು ಎಂಬುದು ಅವರ ವಚನಗಳಲ್ಲಿ ನಿರೂಪಿಸಿದ ಶರೀರ ರಚನಾಶಾಸ್ತ್ರ, ಶರೀರ ಕ್ರಿಯಾಶಾಸ್ತ್ರ, ಔಷಧೀಯ ಗಿಡಮೂಲಿಕೆಗಳ ವಿವರಗಳಿಂದ ತಿಳಿಯುತ್ತದೆ. ಅವರ ಚಿಕಿತ್ಸಾ ವಿಧಾನವೂ ಅನೇಕ ವಚನಗಳಲ್ಲಿ ನಮೂದಿಸಲ್ಪಟ್ಟಿದೆ. ವೈದ್ಯ ಸಂಗಣ್ಣನವರನ್ನು ಮೈಮನಕ್ಕೆ ಮದ್ದನಿತ್ತ ವೈದ್ಯ ಎಂದು ಕರೆದಿದ್ದಾರೆ. “ವ್ಯಾಧಿ ಬಂದಾಗ ವೈದ್ಯಶಾಸ್ತ್ರ, ರೋಗಚಿಕಿತ್ಸೆ. ರೋಗವಿಧಾನ ಯಾವುದು ಬೇಡ? ಶಿವನೇ ಸಾಕೇ?” ಎನ್ನ ಕಾಲೇ ಕಂಭ, ದೇಹವೇ ದೇಗುಲ, ಶಿರವೇ ಸುವಣ೯ ಕಲಶವೆಂಬ ಶರಣರು ವೈದ್ಯಶಾಸ್ತ್ರವನ್ನು ಕಡೆಗಣಿಸಿಲ್ಲ ಎಂಬುದಕ್ಕೆ ನಿದಶ೯ನವಾಗಿ ನಿಂತಿದ್ದಾರೆ. ಮೈ-ಮನಕ್ಕೆರಡಕ್ಕೂ ಮದ್ದುಕೊಟ್ಟು ಶುದ್ಧ-ಬದ್ಧರಾದ ವೈದ್ಯರಾದರು ಸಂಗಣ್ಣನವರು.
ಕೈಕೊಂಡ ವೃತ್ತಿಯನ್ನೇ ಆತ್ಮಸಾಧನ ಸಂಪತ್ತಿಯನ್ನಾಗಿಸಿಕೊಳ್ಳುವ ಶರಣರ ಕೌಶಲ್ಯ ಆಶ್ಚಯ೯ಕರ. ಕೇವಲ ಶರೀರವನ್ನೇ ಲಕ್ಷ್ಯವನ್ನಾಗಿರಿಸಿಕೊಂಡ ವೈದ್ಯಶಾಸ್ತ್ರಕ್ಕೂ ಆತ್ಮನ ಸಂಬಂಧವನ್ನು ವೈದ್ಯಸಂಗಣ್ಣ ಕಲ್ಪಿಸಿದ್ದಾರೆ. ವೈದ್ಯ ಸಂಗಣ್ಣ ಬಹಳ ಮಾತನಾಡುವವರಲ್ಲ ಆದರಿಂದಲೇ ಕಲ್ಯಾಣಕ್ಕೆ ಬಂದು, ಹನ್ನೆರಡು ವಷ೯ಕಾಲ ಎಲೆಮರೆಯ ಕಾಯಿಯಂತೆ ಜನಸೇವೆಯನ್ನು ಮಾಡುತ್ತಲಿದ್ದ ವೈದ್ಯ ಸಂಗಣ್ಣ ಒಮ್ಮೆ ಶರಣನೊಬ್ಬನಿಗೆ ಗುರುತರವಾದ ಚಿಕಿತ್ಸೆಯನ್ನು ನೀಡಿ ರೋಗ ವಾಸಿಮಾಡಿದ್ದಾಗ, ಅಲ್ಲಮ ಪ್ರಭುಗಳೇ, ಇವರ ಇರವನ್ನು ಅಣ್ಣ ಬಸವಣ್ಣನವರಿಗೆ ಪರಿಚಯಿಸಿದರೆಂದು ತಿಳಿದು ಬರುತ್ತದೆ. “ಭಕ್ತಗೊಂದೇ ವಾಕ್ಯ, ಬಾಳೆಗೊಂದೇ ಫಲ” ಎಂಬುದು ವೈದ್ಯ ಸಂಗಣ್ಣನವರ ಸೂತ್ರ. ತಮ್ಮ ಪಾಲಿನ ಕಾಯಕವನ್ನು ಶುದ್ಧಮನದಿಂದ ಮಾಡಿ, ಅದರಲ್ಲಿಯೇ ಆತ್ಮೋನ್ನತಿಯನ್ನು ಸಾಧಿಸಿದವರು ವೈದ್ಯ ಸಂಗಣ್ಣ. ವೈದ್ಯರೆಲ್ಲ ಅವರ ಆದಶ೯ ಅನುಸರಿಸಿದರೆ ಜಗವೆಲ್ಲ ದೇವಲೋಕವಾದೀತು. (ಶರಣ ಚರಿತಾಮೃತ – ೧೯೯೨). ಇದರಂತೆ ಚೆನ್ನಬಸವ ಪುರಾಣ, ಭೈರಾಮೇಶ್ವರ ಕಾವ್ಯದ ಕಥಾಮಣಿ, ರತ್ನಾಕರ ಕೃತಿಗಳಲ್ಲೂ ವೈದ್ಯ ಸಂಗಣ್ಣನವರ ಉಲ್ಲೇಖ ಹಾಗೂ ಚಿಕಿತ್ಸಾ ವಿಧಾನಗಳ ಪರಿಚಯ, ಹೊಗಳಿಕೆ ಇರುವದು ಕಾಣಸಿಗುತ್ತದೆ.
ಇತ್ತೀಚಿಗೆ ಪ್ರಖ್ಯಾತ ವೈದ್ಯರಾದ ಡಾ. ಪಿ. ಎಸ್. ಶಂಕರವರು “ತನುಮನ ಸುಸ್ಥಿತಿಗೆ ವೈದ್ಯ ಸಂಗಣ್ಣನ ಅನುಪಾನ” (ಬಸವ ಪಥ ೨೦೦೬) ಎಂಬ ಲೇಖನದಲ್ಲಿ ಸಂಗಣ್ಣನವರ ವ್ಯಕ್ತಿತ್ವ ಹಾಗೂ ಕಾಲಜ್ಞಾನದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ರೋಗಗಳು ದೇಹಕ್ಕೆ ಬರುವಂತೆ ಆತ್ಮಕ್ಕೂ ಬರುತ್ತವೆ ಎಂಬುದನ್ನು ಆ ಕಾಲದಲ್ಲೇ ವೈದ್ಯ ಸಂಗಣ್ಣ ತಿಳಿದಿದ್ದರು. ಆರೋಗ್ಯಕರ ಮನಸ್ಸು ಮತ್ತು ಶರೀರ ಜೊತೆಯಾಗಿದ್ದಾಗಲೇ ಮನುಷ್ಯ ಸದೃಢನಾಗಿರಬಲ್ಲ. ಆದ್ದರಿಂದ ತನು-ಮನ (ಶರೀರ-ಮನಸ್ಸು) ಎರಡನ್ನೂ ಒಂದೇ ಎಂದು ಪರಿಗಣಿಸಿ ಮದ್ದನ್ನೀಯಬೇಕು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಮದ್ದನ್ನೀಯ ಬಾರದು. ಆ ಮದ್ದನ್ನು “ವಿಶ್ವಾಸವೆಂಬ ತಟ್ಟೆಯಲ್ಲಿಟ್ಟು” ಕೊಡಬೇಕು. ವೈದ್ಯ ತೋರುವ ನಂಬುಗೆ-ವಿಶ್ವಾಸ ರೋಗಿಯನ್ನು ಶಿಘ್ರ ಗುಣಮುಖನನ್ನಾಗಿ ಮಾಡುತ್ತದೆ ಎಂದು ವೈದ್ಯ ಸಂಗಣ್ಣ ಬಲವಾಗಿ ಅಭಿಪ್ರಾಯ ಪಡುತ್ತಾರೆ.

ವಚನ-೧

ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ,
ನಾಭಿ ಮೂತ್ರನಾಳದ ನಾಲ್ಕಂಗಳ ಮಧ್ಯದಲ್ಲಿ ಅಪ್ಪುನಾಡಿ,
ಉಡಸೂತ್ರನಾಡಿ ಮೊದಲಾದ
ಪಂಚಾಂಗುಲ ಮಧ್ಯದ ಮೇಲ್ದೆನೆಯಲ್ಲಿ ತೇಜನಾಡಿ,
ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ
ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ
ಇಂತೀ ಪಂಚ ಪಥನೈದುವ ನಾಡಿಯಲ್ಲಿ ಆಡುವ
ಆತ್ಮ ವಿವರದ ದೆಸೆಯನರಿದು
ಇಂತೀ ಐದು ಮುಚ್ಚಿ ಮೇಗಳ
*ಬ್ರಹ್ಮರಂಧ್ರದಲ್ಲಿಯೆಯ್ದಿದರೆಮ್ಮ ವೈದ್ಯರು
ನಾದ ಬಿಂದು ಕಳಾತೀತ ನೋಡಾ
ಮರುಳು ಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗವು

ಇಲ್ಲಿ ಸಂಗಣ್ಣನವರು ನೆಲ, ಜಲ, ಅಗ್ನಿ, ಗಾಳಿ ಹಾಗೂ ಆಕಾಶಗಳನ್ನು ಪೃಥ್ವಿನಾಡಿ, ಅಪ್ಪುನಾಡಿ, ತೇಜನಾಡಿ, ವಾಯುನಾಡಿ, ಆಕಾಶಕೈದಿದ ನಾಡಿ ರೂಪದಲ್ಲಿ ಗುರುತಿಸಿದ್ದಾರೆ ಎನ್ನಬಹುದು. ಈ ಐದರಲ್ಲೂ ಆತ್ಮನ ಇರುವಿಕೆ ತಿಳಿದು ಭೌತಿಕದಿಂದಾಚೆ ಬ್ರಹ್ಮರಂಧ್ರದಲ್ಲಿ ಒಂದಾಗಿ ನಾದಬಿಂದು ಕಳಾತೀತವಾದ ಪರಬ್ರಹ್ಮವನ್ನು ಅರಿತವರು ಭವರೋಗ ವೈದ್ಯರೆನಿಸಿಕೊಳ್ಳುತ್ತಾರೆಂದು ಹೇಳುತ್ತಾರೆ.

ಭೌತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಎರಡಲ್ಲೂ ಪಂಚಭೂತಗಳ ಅವಶ್ಯಕತೆ ಇದೆ. ಸೃಷ್ಟಿ ನಿಮಾ೯ಣಕ್ಕೂ ಪಂಚಭೂತಗಳೇ ಕಾರಣ. ಸೃಷ್ಟಿ ಇದ್ದರೇ ನಿಸಗ೯, ನಿಸಗ೯ದಿಂದಲೇ ಗಿಡ-ಮರ, ಪಶು-ಪಕ್ಷಿ, ಪ್ರಾಣಿ- ಮಾನವ ಎಲ್ಲರೂ. ಬ್ರಹ್ಮನೇ ಸೃಷ್ಟಿಕತ೯, ಸೃಷ್ಟಿಕತ೯ನಿಂದ ನಿಮಾ೯ಣಗೊಂಡ ಈ ದೇಹಕ್ಕೆ ನಾಡಿಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪಂಚನಾಡಿಗಳಾದ ಪೃಥ್ವಿನಾಡಿ, ಅಪ್ಪುನಾಡಿ, ತೇಜನಾಡಿ, ವಾಯುನಾಡಿ, ಆಕಾಶಕೈದಿದನಾಡಿ ಇವುಗಳಿಂದ ದೇಹದ ತೊಂದರೆಗಳನ್ನರಿತು ವೈದ್ಯ ಚಿಕಿತ್ಸೆಯನ್ನು ನೀಡುತ್ತಾರೆ. ಬ್ರಹ್ಮರಂಧ್ರ ಮತ್ತು ನಾದರಂಧ್ರಗಳಿಗೆ ಕೊಡುವ ಚಿಕಿತ್ಸೆಯೂ ಪ್ರಮುಖವಾಗಿದೆ.

ವಚನ-೨

ಅರಿಯದವಂಗೆ ಅರಿದಿಹೆನೆಂಬ
ಬಯಲರೋಗ ಹುಟ್ಟಿ
ಕಾಲುಗೆಟ್ಟು ದೃಷ್ಟಿನಷ್ಟವಾಗುತ್ತಿದೆ ನೋಡಾ
ಅದಕ್ಕೆ ನಾನೊಂದ ಮದ್ದಕಂಡೆ
ಹೆಸರಿಲ್ಲದ ಗಿಡಮೂಲವಿಲ್ಲದ ಬೇರು
ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು
ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು
ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ
ಇಕ್ಕುದಕ್ಕೆ ಮೊದಲೆ
ಮದ್ದಿ ದೃಷ್ಟ ನಷ್ಟವಾಯಿತು
ಮರುಳ ಶಂಕರ ಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ

ಕೆಲವರು ತಮಗೆ ಏನೂ ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿದೆ ಎಂಬ ಭ್ರಮೆಯಲ್ಲಿರುತ್ತಾರೆ. ಇಂಥವರಿಗೆ ಚಿಕಿತ್ಸೆಗೆ ಭವರೋಗವನ್ನು ನಿವಾರಿಸುವ ವೈದ್ಯನೇ ಬೇಕು. ಇಲ್ಲದಿದ್ದರೆ ಇವರಿಗೆ ಕೊಡುವ ಮದ್ದು ಹೆಸರಿಲ್ಲದ ಗಿಡ, ನೆಲಮೂಲವಿಲ್ಲದ ಬೇರು, ಎಲೆ ಮತ್ತು ಹೂವಿಲ್ಲದ ಚಿಗುರನ್ನು ಕಲ್ಲುಗುಂಡಿಯಲ್ಲಿಟ್ಟು, ನೀರು ಹಾಕಿ ಅರೆದು ಮಾಡಿದ ಮದ್ದಿನಂತೆ, ಮದ್ದನ್ನು ಸಿದ್ಧಪಡಿಸಿಕೊಟ್ಟಂತೆ. ಇಂತ ಮದ್ದು ತಟ್ಟೆಯಲ್ಲಿಡುವ ಮೊದಲೇ ನಿರ್ನಾಮವಾಗುತ್ತದೆ. ಇಂಥವರಿಗೆ ಅರಿವಿನ ಸಾಧ್ಯವಾಗುವುದು ಆಧ್ಯಾತ್ಮದ, ಮನದ ಗರಿಮೆಯಿಂದ ಮಾತ್ರ ಸಾಧ್ಯ ಎಂದು ವೈದ್ಯ ಸಂಗಣ್ಣ ಆಭಿಪ್ರಾಯ ಪಡುತ್ತಾರೆ.

ವಚನ-೩

ನಾನಾ ರೋಗಂಗಳು ಬಂದು ದೇಹವ
ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ,
ಸಕಲ ಪುಷ್ಪಂಗಳ ಪೂಜೆಯ ಮಾಡಿಕೊಳ್ಳಿ
ಪಂಚಾಕ್ಷರಿ ಪ್ರಣಮವ ತಪ್ಪದೇ ತ್ರಿಸಂಧಿಯಲ್ಲಿ ನೆನೆಹುಗೊಳ್ಳಿ
ಇದರಿಂದ ರುಜೆ ದರ್ಪಂಗಡಗು,
ಮರುಳ ಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ

ದೇಹವು ಅನೇಕ ರೋಗಗಳಿಗೆ ತುತ್ತಾದಾಗ, ಶಿವಪೂಜೆಯನ್ನು ಮಾಡಬೇಕು. ದೇಹಕ್ಕೆ ಆವರಿಸುವ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ ಈ ಅರಿಷಡ್ವರ್ಗಗಳನ್ನು, ಹೆಣ್ಣು, ಹೊನ್ನು, ಮಣ್ಣು ಈ ತ್ರಿವಿಧ ದೋಷಗಳನ್ನು ತೊಡೆದುಹಾಕಬೇಕು. ಇವುಗಳ ನಿವಾರಣೆಗಾಗಿ ಮನಸ್ಸಿನ ಚಂಚಲತೆಯನ್ನು ದೂರಮಾಡಬೇಕು. ಇದಕ್ಕೆ ಲಿಂಗಾರ್ಚನೆ ಮಾಡಿ, ಲಿಂಗದಲ್ಲಿ ದೃಷ್ಟಿಯನ್ನು ನೆಟ್ಟು ತಲ್ಲೀನರಾಗಬೇಕು. ಆಗ ಮನದ ದರ್ಪ ಅಡಗುವದು. ದೇಹದ ಬಾಹ್ಯ ಮತ್ತು ಅಂತರಂಗದ ವಿಕಾರಗಳು ವಾಸಿಯಾಗಿ ನಿಶ್ಚಿಂತೆಯಿಂದ ಇರಬಹುದು ಎಂದು ವೈದ್ಯ ಸಂಗಣ್ಣ ಅಭಿಪ್ರಾಯ ಪಡುತ್ತಾರೆ.
ಇಂತಹ ಅದ್ಬುತ ವ್ಯಕ್ತಿ ವೈದ್ಯ ಸಂಗಣ್ಣ ೧೨ ನೇ ಶತಮಾನದಲ್ಲಿ ಬಾಳಿ ಬೆಳಗಿ ತನು-ಮನಕ್ಕೆ ಚಿಕಿತ್ಸೆಯನ್ನು ನೀಡಿದ ವ್ಯಕ್ತಿ

ಡಾ. ಸರಸ್ವತಿ ಪಾಟೀಲ
ವಿಜಯಪುರ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group