ಸಮತೆ ಹೇಳಿದ ಯೇಸು ಶಿಲುಬೆಯನ್ನೇರಿದನು
ಸಮತೆ ಹೇಳಿದ ಬಸವನಸುನೀಗಿದ
ಸಮತೆ ಹೇಳಿದ ಗಾಂಧಿ ಗುಂಡಿಗಾಹುತಿಯಾದ
ಸಮತೆಯನು ಸಹಿಸ ನರ – ಎಮ್ಮೆತಮ್ಮ
ಶಬ್ಧಾರ್ಥ
ಸಮತೆ = ಸಮಾನತೆ. ಅಸುನೀಗು = ಪ್ರಾಣಬಿಡು
ಗುಂಡಿಗಾಹುತಿ = ಬಂದೂಕಿನ ಗುಂಡಿಗೆ ಬಲಿ
ಭಾವಾರ್ಥ
ಹಲ್ಲಿಗೆ ಹಲ್ಲು ಕಣ್ಣಿಗೆ ಕಣ್ಣು ಶಿಕ್ಷೆಯ ಬದಲಾಗಿ ಏಸು ಬಲಗೆನ್ನೆಗೆ ಹೊಡೆದವರಿಗೆ ಎಡಗೆನ್ನೆ ಒಡ್ಡಿರಿ. ವೇಶ್ಯೆ ಪಾಪಿಯಲ್ಲ ಅದಕ್ಕೆ ಗಂಡಸರು ಸಹ ಪಾಪಿಗಳು.ನಾವೆಲ್ಲರು ದೇವರ ಮಕ್ಕಳು. ನಾವೆಲ್ಲ ಸಮಾನರು ಎಂದು ಏಸು ಯುವಕರಿಗೆ ಬೋಧನೆ ಮಾಡತೊಡಗಿದನು. ಅನೇಕ ಶಿಷ್ಯರು ಆತನ ಹಿಂಬಾಲಿದರು.
ಇವನು ರಾಜಕೀಯ ಚಳವಳಿ ಮಾಡುತ್ತಾನೆಂದು ಬಗೆದು
ಯಹೂದಿ ದೊರೆ ಆತನ ಮೇಲೆ ಇಲ್ಲದ ಸಲ್ಲದ ತಪ್ಪುಹೊರಿಸಿ
ಶಿಲುಬೆಗೇರಿಸುತ್ತಾನೆ. ಹಾಗೆ ಬಸವಣ್ಣ ಕೂಡ ಸಮಸಮಾಜ
ಕಟ್ಟಲು ಹೋಗಿ ತಳಸಮುದಾಯದವರನೆಲ್ಲ ಶರಣರನ್ನಾಗಿ
ಮಾಡುತ್ತಾನೆ.ಲಿಂಗವೆಂಬ ಬುಲ್ಡೋಜರ್ ಹಿಡಿದು ಮೇಲು ಕೀಳು ಎಂಬ ತಗ್ಗು ದಿಬ್ಬ ಕಳೆದು ಸಮ ಮಾಡಲು
ಹೊರಡುತ್ತಾನೆ. ಮತ್ತೆ ಬ್ರಾಹ್ಮಣ ಕನ್ಯೆಯನ್ನು ಚಮ್ಮಾರ
ಹುಡುಗನಿಗೆ ಮದುವೆ ಮಾಡುತ್ತಾನೆ. ಪುರೋಹಿತ ಶಾಹಿಗಳ ಮಾತು ಕೇಳಿ ಶರಣರ ಹತ್ಯೆ ಮಾಡಲು ಬಸವಣ್ಣ
ಕೂಡಲಸಂಗಮಕ್ಕೆಹೋಗಿ ಅಲ್ಲಿ ಪ್ರಾಣಬಿಡುತ್ತಾನೆ. ದೇಶಕ್ಕೆ
ಸ್ವಾತಂತ್ರ ಸಿಕ್ಕಾಗ ಹಿಂದುಸ್ತಾನ ಪಾಕಿಸ್ತಾನ ಇಬ್ಬಾಗವಾಗಿ ಗಲಭೆ ಎದ್ದು ಜನರ ಕಗ್ಗೊಲೆ ಆಗುತ್ತದೆ. ಅಹಿಂಸಾವಾದಿಯಾದ ಗಾಂಧಿ ಹಿಂದು ಮುಸ್ಲಿಂ ಐಕ್ಯತೆ ತರಲು ಹೋದಾಗ ಆತ ಗುಂಡಿಗೆ ಬಲಿಯಾಗುತ್ತಾನೆ. ಜನರಿಗೆ ಸಮಾನತೆ ಬೇಕಾಗಿಲ್ಲ. ಮಾನವ ಸಮಾನತೆ ಸಹಿಸಿಕೊಳ್ಳುವುದಿಲ್ಲ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990