ಸಿಂದಗಿ: ಕನ್ನಡದ ದೀಪ ಹಚ್ಚಿದ ಕವಿ ಡಾ.ಡಿ.ಎಸ್. ಕರ್ಕಿಯವರ 117 ನೇ ಜನ್ಮದಿನೋತ್ಸವದ ಅಂಗವಾಗಿ ಬೆಳಗಾವಿಯ ಡಾ.ಡಿ.ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ ರಾಜ್ಯಮಟ್ಟದ ‘ಡಾ.ಡಿ.ಎಸ್. ಕರ್ಕಿ ಕಾವ್ಯಶ್ರೀ ಪ್ರಶಸ್ತಿ-2024’ ಕ್ಕೆ ನಾಡಿನ ಚಿರಪರಿಚಿತ ಮಕ್ಕಳ ಸಾಹಿತಿ ವಿಜಯಪುರದ ಹ.ಮ. ಪೂಜಾರರು ಆಯ್ಕೆಯಾಗಿದ್ದಾರೆ.
ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು. ಸ.ರಾ. ಸುಳಕೂಡೆ, ಅಶೋಕ ಉಳ್ಳೆಗಡ್ಡಿ, ಬಸವರಾಜ ಗಾರ್ಗಿ, ಗೌರಮ್ಮ ಕರ್ಕಿ ಮುಂತಾದವರು ಹಾಜರಿದ್ದರೆಂದು ಪ್ರತಿಷ್ಠಾನದ ಅಧ್ಯಕ್ಷ ಶಿವಪುತ್ರ ದುಂಡಪ್ಪ ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನಿವೃತ್ತ ಶಿಕ್ಷಕ ಹ.ಮ. ಪೂಜಾರ ಅವರು ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ 1975 ರಲ್ಲಿಯೇ ಮಕ್ಕಳ ಬಳಗ ಕಟ್ಟಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಿಂದ ಇಂದಿನವರೆಗೂ ಸಂಘಟಿಸುತ್ತಿದ್ದಾರೆ. ಹಾಗೆ 1996 ರಲ್ಲಿ ವಿದ್ಯಾಚೇತನ ಪ್ರಕಾಶನವನ್ನು ಸ್ಥಾಪಿಸಿ ತನ್ಮೂಲಕ ಸಾಹಿತ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಿಂದ ಸಂಘಟಿಸುತ್ತ ಬಂದಿದ್ದಾರೆ. ಅವರ ಜೀವಮಾನದ ಅನುಪಮ ಸೇವೆಯನ್ನು ಗಮನಿಸಿದ ಪ್ರತಿಷ್ಠಾನವು ಈ ವರ್ಷದ ‘ಡಾ.ಡಿ.ಎಸ್. ಕರ್ಕಿ ಕಾವ್ಯಶ್ರೀ ಪ್ರಶಸ್ತಿ’ಯನ್ನು ಹ.ಮ. ಪೂಜಾರ ಅವರಿಗೆ ಕೊಡಮಾಡಿದೆ.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನ.21 ರಂದು ಸಂಜೆ 5 ಗಂಟೆಗೆ ಜರಗುವ ಪ್ರಶಸ್ತಿ ಪ್ರಧಾನ ಮಾರಂಭದಲ್ಲಿ ಹತ್ತು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಗುವುದು. ಗದುಗಿನ ತೋಂಟದಾರ್ಯ ಮಠದ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡುವರು. ಸಾಂಸ್ಕೃತಿಕ ಚಿಂತಕರಾದ ಪ್ರಾ.ಬಿ.ಎಸ್. ಗವಿಮಠ, ಹಿರಿಯ ಕವಿಗಳಾದ ಪ್ರೊ.ಎಂ.ಎಸ್. ಇಂಚಲ ಉಪಸ್ಥತರಿರುವರು ಎಂದು ಅವರು ತಿಳಿಸಿದ್ದಾರೆ.